Screenshot 20260201 2045512

New Delhi : ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ….!

National - ಕನ್ನಡ

*ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ ಎಂದ ಹೆಚ್.ಡಿ. ಕುಮಾರಸ್ವಾಮಿ*

*16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು; 2026–27ನೇ ಸಾಲಿನಲ್ಲಿ ರಾಜ್ಯಕ್ಕೆ ₹63,049 ಕೋಟಿ*

*ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನ*

*ವಿಕಸಿತ ಭಾರತ ಸಾಕಾರಕ್ಕೆ ಬಜೆಟ್ ಪೂರಕ*

*ನವದೆಹಲಿ 1 ಫೆಬ್ರವರಿ 2026:/ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಆಯವ್ಯಯದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಎಂದು ರಾಜ್ಯ ಸರ್ಕಾರ ಸಾಮಾನ್ಯವಾಗಿ ದೂರುತ್ತಿತ್ತು. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.

ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರಾಶೆಯೇನೂ ಆಗಿಲ್ಲ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಹಾಗೆಯೇ ಗೋಡಂಬಿ ಮತ್ತು ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ. ಶ್ರೀಗಂಧ, ತೆಂಗು ಬೆಳೆ, ಕೋಕೋ ಬೆಳೆಗೆ ವಿಶೇಷ ಯೋಜನೆ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಿಗೆ ಉಪಯೋಗ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್-ಬೆಂಗಳೂರು, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. ಈಗಾಗಲೇ ರಾಜ್ಯದ ಹಲವು ವೇಗದ ರೈಲುಗಳು ಕಾರ್ಯಾಚರಿಸುತ್ತಿದ್ದು, ವಂದೇ ಭಾರತ್ ರೈಲುಗಳು ಕೂಡ ಸೇರ್ಪಡೆಯಾಗಿದೆ. ಈಗ ಹೈ ಸ್ಪೀಡ್ ರೈಲುಗಳು ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಪರ್ಕದಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದು ಸಚಿವರು ಪ್ರತಿಪಾದಿಸಿದರು.

ಇದು ಕೇವಲ ಅಂಕಿ ಅಂಶಗಳ ಮುಂಗಡ ಪತ್ರವಲ್ಲ, ಬದಲಿಗೆ ಮುನ್ನೋಟ, ಮುಂದಾಲೋಚನೆ, ವಿಕಾಸ, ಫಲಿತಾಂಶ ಆಧರಿತ ಮುಂಗಡ ಪತ್ರವಾಗಿದೆ. ವಿಕಸಿತ ಭಾರತ ಗುರಿ ಸಾಕಾರಕ್ಕೆ ಇದು ಪೂರಕವಾಗಿದೆ. 2047ಕ್ಕೆ ನಾವು ಈ ಗುರಿ ಸಾಧನೆ ಮಾಡಬೇಕು, ಅದಕ್ಕೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಬಜೆಟ್ ಸ್ಪಷ್ಟ ದಿಕ್ಸೂಚಿ ತೋರಿದೆ ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಭಾರತಕ್ಕೆ ಮನ್ನಣೆ ಕೊಡಲಾಗಿದೆ. ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಪಂಚಾಯಿತಿ, ಪ್ರತಿ ಹಳ್ಳಿ ಮುಂಗಡಪತ್ರದಲ್ಲಿ ಒಳಗೊಂಡಿದೆ. ವಿಶಾಲ, ವಿಸ್ತೃತ, ವಿಕಾಸ; ಇದು ಮೋದಿ ಅವರ ಲೋಕದೃಷ್ಟಿ. ಅದಕ್ಕೆ ತಕ್ಕಂತೆ ಮುಂಗಡಪತ್ರ ಮೂಡಿ ಬಂದಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

