ಡಿಸೆಂಬರ್ 27ರಂದು ಆಸ್ಪತ್ರೆಗಳಲ್ಲಿ ಕೊರೊನಾ ಕುರಿತ ಆರೋಗ್ಯ ಸೇವೆಗಳ ಬಗ್ಗೆ ಮಾಕ್ ಡ್ರಿಲ್: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳಿ
ಕೊರೊನಾ ತಡೆಯಲು ಸರ್ಕಾರದೊಂದಿಗೆ ಸಹಕರಿಸಿ
ಬೆಂಗಳೂರು: ಡಿಸೆಂಬರ್ ,23, : ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಸೇರಿದಂತೆ ಕೋವಿಡ್ ಉಪಕರಣಗಳು, ಸಿಬ್ಬಂಧಿಗಳು, ವ್ಯವಸ್ಥೆಗಳು ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಡಿಸೆಂಬರ್ 27ರಂದು ಎಲ್ಲಾ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವರು ನಡೆಸಿದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಪ್ರತಿದಿನ ವಿಶ್ವದಲ್ಲಿ 5ರಿಂದ ಲಕ್ಷ ಕೇಸ್‌ಗಳು ಪತ್ತೆಯಾಗುತ್ತಿವೆ. ಈ ಪೈಕಿ ಚೀನಾ, ಜಪಾನ್, ತೈವಾನ್, ಅಮೆರಿಕಾ, ಯುರೋಪ್, ನ್ಯೂಜಿಲೆಂಡ್ ಸೇರಿದಂತೆ ಶೇ.80 ರಷ್ಟು ಹೊಸ ಕೇಸ್‌ಗಳು 10 ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ಕಳೆದ ಮೂರು ತಿಂಗಳಿನಿಂದ ಕೊರೊನಾ ವಿಶ್ವದ ನಾನಾ ದೇಶಗಳಲ್ಲಿ ಹೇಗೆ ಏರಿಕೆಯಾಗುತ್ತಿದೆ ಅನ್ನುವ ಬಗ್ಗೆ ಸಭೆಯಲ್ಲಿ ಎಲ್ಲಾ ರಾಜ್ಯಗಳಿಗೂ ಮಾಹಿತಿ ನೀಡಿದರು. ಸದ್ಯ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 0.03% ರಷ್ಟು ಇದೆ. ಭಾರತದಲ್ಲಿ ಎರಡು ಡೋಸ್‌ಗಳ ಲಸಿಕಾಕರಣ ಆಗಿರುವುದು ಇದಕ್ಕೆ ದೊಡ್ಡ ಕಾರಣವಾಗಿದೆ. ಜೊತೆಗೆ ನಮ್ಮ ಜನರಲ್ಲಿ ಸ್ವಾಭಾವಿಕವಾದಂತಹ ರೋಗ ನಿರೋಧಕ ಶಕ್ತಿಯೂ ಒಂದು ಕಾರಣವಾಗಿರಬಹುದು. ವಿದೇಶಗಳಿಗೆ ಹೋಲಿಕೆ ಮಾಡಿದಾಗ ಕೊರೊನಾ ನಿಯಂತ್ರಣದ ಬಗ್ಗೆ ನಮ್ಮ ದೇಶದ ಜನ ಹೆಚ್ಚು ಒಲವು ತೋರಿರುವುದು ಕಂಡು ಬಂದಿದೆ ಎಂದರು.
ಅಮೆರಿಕಾದ ಸಂಸ್ಥೆಯೊಂದು ಮಾಡಿರುವ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಚೀನಾ ಒಂದರಲ್ಲೇ 10 ಲಕ್ಷ ಜನರು ಕೊರೊನಾದಿಂದ ಸಾವನ್ನಪ್ಪುವ ಸಾಧ್ಯತೆ ಇದೆ. ಚೀನಾದ ಲಸಿಕೆ, ಲಸಿಕಾಕರಣದ ಪ್ರೊಸೆಸ್, ಜನರ ಅಜಾಗರೂಕತೆ, ಹಿರಿಯ/ ವಯೋವೃದ್ಧರ ಜನಸಂಖ್ಯೆ ಮತ್ತು ಅವರಿಗೆ ಇರುವ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜ್ಯ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಮ್ಮ ರಾಜ್ಯದ ವತಿಯಿಂದಲೂ ಕೆಲವು ಸಲಹೆ ನೀಡಲಾಯಿತು. 2 ವರ್ಷಗಳ ಹಿಂದೆ ಆರಂಭವಾದ ಕೊರೊನಾ ಇನ್ನೂ ಹೋಗಿಲ್ಲ. ಹೀಗಾಗಿ ಜನರು ಹೆಚ್ಚು ಜಾಗೃತೆಯಿಂದ ಇರಬೇಕಿದ್ದು, ಬೂಸ್ಟರ್ ಡೋಸ್‌ಗಳನ್ನು ಆದಷ್ಟು ಬೇಗನೆ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆರೋಗ್ಯ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿತು ಎಂದು ಅವರು ತಿಳಿಸಿದರು.
ಕೊರೊನಾ ರೂಪಾಂತರ ತಳಿ BF07 R ವ್ಯಾಲ್ಯೂ ಪ್ರಕಾರ ಇದು ಒಬ್ಬ ವ್ಯಕ್ತಿಯಿಂದ 17-18 ಜನಕ್ಕೆ ಹರಡುವ ಸಾಮರ್ಥ್ಯ ಹೊಂದಿದೆ. ಟೆಸ್ಟಿಂಗ್, ಕಣ್ಗಾವಲು ಹೆಚ್ಚಿಸಲು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ರಾಜ್ಯದಲ್ಲಿ 8 ರಿಂದ 10 ಲಕ್ಷ ಲಸಿಕೆಗಳಿದ್ದು ಜನರು ಸ್ವಯಂ ಪ್ರೇರಿತರಾಗಿ ಇದನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ನಿನ್ನೆಯೇ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಪಾಸಿಟಿವ್ ಕೇಸ್‌ಗಳನ್ನು ಕಡ್ಡಾಯವಾಗಿ ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಿದೆ. ಹಿರಿಯರಿಗೆ ಪ್ರಾಶಸ್ತ್ಯ ನೀಡಿ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಏರ್‌ಪೋರ್ಟ್‌ನಲ್ಲಿ 2% ಪ್ರಯಾಣಿಕರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಏರ್ ಸುವಿಧಾ ಮೂಲಕ 72 ಗಂಟೆಗಳ ಒಳಗಡೆ ಅಂತರಾಷ್ಟ್ರೀಯ ಪ್ರಯಾಣಿಕೆರು RTPCR ನೆಗೆಟಿವ್ ಸರ್ಟಿಫಿಕೆಟ್ ಅಪ್‌ಲೋಡ್ ಮಾಡಬೇಕು ಅನ್ನುವ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಮಾಸ್ಕ್ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ಕೈಗೊಳ್ಳಬೇಕು. ಹೊಸ ವರ್ಷ ಸೇರಿದಂತೆ ಹೆಚ್ಚು ಜನರು ಸೇರುವ ಕಡೆ ಸಮಾರಂಭಗಳನ್ನು ಆಯೋಜಿಸುವುದನ್ನು ಕೆಲ ದಿನಗಳ ಮುಂದೂಡುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು.