IMG 20221210 WA0041

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಸಮಾವೇಶ…!

POLATICAL STATE

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಸಮಾವೇಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಮಾತು

ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುವಾಗ ಸೋನಿಯಾ ಗಾಂಧಿ ಅವರು ಸಂಸತ್ತಿಗೆ ಆಗಮಿಸಬೇಕು, ನಿಮ್ಮನ್ನು ಕೇಂದ್ರದ ಮಂತ್ರಿ ಮಾಡಲಾಗುವುದು ಎಂಬ ಭರವಸೆ ನೀಡಿದರು. ನಾನು ಈಗಷ್ಟೇ ಶಾಸಕನಾಗಿದ್ದು, ಮತ್ತೆ ಚುನಾವಣೆ ಎದುರಿಸಲು ಬಯಸುವುದಿಲ್ಲ ಎಂದು ಹೇಳಿದೆ. ಆಗ ಅವರು ನಿಮ್ಮ ಮೇಲೆ ವಿಶ್ವಾಸವಿದೆ, ಹೀಗಾಗಿ ಸ್ಪರ್ಧಿಸಬೇಕು ಎಂದರು. ಆಗ ಕಾಂಗ್ರೆಸ್ ಸರ್ಕಾರ ಬಂದಾಗ ಹೈದರಾಬಾದ್ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡುವುದಾದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದೆ. ಆಗ ಅವರು ಇದು ಸಾಧ್ಯವೇ ಎಂದು ಕೇಳಿದರು. ಹಿಂದಿನ ಗೃಹ ಸಚಿವರಾದ ಅಡ್ವಾಣಿ ಅವರು ತಿರಸ್ಕರಿಸಿದ್ದು, ನಾವು ಈ ಬಗ್ಗೆ ಆಶ್ವಾಸನೆ ನೀಡುವುದು ಸರಿಯಲ್ಲ ಎಂದು ಕೆಲವರು ಅವರಿಗೆ ಸಲಹೆ ನೀಡಿದ್ದರು. ಆಗ ನಾನು ಅವರನ್ನು ಭೇಟಿ ಮಾಡಿ ಬಿಜೆಪಿಯವರು ತಿರಸ್ಕರಿಸಿದ ಮಾತ್ರಕ್ಕೆ ಅದು ಅಂತಿಮವಲ್ಲ. ನಾವು ಅದಕ್ಕೆ ಪುನರ್ಜೀವ ನೀಡಬಹುದು ಎಂದು ಹೇಳಿದೆ. ಆಗ ಅವರು ಇದೇ ಮೈದಾನದಲ್ಲಿ ನೀವು ಖರ್ಗೆ ಅವರನ್ನು ಆರಿಸಿದರೆ ಈ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡಿಯೇ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಹೀಗಾಗಿ ನಾನು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದೆ.

ಕೊಟ್ಟ ಮಾತು ಉಳಿಸಲು ಸತತ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಇರಲಿಲ್ಲ. ಕೇವಲ 208 ಸ್ಥಾನಗಳು ಮಾತ್ರ ಇದ್ದವು. ಆದರೆ ಆ ತಿದ್ದುಪಡಿಗೆ 381 ಸಂಸದರ ಬೆಂಬಲ ಅಗತ್ಯವಿತ್ತು. ನಮ್ಮ ಮೈತ್ರಿ ಪಕ್ಷಗಳ ಮುಖಂಡರಿಗೆ ಕರೆ ಮಾಡಿ ಹೇಳಿ, ನಾನು ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದೆ. ನಂತರ ಸೋನಿಯಾ ಗಾಂಧಿ ಅವರು ಕೆಲವರಿಗೆ ದೂರವಾಣಿ ಕರೆ ಮೂಲಕ ಸಹಕಾರ ನೀಡುವಂತೆ ಕೇಳಿದರು. ಉಳಿದಂತೆ ನಾನು ಎಲ್ಲ ಪಕ್ಷಗಳ ಮುಖಂಡರು, ಸಂಸದರ ನಿವಾಸ, ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿ ಸಂಖ್ಯಾಬಲವನ್ನು ಕ್ರೋಢೀಕರಿಸಿದೆ. ನಂತರ 2013ರಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಂಡೆ. ನಂತರ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದ ಕಾರಣ ಹೆಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉಪಸಮಿತಿ ರಚನೆ ಮಾಡಲಾಯಿತು. ದೇಶದ ಇತಿಹಾಸದಲ್ಲಿ ಯಾರೂ ಇಷ್ಟು ವೇಗವಾಗಿ ಸಂವಿಧಾನ ತಿದ್ದುಪಡಿ ಮಾಡಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ.

ಇದನ್ನು ಸಾಧ್ಯವಾಗುವಂತೆ ಮಾಡಲು ನನಗೆ ಶಕ್ತಿ ನೀಡಿದ್ದು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ. ಇದರಿಂದ ಸಾವಿರಾರು ಜನರಿಗೆ ಸರ್ಕಾರಿ ಹುದ್ದೆ, ವಿದ್ಯಾರ್ಥಿಗಳಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಸಿಗುತ್ತಿದೆ. ನಮ್ಮ ಸರ್ಕಾರ ಇದ್ದಾಗ 1500 ಕೋಟಿಯನ್ನು ಈ ಭಾಗಕ್ಕೆ ನೀಡುವುದಾಗಿ ಹೇಳಿದ್ದೆವು. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ 150 ಕೋಟಿ ರು. ನೀಡಲಿಲ್ಲ, ಬದಲಿಗೆ ಅಲ್ಲಿನ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದರು. ಇದು ಉತ್ತರ ಕರ್ನಾಟಕದ ಭಾಗವೇ, ಬೊಮ್ಮಾಯಿ ಅವರು ಮಾತೆತ್ತಿದರೆ ನಾವು ಉತ್ತರ ಕರ್ನಾಟಕದವರು ಎಂದು ಹೇಳುತ್ತಾರೆ. ಹಾಗಾದರೆ ನಾವು ಉತ್ತರ ಕರ್ನಾಟಕದ ಭಾಗವಲ್ಲವೇ? ಕರ್ನಾಟಕದ ಹಿಂದುಳಿದ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹಣ ನೀಡದಿದ್ದರೆ ಅದು ಯಾರ ತಪ್ಪು?

