IMG 20221226 WA0031

ಬೆಳಗಾವಿ: ವನ್ಯ ಪ್ರಾಣಿ ದಾಳಿಯಿಂದ ಮೃತಪಟ್ಟವರ ಪರಿಹಾರ* *ಪೂರ್ವಾನ್ವಯವಾಗುವಂತೆ ಕ್ರಮ…!

Genaral STATE

ವನ್ಯ ಪ್ರಾಣಿ ದಾಳಿಯಿಂದ ಮೃತಪಟ್ಟವರ ಪರಿಹಾರ*
*ಪೂರ್ವಾನ್ವಯವಾಗುವಂತೆ ಕ್ರಮ ; ಆರ್. ಅಶೋಕ್*
   ಬೆಳಗಾವಿ, ಸುವರ್ಣಸೌಧ. ಡಿ.27. (ಕರ್ನಾಟಕ ವಾರ್ತೆ) ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಇತ್ತೀಚೆಗೆ 15 ಲಕ್ಷ ರೂ.ಗಳಿಗೆ ಹೆಚ್ಚಿಸಿ,ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳು ಈ ಕುರಿತು ಘೋಷಣೆ ಮಾಡಿದ ದಿನದಿಂದಲೇ ಪೂರ್ವಾನ್ವಯವಾಗುವಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಟಿ. ನರಸೀಪುರ ಶಾಸಕ ಎಂ. ಅಶ್ವಿನ್ ಕುಮಾರ್ ಅವರು ಮಾತನಾಡಿ, ನಮ್ಮ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದ್ದರೂ ಕೂಡ ವನ್ಯಪ್ರಾಣಿಗಳ ಭಯದಿಂದ ಕಬ್ಬು ಕಟಾವು ಮಾಡುತ್ತಿಲ್ಲ. ಈಗಾಗಲೇ ಪ್ರಾಣಿಗಳ ದಾಳಿಗೆ ಸಿಲುಕಿ ಅಸುನೀಗಿರುವ ಮಂಜುನಾಥ ಹಾಗೂ ಮೇಘನಾ ಅವರಿಗೆ ಮುಖ್ಯಮಂತ್ರಿಗಳ ಹೊಸ ಆದೇಶದಂತೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಶಾಸಕ ಅಶ್ವಿನ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ ಅವರು, ಕಳೆದ ಮೂರು ವರ್ಷಗಳಿಂದ ನಂಜನಗೂಡು ಟಿ. ನರಸೀಪುರ ಭಾಗದಲ್ಲಿ ಕಾಡಾನೆ, ಕಾಡು ಹಂದಿ, ಚಿರತೆ ದಾಳಿಗಳಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ತಂತಿ ಬೇಲಿ, ಕಂದಕ ತೋಡಿ ವನ್ಯ ಪ್ರಾಣಿ ನಿಯಂತ್ರಿಸಲಾಗುತ್ತಿದೆ. ಈಗಾಗಲೇ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗಳ ಕುಟುಂಬಕ್ಕೆ ಆರಂಭಿಕ ಪರಿಹಾರವಾಗಿ 5 ಲಕ್ಷ ರೂ.  ಕೊಡಲಾಗುವುದು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೊಸ ಆದೇಶದಂತೆ ಒಟ್ಟು 15 ಲಕ್ಷ ರೂ.ಗಳನ್ನು ಮಂಜೂರು ಮಾಡಲು ಕ್ರಮಕೈಗೊಳ್ಳಲಾಗುವುದೆಂದರು.
ಟಿ.ನರಸೀಪುರ ಭಾಗದಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದು, ಮೃತ ವ್ಯಕ್ತಿಗಳ ಎಫ್.ಎಸ್.ಎಲ್. ವರದಿಗಾಗಿ ಕಾಯದೇ ಮರಣೋತ್ತರ ಪರೀಕ್ಷೆಯ ನಂತರ ಸಂಪೂರ್ಣ ಪರಿಹಾರ ಹಣ ಒದಗಿಸಬೇಕೆಂದು ಶಾಸಕ ಅಶ್ವಿನಕುಮಾರ್ ಮನವಿ ಮಾಡಿದರು.
*******
*