IMG 20210626 WA0010

Congres: ಕೋವಿಡ್ ಸಂತ್ರಸ್ತರಿಗೆ ಸಾಂತ್ವನ ಕಾರ್ಯಕ್ರಮ…!

POLATICAL STATE

*ಕೋವಿಡ್ ಸಂತ್ರಸ್ತರಿಗೆ ಸಾಂತ್ವನ ಹಾಗೂ ಜನರ ಸಮಸ್ಯೆಗೆ ಸ್ಪಂದಿಸಲು ಪಕ್ಷದಿಂದ ಕಾರ್ಯಕ್ರಮ; ಡಿ.ಕೆ. ಶಿವಕುಮಾರ್*

ಬೆಂಗಳೂರು:- ಕೋವಿಡ್ ಪಿಡುಗಿನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿ, ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ, ಉದ್ಯೋಗ ಕಳೆದುಕೊಂಡವರು, ಹಾಗೂ ಎಲ್ಲ ವರ್ಗದ ಜನರಿಗೆ ಬೆಂಬಲವಾಗಿ ನಿಲ್ಲಲು ಪಕ್ಷ ಒಂದು ತಿಂಗಳ ಕಾಲ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಬಗ್ಗೆ ಪಕ್ಷದ ಹಿರಿಯ ನಾಯಕರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು ಹಾಗೂ ಜಿಲ್ಲಾಧ್ಯಕ್ಷರಿಗೆ ಕೆಲವು ಸಲಹೆ-ಸೂಚನೆ ನೀಡಿದರು. ಅವರಿಂದಲೂ ಸಲಹೆ ಪಡೆದರು.

ಸಭೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಜುಲೈ 1ರಿಂದ ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರು, ಉದ್ಯೋಗ ಕಳೆದುಕೊಂಡವರು, ಮೃತಪಟ್ಟವರ ಕುಟುಂಬ ಸದಸ್ಯರು, ಕಾರ್ಮಿಕರು, ಚಾಲಕರು ಸೇರಿದಂತೆ ಎಲ್ಲ ವರ್ಗದವರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಪಕ್ಷ ರೂಪಿಸಿದೆ. ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಆದರೆ ನಾಳೆ ಚಾಮರಾಜನಗರದಲ್ಲಿ ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.

ಕೋವಿಡ್ ನಿಂದ 30 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಸಾವಿನ ಪ್ರಮಾಣದ ಬಗ್ಗೆ ಸರ್ಕಾರದ ವೆಬ್ ಸೈಟ್ ನಲ್ಲಿ ಹಾಕಿದ್ದ ಮಾಹಿತಿಯನ್ನು ತೆಗೆದುಹಾಕಲಾಗಿದೆ. ಯಾರು ಕೋವಿಡ್ ನಿಂದ ಸತ್ತಿದ್ದಾರೆ, ಅವರಿಗೆ ಪರಿಹಾರ ಕೊಡಿಸಲು ನಮ್ಮ ಕಾರ್ಯಕರ್ತರು ಅವರ ಮನೆಗೆ ಹೋಗಿ ಅರ್ಜಿ ತುಂಬಿ ಅದನ್ನು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಅವರಿಗೆ ನ್ಯಾಯ ಒದಗಿಸಿಕೊಡಬೇಕಾದ ಜವಾಬ್ದಾರಿ ಇದೆ.

ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರುಪಾಯಿ, ರಾಜ್ಯ ಸರ್ಕಾರ ಘೋಷಿಸಿದ್ದ ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಏನಾದವು? ಯಾರಿಗೆ ತಲುಪಿದವು? ಆನ್ಲೈನ್ ಅರ್ಜಿ ಹಾಕಲು ಬಾರದ ಜನರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿ ಆ ಬಗ್ಗೆ ನಮ್ಮ ನಾಯಕರ ಜತೆ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ 315 ನಾಯಕರು ಭಾಗವಹಿಸಿದ್ದರು. ಅವರು ನಮಗೆ ಒಂದಷ್ಟು ಸಲಹೆ ನೀಡಿದ್ದಾರೆ. ಈ ಕಾರ್ಯಕ್ರಮದ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ನಮ್ಮ ರಾಜ್ಯದ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಯಾಣ ಮಾಡುತ್ತಿದ್ದ ಕಾರಣ ದೂರವಾಣಿ ಮೂಲಕ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅವರು ಹೆಚ್ಚು ಕಾಲ ಸಭೆಯಲ್ಲಿ ಇರಲು ಆಗಲಿಲ್ಲ.

ಜಿಲ್ಲಾ ಮಟ್ಟದಲ್ಲಿ ಹಾಗೂ ಬ್ಲಾಕ್ ಮಟ್ಟದಲ್ಲಿ ಯಾರು ಕಾರ್ಯಪ್ರವೃತ್ತರಾಗಿಲ್ಲ ಅವರ ಬದಲಾವಣೆ ಮಾಡಲಾಗುವುದು, ಈ ಬಗ್ಗೆ ಕಾರ್ಯಾಧ್ಯಕ್ಷರುಗಳ ಜತೆ ಚರ್ಚಿಸಲಾಗುವುದು ಎಂಬ ಸಂದೇಶವನ್ನು ಈ ಸಭೆಯ ಮೂಲಕ ಕೊಟ್ಟಿದ್ದೇವೆ.

ನಾಳೆ ಚಾಮರಾಜನಗರಕ್ಕೆ ಭೇಟಿ ನೀಡಿ, ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಆಕ್ಸಿಜನ್ ಕೊರತೆಯಿಂದ ಸತ್ತವರ ಮನೆಗೆ ಸರ್ಕಾರದ ಪರವಾಗಿ ಯಾರೂ ಭೇಟಿ ನೀಡಿಲ್ಲ. ಕುಟುಂಬ ಸದಸ್ಯರ ಕಷ್ಟ ಕೇಳಿಲ್ಲ. ನಮ್ಮ ಶಾಸಕರು ಅವರನ್ನು ಭೇಟಿ ಮಾಡಿ ಅವರಿಗೆ 10 ಸಾವಿರ ರುಪಾಯಿ ಪರಿಹಾರ ಕೊಟ್ಟಿದ್ದು, ನಾನು ಅವರನ್ನು ನಾಳೆ ಭೇಟಿ ಮಾಡುತ್ತೇನೆ. ಪಕ್ಷದ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆ ಶುರುವಾಗಿದ್ದು, ಅವರಿಗೆ ಈಗ ಜವಾಬ್ದಾರಿ ಕೊಟ್ಟಿದ್ದೇವೆ. ಹೇಗೆ ಕೆಲಸ ಮಾಡುತ್ತಾರೆ ನೋಡೋಣ.

ನಮ್ಮ ಕಾರ್ಯಕ್ರಮ ಕೇವಲ ಸಾಂತ್ವನ ಹೇಳಲು ಮಾತ್ರ ಸೀಮಿತವಲ್ಲ, ಅವರ ಸಮಸ್ಯೆ ಪಟ್ಟಿ ಮಾಡಿ, ಅದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಗೆದ್ದವರು, ಸೋತವರು, ಬ್ಲಾಕ್ ಮಟ್ಟದ ನಾಯಕರು ಸಭೆ ಮಾಡಿ, ತಂಡಗಳಾಗಿ ಮನೆ, ಮನೆಗೆ ಭೇಟಿ ನೀಡಲಿದ್ದಾರೆ.’