IMG 20251213 WA0026 scaled

ಬೆಳಗಾವಿ : ಎಲ್ಲ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ ಅಜಾತಶತ್ರು….!

Genaral STATE

*ಎಲ್ಲ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ ಅಜಾತಶತ್ರು*

*ನನ್ನ ಮತ್ತು ಬಸವರಾಜ ಹೊರಟ್ಟಿಯವರ ಸ್ನೇಹ ನಾಲ್ಕು ದಶಕಗಳದ್ದು- ಮುಖ್ಯಮಂತ್ರಿ ಸಿದ್ದರಾಮಯ್ಯ*

ಹೊರಟ್ಟಿ ಹ್ಯಾಂಡಸಮ್ ಟೀಚರ್ ಆ್ಯಂಡ್ ಇಂಟಲಿಜೆಂಟ್ ಪೊಲಿಟಿಷಿಯನ್: ಬಸವರಾಜ ಬೊಮ್ಮಾಯಿ*

*ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ*

ಬೆಳಗಾವಿ, ಡಿಸೆಂಬರ್ 12: ಎಲ್ಲ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಬಸವರಾಜ ಹೊರಟ್ಟಿಯವರೊಂದಿಗೆ ನಾಲ್ಕು ದಶಕಗಳ ಸ್ನೇಹ ಸಂಬಂಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ಹುಬ್ಬಳ್ಳಿ ಇವರ ವತಿಯಿಂದ ಆಯೋಜಿಸಲಾಗಿದ್ದ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

*ಆಡಂಬರವಿಲ್ಲದ ಸ್ನೇಹಜೀವಿ*
ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಹೊರಟ್ಟಿ ಯವರನ್ನು ಪಕ್ಷಾತೀತವಾಗಿ ಇಂದು ಸನ್ಮಾನಿಸಲಾಗಿದೆ. ಎಲ್ಲ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೊರಟ್ಟಿಯವರು ಅಜಾತಶತ್ರು. ನೇರ ನುಡಿಯ ದಿಟ್ಟ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ. 1980 ರಲ್ಲಿ ವಿಧಾನಪರಿಷತ್ತಿನ ಶಾಸಕರಾಗಿದ್ದ ಇವರೊಂದಿನ ನನ್ನ ಸ್ನೇಹ ನಾಲ್ಕು ದಶಕಗಳದ್ದು. ಆಡಂಬರವಿಲ್ಲದ ಸ್ನೇಹಜೀವಿಯಾಗಿರುವ ಹೊರಟ್ಟಿಯವರು ಶಿಕ್ಷಕರ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದರು.IMG 20251213 WA0031

*ನಾವಿಬ್ಬರೂ ಹಳ್ಳಿಗಾಡಿನ ಸಾಮಾನ್ಯ ಕುಟುಂಬದವರು*
1983ರಲ್ಲಿ ಶಾಸಕರಾದ ನಂತರ ಹೊರಟ್ಟಿಯವರೊಂದಿಗೆ ಸ್ನೇಹ ಬೆಳೆಯಿತು. ಹಳ್ಳಿಗಾಡಿನ ನಂಟಿರುವ ಇಬ್ಬರೂ ಸಾಮಾನ್ಯಕುಟುಂಬದಿಂದ ಬಂದವರು. ಅಧಿಕಾರ ಮತ್ತು ಹುದ್ದೆಯೊಂದಿಗೆ ವ್ಯಕ್ತಿತ್ವದ ನಂಟು ಹೊಂದುವ ವರ್ಗ ಒಂದಾದರೆ, ಅಧಿಕಾರದ ಹಿರಿಮೆಯನ್ನು ಕಾಯ್ದುಕೊಳ್ಳುವ ವರ್ಗವಿದ್ದು, ಹೊರಟ್ಟಿಯವರದು ಎರಡನೇ ವರ್ಗವಾಗಿದೆ. 45 ವರ್ಷಗಳ ರಾಜಕೀಯ ಬದುಕಿನಲ್ಲಿ ಅವರೆಂದಿಗೂ ಅಹಂಕಾರ ತೋರಿದವರಲ್ಲ. ನಾವು ಒಂದೇ ಪಕ್ಷದಲ್ಲಿದ್ದಾಗ ಜೆಡಿಯು ಮತ್ತು ಜೆಡಿಎಸ್ ಪಕ್ಷಗಳನ್ನು ಒಂದುಗೂಡಿಸಲು ಬಹುವಾಗಿ ಪ್ರಯತ್ನಿಸಿದರು, ಆದರೆ ಹಿರಿಯ ನಾಯಕರು ಒಪ್ಪದಿದ್ದ ಕಾರಣ, ಅವರ ಈ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ ಎಂದರು.

