IMG 20220525 WA0011

ಭ್ರಷ್ಟ ಸಚಿವರ ವಿರುದ್ಧ ಪಂಜಾಬ್‌ ಮಾದರಿ ಕ್ರಮ ಕ್ಕೆ ಆಗ್ರಹ…!

POLATICAL STATE


ಭ್ರಷ್ಟ ಸಚಿವರ ವಿರುದ್ಧ ಪಂಜಾಬ್‌ ಮಾದರಿ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಪೃಥ್ವಿ ರೆಡ್ಡಿ ಸವಾಲು

ಭ್ರಷ್ಟಾಚಾರವು ದೇಶದ್ರೋಹವಾಗಿದ್ದು, ಪಂಜಾಬ್‌ನ ಎಎಪಿ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಭ್ರಷ್ಟ ಸಚಿವರನ್ನು ಸಂಪುಟದಿಂದ ಹೊರಹಾಕಬೇಕು ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ಸಚಿವರೊಬ್ಬರು ಒಂದು ಪರ್ಸೆಂಟ್‌ ಕಮಿಷನ್‌ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದ ಭಗವಂತ್‌ ಮಾನ್‌ರವರು ಶೀಘ್ರವೇ ಅವರನ್ನು ವಜಾ ಮಾಡಿ, ತನಿಖೆಗೆ ಆದೇಶಿಸಿದ್ದಾರೆ. ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳು ಕಳಂಕಿತ ಸಚಿವರ ರಾಜೀನಾಮೆಗೆ ಆಗ್ರಹಿಸುವ ಮುನ್ನವೇ ಮಾನ್‌ರವರು ವಜಾ ಮಾಡಿದ್ದಾರೆ. ಆದರೆ ಬಿಜೆಪಿ ಆಡಳಿತವಿರುವ ಕರ್ನಾಟಕದ ಬಹುತೇಕ ಸಚಿವರ ಮೇಲೆ ಸಾಲುಸಾಲು ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದರೂ, ಜನರು ರಾಜೀನಾಮೆಗೆ ಆಗ್ರಹಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಆಮ್‌ ಆದ್ಮಿ ಪಾರ್ಟಿಯು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ರಸ್ತೆಗುಂಡಿಗಳಲ್ಲಿನ 40% ಭ್ರಷ್ಟಾಚಾರದ ವಿರುದ್ಧ ಎಎಪಿ ಹಲವು ದೂರು ದಾಖಲಿಸಿದೆ. ನಿರಂತರವಾಗಿ ಪ್ರತಿಭಟನೆ, ಸುದ್ದಿಗೋಷ್ಠಿ ಮಾಡಿ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದ್ದೇವೆ. ಆದರೆ ಈ ನಪುಂಸಕ ಸರ್ಕಾರಕ್ಕೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿಲ್ಲ. ಡಾ. ಸುಧಾಕರ್‌, ಮುನಿರತ್ನ ಮತ್ತಿತರ ಅನೇಕ ಸಚಿವರ ವಿರುದ್ಧ ಗಂಭೀರ ಆರೋಪಗಳಿವೆ. ಕಾಮಗಾರಿಗಳಲ್ಲಿ 40% ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಮಠಕ್ಕೆ ಅನುದಾನ ಪಡೆಯಲು 30% ಕಮಿಷನ್‌ ನೀಡಬೇಕಾಗಿದೆ ಎಂದು ಸ್ವಾಮೀಜಿಗಳೇ ಆರೋಪ ಮಾಡಿದ್ದಾರೆ. ಎಲ್ಲ ಕಳಂಕಿತ ಸಚಿವರನ್ನೂ ಶೀಘ್ರವೇ ವಜಾ ಮಾಡಬೇಕು” ಹಾಗೂ ಈ ಎಲ್ಲ ಕಳಂಕಿತ ಸಚಿವರ ವಿರುದ್ಧ ಸಮಗ್ರ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

