IMG 20230720 WA0010

JD (S) : ಸ್ಪೀಕರ್ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ….!

POLATICAL STATE

ಸದನಕ್ಕೆ ಸಿಎಂ ಸುಳ್ಳು ಹೇಳಿದ್ದಾರೆ, ಸ್ಪೀಕರ್ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ

ಅಧಿಕಾರಿಗಳನ್ನು ದುರ್ಬಳಕೆ, ಸರಕಾರಕ್ಕೆ ಸವಾಲು ಹಾಕಿದ ಮಾಜಿ ಮುಖ್ಯಮಂತ್ರಿ

ರಾಜ್ಯಪಾಲರಿಗೆ ದೂರು ನೀಡುವ ಮುನ್ನ ಶಾಸಕಾಂಗ ಪಕ್ಷದ ಸಭೆ


ಬೆಂಗಳೂರು: ಅಧಿಕಾರಿಗಳ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಹಾಗೂ ಸ್ಪೀಕರ್ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವ ಮುನ್ನ ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿಗಳು ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ನಡೆಸಿದರು. ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ನಾನು ಸಿಎಂ ಆಗಿದ್ದ ವೇಳೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ಅವರನ್ನು ಗೌರವದಿಂದ ನಡೆಸಿಕೊಂಡಿದ್ದೇನೆ. ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಕೂಡ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿಲ್ಲ. ಯಾವುದೇ ಸಂದರ್ಭದಲ್ಲಿಯೂ ಅಧಿಕಾರಿಗಳಿಂದ ಯಾರಿಗೂ ಅಥಿತ್ಯ ಕೊಡಿಸಿಲ್ಲ. ಹೀಗೆ ಸುಳ್ಳು ಹೇಳುವುದಕ್ಕೆ ನಾಚಿಕೆ ಆಗಬೇಕು ಇವರಿಗೆ. ನನ್ನ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಅವರು ಸವಾಲು ಹಾಕಿದರು.

2018ರಲ್ಲಿ ನನ್ನ ನೇತೃತ್ವದ ಮೈತ್ರಿ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಆಗ ರಾಜ್ಯಪಾಲರ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆಯನ್ನು ಮಾಡಿತ್ತು. ಆದರೆ, ಮೊನ್ನೆ ನಡೆದ ಸಭೆಗೆ ಸ್ವತಃ ಮುಖ್ಯಮಂತ್ರಿಗಳ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯೇ ಅಧಿಕಾರಿಗಳಿಗೆ ಆದೇಶ ನೀಡಿದೆ. ತಪ್ಪು ತಪ್ಪೇ ಅಲ್ಲವೇ? ಇದನ್ನು ಒಪ್ಪಿಕೊಳ್ಳಲು ಪ್ರತಿಷ್ಠೆ ಏಕೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

IMG 20230720 WA0011

ಸರಕಾರವೇ ನೇರ ಕಾರಣ:

ವಿಧಾನಸಭೆಯಲ್ಲಿ ಬುಧವಾರ ನಡೆದ ಗೊಂದಲಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ನೇರ ಕಾರಣ. ಸಭಾಧ್ಯಕ್ಷರ ಪೀಠವನ್ನು ದುರ್ಬಳಕೆ ಮಾಡಿಕೊಂಡಿದೆ. ಎರಡು ನಿಮಿಷದಲ್ಲಿ ಬಗೆಹರಿಸುವ ವಿಷಯವನ್ನು ಇಷ್ಟು ದೂರ ಎಳೆದು ತರಲಾಗಿದೆ ಎಂದು ಅವರು ಹೇಳಿದರು.

ಸರಕಾರ ಗಂಭೀರ ಲೋಪ ಎಸಗಿದೆ. ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದು ಬಿಟ್ಟಿ ಭಂಡತನ ಪ್ರದರ್ಶನ ಮಾಡುತ್ತಿದೆ ಎಂದು ದೂರಿದರು.

