ಇಂದು ಶಾಸಕರ ಸಭೆ ಮಾಡಿದ್ದೇಕೆ – ಡಿಕೆಶಿ
ಬೆಂಗಳೂರು:
ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾದ ಸರ್ಕಾರ ಈಗ ಶಾಸಕರನ್ನು ಕರೆದು ಸಭೆ ನಡೆಸಿದರೆ ಏನು ಪ್ರಯೋಜನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.
ಗಡಿಯಲ್ಲಿ ಚೀನಾ ದಾಳಿ ವೇಳೆ ಹುತಾತ್ಮರಾದ ವೀರ ಯೋಧರಿಗೆ ಶುಕ್ರವಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು:
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿ ಮಾಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಈ ವಿಚಾರವಾಗಿ ನಮ್ಮ ಶಾಸಕರು ಹಾಗೂ ನಮ್ಮ ವಿರೋಧ ಪಕ್ಷದ ನಾಯಕರು ಕೂತು ಚರ್ಚಿಸಿದ್ದು, ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಸರ್ಕಾರ ನೀಡುವ ಆದೇಶ ಪಾಲಿಸುತ್ತೇವೆ. ಈ ವಿಚಾರದಲ್ಲಿ ನಮಗೆ ಈವರೆಗೂ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ.
ಕೋವಿಡ್ ವಿಚಾರ ನಿಭಾಯಿಸಲು ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ. ಜನರಿಗೆ ರಕ್ಷಣೆ ನೀಡಲು ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕ ಎರಡು ಮೂರು ತಿಂಗಳ ಕಾಲಾವಕಾಶವನ್ನು ಬಳಸಿಕೊಳ್ಳಲು ಸರ್ಕಾರ ಎಡವಿದೆ. ಪರಿಣಾಮವಾಗಿ ಸೋಂಕು ಹೆಚ್ಚಾಗಿದ್ದು, ಈಗ ಶಾಸಕರನ್ನು ಕರೆದು ಸಭೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ.
ನಾನು ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡರೆ ಡಿಸಿಎಂ ಅವರು, ಡಿ.ಕೆ ಶಿವಕುಮಾರ್ ಯಾರು? ಅಂತಾ ಕೇಳುತ್ತಾರೆ. ಡಿ.ಕೆ ಶಿವಕುಮಾರ್ ಯಾರು ಅಂತಾ ಕೇಳಿದವರು ಈಗ ಯಾಕೆ ಶಾಸಕರ ಜತೆ ಚರ್ಚೆ ಮಾಡುತ್ತಿದ್ದಾರೆ? ಕನಕಪುರ ಲಾಕ್ ಡೌನ್ ಕುರಿತಯ ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿ, ಆಯುಕ್ತರನ್ನು ಒಳಗೊಂಡಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಿದ್ದೆ.
ಈಗ ಶಾಸಕರನ್ನು ಕರೆದಿದ್ದು, ಅವರ ವಿವೇಚನೆಗೆ ತಕ್ಕಂತೆ ತಮ್ಮ ಅಭಿಪ್ರಾಯ ನೀಡಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ.
*ಸರ್ಕಾರ ನಮ್ಮ ಮಾತನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ:*
ಕೊರೋನಾ ವಿಚಾರವಾಗಿ ಚರ್ಚೆ ನಡೆಸಲು ವಿಶೇಷ ಅಧಿವೇಶನ ನಡೆಸಿ ಎಂದು ನಾವು ಕೇಳಿದ್ದೇವೆ. ಅಧಿವೇಶನದಲ್ಲಿ ಸರ್ಕಾರ ತನ್ನ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಹೇಳಿದ್ದೇವೆ. ಈ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಬಹುದು. ಆದರೆ ಸರ್ಕಾರ ನಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಧಿವೇಶನ ಕರೆಯುತ್ತಿಲ್ಲ.