* ರಾಜ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ*
*ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; ಬೆದರಿಕೆಗೆ ಕೇರ್ ಮಾಡಲ್ಲ ಎಂದ ಕೇಂದ್ರ ಸಚಿವರು.
* ಸಿದ್ದರಾಮಯ್ಯಗೆ ಬಂಡೆಯಿಂದಲೇ ಡೇಂಜರ್ ಎಂದ HDK.
*ಸಿದ್ದರಾಮಯ್ಯರಂತೆ ನಾನು ಸಚಿವರ ರಕ್ಷಣೆ ಪಡೆದಿಲ್ಲ; ಏಕಾಂಗಿಯಾಗಿ ಎದುರಿದ್ದೇನೆ*
*ಕಾಂಗ್ರೆಸ್ ಸರ್ಕಾರ ನನ್ನನ್ನು ಹೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮಂತ್ರಿಗಳು ನನ್ನ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಜಗ್ಗುವ ಜಾಯಮಾನ ನನ್ನದಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಯಾವುದೋ ಹಳೆಯ ಪ್ರಕರಣವನ್ನು ಕೆದಕಿ, ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣ ಇಟ್ಟುಕೊಂಡು ರಾಜ್ಯಪಾಲರನ್ನು ಅಪಮಾನಿಸುವ, ನನ್ನನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆಲ್ಲಾ ಕೇರ್ ಮಾಡುವ ಪೈಕಿ ನಾನಲ್ಲ, ಈ ಸರ್ಕಾರಕ್ಕೂ ಅದು ಗೊತ್ತಿದೆ ಎಂದು ಕಿಡಿಕಾರಿದರು.
*ರಾಜ್ಯಪಾಲರಿಗೆ ಸರ್ಕಾರದಿಂದ ಧಮ್ಕಿ*
ರಾಜ್ಯಪಾಲರು ಮೂಡಾ ಹಗರಣ ವಿಚಾರಣೆಗೆ ಅನುಮತಿ ನೀಡಿದಾಕ್ಷಣ ಇಡೀ ಸಚಿವರು, ಶಾಸಕರನ್ನು ಇಟ್ಟುಕೊಂಡು ರಾಜ್ಯಪಾಲರಿಗೆ ಧಮ್ಕಿ ಹಾಕುವ, ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ನಾನು ಹೀಗೆಲ್ಲಾ ಮಾಡಿಲ್ಲ, ನನ್ನ ವಿರುದ್ಧ ಆರೋಪ ಕೇಳಿಬಂದಾಗ ಒಬ್ಬನೇ ಎದುರಿಸುತ್ತೇನೆ ಎಂದು ಹೇಳಿದ್ದೆ. ವಿಧಾನಸಭೆ ಕಲಾಪದಲ್ಲಿಯೂ ಹೇಳಿದ್ದೇನೆ. ಬೇಕಾದರೆ ಕಡತ ತೆಗೆದು ನೋಡಬಹುದು ಎಂದು ಹೇಳಿದರು ಕೇಂದ್ರ ಸಚಿವರು.
ನನ್ನ ವಿರುದ್ಧ 2006ರಲ್ಲಿ ಗಣಿ ಆರೋಪ ಮಾಡಿದಾಗ ನಾನೊಬ್ಬನೇ ಎದುರಿಸಿದೆ. ಶಾಸಕರು, ಸಚಿವರನ್ನು ಅಡ್ಡ ಇಟ್ಟುಕೊಂಡು ರಕ್ಷಣೆ ಪಡೆಯುವ ಕೆಲಸ ಮಾಡಲಿಲ್ಲ. ಹೇಡಿತನ ಪ್ರದರ್ಶಿಸಲಿಲ್ಲ, ಧೈರ್ಯವಾಗಿ ಒಬ್ಬನೇ ಎದುರಿಸಿದೆ ಎಂದರು ಸಚಿವರು.