IMG 20221210 WA0037

ಭ್ರಮೆಗಳಿಂದ ಹೊಟ್ಟೆ ತುಂಬುವುದಿಲ್ಲ. ಜನರಿಗೆ ದುಡಿಯಲು ಕೆಲಸ ಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಹುದ್ದೆಗಳಿವೆಯಾದರೂ ಯಾಕೆ ತುಂಬುತ್ತಿಲ್ಲ. ಜನ ಕೂಡ ಇವರನ್ನು ಯಾಕೆ ಪ್ರಶ್ನಿಸುತ್ತಿಲ್ಲ? 50 ಸಾವಿರ ಜನರಿಗೆ ಉದ್ಯೋಗ ನೀಡಬಹುದು. ನಮ್ಮ ಸರ್ಕಾರ ಬರುತ್ತದೆ. ಇದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಕೇವಲ ಹೈದರಾಬಾದ್ ಕರ್ನಾಟಕ ಮಾತ್ರವಲ್ಲ ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬುತ್ತದೆ. ಇದನ್ನು ಮಾಡದಿದ್ದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ.

ನಾನು ಗುಜರಾತ್ ಗೆ ಹೋಗಿದ್ದಾಗ ಮೋದಿ ಅವರು 70 ಸಾವಿರ ಜನರಿಗೆ ಸರ್ಟಿಫಿಕೇಟ್ ಹಂಚುವ ಫೋಟೋ ಟಿವಿಯಲ್ಲಿ ನೋಡಿದೆ. ಸರ್ಕಾರಿ ಹುದ್ದೆಗಳನ್ನು ತುಂಬಿ ಅದರ ನೇಮಕಾತಿ ಪತ್ರವನ್ನು ಪ್ರಧಾನಿಗಳು ಕೊಟ್ಟು ಪ್ರಚಾರ ಪಡೆದರು. ಅದೇ ರೀತಿ ಗುಜರಾತಿನಲ್ಲೂ ಮಾಡಿದ್ದಾರೆ. ದೇಶಾದ್ಯಂತ 30 ಲಕ್ಷ ಸರ್ಕಾರಿ, ಅರೆ ಸರ್ಕಾರಿ, ಸೇನೆ, ಪೊಲೀಸ್, ಬ್ಯಾಂಕ್ ಗಳಲ್ಲಿನ ಹುದ್ದೆಗಳು ಖಾಲಿ ಇವೆ. ಇದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿ ಪಡೆದಿರುವ ಮಾಹಿತಿ. ರಾಜ್ಯದಲ್ಲೂ ಅದೇ ರೀತಿ ಇದೆ. 70 ಸಾವಿರ ನೇಮಕಾತಿ ಪತ್ರ ನೀಡುವ ಫೋಟೋ ಪ್ರಚಾರ ಪಡೆಯುವವರು 30 ಲಕ್ಷ ಖಾಲಿ ಹುದ್ದೆ ಇರುವುದನ್ನು ತೋರುವುದಿಲ್ಲ. ಈ ಹುದ್ದೆ ತುಂಬಿದರೆ 30 ಲಕ್ಷ ಕುಟುಂಬದಲ್ಲಿ 2 ಕೋಟಿ ಜನರ ಜೀವನಕ್ಕೆ ಆಸರೆಯಾಗಲಿದೆ. ಇದನ್ನು ಬಿಜೆಪಿ ಮಾಡುತ್ತಿಲ್ಲ.

ಅವರು ಹೇಳಿದ ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಹೋದವೋ ಗೊತ್ತಿಲ್ಲ. ಸುಳ್ಳು ಭರವಸೆ ನೀಡಿದರು. ಯಾವುದೂ ಸಾಧ್ಯವಾಗಿಲ್ಲ. ಆದರೆ ನಾವು ನೀಡುತ್ತಿರುವ ಭರವಸೆ ಈಡೇರಿಸುತ್ತೇವೆ.

ನಾವು ಈ ಭಾಗಕ್ಕೆ 10 ಅಂಶಗಳ ಕಾರ್ಯಕ್ರಮ ಮಾಡಿದ್ದೇವೆ. ಮೊದಲ ವರ್ಷ ಈ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ, ನಂತರ ಪ್ರತಿ ವರ್ಷ ಈ ಅನುದಾನದ ಮೊತ್ತ ಏರಿಕೆಯಾಗಲಿದೆ.

ಈ ಭಾಗದ ಜನರಿಗಾಗಿ ನೂತನ ಕೈಗಾರಿಕೆ ನೀತಿ ಮಾಡುತ್ತೇವೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 1 ಲಕ್ಷ ಹುದ್ದೆಗಳನ್ನು ಸೃಷ್ಟಿಸಿ 7 ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ.

ಕೃಷ್ಣ ಜಲಭಾಗ್ಯ, ಗೋದಾವರಿ ಭಾಗದ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು.

ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಮ್ಮ ಭರವಸೆ ಈಡೇರಿಸಲು ಸಮಿತಿ ಮಾಡಿ ಅನುಷ್ಠಾನಕ್ಕೆ ತರುತ್ತೇವೆ.

ಕೇಂದ್ರಕ್ಕೆ ಮನವಿ ಮಾಡಿ ಐಐಟಿ, ಏಮ್ಸ್ ಸಂಸ್ಥೆಗಳು ಕಲ್ಯಾಣ ಕರ್ನಾಟಕಕ್ಕೆ ನೀಡುವಂತೆ ಕೋರುತ್ತೇವೆ.

ಪ್ರತಿ ಜಿಲ್ಲೆಗಳಲ್ಲಿ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಹಿಳೆಯರಿಗೆ ಪದವಿ ಕಾಲೇಜುಗಳ ಸ್ಥಾಪನೆ ಮಾಡುತ್ತೇವೆ.

ಎಲ್ಲಾ ಕುಟುಂಬಗಳಿಗೆ 5 ವರ್ಷಗಳಲ್ಲಿ ಮನೆಗಳ ನಿರ್ಮಾಣ ಮಾಡುತ್ತೇವೆ.

ಪ್ರತಿ ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡಲಾಗುವುದು.

ನಾವು ನೀಡುವ ವಚನ ಅನುಷ್ಠಾನಕ್ಕೆ ತರಲು ಶ್ರಮಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರ ಆರಿಸಬೇಕು. ಅಧಿಕಾರ ಇದ್ದರೆ ನಾವು ಕೊಟ್ಟ ಭರವಸೆ ಜಾರಿಗೆ ತರಬಹುದು. ನೀವು ಅಧಿಕಾರ ನೀಡದಿದ್ದರೆ ರಸ್ತೆ, ಕಟ್ಟಡಗಳ ಸ್ಥಿತಿ ಏನಾಗಿದೆ ಎಂದು ನೀವೇ ನೋಡಿ. ನೀವು ನಮಗೆ ಶಕ್ತಿ ನೀಡುತ್ತೀರಿ ಎಂಬ ಭರವಸೆ ನನಗಿದೆ. ಕೆಲವರ ತಲೆಯಲ್ಲಿ ಬಿಜೆಪಿ ಬಗ್ಗೆ ಯಾಕೆ ಆಸಕ್ತಿ ಇದೆಯೋ ಗೊತ್ತಿಲ್ಲ. ಅವರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ಬಂಡವಾಳ, ಕೈಗಾರಿಕೆ ತಂದಿಲ್ಲದಿದ್ದರೂ ಮೋದಿಯವರ ಹೆಸರು ಜಪಿಸುತ್ತಿದ್ದಾರೆ. ಹೀಗಾಗಿ ವೇದಿಕೆ ಮೇಲಿರುವ ಎಲ್ಲ ಮುಖಂಡರು ಬಿಜೆಪಿ, ಮೋದಿ, ಶಾ ಅವರು ಹೇಗೆ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುವಂತೆ ನೀವು ಜನರ ಬಳಿ ಹೋಗಿ ಪ್ರಚಾರ ಮಾಡಬೇಕು. ನಾವು ಒಂದಾಗಿ ಕೆಲಸ ಮಾಡದಿದ್ದರೆ ನಮ್ಮನ್ನು ನಂಬಿದ ಜನರಿಗೆ ಮೋಸ ಮಾಡಿದಂತಾಗುತ್ತದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರಿಗೆ ಯಾವ ಅಧಿಕಾರ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರು ಸಿಎಂ ಆಗುತ್ತಾರೆ, ಮಂತ್ರಿ ಆಗುತ್ತಾರೆ ಎಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಈಗ ನಾವು ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ದಯಮಾಡಿ ಎಲ್ಲರೂ ಒಂದಾಗಬೇಕು. ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್ ಹಾಗೂ ಎಂ.ಬಿ ಪಾಟೀಲ್ ಅವರು ಹೇಳಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾವು ಹಿಮಾಚಲ ಪ್ರದೇಶದಲ್ಲಿ 10 ಅಂಶಗಳ ಕಾರ್ಯಕ್ರಮ ನೀಡಿದ್ದೆವು. ಅದಕ್ಕಾಗಿ ನಾವು ಅಲ್ಲಿ ಗೆಲುವು ಸಾಧಿಸಿದ್ದೇವೆ. ನಾಳೆ ಅಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣವಚನ ನಡೆಯಲಿದೆ. ಇದು ರಾಜ್ಯದಲ್ಲೂ ಆಗಬೇಕು. ನನಗೆ ಕಾಂಗ್ರೆಸ್ ಪಕ್ಷ ಬೇಕು. ಕಾಂಗ್ರೆಸ್ ಸರ್ಕಾರ ಬೇಕು. ನೀವು ಯಾರೇ ಆದರೂ ನಾನು ಬೇಡ ಎನ್ನುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಮನವಿ ಮಾಡುತ್ತೇನೆ.

IMG 20221210 WA0036

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:

ಈ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 11 ವರ್ಷಗಳ ಕಾಲ ಹಾಕಿ ಆಟವಾಡಿದ್ದಾರೆ. ಆದರೆ ಇಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಇದೇ ಮೈದಾನದಲ್ಲಿ ನಿಮ್ಮ ಮುಂದೆ ಬಂದಿದ್ದಾರೆ. ಖರ್ಗೆ ಅವರ ಪರಿಶ್ರಮ, ಕಾರ್ಯವೈಖರಿ, ದಲಿತರು, ಶೋಷಿತರು, ಅಲ್ಪಸಂಖ್ಯಾತರು, ಜನಸಾಮಾನ್ಯರ ಬಗ್ಗೆ ಅವರಿಗೆ ಇರುವ ಕಾಳಜಿಯಿಂದ ಕಲಬುರ್ಗಿಯ ಕಾರ್ಮಿಕನ ಮಗ ಇಂದು ದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ದೇಶದ ಕಾಂಗ್ರೆಸ್ ಪಕ್ಷದ ನೀತಿಯನ್ನು ಕಲ್ಯಾಣ ಕರ್ನಾಟಕದ ಪುತ್ರ ನಿರ್ಧರಿಸುತ್ತಾರೆ.

