20220511 202433

ಸಂಪುಟ ವಿಸ್ತರಣೆ: ಯಾವಾಗ ಏನು ಬೇಕಾದರೂ ಆಗಬಹುದು…!

POLATICAL STATE

ಸಂಪುಟ ವಿಸ್ತರಣೆ: ಯಾವಾಗ ಏನು ಬೇಕಾದರೂ ಆಗಬಹುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನವದೆಹಲಿ, ಮೇ 11: ರಾಜ್ಯದ ಸಚಿವ ಸಂಪುಟದ ಕುರಿತು ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಜತೆ ಸಮಾಲೋಚನೆ ನಡೆಸಲಾಗಿದೆ.
ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವಾಗ ಎನೂ ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ಅಮಿತ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜಕೀಯ ಸ್ಥಿತಿಗತಿಗಳು, ಸಚಿವ ಸಂಪುಟದ ಬಗ್ಗೆ ಚರ್ಚಿಸಲಾಗಿದೆ. ಸ್ಥಳಿಯ ಸಂಸ್ಥೆಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪರಿಣಾಮಗಳೇನು, ಚುನಾವಣಾ ಆಯೋಗದ ನಿರ್ಧಾರ, ಸಚಿವ ಸಂಪುಟದ ವಿಸ್ತರಣೆ ಇವೆಲ್ಲವುಗಳ ತೀರ್ಮಾನಗಳೆಲ್ಲವನ್ನೂ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಲಾಗುವುದು. ಬರುವ ಎರಡು ಮೂರು ದಿನಗಳ ರಾಜಕೀಯ ಬೆಳವಣಿಗೆಯ ಆಧಾರದ ಮೇಲೆ ನಿರ್ಣಯವನ್ನು ತಿಳಿಸುವುದಾಗಿ ಹೇಳಿದ್ದಾರೆ.

ಮುಂಬರಲಿರುವ ರಾಜ್ಯ ಸಭಾ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಚಿವ ಸಂಪುಟದ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಲಾಗಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳು ಆಗುತ್ತವೆ. ಸ್ಥಿತಿ ಗತಿಗಳನ್ನು ಅವರಿಗೆ ವಿವರಿಸಲಾಗಿದೆ. ಮುಂದಿನ ಒಂದು ವಾರ ಬಹಳ ಮುಖ್ಯ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ದೊಡ್ಡ ಪ್ರಮಾಣದ ಚುನಾವಣೆ ಇರುವುದರಿಂದ ಅದರ ಪರಿಣಾಮಗಳೇನು ಎಂದು ಅಧ್ಯಯನ ಮಾಡಿ ತಿಳಿಸುವುವುದಾಗಿ ಹೇಳಿದ್ದಾರೆ.

ಹೆಸರುಗಳ ಬಗ್ಗೆ ಚರ್ಚೆಯಾಗಿಲ್ಲ

ಸಚಿವ ಸಂಪುಟ ವಿಸ್ತರಣೆಯ ತೀರ್ಮಾನವಾದ ಮೇಲೆ ಅದರ ಸ್ವರೂಪ ಗೊತ್ತಾಗಲಿದೆ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರುಗಳು ಚರ್ಚೆಯಾಗಿಲ್ಲ. ಹೆಸರುಗಳನ್ನು ತೀರ್ಮಾನ ಮಾಡುವ ಸಂದರ್ಭ ಬರಲಿಲ್ಲ. ಒಟ್ಟಾರೆ ಸ್ಥಿತಿಗತಿಗಳು, ಅದರ ಆಧಾರದ ಮೇಲೆ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಗೆ ಬಂದಾಗಲೂ ಜೆ.ಪಿ. ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೆವು. ಅಮಿತ್ ಷಾ ಮತ್ತು ನಡ್ಡಾ ಅವರು ಸೇರಿ ಒಂದು ತೀರ್ಮಾನವನ್ನು ಮಾಡುತ್ತಾರೆ.

ನಿನ್ನೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇಂದು ಮಧ್ಯಾಹ್ನ ಚುನಾವಣಾ ಆಯೋಗ ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಅವರು ಸರ್ಕಾರಕ್ಕೆ ಏನು ತಿಳಿಸುತ್ತಾರೊ ತೀರ್ಮಾನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.