*ಬಜೆಟ್‌ʼನಲ್ಲಿ ಬೃಹತ್‌ ಕೈಗಾರಿಕೆ ಕ್ಷೇತ್ರಕ್ಕೆ ಭಾರೀ ಒತ್ತು*

:ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಭೂಮಿಯಲ್ಲಿನ ಅಪರೂಪದ ಅಯಸ್ಕಾಂತಗಳ (ರೇರ್‌ ಅರ್ಥ್‌ ಮೆಟಲ್ಸ್)‌ ಉತ್ಪಾದನೆ-ಬಳಕೆ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಉತ್ತೇಜನಕ್ಕೆ ದೊಡ್ಡ ಪ್ರಮಾಣದ ಘೋಷಣೆಗಳನ್ನು ಮಾಡಲಾಗಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಇವಿ ಬ್ಯಾಟರಿಗಳು ಮತ್ತು ಇವಿ ವಾಹನಗಳ ಚಲನಶೀಲತೆಯನ್ನು ಉತ್ತೇಜಿಸಲು ಬಜೆಟ್‌ ನಲ್ಲಿ ಒತ್ತು ನೀಡಲಾಗಿದ್ದು; ಬ್ಯಾಟರಿ ತಯಾರಿಕೆಗೆ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಮುಂದುವರಿಸಲಾಗಿದೆ. ಅಲ್ಲದೆ; ಬ್ಯಾಟರಿ ಉತ್ಪಾದನೆ ಮತ್ತು ಇವಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಕೆ ಮಾಡಲಾಗುವ ಬಂಡವಾಳ ಸರಕುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕ (ಬಿಸಿಡಿ) ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

Watch Video :;

ಸೌರ ಗಾಜಿನ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೋನೇಟ್ ಆಮದಿನ ಮೇಲೆ ಮೂಲ ಅಬಕಾರಿ ಸುಂಕ (BCD) ವಿನಾಯಿತಿ ನೀಡಲಾಗಿದೆ. ದೇಶೀಯ ಸೌರ ಉತ್ಪಾದನೆಯನ್ನು ಬಲಪಡಿಸಲು ಮತ್ತು ಇವಿ, ನವೀಕರಿಸಬಹುದಾದ ಪೂರೈಕೆ ಸರಪಳಿಗಳನ್ನು ಬೆಂಬಲಿಸಲು ಉತ್ತೇಜನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭೂಮಿಯಲ್ಲಿನ ಅಪರೂಪದ ಖನಿಜಗಳನ್ನು ಹೊರತೆಗೆದು ಬಳಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗಿದೆ. ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ರೇರ್‌ ಅರ್ಥ್‌ ಕಾರಿಡಾರ್‌ ಗಳನ್ನು ಸ್ಥಾಪಿಸುವ ಬಗ್ಗೆ ಬಜೆಟ್‌ ನಲ್ಲಿ ಘೋಷಣೆ ಮಾಡಲಾಗಿದೆ. ಅಪರೂಪದ ಭೂಮಿಯ ಶಾಶ್ವತ ಮ್ಯಾಗ್ನೆಟ್ (REPM) ಯೋಜನೆ ಅಡಿಯಲ್ಲಿ ಸಚಿವ ಸಂಪುಟವು ಅನುಮೋದಿಷಸಿರುವ ₹7,280 ಕೋಟಿ ವೆಚ್ಚದ ಯೋಜನೆ ಮುಂದುವರಿದ ಭಾಗವಾಗಿ ರೇರ್‌ ಅರ್ಥ್‌ ಕಾರಿಡಾರ್‌ʼಗಳು ತಲೆ ಎತ್ತಲಿವೆ ಎಂದು ಸಚಿವರು ಹೇಳಿದ್ದಾರೆ.

*ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ಒತ್ತು*

ಉಕ್ಕು ಸಚಿವಾಲಯಕ್ಕೆ ಸಂಬಂಧಿಸಿ ಉಕ್ಕು ವಲಯದ ಸುಸ್ಥಿರತೆಯನ್ನು ಉತ್ತೇಜಿಸುವುದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಬಜೆಟ್‌ ಒತ್ತು ನೀಡಿದೆ. ಉಕ್ಕು, ಸಿಮೆಂಟ್ ಮತ್ತು ಸಂಸ್ಕರಣಾಗಾರಗಳಿಂದ ಇಂಗಾಲದ ಹೊರಸೂಸುವಿಕೆ ವಲಯಗಳಿಗೆ ₹20,000 ಕೋಟಿಗಳ ಪ್ರಸ್ತಾವಿತ ಹೂಡಿಕೆಯೊಂದಿಗೆ ಇಂಗಾಲದ ನಿವಾರಣೆಗೆ ಒತ್ತು ಕೊಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಉಪಕ್ರಮವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸುತ್ತದೆ, ಅದೇ ಸಮಯದಲ್ಲಿ ಭಾರತದ ಪ್ರಮುಖ ಕೈಗಾರಿಕೆಗಳು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಪರಿಸರ ಜವಾಬ್ದಾರಿಯುತವಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

 

Leave a Reply

Your email address will not be published. Required fields are marked *