ಮುಂದಿನ ಎರಡುವರ್ಷ ತಾನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರುಣ್ ಸಿಂಗ್ ಹೇಳಿಕೆಯಿಂದ ನನಗೆ 100 ರಷ್ಟು ಬಲ ಬಂದಿದೆ
ಹಾಸನ ಜೂ.11: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ತಾರಕಕ್ಕೇರಿರುವ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. . ಇದರ ಮಧ್ಯೆ ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದು ಪಕ್ಕಾ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಈ ಎಲ್ಲಾ ವದಂತಿಗಳಿಗೆ ಮುಖ್ಯಮಂತ್ರಿ ಬಿಎಸ್ ವೈ ಉತ್ತರಿಸುವ ಮೂಲಕ ತೆರೆ ಎಳೆದಿದ್ದಾರೆ.
ಮುಂದಿನ ಎರಡುವರ್ಷ ತಾನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ದೃಢ ವಿಶ್ವಾಸ ವ್ಯಕ್ತಪಡಿಸಿದರು.ಹಾಸನ ಜಿಲ್ಲೆಯ ಜಿಪಂ ಹೊಯ್ಸಳ ಸಭಾಂಗಣದಲ್ಲಿ ಕೊರೊನಾ ಹಾಗೂ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರೇ ಸಿಎಂ ಎರಡುವರ್ಷ ಇರುತ್ತಾರೆ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಬಳಿಕ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಅರುಣ್ ಸಿಂಗ್ ಹೇಳಿಕೆಯಿಂದ ನನಗೆ 100 ರಷ್ಟು ಬಲ ಬಂದಿದೆ. ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತಮ್ಮ ಜವಾಬ್ದಾರಿ ಹೆಚ್ಚಿಸಿದೆ. ಎರಡು ವರ್ಷ ಯಾವುದೇ ಬದಲಾವಣೆ ಇಲ್ಲ, ಬಿಎಸ್ ವೈ ನೇತೃತ್ವದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ ಎಂದಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ನನ್ನ ಮೇಲೆ ಪ್ರಧಾನಿ, ಅಮಿತ್ ಶಾ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವೆ ಎಂದರು.