IMG 20210811 WA0006

ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ….!

FILM NEWS Genaral STATE

*ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಆಗಸ್ಟ್ ೧೧ : ಕನ್ನಡ ಚಿತ್ರರಂಗ ಸೃಜನಾತ್ಮಕ ಕ್ಷೇತ್ರವಾಗಿದ್ದು, ಅದರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಶೇ.೧೦೦ ರಷ್ಟು ಆಸನಗಳ ಭರ್ತಿಗೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡ ಸಿನಿಮಾ ನಿರ್ಮಿಸುವುದೇ ಒಂದು ಸಾಹಸ. ಸಿನಿಮಾ ರಂಗದವರು ಆರ್ಥಿಕ ಸಂಕಷ್ಟದಲ್ಲಿರುವುದು ತಿಳಿದಿರುವ ವಿಷಯ. ಈ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಕೋವಿಡ್ ಸಾಂಕ್ರಾಮಿಕದಿAದ ಎಲ್ಲರಿಗೂ ತೊಂದರೆಯಾಗಿದ್ದು, ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಪುನ: ಲಾಕ್‌ಡೌನ್ ಮಾಡಬೇಕಾಗುತ್ತದೆ. ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇತ್ತೀಚೆಗೆ ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಸ್ಟಂಟ್‌ಮನ್ ಒಬ್ಬರು ಮೃತಪಟ್ಟಿದ್ದು ದುರದೃಷ್ಟಕರ ಎಂದ ಮುಖ್ಯಮಂತ್ರಿಗಳು, ಚಿತ್ರೀಕರಣದ ವೇಳೆ ಪಾಲಿಸಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು. ತಪ್ಪಿದ್ದಲ್ಲಿ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದರು.

ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ ರಚನೆ ಹಾಗೂ ಸಹಾಯಧನ ಮಂಜೂರು, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಕುರಿತಂತೆ ಮಂಡಳಿಯ ಅಧ್ಯಕ್ಷ ಡಿ.ಆರ್.ಜಯರಾಜ್ ಹಾಗೂ ಸಾ.ರಾ.ಗೋವಿಂದು, ನಿರ್ಮಾಪಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಬಗ್ಗೆ ಅನುದಾನ ಬಿಡುಗಡೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಹಿರಿಯ ನಟಿ ಹಾಗೂ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ ಅನುರಾಧ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಹಾಗೂ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆಯುಕ್ತ ಪಿ.ಎಸ್.ಹರ್ಷ, ಅಕಾಡೆಮಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.