ಬಿಜೆಪಿ ಯಾವತ್ತೂ ಮೀಸಲಾತಿ ಪರವಾಗಿದೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಬೆಂಗಳೂರು: ದಲಿತ ಸಮುದಾಯ ಪ್ರಜ್ಞಾವಂತರನ್ನು- ವಿದ್ಯಾವಂತರನ್ನು ಹೊಂದಿದೆ. ಬಿಜೆಪಿ ಯಾವತ್ತೂ ಮೀಸಲಾತಿಪರವಾಗಿದೆ ಎಂಬುದು ಅವರಿಗೆ ತಿಳಿದಿದೆ ಎಂದು ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದರು.
ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಇಂದು ಸಭೆಯಲ್ಲಿ ಮಾತನಾಡಿದ ಅವರು, 62 ವರ್ಷ ಕಾಲ ಕಾಂಗ್ರೆಸ್ಸಿಗರು ಹೆಂಡ ಕೊಟ್ಟು ಮತ ಪಡೆದರು. ಗ್ರಾಮ ಪಂಚಾಯಿತಿಯಿಂದ ಪ್ರಧಾನಮಂತ್ರಿ, ರಾಷ್ಟ್ರಪತಿ ವರೆಗೆ ಅಧಿಕಾರ ಅವರದಾಗಿತ್ತು. ಡಾ. ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷದವರು ಬಿಜೆಪಿ ಮೀಸಲಾತಿ ವಿರೋಧಿ ಎಂದು ಟೀಕಿಸುತ್ತಾರೆ. ಆದರೆ, ಜನರಿಗೆ ಎಲ್ಲವೂ ತಿಳಿದಿದೆ ಎಂದು ಹೇಳಿದರು.
ಗರಿಷ್ಠ ಸಂಖ್ಯೆಯ ದಲಿತ ಸಚಿವರು ಹಾಗೂ ಹಿಂದುಳಿದ ಸಮುದಾಯಗಳ ಸಚಿವರನ್ನು ಸಂಸತ್ತಿಗೆ ಪರಿಚಯಿಸಲು ಅವಕಾಶ ಕೊಡದ ಕಾಂಗ್ರೆಸ್ ವರ್ತನೆ ಖಂಡನೀಯ ಎಂದರು. ಸಚಿವರನ್ನು ಜನರಿಗೆ ಪರಿಚಯಿಸಲು ಮತ್ತು ಕೇಂದ್ರದ ಸಾಧನೆಗಳ ಕುರಿತು ತಿಳಿಸಲು ಜನಾಶೀರ್ವಾದ ಯಾತ್ರೆ ಮಾಡಲಾಗುತ್ತಿದೆ. ಕಾಂಗ್ರೆಸ್‍ಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಕೇವಲ 13 ವರ್ಷ ದೇಶದ ಆಡಳಿತ ಮಾಡಿದೆ. ಕಾಂಗ್ರೆಸ್ 62 ವರ್ಷಗಳ ಆಡಳಿತ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ಸಂಸತ್ತಿನ ನಿಯಮಾವಳಿ ಉಲ್ಲಂಘಿಸಿತು. 135 ಕೋಟಿ ಜನರನ್ನು ರಕ್ಷಣೆ ಮಾಡುವುದು ಲೋಕಸಭೆ- ರಾಜ್ಯಸಭೆಯ ಜವಾಬ್ದಾರಿ. ಆದರೆ, ಪುಸ್ತಕ ತೆಗೆದು ಸ್ಪೀಕರ್ ಮುಖಕ್ಕೆ ಎಸೆಯುವ ಸಂಸ್ಕøತಿ ಕಾಂಗ್ರೆಸ್ ಸದಸ್ಯರದು. ಟೇಬಲ್ ಮೇಲೆ ನಿಂತು ನರ್ತಿಸುವ ವಿರೋಧ ಪಕ್ಷದವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
15- 20 ವರ್ಷಗಳ ಹಿಂದೆ ಬಿಜೆಪಿ ಎಂದರೆ ಬ್ರಾಹ್ಮಣರ ಪಕ್ಷ, ಗರ್ಭಗುಡಿ ರಾಜಕೀಯದ ಪಕ್ಷ, ದಲಿತರ ವಿರೋಧಿ ಪಕ್ಷ, ಹಿಂದುಳಿದವರ ಬಗ್ಗೆ ಕಳಕಳಿ ಇಲ್ಲದ ಪಕ್ಷ ಎಂದು ಟೀಕಿಸುತ್ತಿದ್ದರು. 1991- 92ರಲ್ಲಿ ಪಕ್ಷದ ಬಾವುಟ ಕಟ್ಟಿ ಮನೆಗೆ ಬಂದರೆ ಬೆಳಿಗ್ಗೆ ಆ ಬಾವುಟ ಇರುತ್ತಿರಲಿಲ್ಲ. ಬಾವುಟ ಕಟ್ಟಲು ಹೋದರೆ ಓಡಿಸಿಕೊಂಡು ಹೋಗುವ ಸ್ಥಿತಿ ಇತ್ತು. ಆ ದೌರ್ಜನ್ಯಕ್ಕೆ ಹೆದರದವರು ನಾಯಕರಾದರು ಎಂದರು.