*ಸಭಾಪತಿಗಳ ಕುರ್ಚಿಗೆ ಹೊರಟ್ಟಿ ನ್ಯಾಯ ಒದಗಿಸುತ್ತಾರೆ*
ನನಗೂ ಅವರಿಗೂ ಆತ್ಮೀಯತೆ ಇದ್ದರೂ ಸಭಾಪತಿ ಕುರ್ಚಿಯಲ್ಲಿ ಕುಳಿತಾಯ ಅದಕ್ಕೆ ನ್ಯಾಯ ಒದಗಿಸುತ್ತಾರೆ. ನನಗೆ ಸ್ನೇಹವಿದೆ ಎಂದು ಹೆಚ್ಚು ಉತ್ತೇಜನ ನೀಡುವುದಾಗಿ, ನನ್ನ ಪರವಾಗಿ ಮಾತನಾಡುವುದಾಗಲಿ ಮಾಡಿಲ್ಲ.ಮುಂದೆಯೂ ಮಾಡುವುದಿಲ್ಲ. ನಮಗೆ ಬಹುಮತ ಕಡಿಮೆಯಿದ್ದು ಮುಂದಿನ ಚುನಾವಣೆಯಲ್ಲಿ ಬಹುಮತ ಬರಬಹುದು.ಅಲ್ಲಿಯವರೆಗೆ ಇವರೇ ಮುಂದುವರೆಯುತ್ತಾರೆ. ಸದನ ಉತ್ತಮವಾಗಿ ನಡೆಯುತ್ತಿದೆ. ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಕೆಲಸವನ್ನು ಅವರು ಯಾವತ್ತೂ ಮಾಡಿಲ್ಲ ಎಂದರು. ಸತತವಾಗಿ ಎಂಟು ಬಾರಿ ವಿಧಾನಪರಿಷತ್ ಸದಸ್ಯರಾಗಿರುವುದು ವಿಶ್ವದಾಖಲೆಯಾಗಿದೆ. ಅವರ ವಿಜಯಪಥ ಸದಾ ಮುಂದುವರೆಯಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು. ಆದರೆ ಬಸವರಾಜ ಹೊರಟ್ಟಿಯವರು ಕಾಂಗ್ರೆಸ್ ಹೊರತುಪಡಿಸಿ, ಬೇರೆ ಯಾವುದೇ ಪಕ್ಷವನ್ನು ಪ್ರತಿನಿಧಿಸಿದರೆ, ಅವರ ವಿರುದ್ಧವೇ ಪ್ರಚಾರ ನಡೆಸುವುದು ಗ್ಯಾರಂಟಿ ಎಂದರು. ಆದಾಗ್ಯೂ ಹೊರಟ್ಟಿಯವರು ಗೆಲ್ಲಲಿ ಎಂದು ವೈಯಕ್ತಿಕವಾಗಿ ಆಶಿಸುತ್ತೇನೆ. ಸರ್ಕಾರಕ್ಕೆ ವಿಧಾನಮಂಡಲಕ್ಕೆ ಅವರ ಮಾರ್ಗದರ್ಶನ ಮತ್ತಷ್ಟು ದೊರೆಯಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.IMG 20251213 WA0030