ರಾಜ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ*
ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ಕಾಂಗ್ರೆಸ್ ವರಸೆಯೇ ಬದಲಾಗಿದೆ. ಲೋಕಸಭೆಯಲ್ಲಿ ಪಕ್ಷದ ಸಂಸದರಿಗೆ ಕೈಗೆ ಸಂವಿಧಾನದ ಪ್ರತಿ ಕೊಟ್ಟು ಪ್ರಮಾಣ ಸ್ವೀಕಾರ ಮಾಡಿಸುವ ಕಾಂಗ್ರೆಸ್, ಕರ್ನಾಟಕದಲ್ಲಿ ಮಾತ್ರ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರ ವಿರುದ್ಧ ಅತ್ಯಂತ ಕೆಟ್ಟದಾಗಿ, ಅವಹೇಳನಕಾರಿಯಾಗಿ ಪ್ರತಿಭಟನೆ ಮಾಡಿಸುತ್ತಿದೆ. ಸಚಿವರು, ಶಾಸಕರು ರಾಜ್ಯಪಾಲರ ಬಗ್ಗೆ ಬಹಳ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಬೇರೆ ಯಾವ ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿಯನ್ನು ನಾನು ನೋಡಿಲ್ಲ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರಂತೆ ನಾನು ಸಚಿವರ ರಕ್ಷಣೆ ಪಡೆದಿಲ್ಲ; ಏಕಾಂಗಿಯಾಗಿ ಎದುರಿದ್ದೇನೆ*
ಶನಿವಾರದಿಂದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ಮೇಲೆ ಏಕೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲಾ ಎಂದು ಕೇಳುತ್ತಿದ್ದಾರೆ. 2006ರಲ್ಲಿ ನಾನು ಸಿಎಂ ಆದ ಎರಡೇ ತಿಂಗಳಿಗೆ ಗಣಿಗಾರಿಕೆ ಮಾಲೀಕರಿಂದ ಹಣ ಸಂಗ್ರಹ ಮಾಡಿದ್ದೇನೆ ಎಂದು ಆರೋಪ ಮಾಡಿದ್ದರು. ಅದರ ಬಗ್ಗೆ ಒಂದು ಸಿಡಿ ಮಾಡಲು ಸಿಡಿ ಶಿವು ಪ್ರಯತ್ನ ಮಾಡಿದ್ದರು. ವಿಧಾನಸಭೆ ಕಲಾಪಕ್ಕೆ ಬಂದು ಆಪರೇಷನ್ ಸಕ್ಸಸ್ ಎಂದು ಹೇಳಿದ್ದರು. ನನ್ನ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯಿತು. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದೆ. ಸಿದ್ದರಾಮಯ್ಯ ಅವರಿಗೆ ಇದು ನೆನಪಿದೆಯಾ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ನಿಮ್ಮ ಹಾಗೆ ನಮ್ಮ ಕಾರ್ಯಕರ್ತರಿಗೆ ಬೀದಿಯಲ್ಲಿ ಬೆಂಕಿ ಹಾಕಿ ಅನ್ನಲಿಲ್ಲ. ಜಂತಕಲ್ ಮೈನಿಂಗ್ ಪ್ರಕರಣವನ್ನು ಹೈಕೋರ್ಟ್ ನಲ್ಲಿ ವಜಾ ಮಾಡಲಾಗಿದೆ. ಸಾಯಿ ವೆಂಕಟೇಶ್ವರ ಹಗರಣದ್ದು ತನಿಖೆ ಮಾಡಿ ಎಂದರು. ಇವರು ಬೇಕಾದರೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ಇವರಿಗೆ ಬೇಡ ಎಂದವರು ಯಾರು? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ನನ್ನನ್ನು ಹೆದರಿಸೋಕೆ ಇದನ್ನೆಲ್ಲಾ ಮಾಡುತ್ತಿದ್ದೀರಿ.. ಅಲ್ಲವೇ? ಯಾಕೆ ಈ ಡ್ರಾಮಾಗಳು? ನಿಮ್ಮ ಗೊಡ್ಡು ಬೆದರಿಕೆಗೆ ನಾನು ಹೆದರುತ್ತೇನೆಯೇ? ಅದು ನಿಮ್ಮ ಭ್ರಮೆಯಷ್ಟೇ. ರಾಜ್ಯಪಾಲರ ವಿರುದ್ದ ರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕೀಳುಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಪಕ್ಷದಿಂದ ಇಂಥ ಹಿನ ಕೆಲಸಗಳು ನಡೆಯುತ್ತಿವೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಯಾರೋ ಒಬ್ಬರು ಸಿದ್ದರಾಮಯ್ಯನವರ ಜತೆ ಬಂಡೆಯಂತೆ ನಿಲ್ಲುವೆ ಎಂದು ಸೋಗು ಹಾಕುತ್ತಿದ್ದಾರೆ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಡೇಂಜರ್. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ. ವೈನಾಡು, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗಿ ಭೂ ಕುಸಿತ ಉಂಟಾಯಿತಲ್ಲ, ಆ ಮಣ್ಣಿನ ಜತೆ ಬಂದು ಬಿದ್ದವಲ್ಲ ಬಂಡೆಗಳು, ಅವೇ ಜನರ ಜೀವ ಜೀವ ತೆಗೆದಿದ್ದು. ಸಿದ್ದರಾಮಯ್ಯ ಅವರಿಗೆ ಬಂದೆಯಿಂದಲ್ಲೇ ಪತನ ಶುರುವಾಗಿದೆ ಎಂದು ಕೇಂದ್ರ ಸಚಿವರು ಮಾರ್ಮಿಕವಾಗಿ ಹೇಳಿದರು.
ನಮ್ಮ ಪಾದಯಾತ್ರೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಹಗರಣದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಏಕೈಕ ಉದ್ದೇಶಕ್ಕೆ ಈ ಪಾದಯಾತ್ರೆ ನಡೆಸಲಾಯಿತು. ಒಟ್ಟಿನಲ್ಲಿ ಜೆಡಿಎಸ್ ಬಿಜೆಪಿ ಸಂಘಟಿತ ಹೋರಾಟವನ್ನು ಜನರು ಗಮನಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ದೇವೇಗೌಡರು, ಕುಮಾರಸ್ವಾಮಿ ಅವರು ಹಟ ಹಿಡಿದು ಮೋದಿ, ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿ ರಾಜ್ಯಪಾಲರಿಂದ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಕೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮಗೇನು ಬೇರೆ ಕೆಲಸ ಇಲ್ಲವೇ? ಅವರ ಪಕ್ಷದಲ್ಲಿನ ಪಿತೂರಿಗೆ ಸಿದ್ದರಾಮಯ್ಯ ಅವರು ಬಲಿಯಾಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಸೂಚ್ಯವಾಗಿ ಹೇಳಿದರು.
ಕಾಡುಗೊಲ್ಲರ ಬಗ್ಗೆ ಚರ್ಚೆ ಮಾಡಲು ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಹೋಗಿದ್ದರು. ನಾನೂ ಹೋಗಿದ್ದೆ. ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ನಮ್ಮ ಮೇಲೆ ಮೇಲೆ ಕಾಂಗ್ರೆಸ್ ನವರು ವಿನಾಕಾರಣ ಕೆಂಡ ಕಾರುತ್ತಿದ್ದಾರೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ನನ್ನನ್ನು ಜೈಲಿಗೆ ಕಳಿಸಬೇಕು ಎಂದು ದೇವೇಗೌಡರು, ಕುಮಾರಸ್ವಾಮಿ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣಗಳು ಹೆಚ್ದಾಗದಾಗ ಅವುಗಳನ್ನು ಮುಚ್ಚಿ ಹಾಕಲು ಎಸಿಬಿ ಅಂತ ರಚನೆ ಮಾಡಿಕೊಂಡು ರಕ್ಷಣೆ ಪಡೆದುಕೊಂಡಿರಿ. ಸಿದ್ದರಾಮಯ್ಯ ಬಗ್ಗೆ ಸಾಕಷ್ಟು ವಿಷಯ ಇದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳಿಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ. ಅದು ನನಗೆ ಗೊತ್ತಿದೆ. ಕಾನೂನು ಅಂತ ಒಂದಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.