ತುಳಿತಕ್ಕೆ ಒಳಗಾದ ನಾಗರಿಕರ ಪರವಾಗಿ, ಸಮಾಜದ ಪರವಾಗಿ ಎದೆ ತಟ್ಟಿ, ತೊಡೆ ತಟ್ಟಿ ನಿಲ್ಲುವವರೇ ನಾಯಕರಾಗುತ್ತಾರೆ. ದಲಿತರನ್ನು ಮುಖ್ಯವಾಹಿನಿಗೆ ತರಬೇಕೆಂಬ ಆಶಯವನ್ನು ಬಿಜೆಪಿ ಸಿದ್ಧಾಂತ ಹೊಂದಿದೆ. ನನಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆಗಳು ಎಂದರು.
ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸದಾ ಕಾಲ ಬದ್ಧತೆಯನ್ನು ಹೊಂದಿದೆ. ಇಲ್ಲಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು. ನಾನು ಬಿಜೆಪಿ ಸಿದ್ಧಾಂತವನ್ನು 30 ವರ್ಷ ಒಪ್ಪಿಕೊಂಡು ಬಿಜೆಪಿಯವ ಎಂದು ಬ್ರ್ಯಾಂಡೆಡ್ ಆಗಿದ್ದೇನೆ. ನನಗೂ ಬ್ರ್ಯಾಂಡ್ ಇದೆ. ತ್ಯಾಗ- ಸಂಸ್ಕಾರ- ಲಂಚ ಮುಟ್ಟಿದಿರುವುದೇ ನನ್ನ ಬ್ರ್ಯಾಂಡ್ ಎಂದರು.
ಏಳು ವರ್ಷಗಳ ಕಾಲ ಶ್ರೀ ನರೇಂದ್ರ ಮೋದಿ ಮತ್ತು ಎರಡು ವರ್ಷಗಳ ಕಾಲ ಶ್ರೀ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದೇಶ- ರಾಜ್ಯವು ಅಭೂತಪೂರ್ವ ಅಭಿವೃದ್ಧಿ ಸಾಧಿಸಿವೆ ಎಂದು ತಿಳಿಸಿದರು. ಸಚಿವನನ್ನಾಗಿ ಮಾಡಿದ ಪಕ್ಷದ ಕೇಂದ್ರ- ರಾಜ್ಯದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್.ನವೀನ್, ಶಾಸಕರಾದ ಶ್ರೀ ಚಂದ್ರಪ್ಪ, ವಿಭಾಗ ಪ್ರಭಾರಿಗಳಾದ ಶ್ರೀ ಸುರೇಶ್, ಜಿಲ್ಲಾಧ್ಯಕ್ಷರಾದ ಶ್ರೀ ಎ. ಮುರಳಿ, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.
ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಶ್ರೀ ಎ. ನಾರಾಯಣ ಸ್ವಾಮಿ ಅವರು ಗೋ ಪೂಜೆ ನೆರವೇರಿಸಿದರು. ಅಲ್ಲದೆ ನಿವೃತ್ತ ಯೋಧರಾದ ಶ್ರೀ ಟೀ ಪ್ರಭಾಕರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು. ಯೋಧರ ಸನ್ಮಾನ ಮಾಡಿದ್ದಲ್ಲದೆ, ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.