ಜನರಿಗೆ ಶಾಪವಾಗಿ ಪರಿಣಮಿಸಿದ ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರಕಾರ
ಅಧಿವೇಶನದಲ್ಲಿ ಸರಕಾರದ ಕಿವಿ ಹಿಂಡುವ ಕೆಲಸ: ವಿಜಯೇಂದ್ರ
ದಾವಣಗೆರೆ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರಕಾರದ ಭ್ರಷ್ಟಾಚಾರದ ಬಂಡವಾಳವನ್ನು ಬಯಲಿಗೆ ಎಳೆಯುತ್ತೇವೆ; ಉತ್ತರ ಕರ್ನಾಟಕ ಸೇರಿ ರಾಜ್ಯದ ವಿಚಾರದಲ್ಲಿ ಅಭಿವೃದ್ಧಿಶೂನ್ಯ ಸರಕಾರದ ಕಿವಿಹಿಂಡುವ ಕೆಲಸವನ್ನು ವಿರೋಧ ಪಕ್ಷವಾಗಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರಿಸಿದರು. ರೈತರು, ಬಡವರಿಗೆ ನ್ಯಾಯ ಸಿಗುತ್ತಿಲ್ಲ; ಮನೆಗಳನ್ನು ಕೊಡುತ್ತಿಲ್ಲ. ರೈತರು ಬೆಳೆದ ಬೆಳೆ ನಾಶವಾದರೆ ಪರಿಹಾರ ಕೊಡುತ್ತಿಲ್ಲ. ಎಲ್ಲ ವರ್ಗದ ಜನರು ಇವತ್ತು ಸಂಕಷ್ಟದಲ್ಲಿದ್ದಾರೆ. ಇವರು ಭ್ರಷ್ಟಾಚಾರದಲ್ಲಿ ಮುಳುಗಿ, ಅಭಿವೃದ್ಧಿ ಮಾಡದ ಕಾರಣ ಜನರಿಗೆ ಕಾಂಗ್ರೆಸ್ ಪಕ್ಷದ ಸರಕಾರ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದರು.
ವಕ್ಫ್ ಸಮಸ್ಯೆ ಸಂಬಂಧ ಪ್ರವಾಸ ಸಂಪೂರ್ಣ ಮುಗಿದಿಲ್ಲ; ಅಧಿವೇಶನ ಮುಗಿದ ಬಳಿಕ ಪ್ರವಾಸವನ್ನು ಮುಂದುವರೆಸುತ್ತೇವೆ. ಅಂತಿಮವಾಗಿ ನಾವು ವರದಿಯನ್ನು ಕೇಂದ್ರದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರಿಗೆ ನೀಡುತ್ತೇವೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಬಡವರಿಗೆ ಅವಮಾನ
ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ, ಹಣ ಕ್ರೋಡೀಕರಿಸಲು ಸಾಧ್ಯವಾಗದೆ ಸರಕಾರ ಪರದಾಡುತ್ತಿದೆ. ಲೋಕಸಭೆ ಚುನಾವಣೆಗೆ 3 ದಿನ ಇದ್ದಾಗ ಗ್ಯಾರಂಟಿಗಳ ಹಣವನ್ನು ಖಾತೆಗೆ ಹಾಕಿದ್ದರು. ಚುನಾವಣೆ ಬಳಿಕ ಮರೆತಿದ್ದರು. ಮೊನ್ನೆ ಉಪ ಚುನಾವಣೆ ಬಂದಾಗ ಮತ್ತೆ ರಿಲೀಸ್ ಮಾಡಿದ್ದು, ಬಡವರಿಗೆ ಅವಮಾನ ಮಾಡುತ್ತಿದ್ದಾರೆ. ಗ್ಯಾರಂಟಿ ಕೊಡಲು ಯಾರೂ ಕೇಳಿರಲಿಲ್ಲ. ಗ್ಯಾರಂಟಿಗಳೂ ಮನೆ ತಲುಪುತ್ತಿಲ್ಲ. ಅಭಿವೃದ್ಧಿಯೂ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಇದರಿಂದ ಆಡಳಿತ ಪಕ್ಷದ ಶಾಸಕರೇ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ವಿವರಿಸಿದರು.
ಬಾಣಂತಿಯರು, ಗರ್ಭಿಣಿಯರು, ನವಜಾತ ಶಿಶುಗಳ ಸಾವು ಸಂಬಂಧ ನಮ್ಮ ಮಹಿಳಾ ಮೋರ್ಚಾದ ತಂಡವು ನಿನ್ನೆ ಭೇಟಿ ಕೊಟ್ಟಿದೆ. ವರದಿ ಪಡೆದು ರಾಜ್ಯ ಸರಕಾರಕ್ಕೆ ಚಾಟಿ ಬೀಸಲಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಯತ್ನಾಳ್ ಅವರು ವಕ್ಫ್ ನೀತಿ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಹೇಳಿದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಲಿ; ಅವರದು ದೀರ್ಘಾವಧಿಯ ಕಾರ್ಯತಂತ್ರ ಇದೆ. ರಾಷ್ಟ್ರೀಯ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಅವರ ಎಲ್ಲ ಅನುಮಾನ, ಪ್ರಶ್ನೆ, ಆಸೆಗಳಿಗೆ ಕಾಲವೇ ಉತ್ತರ ಕೊಡಲಿದೆ; ಅವರಿಗೆ ಒಳ್ಳೆಯದಾಗಲಿ, ನಾನೇನೂ ಕೆಟ್ಟದು ಬಯಸುವುದಿಲ್ಲ ಎಂದು ತಿಳಿಸಿದರು.
ಪಕ್ಷದ ಸಂಘಟನೆಗಾಗಿ ನನಗೆ ಈ ಹುದ್ದೆ ಕೊಟ್ಟಿದ್ದಾರೆ; ಮುಖ್ಯಮಂತ್ರಿ ಆಗಲಿ ಎಂದಲ್ಲ; ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
(