ಎಸ್ಟಿ ಪಟ್ಟಿಗೆ ಕುರುಬ ಸಮಾಜ-ಪಕ್ಷಾತೀತ ಹೋರಾಟಕ್ಕೆ ಸಚಿವ ಎಂಟಿಬಿ ನಾಗರಾಜು ಕರೆ
ಬೆಳಗಾವಿ:ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆನ್ನುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು,ವಿಧಾನಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ತಿಳಿಸಿದ್ದಾರೆ.
ಸುವರ್ಣ ವಿಧಾನ ಸೌಧ ಬಳಿಯ ಕೊಂಡಸಕೊಪ್ಪದಲ್ಲಿ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಪ್ರದೇಶ ಕುರುಬರ ಸಂಘ ಹಾಗೂ ಗೊಂಡ ಕುರುಬರ ಸಂಘ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಸಚಿವರು ಮಾತನಾಡಿದರು.
ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆನ್ನುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ.ಹೋರಾಟವು
ಸಾಮೂಹಿಕ ನಾಯಕತ್ವದಡಿ ನಡೆಯಬೇಕಿದೆ ಎಂದು ಸಚಿವ ಎಂಟಿಬಿ ನಾಗರಾಜು ಹೇಳಿದರು.
ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಸ್ವಾಮಿಗಳ ನೇತೃತ್ವದಲ್ಲಿ ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ನಡೆದ ಪಾದಯಾತ್ರೆಯಲ್ಲಿ ತಾವು ಭಾಗವಹಿಸಿದ್ದನ್ನು ಸ್ಮರಿಸಿದ ಸಚಿವ ಎಂಟಿಬಿ ನಾಗರಾಜು, ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಸತ್ಯಾಗ್ರಹದಲ್ಲಿ ಕನಕ ಗುರು ಪೀಠದ ಗುಲ್ಬರ್ಗ ವಿಭಾಗೀಯ
ಮಠದ ಸ್ವಾಮೀಜಿ ಸಿದ್ಧರಮಾನಂದ ಪುರಿ ಸ್ವಾಮೀಜಿ, ಧಾರವಾಡದ ಬಸವರಾಜ ದೇವರು,ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ,ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಸುಬ್ರಮಣ್ಯ ಮತ್ತಿತರರು ಇದ್ದರು.