*ಪ್ರತಿಯೊಬ್ಬರೂ ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಬೇಕು*

ಅವರ ಹಳ್ಳಿಯಲ್ಲಿ ಒಂದು ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ್ದಾರೆ. ಯಾವುದೇ ಖಾಸಗಿ ಶಾಲೆಗಿಂತಲೂ ಅದು ಕಡಿಮೆ ಇಲ್ಲ. ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ . ಪ್ರತಿಯೊಬ್ಬರೂ ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ಅದರಿಂದ ಹೆಚ್ಚು ಅನುಕೂಲವಾಗಲಿದೆ ಎಂದರು.

*ನಿಷ್ಪಕ್ಷಪಾತವಾಗಿ ಸದನ ನಡೆಸುತ್ತಾರೆ*
ಬಸವರಾಜ ಹೊರಟ್ಟಿ ಅವರನ್ನು ಹೋರಾಟದ ಹೊರಟ್ಟಿ ಎಂದು ಕರೆಯುತ್ತಾರೆ. ಈಗಾಗಲೇ ದಾಖಲೆ ನಿರ್ಮಾಣ ಮಾಡಿದ್ದು ಮತ್ತೊಬ್ಬರು ಶಿಕ್ಷಕರ ಕ್ಷೇತ್ರದಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ . ನಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ಒಮ್ಮೆ ಹೋಗಿದ್ದರೂ ನಮ್ಮ ಅಭ್ಯರ್ಥಿ ಗೆಲ್ಲಲಿಲ್ಲ. ನಮ್ಮ ಮಧ್ಯೆ ಸ್ನೇಹವಿದ್ದರೂ ಅವರನ್ನು ಸೋಲಿಸಲು ಹೋಗಿದ್ದೆ. ರಾಜಕಾರಣ ಬೇರೆ ಸ್ನೇಹ ಬೇರೆ. ಬಸವರಾಜ್ ಬೊಮ್ಮಾಯಿ ಹಾಗೂ ಅವರ ತಂದೆ ನನಗೆ ಬಹಳ ಆತ್ಮೀಯರು. ಆದರೆ ಅವರ ಮಗನನ್ನು ಚುನಾವಣೆಯಲ್ಲಿ ಸೋಲಿಸಬೇಕಾಯಿತು. ಸಭಾಪತಿಯಾಗಿ ನಿಷ್ಪಕ್ಷಪಾತವಾಗಿ ಸದನ ನಡೆಸುತ್ತಾರೆ. ಅಲ್ಲಿ ಕುಳಿತಾಗ ಕಾನೂನಿನ ಪ್ರಕಾರ ಸಭೆ ನಡೆಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಪರಿಷತ್ತಿನಲ್ಲಿರುವ ಮೂರೂ ಪಕ್ಷದವರೂ ಅವರನ್ನು ಗೌರವದಿಂದ ಕಾಣುತ್ತಾರೆ. ಕೆಲವೊಮ್ಮೆ ಏಕವಚನ ಬಳಸಿದರು ಯಾರೂ ಕೋಪಿಸಿಕೊಳ್ಳುವುದಿಲ್ಲ. ಅಷ್ಟರಮಟ್ಟಿನ ವ್ಯಕ್ತಿತ್ವ ಅವರದ್ದು. ಅವರ ಅನುಭವದ ಆಧಾರದ ಮೇಲೆ ಸದನಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಸಂಸದೀಯಪಟು ಆಗಿರುವುದರಿಂದ ಯಾವುದಕ್ಕೆ ಎಷ್ಟು ಒತ್ತು ಕೊಡಬೇಕು, ಯಾವುದೇ ಪಕ್ಷದವರಾಗಲಿ ಬೆದರಿಸಿ ಸುಮ್ಮನೆ ಕೂಡಿಸುತ್ತಾರೆ. ಇವರಲ್ಲದೇ ಬೇರೆ ಯಾರೇ ಆಗಿದ್ದರೂ ಅದನ್ನು ಒಪ್ಪುತ್ತಿದ್ದುದ್ದು ಕಷ್ಟ ಎಂದರು.

