IMG 20260118 WA0014

Karnataka : ಫ್ಯಾಕೋ ಫೆಸ್ಟಿವಲ್ 2026’ ಆಯೋಜನೆ…..!

BUSINESS

 

*ಕರ್ನಾಟಕ ನೇತ್ರೌಷಧ ಸೊಸೈಟಿ (ಕೆಓಎಸ್) ಮತ್ತು ಬೆಂಗಳೂರು ನೇತ್ರೌಷಧ ಸೊಸೈಟಿಯ (ಬಿಓಎಸ್) ಆಶ್ರಯದಲ್ಲಿ ‘ಫ್ಯಾಕೋ ಫೆಸ್ಟಿವಲ್ 2026’ ಆಯೋಜನೆ; ಭಾರತದ ಮುಂದಿನ ಪೀಳಿಗೆಯ ನೇತ್ರ ಶಸ್ತ್ರಚಿಕಿತ್ಸಾ ಆವಿಷ್ಕಾರಗಳ ಪ್ರದರ್ಶನ*

• ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಹಾಗೂ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ಅವರು, ನೇತ್ರವಿಜ್ಞಾನದ ಕುರಿತಾದ ಭಾರತದ ಪ್ರಮುಖ ಜಾಗತಿಕ ಸಮ್ಮೇಳನಗಳಲ್ಲಿ ಒಂದಾದ ‘ಫ್ಯಾಕೋ ಫೆಸ್ಟಿವಲ್ 2026’ರ 10ನೇ ಆವೃತ್ತಿಯನ್ನು ಉದ್ಘಾಟಿಸಿದರು.
• ಈ ಸಮ್ಮೇಳನವು ನೇತ್ರವಿಜ್ಞಾನ ವಿಭಾಗದ ಕುರಿತು ಜ್ಞಾನ ಹಂಚಿಕೆ, ಶಸ್ತ್ರಚಿಕಿತ್ಸಾ ಕೌಶಲಗಳನ್ನು ಸುಧಾರಿಸುವುದು ಮತ್ತು ಕಣ್ಣಿನ ಪೊರೆ (ಕೆಟರಾಕ್ಟ್) ಹಾಗೂ ವಕ್ರೀಕಾರಕ ನೇತ್ರ ಶಸ್ತ್ರಚಿಕಿತ್ಸೆಯಲ್ಲಿನ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸುವತ್ತ ಗಮನ ಹರಿಸಿದೆ.

*ಬೆಂಗಳೂರು, ಜನವರಿ 18, 2026:* ನೇತ್ರವಿಜ್ಞಾನ ವಿಭಾಗದ ಅತ್ಯಂತ ಪ್ರಮುಖ ಸಂಸ್ಥೆಗಳಾದ ಕರ್ನಾಟಕ ನೇತ್ರೌಷಧ ಸೊಸೈಟಿ (ಕೆಓಎಸ್) ಮತ್ತು ಬೆಂಗಳೂರು ನೇತ್ರೌಷಧ ಸೊಸೈಟಿಯ (ಬಿಓಎಸ್) ಆಶ್ರಯದಲ್ಲಿ, ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ನೇತ್ರವಿಜ್ಞಾನದ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಒಂದಾದ ‘ಫ್ಯಾಕೋ ಫೆಸ್ಟಿವಲ್’ನ 10ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. ಹಿಲ್ಟನ್ ಕಾನ್ರಾಡ್ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಹಾಗೂ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಕಣ್ಣಿನ ಆರೈಕೆ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಶ್ಲಾಘಿಸಿದರು.

2026ರ ಜನವರಿ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವು ಭಾರತ ಮತ್ತು ವಿಶ್ವದಾದ್ಯಂತ ಇರುವ ಪ್ರಮುಖ ನೇತ್ರ ತಜ್ಞರು, ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ತಂತ್ರಜ್ಞಾನದ ಪರಿಣತರನ್ನು ಒಂದೆಡೆ ಸೇರಿಸಿದೆ. ವೈಜ್ಞಾನಿಕ ಗೋಷ್ಠಿಗಳು, ತಜ್ಞರ ಸಂವಾದಗಳು ಮತ್ತು ತಂತ್ರಜ್ಞಾನದ ಪ್ರದರ್ಶನಗಳ ಮೂಲಕ ಕಣ್ಣಿನ ಪೊರೆ (ಕೆಟರಾಕ್ಟ್) ಮತ್ತು ವಕ್ರೀಕಾರಕ (ರಿಫ್ರಾಕ್ಟಿವ್) ನೇತ್ರ ಶಸ್ತ್ರಚಿಕಿತ್ಸೆಯಲ್ಲಿನ ಪ್ರಗತಿಯ ಬಗ್ಗೆ ಇಲ್ಲಿ ಸಂವಾದ ಮಾಡಲಾಗುತ್ತದೆ.