40 % ಸರ್ಕಾರ ಈ ಭಾಗದ ಯುವ ಜನರ ಭವಿಷ್ಯವನ್ನು ಮಾರಾಟಕ್ಕಿಟ್ಟಿದೆ. ಇದನ್ನು ಬದಲಿಸಬೇಕಾದರೆ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಹೊಸ ದಿಕ್ಕು ನೀಡಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡಲಾಗುವುದು ಎಂಬ ವಿಚಾರವನ್ನು ಇಂದು ಖರ್ಗೆ ಅವರು ನಿಮ್ಮ ಮುಂದೆ ಇಡಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್:

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೊಂದು ಐತಿಹಾಸಿಕ ದಿನ. ನಾನು ಸಾಕಷ್ಟು ಸಮಾರಂಭ ನೋಡಿದ್ದೇನೆ. ಆದರೆ ಇಂದು ಎಂತಹ ಗಳಿಗೆ ಎಂದರೆ ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪೈಗಂಬರ್ ಅವರು ದಿವ್ಯ ವಾಣಿ ಕೇಳಿದ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭಿಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ ಗಳಿಗೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯಿಂದ ರಾಜ್ಯದಲ್ಲಿ 2023ರಲ್ಲಿ ಮತ್ತು 2024ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.

ನಾವು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆವು. ನಾನು ಸದಾ ಸಾಧನೆಗಳ ಬಗ್ಗೆ ಮಾತನಾಡುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ.

ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದಲ್ಲಿ ಹುಟ್ಟಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಇತಿಹಾಸ ಮರೆಯುವವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ನಮ್ಮ ಜೀವನ ಸಾರ್ಥಕವಾಗಬೇಕಾದರೆ ನಾವು ಎಷ್ಟು ಸುಖವಾಗಿ ಇರುತ್ತೇವೆ ಎಂಬುದಕ್ಕಿಂತ ನಮ್ಮಿಂದ ಎಷ್ಟು ಜನ ನೆಮ್ಮದಿಯಿಂದ ಇದ್ದಾರೆ ಎಂಬುದು ಮುಖ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ಕಲ್ಯಾಣ ಕರ್ನಾಟಕದಲ್ಲಿ ಇಎಸ್ಐ ಆಸ್ಪತ್ರೆ, ಬುದ್ಧ ವಿಹಾರ್ ಎಲ್ಲವೂ ನಿಮ್ಮ ಕಣ್ಣಿಗೆ ಕಾಣುತ್ತದೆ. ನಾನು ಹಾಗೂ ಖರ್ಗೆ ಅವರು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೆವು. ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ ಚಿಂತನೆ ನಡೆಸಿದಾಗ, ಈ ಯೋಜನೆಯನ್ನು ಕಲ್ಯಾಣ ಕರ್ನಾಟಕದ ಭಾಗದಿಂದ ಆರಂಭಿಸಬೇಕು ಎಂದು ಆಗ್ರಹಿಸಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಆಗಿದ್ದ ಅನ್ಯಾಯಕ್ಕೆ ನ್ಯಾಯ ಒದಗಿಸಿದರು.

50 ವರ್ಷಗಳ ರಾಜಕೀಯ ಜೀವನದಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಹಿಡಿದು ಇಷ್ಟು ದೊಡ್ಡ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಗಾಂಧಿಜೀ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಬಾಬು ಜಗಜೀವನ್ ರಾಮ್ ಅವರು ಏರಿದ್ದ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮ ಮನೆಮಗ ಖರ್ಗೆ ಅವರು ಕೂತಿದ್ದಾರೆ.

ಶಾಸಕರು, ಸಂಸದರು, ಮುಖ್ಯಮಂತ್ರಿಗಳನ್ನು ಸೃಷ್ಟಿ ಮಾಡುವ ಶಕ್ತಿಯಾಗಿ ಖರ್ಗೆ ಅವರನ್ನು ನೀವು ಬೆಳೆಸಿದ್ದೀರಿ. ಅವರ ಶಕ್ತಿಗಾಗಿ ಯಾರೆಲ್ಲಾ ಹಗಲಿರುಳು ಶ್ರಮಿಸಿದ್ದೀರಿ, ನಿಮಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ. ಇದರ ಹಿಂದೆ ತ್ಯಾಗ ಬಲಿದಾನ ಇದೆ. ದೇವರು ನಮಗೆ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ದೇವರು ನಮಗೆ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಖರ್ಗೆ ಅವರಿಗೆ ಸಿಕ್ಕ ಅವಕಾಶದಲ್ಲಿ ರಾಜ್ಯಕ್ಕೆ ಶಕ್ತಿಯನ್ನು ನೀಡಿದ್ದಾರೆ. ಅಡ್ವಾಣಿ, ವಾಜಪೇಯಿ ಅವರು ಮಾಡಲಾಗದನ್ನು ಖರ್ಗೆ ಅವರು ಮಾಡಿದ್ದಾರೆ.