*ಹೊರಟ್ಟಿ ಹ್ಯಾಂಡಸಮ್ ಟೀಚರ್ ಆ್ಯಂಡ್ ಇಂಟಲಿಜೆಂಟ್ ಪೊಲಿಟಿಷಿಯನ್: ಬಸವರಾಜ ಬೊಮ್ಮಾಯಿ*

IMG 20251213 WA0032

ಟೀಚರ್ ಅಂಡ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕದ ಧ್ವನಿಯಾಗಿ ಸದಾಕಾಲ ಕೆಲಸ ಮಾಡಿದ್ದಾರೆ. ಅವರು ಮುಂದೆ ಇದ್ದರೆ ನಾವೆಲ್ಲ ಅವರ ಜೊತೆಗೆ ಹೆಜ್ಜೆಗೆ ಹೆಜ್ಜೆ ಇಟ್ಟು ಕರ್ನಾಟಕವನ್ನು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಗೌರವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಹೊರಟ್ಟಿ ಮಾಸ್ತರು ಪ್ರತಿಯೊಬ್ಬ ಶಿಕ್ಷಕರ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ನಲವತ್ತೈದು ವರ್ಷ ಇದ್ದರೆ, ಶಿಕ್ಷಕರ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದಾರೆ. ಅಂತ ಅಪರೂಪದ ವ್ಯಕ್ತಿತ್ವದ ಹೊರಟ್ಟಿಯವರಿಗೆ ಸಾವುರಾರು ಅಭಿನಂದನೆಗಳು. ಹೊರಟ್ಟಿ ಸರ್ ಮಣ್ಣಿನ ಮಗ ಅವರು ತಮ್ಮತನದ ಅಭಿಮಾನ ಯಾವತ್ತು ಬಿಟ್ಟಿಲ್ಲ. ಅವರ ಯಶಸ್ಸಿನ ಗುಟ್ಟು ಅವರ ಸ್ವಾಭಿಮಾನ, ಅವರು ಎಂದೂ ಸ್ವಾಭಿಮಾನದಲ್ಲಿ ರಾಜಿ ಮಾಟಿಕೊಂಡಿಲ್ಲಾ ಹೀಗಾಗಿ ಅವರದು ಸ್ವಾಭಿಮಾನ ಭರಿತ ವ್ಯಕ್ತಿತ್ವ ಹೊರಟ್ಟಿಯವರು ಎಂ ಎಲ್ ಸಿ ಆಗುವ ಮುಂಚೆಯೇ ಪರಿಚಯ ಅವರು ಮಾಸ್ತರ ಇದ್ದರು ಅವರ ಜೊತೆಗೆ ನಮ್ಮ ಮಾವ ಕೆ.ವಿ ಶಂಕರ ಗೌಡರು ಬಹಳ ಆತ್ಮೀಯರು ಹಿಂಗಾಗಿ ಆಗಿನಿಂದಲೂ ನನಗೆ ಆತ್ಮೀಯರಾಗಿ, ಹಿರಿಯರಾಗಿ ಪರಿಚಯ. ಮುಂದೆ 1980 ರಲ್ಲಿ ಅವರು ಚುನಾವಣೆ ನಿಂತರು ಆಗ ಎಸ್ ಐ ಶೆಟ್ಟರ ಅಂತ ನಮ್ಮ ಪಕ್ಷದಿಂದ ನಿಂತಿದ್ದರು. ಹೊರಟ್ಟಿಯವರು ಸ್ವತಂತ್ರ ಸ್ಪರ್ಧೆ ಮಾಡಿದ್ದರು. ಅವರ ವಿರುದ್ದ ನಾನು ಮಾಡಿರುವುದು ಒಂದೇ ಚುನಾವಣೆ ಅದಾದ ಮೇಲೆ ಅಜಾತ ಶತ್ರು ಅಂತ ಕರೆಯಲು ಅವರು ಮುಂದಿನ ಚುನಾವಣೆ ಒಳಗೆ ನಮ್ಮನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಏಳು ಚುನಾವಣೆಗಳನ್ನು ನಾವು ಅವರ ಜೊತೆಗೆ ಮಾಡಿದ್ದೇವೆ. ಅಂತಹ ವ್ಯಕ್ತಿತ್ವ ಬಸವರಾಜ ಹೊರಟ್ಟಿಯವರದು. ನಾನು ನೀರಾವರಿ ಸಚಿವ ಆಗಿದ್ದಾಗ ನನ್ನ ಕರೆದು ತಮ್ಮೂರು ಯಡಳ್ಳಿಯಲ್ಲಿ ಸವುಳು ಜವುಳು ಸಮಸ್ಯೆಯಿಂದ ರೈತರಿಗೆ ತೊಂದರೆಯಾಗಿದೆ ಅಂತ ಹೇಳಿದರು. ಆ ಕಾರಣದಿಂದ ನಾನು ಸವುಳು ಜುವಳು ಕಾರ್ಯಕ್ರಮವನ್ನು ರೂಪಿಸುವಂತಾಯಿತು. ಅವರು ಶಿಕ್ಷಕರ ವಿಚಾರದಲ್ಲಿ ಎಷ್ಟು ಕಠೋರವಾಗಿದ್ದರು ಎಂದರೆ ಅದನ್ನು ಸಾಧಿಸುವವರೆಗೂ ಬಿಡುತ್ತಿರಲಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಜಗಳವನ್ನೂ ಆಡುತ್ತಿದ್ದರು. ಅವರು ಜಗಳ ಆಡದೇ ಇರುವ ಮುಖ್ಯಮಂತ್ರಿಗಳೇ ಇಲ್ಲ. ಜಗಳ ಆಡಿಯೂ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುತ್ತಿದ್ದರು. ಇವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯೂ ಜಗಳ ಆಡುತ್ತಾರೆ. ಆದರೆ, ಆ ಜಗಳದಲ್ಲಿಯೂ ಸ್ನೇಹ ಇರುತ್ತದೆ. ಈ ಥರದ ರಾಜಕಾರಣದಲ್ಲಿ ಬಹಳ ಕಷ್ಟ. ಏಕೆಂದರೆ ಒಮ್ಮೆ ಜಗಳಾಡಿದರೆ ಮುಖ ನೋಡುವುದಿಲ್ಲ. ಅಂತಹ ಕಾಲದಲ್ಲಿ ಅವರು ತಮ್ಮ ಸ್ನೇಹವನ್ನು ಎಂದೂ ಕೂಡ ಬಿಟ್ಟಿಲ್ಲ. ಸ್ವಾಭಿಮಾನ ಮತ್ತು ಸ್ನೇಹ ಎರಡನ್ನೂ ಜೊತೆ ಜೊತೆಗೆ ತೆಗೆದುಕೊಂಡು ಹೋಗಿರುವ ನೈಪುಣ್ಯತೆ ಬಸವರಾಜ ಹೊರಟ್ಟಿಯವರಿಗೆ ಇದೆ ಎಂದು ಹೇಳಿದರು.