IMG 20220525 WA0010

ನಿವೃತ್ತ ಐಪಿಎಸ್‌ ಅಧಿಕಾರಿ ಹಾಗೂ ಎಎಪಿ ಮುಖಂಡ ಭಾಸ್ಕರ್‌ ರಾವ್‌ ಮಾತನಾಡಿ, “ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್‌ ವಿರುದ್ಧ ಅಂಕಿಅಂಶ ಸಹಿತ ಆರೋಪ ಮಾಡಲಾಗಿತ್ತು. ಲೋಕಾಯುಕ್ತ ತನಿಖೆಯಿಂದ ಸಾಬೀತಾದ 118.26 ಕೋಟಿ ರೂ. ಮೊತ್ತದ ಅಕ್ರಮಕ್ಕೆ ಸಂಬಂಧಿಸಿ ಸಚಿವ ಮುನಿರತ್ನ ರಾಜೀನಾಮೆಗೆ ಎಎಪಿ ಅನೇಕ ಸಲ ಆಗ್ರಹಿಸಿತ್ತು. ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿನ ಅಕ್ರಮದಲ್ಲಿ ಸಚಿವ ಡಾ. ಸಿ.ಎನ್.ಅಶ್ವತ್‌ ನಾರಾಯಣ್‌ ಹೆಸರು ಪದೇಪದೇ ಕೇಳಿಬರುತ್ತಿದೆ. ಸಚಿವ ಬೈರತಿ ಬಸವರಾಜುರವರು ನಕಲಿ ದಾಖಲೆ ಸೃಷ್ಟಿಸಿ ಕೆ.ಆರ್‌.ಪುರಂನಲ್ಲಿ 36 ಎಕರೆ ಗೋಮಾಳ ಕಬಳಿಸಿದ ಆರೋಪ ಹೊತ್ತಿದ್ದಾರೆ. ಸಚಿವ ವಿ ಸೋಮಣ್ಣ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಸಿದ ಕಳಂಕವಿದೆ. ಸಚಿವ ಆರ್.ಅಶೋಕ್‌ 79 ಎ/ಬಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೊಟ್ಟೆ ಖರೀದಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ 27 ಕೋಟಿ ರೂ. ಅಕ್ರಮಕ್ಕೆ ಡೀಲ್‌ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸಚಿವ ನಿರಾಣಿ ಮೇಲೆ ಸಾವಿರಾರು ರೈತರ ಹೆಸರಿನಲ್ಲಿ ಅಕ್ರಮವಾಗಿ ಬೆಳೆ ಸಾಲ ಪಡೆದ ಆರೋಪವಿದೆ. ಸಚಿವ ಬಿ.ಸಿ.ಪಾಟೀಲ್‌ರವರು ಬೇರೆ ರಾಜ್ಯಗಳಿಗೆ ರಸಗೊಬ್ಬರ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗೆ ಅನೇಕ ಸಚಿವರ ವಿರುದ್ಧ ಗಂಭೀರ ಆರೋಪಗಳಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ” ಎಂದು ಹೇಳಿದರು.

ಮಾಜಿ ಕೆಎಎಸ್‌ ಅಧಿಕಾರಿ ಹಾಗೂ ಎಎಪಿ ಮುಖಂಡ ಕೆ.ಮಥಾಯಿ ಮಾತನಾಡಿ, “ಅಧಿಕಾರಿಗಳ ವರ್ಗಾವಣೆಗೆ 20 ಲಕ್ಷ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗೆ ಲಂಚ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಲೋಕಾಯುಕ್ತ ಹಾಗೂ ಎಸಿಬಿಯು ಕಳೆದ ಐದು ವರ್ಷಗಳಲ್ಲಿ ಒಬ್ಬರಿಗೂ ಶಿಕ್ಷೆ ಆಗುವಂತೆ ಮಾಡಿಲ್ಲ. ರಾಜ್ಯ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದ್ದು, ಸಿಎಂ ಬಸವರಾಜ್‌ ಬೊಮ್ಮಾಯಿಯವರು ಭ್ರಷ್ಟರ ರಕ್ಷಣೆಯಲ್ಲಿ ನಿರತರಾಗಿದ್ದಾರೆ” ಎಂದು ಹೇಳಿದರು.