ಜನೌಷಧಿ ಸಪ್ತಾಹಕ್ಕೆ ಚಾಲನೆ: ದೇಶಾದ್ಯಂತ 1,000 ಆರೋಗ್ಯ ಶಿಬಿರ.
ಜನೌಷಧಿಯನ್ನೇ ಶಿಫಾರಸು ಮಾಡಿ – ವೈದ್ಯರಿಗೆ ಸದಾನಂದಗೌಡ ಕರೆ.
ಕಡಿಮೆ ದರದ ಜನೌಷಧಿಯಿಂದ ಜನರಿಗೆ 3500 ಕೋಟಿ ರೂ ಉಳಿತಾಯ.
ಕರ್ನಾಟಕದಲ್ಲಿ ದಾಖಲೆ ಮಾರಾಟ. ಜನಕ್ಕೆ 800 ಕೋಟಿ ರೂ ಉಳಿತಾಯ.
ಭಾನುವಾರ ಜನೌಷಧಿ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ.
ನವದೆಹಲಿ, ಮಾರ್ಚ್ 1: – ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು (ಪಿಎಂಬಿಜೆಪಿ) ರೂಪಿಸಲಾಗಿದ್ದು ವೈದ್ಯರು ಜನೌಷಧಿಯನ್ನೇ ಶಿಫಾರಸು ಮಾಡಿ ಔಷಧ ಚೀಟಿ ಬರೆದುಕೊಡುವಂತೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಕರನೀಡಿದ್ದಾರೆ.
ಇಂದಿನಿಂದ ದೇಶಾದ್ಯಂತ ಆರಂಭಗೊಂಡ ಜನೌಷಧಿ ಸಪ್ತಾಹದ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿದ ಸಚಿವರು ಜನೌಷಧಿಯನ್ನೇ ಶಿಫಾರಸು ಮಾಡುವುದರಿಂದ ಜನಸಾಮಾನ್ಯರಿಗೆ ದೊಡ್ಡಪ್ರಮಾಣದಲ್ಲಿ ಹಣ ಉಳಿತಾಯವಾಗಲಿದೆ ಎಂದರು.
(ರಾಸಾಯನಿಕ ಇಲಾಖೆ ಅಧಿನದ ಬಿಪಿಪಿಐ ಸಂಸ್ಥೆಯು ಪಿಎಂಬಿಜೆಪಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ದೇಶದ 734 ಜಿಲ್ಲೆಗಳಲ್ಲಿ ಈಗಾಗಲೇ 7500ಕ್ಕಿಂತ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಜನೌಷಧಿ ಮಳಿಗೆಗಳ ಮೂಲಕ ಸದ್ಯ 745 ನಮೂನೆ ಔಷಧಗಳು ಹಾಗೂ 117 ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಕಂಪನಿಗಳ ಬ್ರಾಂಡನಲ್ಲಿ ಔಷಧವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಜನೌಷಧ ಅಂಗಡಿಗಳಲ್ಲಿ ಮೂಲ ರಾಸಾಯನಿಕದ ಹೆಸರಿನಲ್ಲಿಯೇ ಔಷಧ ಮಾರಾಟ ಮಾಡಲಾಗುತ್ತಿದೆ. ಜನೌಷಧಿಯ ದರ ಶೇಕಡಾ 10ರಿಂದ ಶೇಕಡಾ 90ರಷ್ಟು ಕಡಿಮೆಯಾಗಿದೆ. “ಜನೌಷಧಿ ಸಪ್ತಾಹದ” ಅಂಗವಾಗಿ ದೇಶಾದ್ಯಂತ ಇಂದು 1,000 ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ ಸೇರಿದಂತೆ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಒಂದು ವಾರಕಾಲ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊನೆಯದಿನ ಅಂದರೆ ಮಾರ್ಚ್ 7ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜನೌಷಧಿ ಅಂಗಡಿ ಮಾಲಿಕರು ಹಾಗೂ ಫಲಾನುಭವಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ದೆಹಲಿಯಲ್ಲಿ ಅಂದು ಸಚಿವ ಸದಾನಂದ ಗೌಡರು ಜನೌಷಧಿ ವಲಯದ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ).