ನಮಗೆ ಬಸವಣ್ಣ, ಕನಕದಾಸರು, ಕುವೆಂಪು, ಸಂತ ಶಿಶುನಾಳ ಶರೀಫರ ಕರ್ನಾಟಕ ಬೇಕು. ಆದರೆ ಬಿಜೆಪಿ ಸೃಷ್ಟಿಸಿರುವ ಭ್ರಷ್ಟಾಚಾರ, 40% ಕರ್ನಾಟಕ ಬೇಡ. ಇದಕ್ಕಾಗಿ ನಮ್ಮ ಎಲ್ಲ ನಾಯಕರು ಖರ್ಗೆ ಅವರ ಮುಖಂಡತ್ವದಲ್ಲಿ ಶ್ರಮಿಸಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ನಂತರ 371ಜೆ ಅಡಿಯಲ್ಲಿ ಎಲ್ಲ ಸಂವಿಧಾನಿಕ ನಿರ್ಣಯ ಜಾರಿಗೆ ತಂದು ಈ ಭಾಗದ ಯುವಕರ ಜೀವನ ಹಸಿರು ಮಾಡುತ್ತೇವೆ. ಈ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಕೇವಲ 2 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಿಸಲು ಈ ಭಾಗದ ಎಲ್ಲ ಜನರಿಗೆ ಆರ್ಥಿಕ ನೀತಿ, ಭೂಮಿ ಹಂಚಿಕೆ, ತೆರಿಗೆ ವಿನಾಯಿತಿ, ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಕೈಗಾರಿಕ ನೀತಿ ರೂಪಿಸಲಾಗುವುದು. ಖರ್ಗೆ ಅವರ ಆದೇಶದಂತೆ ಈ ಭಾಗದಲ್ಲಿ ಖಾಸಗಿ ವಲಯದ 1 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡುತ್ತೇವೆ.

IMG 20221210 WA0042

ಈ ಐತಿಹಾಸಿಕ ಕಾರ್ಯಕ್ರಮ ಮಾಡಿದ ಎಲ್ಲ ಕಾರ್ಯಕರ್ತರು ಮುಖಂಡರಿಗೆ ತುಂಬು ಹೃದಯದ ಅಭಿನಂದನೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:

ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರು ಹಾಗೂ ರಾಜ್ಯದ ಜನತೆ ಬಹಳ ಭವ್ಯ ಸ್ವಾಗತ ನೀಡಿದ್ದೀರಿ. ಅವರನ್ನು ಅಭಿಮಾನ ಪ್ರೀತಿಯಿಂದ ಬರಮಾಡಿಕೊಂಡಿದ್ದೀರಿ. ನಿಮ್ಮ ಉತ್ಸಾಹ ನೋಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಬರಲಿದೆ ಎಂದು ಭಾವಿಸಿದ್ದೇನೆ. ಅವರಿಗೆ ದೊಡ್ಡ ಪ್ರಮಾಣದ ಅಭಿನಂದನೆ ಸಲ್ಲಿಸಿದ್ದೀರಿ. ನಾವೆಲ್ಲರೂ ನಿಮ್ಮ ಸಂತೋಷದಲ್ಲಿ ನಾವು ಭಾಗಿಯಾಗಿ ಖರ್ಗೆ ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆ ಹೇಳಲು ಆಗಮಿಸಿದ್ದೇವೆ.

ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಬಯಸಿದವರಲ್ಲ. ಆ ಅಧ್ಯಕ್ಷ ಸ್ಥಾನ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಮಹತ್ತರವಾದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವರ ನೇತೃತ್ವದಲ್ಲಿ ಮತ್ತೆ ನವಚೈತನ್ಯ ಪಡೆದು ಮತ್ತೆ ಪ್ರಜ್ವಲಿಸಿ ಅಧಿಕಾರ ಹಿಡಿಯಲಿದೆ ಎಂದು ನಂಬಿದ್ದೇನೆ. ಖರ್ಗೆ ಅವರಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಸಂಪೂರ್ಣ ಸಹಕಾರವಿದೆ. ಇವರು 50 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಬೇರು ಮಟ್ಟದಿಂದ ಎಐಸಿಸಿ ಅದ್ಯಕ್ಷ ಸ್ಥಾನದವರೆಗೂ ಬೆಳೆದಿದ್ದಾರೆ.

ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಗತವೈಭವ ಕಾಣಲಿದೆ ಎಂಬ ವಿಶ್ವಾಸವಿದೆ. ಕರ್ನಾಟಕದಲ್ಲಿ 2023 ಏಪ್ರಿಲ್ ನಲ್ಲಿ ಚುನಾವಣೆ ನಡೆಯಲಿದೆ. ನಿಮ್ಮೆಲ್ಲರ ಉತ್ಸಾಹ ನೋಡಿದಾಗ ರಾಜ್ಯದ ಜನರ ನಾಡಿ ಮಿಡಿತ ನೋಡಿದಾಗ, ಈ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದು ಬಿಜೆಪಿ ಸರ್ಕಾರ ಕಿತ್ತೊಗೆದು ಜನಪರ ಸರ್ಕಾರವನ್ನು ಸ್ಥಾಪಿಸಿದಾಗ ಅದೇ ಖರ್ಗೆ ಅವರಿಗೆ ನೀಡುವ ನಿಜವಾದ ಅಭಿಮಾನ. ಇದಕ್ಕೆ ನೀವೆಲ್ಲರೂ ಸಜ್ಜಾಗಬೇಕು. ಕಲ್ಯಾಣ ಕರ್ನಾಟಕದಲ್ಲಿ 41 ವಿಧಾನಸಭಾ ಸ್ಥಾನಗಳಿದ್ದು, ಕಳೆದ ಬಾರಿ 21 ಸ್ಥಾನ ಗೆದ್ದಿದ್ದೆವು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 35 ಸ್ಥಾನ ಗೆಲ್ಲಬೇಕು. ಅದಕ್ಕೆ ನೀವು ಕಾರಣಕರ್ತರಾಗಬೇಕು ಎಂದು ಮನವಿ ಮಾಡುತ್ತೇನೆ.

