IMG 20230622 WA0047

JD (S) : ಕಾಂಗ್ರೆಸ್ ಸರ್ಕಾರದ್ದು ಗೃಹಜ್ಯೋತಿಯೋ, ಸುಡುಜ್ಯೋತಿಯೋ?…!

POLATICAL STATE

ವಿದ್ಯುತ್ ತೆರಿಗೆ ಶೇ.3ರಿಂದ 4ರಷ್ಟು ಕಡಿತಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಕಾಂಗ್ರೆಸ್ ಸರ್ಕಾರದ್ದು ಗೃಹಜ್ಯೋತಿಯೋ, ಸುಡುಜ್ಯೋತಿಯೋ?

ವಿದ್ಯುತ್ ಬರೆಯಿಂದ ಜನರು, ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿ ಎಂದು ಕಳವಳ


ಬೆಂಗಳೂರು: ವಿದ್ಯುತ್ ಮೇಲೆ ವಿಧಿಸಿರುವ ಶೇ.9ರಷ್ಟು ತೆರಿಗೆಯಲ್ಲಿ ಶೇ.3ರಿಂದ 4ರಷ್ಟು ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.

ಅಪರಿಮಿತವಾಗಿ ಹೆಚ್ಚಳವಾಗಿರುವ ವಿದ್ಯುತ್ ದರದ ಬಗ್ಗೆ ಬಿಕ್ಕಟ್ಟಿಗೆ ಸಿಲುಕಿರುವ IT & ESDM ವಲಯಗಳ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ ಅವರ ಅಹವಾಲು ಸ್ವೀಕರಿಸಿದ ನಂತರ ಮಾಜಿ ಮುಖ್ಯಮಂತ್ರಿಗಳು ಮಾಧ್ಯಮಗಳ ಜತೆ ಮಾತನಾಡಿದರು.

ದುಬಾರಿ ವಿದ್ಯುತ್ ದರದಿಂದ ಸಾರ್ವಜನಿಕರ ಜತೆಗೆ ಕೈಗಾರಿಕಾ ವಲಯವೂ ತೀವ್ರ ಸಂಕಷ್ಟಕ್ಕೆ ಸಿಕುಕಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ಜನರ ತುಟಿಗೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ವಿದ್ಯುತ್ ಮೇಲಿನ ತೆರಿಗೆಯಲ್ಲಿ ಕೊಂಚ ಕಡಿತ ಮಾಡಲಿ ಎಂದರು.

ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕ ಆಡುತ್ತಿರುವ ಕಾಂಗ್ರೆಸ್ ಸರಕಾರ, ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್ಲುಗಳನ್ನು ನೀಡುತ್ತಿರುವುದು ಗೃಹಜ್ಯೋತಿಯೇ? ಅದು ಗೃಹಜ್ಯೋತಿಯಲ್ಲ, ಸುಡುಜ್ಯೋತಿ ಎಂದು ಮಾಜಿ ಮುಖ್ಯಮಂತ್ರಿ ಅವರು ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

WhatsApp Image 2023 06 22 at 5.08.41 PM 300x169 1

ವಿದ್ಯುತ್ ದರ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆಟ ಆಡುತ್ತಿವೆ. ಕಾಂಗ್ರೆಸ್ ಸರಕಾರ ನೋಡಿದರೆ, ನಾವು ಜಾಸ್ತಿ ದರ ಜಾಸ್ತಿ ಮಾಡಿಲ್ಲ, ಹಿಂದೆ ಇದ್ದ ಬಿಜೆಪಿ ಹೆಚ್ಚಳ ಮಾಡಿದ್ದು ಎಂದು ಹೇಳಿ ನೆಪ ಹೇಳಿ ಜವಾಬ್ದಾರಿಯಿಂದ ಜಾಣತನದಿಂದ ಪಲಾಯನ ಮಾಡುತ್ತಿದೆ. ಇವರ ನಾಟಕ ಜನರಿಗೆ ಅರ್ಥ ಆಗುತ್ತಿದೆ ಎಂದು ಅವರು ಸಿಡಿಮಿಡಿಯಾದರು.