ಜನೌಷಧಿಯ ದರ ಕಡಿಮೆ ಎಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಔಷಧ ಗುಣಮಟ್ಟದ ಎಲ್ಲ ಮಾನದಂಡಗಳೂ ಜನೌಷಧಗಳಿಗೆ ಅನ್ವಯವಾಗುತ್ತದೆ. ಕಳೆದ ಸಾಲಿನಲ್ಲಿ (2019-20) 433.6 ಕೋಟಿ ರೂಪಾಯಿ ಜನೌಷಧ ಮಾರಾಟ ಮಾಡಲಾಗಿತ್ತು. ಇದರಿಂದ ಜನರಿಗೆ ಸುಮಾರು 2500 ಕೋಟಿ ರೂಪಾಯಿ ಉಳಿತಾಯವಾಗಿತ್ತು. ಪ್ರಸಕ್ತ ಸಾಲಿನಲ್ಲಿ ನಿನ್ನೆವರೆಗೆ 586.5 ಕೋಟಿ ರೂ ಮೌಲ್ಯದ (ಎಂಆರ್ಪಿ) ಜನೌಷಧ ಮಾರಾಟವಾಗಿದೆ. ಇದರಿಂದ ಜನರಿಗೆ ಕನಿಷ್ಠವೆಂದರೂ 3500 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.
ಜನೌಷಧಿ ಅಂಗಡಿಗಳ ಮೂಲಕ ಮಹಿಳೆಯರ ಅನುಕೂಲಕ್ಕಾಗಿ ಕೇವಲ ಒಂದು ರೂಪಾಯಿಗೆ ‘ಸುವಿಧಾ’ ಹೆಸರಿನ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ (ಬ್ರಾಂಡೆಡ್ ಸ್ಯಾನಿಟರಿ ಪ್ಯಾಡ್ ಬೆಲೆ 4ರಿಂದ 5 ರೂಪಾಯಿ). ಈ ವರ್ಷ 10.76 ಕೋಟಿ ಸುವಿಧಾ ಸ್ಯಾನಿಟರಿ ಪ್ಯಾಡ್ಗಳನ್ನು ಮಾರಾಟ ಮಾಡಲಾಗಿದೆ. ಕರ್ನಾಟಕದಲ್ಲಿ 92.8 ಲಕ್ಷ ಸುವಿಧಾ ಪ್ಯಾಡ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಸದ್ಯ 865 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನೌಷಧಿ ಮಾರಾಟ ಕೂಡಾ ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿ 2020-21 ಸಾಲಿಗಾಗಿ (ಈ ತಿಂಗಳು ಮಾರ್ಚ್ ಗೆ ಕೊನೆಗೊಳ್ಳುವ) 125 ಕೋಟಿ ರೂಪಾಯಿ ಮಾರಾಟದ ಗುರಿಯನ್ನು ನೀಡಲಾಗಿತ್ತು. ಆದರೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಅಂದರೆ ಫೆಬ್ರುವರಿ ಕೊನೆತನಕ 131 ಕೋಟಿ ರೂಪಾಯಿ ಜನೌಷಧಿ ಮಾರಾಟವಾಗಿದೆ. ಇದರಿಂದ ರಾಜ್ಯದ ಜನರಿಗೆ ಸುಮಾರು 800 ಕೋಟಿ ರೂಪಾಯಿ ಉಳಿತಾಯವಾಗಿದೆ. ರಾಜ್ಯದಲ್ಲಿ 2018-19ರಲ್ಲಿ 68.3 ಕೋಟಿ ರೂ ಹಾಗೂ 2019-20ರಲ್ಲಿ 94.2 ಕೋಟಿ ರೂ ಮೌಲ್ಯದ ಜನೌಷಧಿ ಮಾರಾಟವಾಗಿತ್ತು ಎಂದ ಸಚಿವರು ಕೋವಿಡ್ ಸಂದರ್ಭದಲ್ಲಿ ಕೂಡಾ ದಾಖಲೆ ವಹಿವಾಟು ನಡೆಸಿದ ಜನೌಷಧಿ ಮಾರಾಟಗಾರರು ಹಾಗೂ ಬಿಪಿಪಿಐ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.