*ಕೊರೊನಾ ಲಸಿಕೆ ನೀಡಿದ ಕ್ಷಣ ಐತಿಹಾಸಿಕಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
*243 ಸ್ಥಳಗಳಲ್ಲಿ ಲಸಿಕೆ*
*24,300 ಆರೋಗ್ಯ ಸಿಬ್ಬಂದಿಗೆ ಮೊದಲ ದಿನ ಲಸಿಕೆ ನೀಡುವ ಗುರಿ*
*ಯಾರಿಗೂ ಅಡ್ಡ ಪರಿಣಾಮವಾಗಿಲ್ಲ*
ಬೆಂಗಳೂರು, ಜ16,- ಕೊರೊನಾ ಲಸಿಕೆ ನೀಡಿದ ಕ್ಷಣ ಐತಿಹಾಸಿಕವಾಗಿದ್ದು, ದೊಡ್ಡ ದಾಖಲೆಯಂತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು ಮೆಡಿಕಲ್ ಕಾಲೇಜಿನ ಪಿಎಂಎಸ್ ಎಸ್‍ವೈ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ, ಬಿಡದಿಯ ಶ್ರೀಮತಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡಲಾಯಿತು.
ನಂತರ ಮಾತನಾಡಿದ ಸಚಿವರು, ಇದು ಐತಿಹಾಸಿಕ ದಿನವಾಗಿದ್ದು, ದಾಖಲೆಯಂತಿದೆ. ಬೇರೆ ರೋಗಗಳಿಗೆ ಲಸಿಕೆ ಪಡೆಯಲು ವರ್ಷಗಳು ತಗುಲಿದೆ. ಆದರೆ ಹತ್ತೇ ತಿಂಗಳಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಮೊದಲು ಸಂಶೋಧಕರಿಗೆ, ಸಂಸ್ಥೆಗಳಿಗೆ ಭಾರತೀಯರು ಆಭಾರಿಯಾಗಿದ್ದಾರೆ. ಇವರಿಗೆ ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಜ್ಯದಲ್ಲಿ ಮಾರ್ಗದರ್ಶನ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಧನ್ಯವಾದಗಳು ಎಂದರು.
ರಾಜ್ಯದ 243 ಸ್ಥಳಗಳಲ್ಲಿ ಕೊರೊನಾ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಿದ್ದು, ಇವತ್ತು ಒಂದೇ ದಿನ 24,300 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಸ್ವಚ್ಛತಾ ಸಿಬ್ಬಂದಿ ನಾಗರತ್ನ, ತಾಂತ್ರಿಕ ಸಲಹಾ ಸಮಿತಿಯ 70 ವರ್ಷದ ವೈದ್ಯರು, ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುದರ್ಶನ್ ಬಲ್ಲಾಳ್ ಲಸಿಕೆ ಪಡೆದಿದ್ದಾರೆ. ಖ್ಯಾತ ವೈದ್ಯರು ಲಸಿಕೆ ಪಡೆಯುವ ಮೂಲಕ ಸಾರ್ವಜನಿಕರಲ್ಲಿರುವ ಅಂಜಿಕೆ ನಿವಾರಿಸಲಾಗುತ್ತಿದೆ. ಈ ಲಸಿಕೆ ಅತ್ಯಂತ ಸಮರ್ಪಕವಾಗಿರುವುದಕ್ಕೆ ವೈದ್ಯರು ಲಸಿಕೆ ಪಡೆದಿದ್ದಾರೆ ಎಂಬುದನ್ನು ಜನರು ತಿಳಿಯಬೇಕು ಎಂದರು.
ಸರ್ಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮಾಹಿತಿ ಮಾತ್ರ ಅಧಿಕೃತವಾಗಿದೆ. ಬೇರೆ ಕಡೆ ಪ್ರಕಟಿಸುವ ತಪ್ಪು ಮಾಹಿತಿಯನ್ನು ಜನರು ನಂಬಬಾರದು. ಅಡ್ಡ ಪರಿಣಾಮ ಉಂಟಾದರೆ ತಕ್ಷಣ ಸೂಕ್ತ ಚಿಕಿತ್ಸೆ ಲಭ್ಯವಿದೆ. ಕ್ಲಿನಿಕಲ್ ಟ್ರಯಲ್ ನಲ್ಲೇ 20-30 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗಿದೆ. ಆದ್ದರಿಂದ ಆತಂಕ ಬೇಕಿಲ್ಲ. ವಿದೇಶಗಳಲ್ಲೂ ಈ ಲಸಿಕೆಗೆ ಬೇಡಿಕೆಯಿದ್ದು, ಅತ್ಯಂತ ಕಡಿಮೆ ದರದ ಲಸಿಕೆಯಾಗಿದೆ. ಕೇವಲ 210 ರೂ. ನಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ವಿದೇಶಗಳಲ್ಲಿ 2-3 ಸಾವಿರ ರೂ. ದರವಿದೆ ಎಂದರು.
ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ, ಎರಡನೇ ಹಂತದಲ್ಲಿ ಕೋಮಾರ್ಬಿಡಿಟಿ ಇರುವವರಿಗೆ ಲಸಿಕೆ ನೀಡಲಾಗುವುದು ಎಂದರು.
*ರಾಜಕೀಯ ಬೇಡ*
*ವಿರೋಧ ಪಕ್ಷಗಳು ಲಸಿಕೆ ವಿಚಾರವನ್ನು ರಾಜಕೀಯ ವಿಚಾರ ಮಾಡಿರುವುದಕ್ಕೆ ವಿಷಾದವಾಗಿದೆ. ಪ್ರತಿಪಕ್ಷಗಳು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದು. ಈ ಲಸಿಕೆ ಪಡೆಯುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದರು. ಈಗ ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದರು.*
ಜಯನಗರ ಸಾರ್ವಜನಿಕ ಆಸ್ಪತ್ರೆ, ಸೇಂಟ್ ಜಾನ್ಸ್ , ಕೆ.ಆರ್.ಪುರ ಜನರಲ್ ಆಸ್ಪತ್ರೆಗಳಲ್ಲಿ ಸಚಿವರು ಲಸಿಕೆ ವಿತರಣೆ ಪ್ರಕ್ರಿಯೆಯ ಪರಿಶೀಲನೆ ನಡೆಸಿದರು.
*ಸಚಿವರು ಹೇಳಿದ ಇತರೆ ಅಂಶಗಳು*
ಲಸಿಕೆಯನ್ನು ಮೊದಲಿಗೆ ನಾನು ಕೂಡ ಪಡೆಯಬೇಕೆಂದಿದ್ದೆ. ಆದರೆ ಮೊದಲ ಹಂತದಲ್ಲಿ ಕೊರೊನಾ ಯೋಧರಿಗೆ ನೀಡಬೇಕೆಂದು ಪ್ರಧಾನಿಗಳು ಸೂಚಿಸಿದ್ದಾರೆ.
ಲಸಿಕೆ ವಿತರಣೆಗೆ ಇನ್ನಷ್ಟು ವ್ಯವಸ್ಥೆ ಮಾಡಲಾಗುವುದು. ಒಂದು ವಾರದಲ್ಲೇ ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಕಾಂಗ್ರೆಸ್ ನವರು ವಿಐಪಿ ಸಂಸ್ಕøತಿಯಿಂದ ಹೊರಬರುವುದಿಲ್ಲ. ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ.
ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಜನರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.