ಸಿಎಂ ಮುಂದೆ ಕಷ್ಟ ಹೇಳೋಕೆ ಹೋಗಿದ್ದಾರೆ, ಇವರಿಗೆ ಸಮಯ ಕೊಡಲು ಮುಖ್ಯಮಂತ್ರಿಗಳಿಗೆ ವ್ಯವಧಾನ ಇಲ್ಲ. ಇವರು ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ, ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇಂಥವರು ಹೋದಾಗ ದೊಡ್ಡ ಸ್ಥಾನದಲ್ಲಿ ಕೂತವರು ಸಜ್ಜನಿಕೆಯಿಂದ ವರ್ತಿಸಬೇಕು ಎಂದ ಅವರು; ನಾವು ಅಧಿಕಾರದಲ್ಲಿ ಇದ್ದಾಗ ಕೆಇಆರ್ ಸಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿತ್ತು, ಆದರೆ ದರ ಏರಿಕೆ ಮಾಡಿರಲಿಲ್ಲ ಅಂತಾರೆ ಬಿಜೆಪಿ ನಾಯಕರು. ಆದರೆ, ದರ ಏರಿಕೆ ಬಗ್ಗೆ ಕೆಇಆರ್ ಸಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಬೆಲೆ ಏರಿಕೆ ಬಗ್ಗೆ ಅರ್ಜಿ ಕೊಟ್ಟಾಗ ಕೆಇ ಆರ್ ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ನೋಡಿದರೆ ಇವರು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ರಾಜ್ಯದ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸ್ವಯಂ ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಇದು ಅರ್ಥ ಆಗುವುದಿಲ್ಲವೇ? ಆರಂಭದಲ್ಲಿಯೇ ಜನ ವಿರೋಧಿ, ಕೈಗಾರಿಕಾ ವಿರೋಧಿ ಕ್ರಮಗಳನ್ನು ಸರಕಾರ ಕೈಗೊಂಡರೆ ಉದ್ಯೋಗ ಸೃಷ್ಟಿ, ಹೂಡಿಕೆ ಕಥೆ ಏನು? ಇವರ ಕಷ್ಟಗಳನ್ನ ಸರಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ನಿನಗೂ ಫ್ರೀ ನನಗೂ ಫ್ರೀ ಅಂತ ಹೇಳಿದಾಗ ಮುಂದಿನ ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರು ನಂಬಿ ಮತ ಹಾಕಿದರು. ಈಗ ಕಾಂಗ್ರೆಸ್ ಸರಕಾರ ವಿಶ್ವಾಸ ದ್ರೋಹ ಎಸಗಿದೆ ಎಸಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆಜಿಗೆ 3 ರೂ. ದರದಲ್ಲಿ ರಾಜ್ಯದ ಬಡವರಿಗೆ ಅಕ್ಕಿ ಕೊಟ್ಟಿದ್ದ ದೇವೇಗೌಡರು

ಹಳೆಯ ದಿನಗಳನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ಸಿಎಂ ಹಿಂದೆ ಸುತ್ತುವ ಸಚಿವರಿಗೆ ತರಾಟೆ
ಇದು ಪರ್ಸೆಂಟೆಜ್ ಸರ್ಕಾರ ಎಂದು ಆರೋಪಿಸಿದ ಮಾಜಿ ಸಿಎಂ

20230622 183450

ಬಡವರಿಗೆ, ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಸವಿರುವ ಆರ್ಥಿಕ ದುರ್ಬಲರಿಗೆ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಅಗ್ಗದ ದರದಲ್ಲಿ ಅಕ್ಕಿ ನೀಡಿದ್ದರು. ಅವರ ಸಂಪುಟದಲ್ಲಿ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿಗಳಿಗೆ ಈ ವಿಷಯ ಮರೆತು ಹೋಗಿದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.

ಅಕ್ಕಿ ಗ್ಯಾರಂಟಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇವರು ಇವತ್ತು ಅಕ್ಕಿ ಗ್ಯಾರಂಟಿ, ಅಕ್ಕಿ ಭಾಗ್ಯ ಎಂದು ಹೇಳುತ್ತಿದ್ದಾರೆ. ಆದರೆ, ದೇವೇಗೌಡರು ಹಿಂದೆಯೇ ಕಡಿಮೆ ದರದಲ್ಲಿ ಅಕ್ಕಿ ನೀಡುವ ಮೂಲಕ ಬಡಜನರ ನೆರವಿಗೆ ಧಾವಿಸಿದ್ದರು ಎಂದರು.

1995ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಜೆಟ್ ಮಂಡಿಸುತ್ತಾರೆ. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಕೆಜಿಗೆ 4.54 ರೂ. ಇದ್ದ ಅಕ್ಕಿ ದರವನ್ನ ಕೇಂದ್ರ ಸರ್ಕಾರ ಏಕಾಏಕಿ 7.49 ರೂ.ಗಳಿಗೆ ಹೆಚ್ಚಳ ಮಾಡಿತು. ಆಗ ಮುಖ್ಯಮಂತ್ರಿ ಆಗಿದ್ದ ದೇವೇಗೌಡರು ಧೈರ್ಯ ಮಾಡಿ 30 ರೂಪಾಯಿಗೆ ಕೆಜಿ ಅಕ್ಕಿ ಕೊಡುವಂತೆ ಆದೇಶ ಹೊರಡಿಸಿದರು. ಬಹುಶಃ ಅವರಿಂದಲೇ ರಾಜಕೀಯವಾಗಿ ಬೆಳೆದವರಿಗೆ ಇದು ನೆನಪಿರಲಿಕ್ಕಿಲ್ಲ. ಈಗ ಆಪರೇಶನ್ ಹಸ್ತ ಮಾಡುತ್ತೇವೆ ಎಂದು ಮೀಸೆ ತಿರುವುತ್ತಿದ್ದಾರೆ. ಜನತಾದಳ ಪಕ್ಷವನ್ನು ಮುಗಿಸೋದು ಅಷ್ಟು ಸುಲಭ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಕುಮಾರಸ್ವಾಮಿ ಅವರು.

ಮತಕ್ಕಾಗಿ, ಅಧಿಕಾರಕ್ಕಾಗಿ ಅಕ್ಕಿ ಫ್ರೀ ಎಂದವರು ಈಗ ಅಕ್ಕಿ ಕೊಡುವ ಮತುಕೊಟ್ಟಿದ್ದ ಇವರು ದೇವೇಗೌಡರ ಬದ್ಧತೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು. ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಇವರು ಕೊಟ್ಟ ಭರವಸೆ ಈಡೇರಿಸಲಾಗದೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಟೀಕಿಸಿದರು.

ಇದು ಪರ್ಸೆಂಟೆಜ್ ಸರ್ಕಾರ:

ಇದು ಕೂಡ ಪರ್ಸೆಂಟೆಜ್ ಸರ್ಕಾರ. ನಿಮಾಗೆ ಅನುಮಾನ ಇದೆಯಾ? ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿದ ಕುಮಾರಸ್ವಾಮಿ ಅವರು, ಇದಕ್ಕಾಗಿಯೇ ಎಲ್ಲ ಇಲಾಖೆಗಳಲ್ಲಿ ಸಲಹೆಗಾರರು ಬಂದು ತುಂಬಿಕೊಂಡಿದ್ದಾರೆ. ಇದೆಲ್ಲಾ ಪರ್ಸೆಂಟೆಜ್ ವ್ಯವಸ್ಥೆಗೆ ಮಾಡಿಕೊಂಡಿರುವ ವ್ಯವಸ್ಥೆ ಎಂದು ಕುಟುಕಿದರು.

ನಮ್ಮದು ಸಂಪತ್ಪಭರಿದ ರಾಜ್ಯ. ಹಣಕ್ಕೆ ಕೊರತೆ ಇಲ್ಲ. ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹ ಆಗುತ್ತಿದೆ. ಘೋಷಣೆ ಮಾಡಿಕೊಂಡು ಒದ್ದಾಡ್ತಾ ಇದ್ದಾರೆ ಇವರು. ಬಿಜೆಪಿ ಸರಕಾರದ ವಿರುದ್ಧ 40% ಆರೋಪ ಮಾಡಿದ ಇವರು ಈಗ ಪರ್ಸೆಂಟೇಜ್ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದಾರೆ. ಇದು ಕೂಡ ಪರ್ಸೆಂಟೇಜ್ ಸರಕಾರವೇ ಆಗಿದೆ ಎಂದು ಅವರು ದೂರಿದರು.

ಅಕ್ಕಿ ತರಲು ರೇಟ್ ಜಾಸ್ತಿ ಮಾಡೋದು ಇವರೇ. ಕಮೀಷನ್ ಗಾಗಿ ರೇಟ್ ಜಾಸ್ತಿ ಮಾಡ್ತಾರೆ. ಕಮಿಷನ್ ಕಡಿಮೆ ಮಾಡಿದರೆ ಅಕ್ಕಿ ದರ ಕಡಿಮೆ ಆಗತ್ತದೆ. ಇವರ ಯೋಜನೆಗೆ ಕೇಂದ್ರದ ಮುಂದೆ ಕೈಚಾಚೋದು ಏಕೆ? ನಾನು ಸಾಲಮನ್ನಾ ಘೋಷಣೆ ಮಾಡಿದಾಗ ಕೇಂದ್ರದ ಬಳಿ ಹಣ ಕೇಳಲಿಲ್ಲ ಎಂದು ಅವರು ಹೇಳಿದರು.

ಸಿಎಂ ಹಿಂದೆ ಸುತ್ತುವ ಮಂತ್ರಿಗಳು:

ಸರಕಾರ ಬಂದು ಒಂದು ತಿಂಗಳ ಮೇಲಾಯಿತು. ಜನರು ಕಷ್ಟದಲ್ಲಿದ್ದಾರೆ. ಜನ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ವಿವಿಧ ಇಲಾಖೆಗಳ ಮಂತ್ರಿಗಳು ಇನ್ನೂ ತಮ್ಮ ಇಲಾಖೆಗಳ ಸಭೆಗಳನ್ನೇ ನಡೆಸುತ್ತಿಲ್ಲ. ಮುಖ್ಯಮಂತ್ರಿ ಹಿಂದೆ ಮುಂದೆ ಓಡಾಡಿಕೊಂಡಿದ್ದಾರೆ. ದಿನದ 24 ಗಂಟೆಯೂ ಮುಖ್ಯಮಂತ್ರಿ ಜತೆ ಇವರಿಗೇನು ಕೆಲಸ. ಸಿಎಂ ಮನೆಯಲ್ಲೂ ಇವರೇ, ಸಿಎಂ ಕಚೇರಿಯಲ್ಲೂ ಇವರೇ, ಸಿಎಂ ದಿಲ್ಲಿಗೆ ಹೋದರೆ ಅಲ್ಲೂ ಇವರೇ. ಎನ್ ನಡೀತಿದೆ ಇಲ್ಲಿ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

ಮುಳಬಾಗಿಲು ಕ್ಷೇತದ ಶಾಸಕ ಸಮೃದ್ಧಿ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಉಸ್ಥಿತರಿದ್ದರು.