96c778cb 01cf 4187 a8ab b257a254a667

‌ಕರ್ನಾಟಕ : ಎಸ್.ಐ.ಟಿ. ತನಿಖೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆ…!..!

POLATICAL STATE

ಎಸ್.ಐ.ಟಿ. ತನಿಖೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜುಲೈ 19 : ವಾಲ್ಮಿಕಿ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಎಸ್‌ಐಟಿ ತನಿಖೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆಯಿದೆ. ರಾಜ್ಯ ಸರ್ಕಾರಕ್ಕೆ ಹಾಗೂ ತನಗೆ ಮಸಿ ಬಳಿಯುವ ಪ್ರಯತ್ನವನ್ನು ವಿರೋಧಪಕ್ಷಗಳು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವಾಲ್ಮಿಕಿ ಅಭಿವೃದ್ಧಿ ನಿಗಮದ ಅಕೌಂಟ್‌ ಸುಪರಿಡೆಂಟ್‌ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡ ದಿನವೇ ಅವರ ಪತ್ನಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮೇ 31ರಂದು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಇದರಲ್ಲಿ ನಾಲ್ಕು ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳು ಇದ್ದಾರೆ.
ಯೂನಿಯನ್‌ ಬ್ಯಾಂಕ್‌ ಅಫ್‌ ಇಂಡಿಯಾದ ಅಧಿಕಾರಿ ಮಹೇಶ್‌ ಎಂಬವರ ದೂರಿನ ಮೇರೆಗೆ ಸಿಬಿಐ ತನಿಖೆಯನ್ನು ಕೈಗೊಂಡಿದ್ದು, ಇಡಿ ಸ್ವಯಂ ಪ್ರೇರಿತವಾಗಿ ತನಿಖೆಯನ್ನು ನಡೆಸುತ್ತಿದೆ. ಎಸ್‌ಐಟಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಬಂಧಿಸಿದ್ದು, 34 ಕೋಟಿ ರೂ. ನಗದು ವಶಪಡಿಸಿಕೊಂಡಿದೆ. ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದ್ದ ಸುಮಾರು ರೂ. 46 ಕೋಟಿ ಸ್ಥಗಿತಗೊಳಿಸಲಾಗಿದೆ.
ಪ್ರಕರಣದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ನಾವು ಹೇಳುತ್ತಿಲ್ಲ. ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ವಿರೊಧ ಪಕ್ಷಗಳ ಸದಸ್ಯರು ನಿಯಮ 69ರ ಅಡಿಯಲ್ಲಿ 7ತಾಸಿಗೂ ಅಧಿಕ ಕಾಲ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೆ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಅವಕಾಶದಷ್ಟೇ, ಸರ್ಕಾರಕ್ಕೂ ತನ್ನ ನಿಲುವು ವ್ಯಕ್ತಪಡಿಸಲು ಹಕ್ಕಿದೆ ಎಂದು ಹೇಳಿದರು.

537cf834 64c2 4880 a104 c7d571a70e37ವಾಲ್ಮಿಕಿ ಅಭಿವೃದ್ಧಿ ನಿಗಮದ 89.63 ಕೋಟಿ ರೂ. ಹಣವನ್ನು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಂಜಿ ರಸ್ತೆ ಖಾತೆಗೆ ವರ್ಗಾಯಿಸಿ ಅಲ್ಲಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕ್‌ ಆಗಿದ್ದು, ಕೇಂದ್ರ ಹಣಕಾಸು ಇಲಾಖೆ ಅಧೀನಕ್ಕೆ ಬರುತ್ತದೆ. ಬ್ಯಾಂಕ್‌ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಕುರಿತು ಆತ್ಮಹತ್ಯೆ ನೋಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪರಿಶಿಷ್ಟ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ ಅವರು ಸ್ವಯಂಪ್ರೇರಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.
ಬಿಜೆಪಿ ಆಡಳಿತ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಹಗರಣವಾದಾಗ ಅವರ ಪಕ್ಷದವರೇ ಆದ ಗೂಳಿಹಟ್ಟಿ ಶೇಖರ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಆಗ ಯಾರು ರಾಜೀನಾಮೆ ನೀಡಿದ್ದರು? ಎಪಿಎಂಸಿ ಯಲ್ಲಿ ಆವರ್ತನಿಧಿ ʻಲೂಟಿ ಮಾಡಿದಾಗ, ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ಹಗರಣದಲ್ಲಿ 47.10 ಕೋಟಿ ರೂ. ಅವ್ಯವಹಾರವಾದಾಗ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೇ? ಈ ಪ್ರಕರಣಗಳಲ್ಲಿ ಇ.ಡಿ. ಯಾಕೆ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿಲ್ಲ ಎಂದು ಪ್ರಶ್ನಿಸಿದರು.
ಎಲ್ಲಾ ಅಭಿವೃದ್ಧಿ ನಿಗಮಗಳ ಹಣವನ್ನು ಕಡ್ಡಾಯವಾಗಿ ರಾಜ್ಯ ಖಜಾನೆಯಲ್ಲಿ ಜಮಾ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ಹಲವು ಮಾರ್ಗಸೂಚಿಗಳನ್ನು ಹಣಕಾಸು ಇಲಾಖೆ ಜಾರಿಗೊಳಿಸಿದೆ ಎಂದು ಹೇಳಿದರು.