ಈ ವರ್ಷದ ಫ್ಯಾಕೋ ಫೆಸ್ಟಿವಲ್ 2026 ಅನ್ನು “ನೇತ್ರ ಚಿಕಿತ್ಸಾ ಪದ್ಧತಿಯ ಕಲೆ ಮತ್ತು ವಿಜ್ಞಾನ” ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗಿದ್ದು, ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಕಣ್ಣಿನ ಆರೈಕೆಯನ್ನು ಒದಗಿಸಲು ವೈದ್ಯಕೀಯ ಪರಿಣತಿ, ತಾಂತ್ರಿಕ ಪರಿಣತಿ ಮತ್ತು ಸಾಕ್ಷ್ಯಾಧಾರಿತ ಕಲಿಕೆಯನ್ನು ಬಳಸುವ ಕಡೆಗೆ ಇದು ಗಮನ ಹರಿಸಿದೆ.

ಈ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ದೇಶಗಳ ತಜ್ಞರು ಭಾಗವಹಿಸಲಿದ್ದು, ಪ್ರಾಯೋಗಿಕ ಗೋಷ್ಠಿಗಳು ಮತ್ತು ಸಂವಾದಾತ್ಮಕ ಪ್ರಸ್ತುತಿಗಳ ಮೂಲಕ ಇತ್ತೀಚಿನ ನೇತ್ರವಿಜ್ಞಾನದ ಆವಿಷ್ಕಾರಗಳನ್ನು ತೋರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸುವ, ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಆರೈಕೆಯ ಗುಣಮಟ್ಟವನ್ನು ಉತ್ತಮಪಡಿಸುವ ಸಾಧನಗಳ ತಯಾರಕರು, ಐಓಎಲ್ ಅಭಿವೃದ್ಧಿಪಡಿಸುವವರು, ಲೇಸರ್ ತಂತ್ರಜ್ಞಾನ ಒದಗಿಸುವವರು ಮತ್ತು ಎಐ ಚಾಲಿತ ಪರಿಕರಗಳನ್ನು ಪ್ರದರ್ಶನ ಮಾಡುವವರು ಪಾಲ್ಗೊಳ್ಳಲಿದ್ದು, ನೂತನ ಆವಿಷ್ಕಾರಗಳನ್ನು ಪ್ರದರ್ಶಿಸಲಿದ್ದಾರೆ.

ಈ ಸಮ್ಮೇಳನವು ನೇತ್ರವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಪ್ರತಿಷ್ಠಿತ ವೈದ್ಯರನ್ನು ಗುರುತಿಸಿ ಗೌರವಿಸಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಭಾಗವಾಗಿ, ಜರ್ಮನಿಯ ಪ್ರೊ. ಡಾ. ಮೈಕೆಲ್ ನಾರ್ಜ್ ಅವರಿಗೆ ಪ್ರತಿಷ್ಠಿತ ‘ಕೆ.ಆರ್. ಮೂರ್ತಿ ಓರೇಶನ್ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಗುವುದು. ಹಾಗೆಯೇ, ನೇತ್ರ ಚಿಕಿತ್ಸಾ ಪದ್ಧತಿಯಲ್ಲಿ ಜಾಗತಿಕ ಮಟ್ಟದ ಹೆಸರು ಮತ್ತು ನಾಯಕತ್ವವನ್ನು ಸಾಧಿಸಿರುವ ಆಮ್ಸ್ಟರ್ಡ್ಯಾಮ್ನ ಡಾ. ರುತ್ ಲ್ಯಾಪಿಡ್-ಗೋರ್ಟ್ಜಾಕ್ ಅವರಿಗೆ ‘ಚಿನ್ನದ ಪದಕ’ ನೀಡಿ ಪುರಸ್ಕರಿಸಲಾಗುವುದು.