ವಿಧಾನಸಭೆಯಲ್ಲಿ ನಡೆದಿರುವ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ. ಘಟಬಂಧನ್ ಸಭೆಗೆ ಬಂದಿದ್ದ ಹೊರರಾಜ್ಯದ ಗಣ್ಯರಿಗೆ ಉಪಚಾರ ಮಾಡಲು ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದು ತಪ್ಪು. ಈ ಸದನದಲ್ಲಿ ಪ್ರಸ್ತಾಪ ಮಾಡಿದ ಪ್ರತಿಪಕ್ಷಗಳ ಮನವಿಯ ಬಗ್ಗೆ ಸರಕಾರ ಭಂಡತನ ತೋರಿದೆ. ಸ್ವೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ ವೇಳೆಯಲ್ಲೂ ಕಾಂಗ್ರೆಸ್ ನಾಯಕರು, ನಾವೇನೂ ಎನು ತಪ್ಪು ಮಾಡಿಲ್ಲವೆಂದು ಪ್ರತಿಷ್ಠೆ ತೋರಿದರು ಎಂದರು ಮಾಜಿ ಮುಖ್ಯಮಂತ್ರಿಗಳು.

ಎರಡು ನಿಮಿಷಗಳ ಬಗೆಹರಿಸಬಹುದಾಗಿದ್ದ ವಿಷಯವನ್ನು ಇಷ್ಟು ದೂರ ಎಳೆದು ತಂದಿದ್ದಾರೆ. ಆಗಿದ್ದು ಆಯಿತು, ಮುಂದೆ ಈ ರೀತಿ ಆಗಲ್ಲ ಅಂತ ಹೇಳಿದ್ದರೆ ಸಾಕಿತ್ತು. ವಿಷಾದವನ್ನೂ ವ್ಯಕ್ತಪಡಿಸುವ ಅವಶ್ಯಕತೆಯೂ ಇರಲಿಲ್ಲ. ಆದರೆ, ಸ್ವೀಕರ್ ಪ್ರತಿಪಕ್ಷ ಶಾಸಕರನ್ನು ದೇಶದೋಹ್ರಿಗಳು ಎಂದರು. ಸಿಎಂ ಹೇಳಿದರೂ ಅಂತ ಶಾಸಕರನ್ನು ಕೊನೆಪಕ್ಷ ಊಟಕ್ಕೆ ಬಿಡದೆ ಎದ್ದು ಹೋದರು. ಇಂಥ ನಡವಳಿಕೆಯನ್ನು ಹಿಂದೆ ನಾನೆಂದೂ ನೋಡಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಸ್ವೀಕರ್ ಏಕಪಕ್ಷೀಯವಾಗಿ ಕೆಲಸ ಮಾಡ್ತಾ ಇದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಪೀಕರ್ ಅವರಿಗೆ ಸಿಎಂ ಅವರು ಸನ್ನೆ ಮ‌ೂಲಕ ಸೂಚನೆ ನೀಡಿದ್ದಾರೆ ಎಂದು ಸದನದ ಬಾವಿಯಲ್ಲಿ ಇದ್ದವರೇ ಹೇಳಿದರು ಎಂದು ಅವರು ತಿಳಿಸಿದರು.

ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಪಕ್ಷಕ್ಕೆ ಸದನದಲ್ಲಿ ಹೇಗೆ ವರ್ತನೆ ಮಾಡಬೇಕು ಎಂಬುದೇ ಗೊತ್ತಿಲ್ಲ. ಅಜ್ಞಾನದಿಂದ ಸರ್ಕಾರ ನಡೆಸುತ್ತಿದ್ದಾರೆ. ನಾವು ಗೌರವಯುತವಾಗಿ ನಡೆಸಿಕೊಂಡಿದ್ದೇವೆ. ಇಷ್ಟೆಲ್ಲಾ ಮಾಡಿ, ಹಠಮಾರಿ ಧೋರಣೆಯಿಂದ ಈ ರೀತಿ ಸದನದಲ್ಲಿ ನಡೆದುಕೊಳ್ಳುವುದು ಎಷ್ಟು ಸರಿ? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಈಗ ಅಧಿಕಾರ ಇದೆ. ಮುಂದೆ ಅಧೋಗತಿಗೆ ಹೋಗುವ ಪರಿಸ್ಥಿತಿ ಬರಬಹುದು. ಎಚ್ಚರಿಕೆಯಿಂದ ಇರಿ ಎಂದು ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.


ಜೆಡಿಎಸ್ ಶಾಸಕಾಂಗ ಸಭೆ:

ವಿವಿಧ ಬೆಳವಣಿಗೆಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಹತ್ವದ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

ರಾಜ್ಯದಲ್ಲಿನ ಸದ್ಯದ ಬೆಳವಣಿಗೆಗಳು, ಮುಂದಿನ ಲೋಕಸಭೆ ಚುನಾವಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾ ಪೂರ್ಯನಾಯಕ್ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.