ಬಿಜೆಪಿ ಸರ್ಕಾರ ಅನೈತಿಕವಾಗಿ ರಚನೆಯಾಗಿರುವ ಸರ್ಕಾರ, ಜನಾದೇಶದಿಂದ ರಚನೆಯಾಗಿರುವ ಸರ್ಕಾರ ಅಲ್ಲ. ಶಾಸಕರನ್ನು ಹಣದಲ್ಲಿ ಖರೀದಿಸಿದ ಸರ್ಕಾರ. ಅನೈತಕಿತ ಸರ್ಕಾರದಲ್ಲಿ ಅನೈತಿಕತೆ ಮುಂದುವರಿದಿದೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ಸರ್ಕಾರದಲ್ಲಿ ಗುತ್ತಿಗೆದಾರರ ಸಂಘ 40% ಸರ್ಕಾರ ಎಂದು ಕರೆದಿರಲಿಲ್ಲ. ಬೊಮ್ಮಾಯಿ ಅವರ ಸರ್ಕಾರ ಲಂಚದ ಕೂಪವಾಗಿದೆ. ವಿಧಾನಸೌಧದ ಗೋಡೆಗಳು ಲಂಚ ಎಂದು ಪಿಸುಗುಡುತ್ತಿವೆ. ಯಾವುದೋ ಯೋಜನೆ ಕ್ಲಿಯರ್ ಆಗಬೇಕಾದರೆ ಕನಿಷ್ಠ 40% ಕಮಿಷನ್ ನೀಡಬೇಕು. ವರ್ಗಾವಣೆಯಲ್ಲಿ ಕಮಿಷನ್, ಪೋಸ್ಟಿಂಗ್, ಪ್ರಮೋಷನ್ ಗಳಲ್ಲಿ ಕಮಿಷನ್ ನೀಡಬೇಕು. ಇಂದು ಅಧಿಕಾರಿಗಳು ವಿಧಿಇಲ್ಲದೆ ಹಣ ನೀಡಿ ಪೋಸ್ಟಿಂಗ್ ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದೆ. ಇತ್ತೀಚೆಗೆ ಪೊಲೀಸ್ ಇಸ್ ಪೆಕ್ಟರ್ 70-80 ಲಕ್ಷ ನೀಡಿ ಕೆ.ಆರ್ ಪುರಂ ಗೆ ಪೋಸ್ಟಿಂಗ್ ಮಾಡಿಸಿಕೊಂಡಿದ್ದ. ಇದನ್ನು ರಾಜ್ಯದ ಮಂತ್ರಿ ಪೊಲೀಸರ ಜತೆ ಮಾತಾಡಿದ್ದರು. ಇಂತಹ ಭ್ರಷ್ಟ ಸರ್ಕಾರ ಇರಬೇಕಾ? ದಯಮಾಡಿ ಈ ಸರ್ಕಾರ ಕಿತ್ತೊಗೆದರೆ ರಾಜ್ಯ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯುತ್ತದೆ. ಭ್ರಷ್ಟಾಚಾರ ತೊಲಗಲಿದೆ.

ಖರ್ಗೆ ಅವರ ಹೋರಾಟದಿಂದ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತಂದು ಆರ್ಟಿಕಲ್ 371 ಜೆ ಜಾರಿ ಮಾಡಲಾಯಿತು. ಇದಕ್ಕಾಗಿ ಖರ್ಗೆ ಅವರು, ಧರಂ ಸಿಂಗ್, ವೈದ್ಯನಾಥ್ ಪಾಟೀಲ್ ಹೋರಾಟ ಮಾಡಿದರು. ಖರ್ಗೆ ಅವರು ನಿರಂತರವಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ 371ಜೆ ಜಾರಿಗೆ ಕಾರಣಕರ್ತರಾದರು. ಬಿಜೆಪಿ ಅವರು ಕೇವಲ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರು. ಆದರೆ ಯಾವುದೇ ಕಲ್ಯಾಣ ಮಾಡಲಿಲ್ಲ.

ಬೊಮ್ಮಾಯಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. 371ಜೆ ಆದನಂತರ ನಮ್ಮ ಸರ್ಕಾರ ಅಧಿಕಾರದಲ್ಲಿತ್ತು, ನಾನು ಸಿಎಂ ಆಗಿದ್ದೆ. ಹೆಚ್.ಕೆ ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಅವರ ಅದ್ಯಕ್ಷತೆಯಲ್ಲಿ ಸಮಿತಿ ಮಾಡಿ, 371 ಜೆ ಜಾರಿ ಬಗ್ಗೆ ವರದಿ ನೀಡುವಂತೆ ಕೇಳಿದೆ. ನಂತರ ಈ ವರದಿ ಸಂಪೂರ್ಣವಾಗಿ ಒಪ್ಪಿಕೊಂಡು ಜಾರಿಗೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ವಾಜಪೇಯಿ ಅವರ ಸರ್ಕಾರವಿತ್ತು. ಅಡ್ವಾಣಿ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು. ಆಗ ಅವ್ರಿಗೆ ಪತ್ರ ಬರೆದು 371ಜೆ ಜಾರಿಗೆ ಮನವಿ ಮಾಡಿದ್ದರು. ಆದರೆ ಇದು ಸಾಧ್ಯವಿಲ್ಲ ಎಂದು ಬಿಜೆಪಿ ಮಹಾನಾಯಕ ಹೇಳಿದ್ದರು.