ಫ್ಯಾಕೋ ಫೆಸ್ಟಿವಲ್ 2026 ನೇತ್ರವಿಜ್ಞಾನದ ಹಲವು ಅತ್ಯಾಧುನಿಕ ತಂತ್ರಜ್ಞಾನಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ. ಇದರಲ್ಲಿ ಹೈ-ಡೆಫಿನಿಷನ್ ದೃಶ್ಯೀಕರಣಕ್ಕಾಗಿ ಝೈಸ್ ಅರ್ಟೆವೋ 850 ಡಿಜಿಟಲ್ 3ಡಿ ಮೈಕ್ರೋಸ್ಕೋಪ್, ಕಣ್ಣಿನ ಪೊರೆ ಮತ್ತು ರೆಟಿನಾ ಚಿಕಿತ್ಸೆಗಳ ಸುಗಮ ನಿರ್ವಹಣೆಗಾಗಿ ಇವಿಎ ನೆಕ್ಸಸ್ ಫ್ಯಾಕೋ-ವಿಟ್ರೆಕ್ಟಮಿ ಸಿಸ್ಟಮ್, ಹಾಗೂ ಸ್ಮೈಲ್ ಶಸ್ತ್ರಚಿಕಿತ್ಸೆಗಳಿಗಾಗಿ ವಿಶುಮ್ಯಾಕ್ಸ್ 800 ತಂತ್ರಜ್ಞಾನಗಳು ಸೇರಿವೆ. ಇದರೊಂದಿಗೆ ಝೀಮರ್ ನಿಯೋ ಝಡ್8 ನಂತಹ ಫೆಮ್ಟೋಸೆಕೆಂಡ್ ಲೇಸರ್ ಪ್ಲಾಟ್ಫಾರ್ಮ್ಗಳು ಮತ್ತು ನ್ಯಾಚುರೋಟಾರಿಕ್ ಇಂಟ್ರೋಕ್ಯುಲರ್ ಇಡಿಓಎಫ್ ನಂತಹ ಪ್ರೀಮಿಯಂ ಇಂಟ್ರಾಕ್ಯುಲರ್ ಲೆನ್ಸ್ ಗಳನ್ನು ಸಹ ಪ್ರದರ್ಶಿಸಲಾಗುವುದು. ಈ ಎಲ್ಲಾ ಆವಿಷ್ಕಾರಗಳು ಮಾಹಿತಿ ಆಧಾರಿತ ನಿಖರ ಚಿಕಿತ್ಸೆ ಮತ್ತು ಬುದ್ಧಿವಂತ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ, ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸುತ್ತಿವೆ ಮತ್ತು ಭಾರತದಲ್ಲಿ ನೇತ್ರ ಆರೈಕೆಯ ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತಿವೆ ಎಂಬುದನ್ನು ತೋರಿಸಿಕೊಡುತ್ತವೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ *ಡಾ. ಸಿ. ಎನ್. ಮಂಜುನಾಥ್* ಅವರು, “ಪ್ರಸ್ತುತ ನಿರಂತರ ಕಲಿಕೆ ಮತ್ತು ಜಾಗತಿಕ ತಜ್ಞರ ಜೊತೆಗಿನ ಅರ್ಥಪೂರ್ಣ ಸಹಯೋಗಕ್ಕೆ ಅನುವು ಮಾಡಿಕೊಡುವ ಫ್ಯಾಕೋ ಫೆಸ್ಟಿವಲ್ನಂತಹ ಹೆಚ್ಚಿನ ವೇದಿಕೆಗಳ ಅಗತ್ಯವಿದೆ. ಇಂತಹ ವೇದಿಕೆಗಳು ವೈದ್ಯರು ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳು ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಬಲರಾಗಲು ಸಹಾಯ ಮಾಡುತ್ತವೆ. ಭಾರತವು ತನ್ನ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿರುವ ಈ ಸಂದರ್ಭದಲ್ಲಿ, ಇಂತಹ ವೇದಿಕೆಗಳು ದೇಶವನ್ನು ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಉತ್ತಮ ಗುಣಮಟ್ಟದ ಆರೈಕೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ” ಎಂದು ತಿಳಿಸಿದರು.

ಫ್ಯಾಕೋ ಫೆಸ್ಟಿವಲ್ ಬಗ್ಗೆ ಮಾತನಾಡಿದ *ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸ್ಥಾಪಕರು ಮತ್ತು ಚೇರ್ ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಫ್ಯಾಕೋ ಫೆಸ್ಟಿವಲ್ನ ಸಂಘಟನಾ ಚೇರ್ ಮನ್ ಆದ ಪ್ರೊ. ಡಾ. ಶ್ರೀ ಗಣೇಶ್* ಅವರು, “ಸಾಕ್ಷ್ಯಾಧಾರಿತ ಕಲಿಕೆ, ನಿರಂತರ ಕೌಶಲ ಅಭಿವೃದ್ಧಿ ಮತ್ತು ಹೊಸ ತಂತ್ರಜ್ಞಾನಗಳ ಸುರಕ್ಷಿತ ಅಳವಡಿಕೆಯ ಮೂಲಕ ಕಣ್ಣಿನ ಆರೈಕೆಯ ಗುಣಮಟ್ಟವನ್ನು ಬಲಪಡಿಸುವತ್ತ ಫ್ಯಾಕೋ ಫೆಸ್ಟಿವಲ್ ಗಮನ ಹರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಇದು ನೇತ್ರತಜ್ಞರು ಒಬ್ಬರಿಂದೊಬ್ಬರು ಕಲಿಯುವ ಮತ್ತು ಶಸ್ತ್ರಚಿಕಿತ್ಸೆಯ ಫಲಿತಾಂಶಗಳ ಗುಣಮಟ್ಟ ಹಾಗೂ ಸುರಕ್ಷತೆಯನ್ನು ನಿರಂತರವಾಗಿ ಹೆಚ್ಚಿಸುವ ಜಾಗತಿಕ ವೇದಿಕೆಯಾಗಿ ಬೆಳೆದು ಬಂದಿದೆ. ಈ ಬಾರಿಯ ಆವೃತ್ತಿಯು ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬರಲಿದ್ದು, ಇದು ನೇರವಾಗಿ ರೋಗಿಗಳಿಗೆ ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಆರೈಕೆಯನ್ನು ನೀಡಲು ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.

