ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ
ಬೆಂಗಳೂರು, ಮೇ 27 ( ಕರ್ನಾಟಕ ವಾರ್ತೆ ) :
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ಇದೇ ಮೇ 31 ರಂದು ತೆರವಾಗಲಿರುವ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಲಿದ್ದಾರೆ.
ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ.
ಮಹಿಳೆಯರ ದರ್ಬಾರ್ !
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000 ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, 2006 ನೇ ಇಸವಿಯಲ್ಲಿ ಮಾಲತಿ ದಾಸ್ ಹಾಗೂ 2017 ನೇ ಇಸವಿಯಲ್ಲಿ ಕೆ. ರತ್ನ ಪ್ರಭ ಅವರೂ ಅಲಂಕರಿಸಿದ್ದರು.
ಕೆ ರತ್ನ ಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್ ರಾಜು ಅಲಂಕರಿಸಿದಾಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ ಎಂಬುದು ಗಮನಾರ್ಹ ಅಂಶವಾಗಿತ್ತು.
ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದೊಡನೆಯೇ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಹಾಗೂ ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಶಕ್ತಿ ಕೇಂದ್ರದ ಶಕ್ತಿಯಾಗಿ ಹೊಸ ದಾಖಲೆ ಸ್ಥಾಪಿಸಲಿದ್ದಾರೆ.