371ಜೆ ಜಾರಿ ನಂತರ ಹೈದರಾಬಾದ್ ಕರ್ನಾಟಕದಲ್ಲಿ ಮೀಸಲಾತಿ ನೀಡಿ ಸರ್ಕಾರಿ ನೇಮಕಾತಿ ಮಾಡಲಾಯಿತು. ಈ ಭಾಗದ ಯುವಕರು ಇಂಜಿನಿಯರ್, ಡಾಕ್ಟರ್, ಉಪನ್ಯಾಸರಕು, ಕೆಎಎಸ್ ಅಧಿಕಾರಿಗಳಾಗಲು 371ಜೆ ಕಾರಣ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಭಾಗದ ಜನರಿಗೆ 36 ಸಾವಿರ ಹುದ್ದೆ ನೀಡಿದೆವು. ಬಿಜೆಪಿಯ ಜನವಿರೋಧಿ ಸರ್ಕಾರ ಇವತ್ತಿನವರೆಗೂ ಒಂದೇಒಂದು ಹುದ್ದೆ ತುಂಬಲಿಲ್ಲ. ನಿಮ್ಮ ಜನ ಡಾಕ್ಟರ್, ಇಂಜಿನಿಯರ್, ಶಿಕ್ಷಕರು, ಉಪನ್ಯಾಸಕರು, ತಹಶೀಲ್ದಾರ್, ಆಯುಕ್ತರಾಗಬಾರದೆ? ಇದು ಸಾಧ್ಯವಾಗಬೇಕಾದರೆ ಬಿಜೆಪಿ ತೊಲಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಬಾಕಿ ಇರುವ ಉದ್ಯೋಗ ತುಂಬಿ ಪ್ರತಿ ವರ್ಷ 5 ಸಾವಿರ ಕೋಟಿಯನ್ನು ಈ ಭಾಗದ ಅಭಿವೃದ್ಧಿಗೆ ನೀಡಲಾಗುವುದು. ಇಂದು ಶಾಸಕರನ್ನು ಕೆಕೆಆರ್ಡಿಬಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾವು ಕ್ಯಾಬಿನೆಟ್ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಇದಕ್ಕೆ ನೀಡಿದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಬೊಮ್ಮಾಯಿ ಅವರು 2 ಸಾವಿರ ಕೋಟಿ, 3 ಸಾವಿರ ಕೋಟಿ ನೀಡುವುದಾಗಿ ಹೇಳುತ್ತಾರೆ ಎಲ್ಲಿದೆ ಅವರು ಹೇಳಿದ ಅನುದಾನ?

ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವುದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದಾಗಿದೆ. ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡುತ್ತೇನೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ:

ಖರ್ಗೆ ಅವರು 50 ವರ್ಷಗಳ ರಾಜಕೀಯ ಪಯಣದಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಸಾಗಿದೆ. ಅವರಿಗೆ ಈ ಸ್ಥಾನ ಸಿಕ್ಕಿರುವುದು ಸಂತೋಷದ ವಿಚಾರ. ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದು, ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇಂದು ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ನಮ್ಮ ಮುಂದಿರುವ ಸವಾಲು ಎಂದರೆ ಅವರ ನೇತೃತ್ವದಲ್ಲಿ 2023ರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಿಮ್ಮೆಲ್ಲರ ಆಶೀರ್ವಾದ ಖರ್ಗೆ ಅವರು ಹಾಗೂ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದು ಭಾವಿಸಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಪಕ್ಷಕ್ಕೆ ಶಕ್ತಿ ತುಂಬೋಣ.

IMG 20221210 WA0044

ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್:

ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಿಸಿ 9 ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರುರಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. 2 ಬಾರಿ ಲೋಕಸಭೆ ಹಾಗೂ ಹಾಲಿ ರಾಜ್ಯಸಭೆ ಸದಸ್ಯರಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಆರ್ಟಿಕಲ್ 371ಜೆ ವಿಚಾರದಲ್ಲಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ, ಉಪಪ್ರಧಾನಿಯಾಗಿದ್ದ ಲಾಲಕೃಷ್ಣ ಅಡ್ವಾಣಿ ಅವರು ಈ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಯಾವುದನ್ನು ಅಸಾಧ್ಯ ಎಂದು ಹೇಳಿದ್ದರೋ ಅದನ್ನು ಸಾಧ್ಯ ಮಾಡಿದವರು ಮಲ್ಲಿಕಾರ್ಜುನ ಖರ್ಗೆ. ಈ ಭಾಗದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ತಂದುಕೊಟ್ಟವರು ಖರ್ಗೆ ಅವರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಬೇಕಾದನ್ನು ನೀಡುವ ಕಲ್ಪವೃಕ್ಷ, ಕಾಮಧೇನು ಎಂದು ಪೂಜೆ ಮಾಡುತ್ತೇವೆ. ಅದೇ ರೀತಿ ಖರ್ಗೆ ವರು ಸಹ ಕಲ್ಪವೃಕ್ಷದಂತೆ. ಸಚಿವರಾಗಿ ಹಲವು ಜನಪರ ಯೋಜನೆ ಮಾಡಿದ್ದಾರೆ. ಲೋಕಸಭೆ ಸದಸ್ಯರಾಗಿ ಕಾರ್ಮಿಕರ ಸಚಿವರಾಗಿ ಕಾರ್ಮಿಕರ ತೊಂದರೆ ಅರಿತು ಪರಿಹಾರ ನೀಡುವ ಪ್ರಯತ್ನ ಮಾಡಿದ್ದಾರೆ. ಎಲ್ಲ ರೀತಿಯ ಸೌಲಭ್ಯ ನೀಡಲು ಕಾರ್ಮಿಕ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ತಂದರು.

ಕಲಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಿ, ಕಾರ್ಮಿಕರ ಮಕ್ಕಳು ಮೆಡಿಕಲ್ ಓದಲು ಈ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಆರಂಭಿಸಿದರು. ಅವರ ಜೀವನ ಉದ್ದಕ್ಕೂ ನಿಷ್ಠೆ, ಬದ್ಧತೆ, ಸಾಮಾಜಿಕ ನ್ಯಾಯ, ಬುದ್ಧ, ಬಸವ, ಅಂಬೇಡ್ಕರ್ ಅವರು ತತ್ವದ ಮೇಲೆ ನಂಬಿಕೆ ಇಟ್ಟಿರುವ ನಾಯಕ ಖರ್ಗೆ ಅವರು. ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುತ್ತೇವೆ. 2024ರಲ್ಲಿ ಅವರ ಅಧ್ಯಕ್ಷತೆಯಲ್ಲಿ ಲೋಕಸಭೆ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ಬರಲಿದೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:

ಕರ್ನಾಟದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತಹ ಇತಿಹಾಸವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಸೃಷ್ಟಿಸಿದ್ದಾರೆ. ಈ ಇತಿಹಾಸ ಎಲ್ಲ ಕಾಂಗ್ರೆಸಿಗರಿಗೂ ಸಿಗುವ ಅವಕಾಶವಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನ ಎಂದರೆ ಸಾಮಾನ್ಯ ಹುದ್ದೆ ಅಲ್ಲ. ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲರು, ಸುಭಾಷ್ ಚಂದ್ರ ಬೋಸ್, ಪಂಡಿತ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ವಹಿಸಿಕೊಂಡಿದ್ದ ಜವಾಬ್ದಾರಿಯನ್ನು ಖರ್ಗೆ ಅವರು ವಹಿಸಿಕೊಂಡಿದ್ದಾರೆ.

ಈ ಸಮಾವೇಶಕ್ಕೆ ಕಲ್ಯಾಣ ಕ್ರಾಂತಿ ಎಂದು ಹೆಸರಿಟ್ಟಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದಲ್ಲಿ ಈಗಾಗಲೇ ಸಾಕಷ್ಟು ಕ್ರಾಂತಿಗಳನ್ನು ಮಾಡಿದ್ದಾರೆ. ಸಂವಿಧಾನದಲ್ಲಿ 371ಜೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕ್ರಾಂತಿ ಮಾಡಿ ತೋರಿಸಿದ್ದಾರೆ. ನಿಮ್ಮ ಆಶೀರ್ವಾದದಿಂದ ಈಗ ಖರ್ಗೆ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಕಾಂಗ್ರೆಸ್ ನಾಯಕರು ಖರ್ಗೆ ಅವರತ್ತ ತಿರುಗಿ ನೋಡುತ್ತಿದ್ದಾರೆ. 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರ ಹೋರಾಟ ಸೋಲಿಲ್ಲದ ಸರದಾರನ ಹೋರಾಟವಾಗಿದೆ. ಈ ಸರದಾರನ ಹೋರಾಟ ದೆಹಲಿಯ ಸುಳ್ಳಿನ ಸರ್ಕಾರದ ವಿರುದ್ಧದ ಹೋರಾಟವಾಗಿದೆ. ಅದಕ್ಕೆ ನಾವು ನೀವೆಲ್ಲ ಅವರ ಹೋರಾಟದಲ್ಲಿ ಕೈಜೋಡಿಸಬೇಕು. ಈ ಹೋರಾಟ ಸಾಮಾನ್ಯ ಹೋರಾಟವಲ್ಲ. ಖರ್ಗೆ ಅವರ ಮೇಲೆ ಸಾಕಷ್ಟು ದೊಡ್ಡ ಜವಾಬ್ದಾರಿ ಇದೆ.

ದೇಶದ ಪ್ರಧಾನಿಗಳಾದ ಮೋದಿ ಅವರು ಗುಜರಾತ್ ಗೆದ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿವೆ. ರಾಜ್ಯದಲ್ಲಿ ಬಂಗಾರಪ್ಪನವರು ಸಿಎಂ ಆಗಿದ್ದಾಗ ಅವರು ಚುನಾವಣೆ ಪ್ರಚಾರಕ್ಕೆ ಹೋಗಿರಲಿಲ್ಲ. ಆದರೆ ಪ್ರಧಾನಿಗಳು ಕೆಲಸ ಮಾಡದ ಕಾರಣ 28 ದಿನಗಳ ಕಾಲ ಗುಜರಾತ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಖರ್ಗೆ ಅವರು ಈ ಪ್ರಾಂಥ್ಯದಲ್ಲಿ ಮಾಡಿರುವ ಅಭಿವೃದ್ಧಿ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಅಪಾರ. ಇಎಸ್ಐ ಆಸ್ಪತ್ರೆ, ರೈಲ್ವೆ ವ್ಯವಸ್ಥೆ ಖರ್ಗೆ ಅವರ ಸಾಧನೆಗೆ ಸಾಕ್ಷಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ನಾವೆಲ್ಲರೂ ಅವರ ಕೈ ಬಲಪಡಿಸಬೇಕಿದೆ.