ಈ ಸಮ್ಮೇಳನವು ಶಸ್ತ್ರಚಿಕಿತ್ಸಾ ಪ್ರಾತ್ಯಕ್ಷಿಕೆಗಳು, ತಜ್ಞರ ಉಪನ್ಯಾಸಗಳು, ಪ್ಯಾನಲ್ ಗೋಷ್ಠಿಗಳು ಮತ್ತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಸುಧಾರಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ತಂತ್ರಗಳು, ನೇತ್ರವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ, ಹೊಸ ಇಂಟ್ರಾಕ್ಯುಲರ್ ಲೆನ್ಸ್ ಗಳು ಮತ್ತು ತಂತ್ರಜ್ಞಾನ ಆಧಾರಿತ ರೋಗಿಗಳ ಆರೈಕೆಯ ಸುಧಾರಣೆಗಳು ಇಲ್ಲಿನ ಪ್ರಮುಖ ಚರ್ಚಾ ವಿಷಯಗಳಾಗಿವೆ.

*ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಫ್ಯಾಕೋ ಫೆಸ್ಟಿವಲ್ ನ ಸಂಘಟನಾ ಕಾರ್ಯದರ್ಶಿಗಳಾದ ಡಾ. ಸುಪ್ರಿಯಾ ಶ್ರೀ ಗಣೇಶ್* ಅವರು ಈ ಸಂರ್ಭದಲ್ಲಿ ಮಾತನಾಡಿ, “ಫ್ಯಾಕೋ ಫೆಸ್ಟಿವಲ್ 2026 ರಲ್ಲಿ ಭಾರತದಾದ್ಯಂತ ಇರುವ ನೇತ್ರತಜ್ಞರು ಮತ್ತು ಅಂತರರಾಷ್ಟ್ರೀಯ ಅಧ್ಯಾಪಕರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದನ್ನು ನೋಡುವುದು ಸಂತೋಷ ತಂದಿದೆ. ಜಾಗತಿಕ ತಜ್ಞರಿಂದ ಕಲಿಯಲು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ವೈದ್ಯಕೀಯ ಅಭ್ಯಾಸದಲ್ಲಿ ಹೇಗೆ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಮ್ಮೇಳನವು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ತಾಂತ್ರಿಕ ಆವಿಷ್ಕಾರಗಳು ಅಂತಿಮವಾಗಿ ರೋಗಿಗಳಿಗೆ ಸುರಕ್ಷಿತ ಶಸ್ತ್ರಚಿಕಿತ್ಸೆ ಮತ್ತು ಉತ್ತಮ ಕಣ್ಣಿನ ಆರೈಕೆಯನ್ನು ನೀಡುವಂತಾಗಬೇಕು ಎಂಬುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.

ಹಿರಿಯ ವೈದ್ಯರು, ಯುವ ನೇತ್ರತಜ್ಞರು, ಶಿಕ್ಷಣ ತಜ್ಞರು ಮತ್ತು ಉದ್ಯಮದ ಪ್ರಮುಖರು ಸೇರಿದಂತೆ ಸಾವಿರಾರು ಪ್ರತಿನಿಧಿಗಳು ಫ್ಯಾಕೋ ಫೆಸ್ಟಿವಲ್ 2026 ಭಾಗವಹಿಸುತ್ತಿದ್ದಾರೆ. ಈ ಮೂಲಕ ಈ ವೇದಿಕೆಯು ಸಹಯೋಗ, ಶಸ್ತ್ರಚಿಕಿತ್ಸಾ ಶ್ರೇಷ್ಠತೆ ಮತ್ತು ಮುಂದಿನ ಪೀಳಿಗೆಯ ನೇತ್ರವಿಜ್ಞಾನದ ಆವಿಷ್ಕಾರಗಳನ್ನು ಬಳಸಲು ಪ್ರೇರೇಪಿಸುವ ಭಾರತದ ಪ್ರಮುಖ ವೇದಿಕೆಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.