*ಸ್ನೇಹದ ಮುಂದೆ ರಾಜಕಾರಣ ಗೌಣ*

ಕಳಸಾ ಬಂಡೂರಿ ಹೋರಾಟದಲ್ಲಿ ನಾವೆಲ್ಲಾ ಪಾದಯಾತ್ರೆ ಮಾಡುತ್ತಿದ್ಸೆವು ಅವರು ಬೇರೆ ಪಕ್ಷದಲ್ಲಿ ಇದ್ದರು. ಆದರೂ ನವಲಗುಂದಕ್ಕೆ ಬಂದು ನಮ್ಮ ಬೆನ್ನು ಚಪ್ಪರಿಸಿ ಬೆಂಬಲ ಕೊಟ್ಟಿದ್ದು ನಾವು ಎಂದೂ ಕೂಡ ಮರೆಯಲ್ಲ. ಅವರನ್ನ ಸಭಾಪತಿ ಮಾಡುವ ಸಂದರ್ಭದಲ್ಲಿ ಕಾಕತಾಳಿಯದಂತೆ ನಾನು ಕಾನೂನು ಸಚಿವ ಆಗಿದ್ದೆ ಅದು ಬಹಳಷ್ಡು ಸಹಾಯ ಆಯಿತು ಹೀಗಾಗಿ ಅವರನ್ನು ಸಭಾಪತಿ ಮಾಡಿದೆವು. ಹೊರಟ್ಟಿಯವರನ್ನು ಸಭಾಪತಿಯನ್ನಾಗಿ ನಾವು ಮಾಡಿದರೂ ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಾಯ ಇದೆ‌ ಹೆಂಗದರೆ ನಮ್ಮಲ್ಲಿ ಕೆಲವರು ಬೇರೆ ಬೇರೆ ಹೆಸರು ತರುತ್ತಿದ್ದರು. ನಾವು ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಮಾಡದಿದ್ದರೆ ಸಿದ್ದರಾಮಯ್ಯ ಅವರನ್ನು ಸಭಾಪತಿ ಮಾಡುತ್ತಾರೆ. ಅಂತ ಸಿದ್ದರಾಮಯ್ಯ ಅವರ ಹೆಸರು ಬಳಕೆ ಮಾಡಿ ಹೊರಟ್ಟಿ ಅವರನ್ನು ಸಭಾಪತಿ ಮಾಡಿದೆವು. ಸ್ನೇಹದ ಮುಂದೆ ರಾಜಕಾರಣ ಗೌಣ ಆಗುತ್ತದೆ. ಹೊರಟ್ಟಿ ಅವರ ಸೇವೆ ಸದಾಕಾಲ ಮುಂದುವರೆಯಲಿ ಎಂದು ಹೇಳಿದರು.
ಅವರ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ ಹೊರಟ್ಟಿ ಚಂದುಳ್ಳ ಚಲುವ ಅವರ ಹಳೆ ಫೋಟೊ ನೊಡಿದರೆ ನಮಗೆಲ್ಲಾ ಅಸೂಯೆ ಆಗುತ್ತದೆ. ಅಷ್ಟು ಚಂದ ಅದಾರು ಅವರು ದೇವರು ಅವರಿಗೆ ಶತಾಯುಷಿ ಮಾಡಲಿ ಅಂತ ಹಾರೈಸಿದೆ. ಹ್ಯಾಂಡಸಮ್ ಟೀಚರ್ ಅಂಟ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್ ಬಸವರಾಜ ಹೊರಟ್ಟಿ ಅವರ ಈ ಪಯಣ ನಿರಂತರ ನಡೆಯಲಿ ನಮ್ಮ ಮಧ್ಯೆ ಇದ್ದು ನಮಗೆಲ್ಲಾ ಮಾರ್ಗದರ್ಶನ ಮಾಡಲಿ ಉತ್ತರ ಕರ್ನಾಟಕದ ಧ್ವನಿಯಾಗಿ ಸದಾಕಾಲ ಕೆಲಸ ಮಾಡಿದ್ದಾರೆ. ಅವರು ಮುಂದೆ ಇದ್ದರೆ ನಾವೆಲ್ಲ ಅವರ ಜೊತೆಗೆ ಹೆಜ್ಜೆಗೆ ಹೆಜ್ಜೆ ಇಟ್ಟು ಕರ್ನಾಟಕವನ್ನು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌, ಸಭಾಪತಿ ಬಸವರಾಜ ಹೊರಟ್ಟಿ ಸೇರಿ‌ ಹಲವು ಗಣ್ಯರು‌ ಉಪಸ್ಥಿತರಿದ್ದರು.‌