*ಸಕ್ರಿಯ ಪ್ರಕರಣ ಗಮನಿಸಿ ಕೇಂದ್ರದಿಂದ ರಾಜ್ಯಗಳಿಗೆ ವಿವಿಧ ವೈದ್ಯಕೀಯ ಸೌಕರ್ಯ
*ಕೋವಿಡ್ ನಿಯಂತ್ರಣಕ್ಕೆ ಔಷಧಿ, ಆಮ್ಲಜನಕದ ಕೊರತೆ ಇಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
ಬೆಂಗಳೂರು: ರೆಮಿಡಿಸಿವಿರ್, ಆಮ್ಲಜನಕ ಸರಬರಾಜು ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಕೇಂದ್ರ ಸರಕಾರವು ಸಮರೋಪಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಕ್ರಿಯ ಕೋವಿಡ್ ಪ್ರಕರಣದ ಆಧಾರದಲ್ಲಿ ರಾಜ್ಯಗಳಿಗೆ ಔಷಧಿ, ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ ಅವರು ಇಂದು ತಿಳಿಸಿದರು.
ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಮಿಡಿಸಿವಿರ್ ಇಂಜೆಕ್ಷನ್ ಬಗ್ಗೆ ಪ್ರಾರಂಭದಲ್ಲಿ ದೊಡ್ಡ ಗೋಲ್‍ಮಾಲ್ ನಡೆದಿತ್ತು. ಅಮೆರಿಕ ಕಂಪೆನಿಯು ಈ ಔಷಧಿಯ ಪೇಟೆಂಟ್ ಪಡೆದಿದೆ.. ಭಾರತದಲ್ಲಿ ಸಿಪ್ಲಾ ಸೇರಿ ಏಳು ಕಂಪೆನಿಗಳಿಗೆ ಅದರ ಉತ್ಪಾದನೆಗೆ ಅನುಮತಿ ಸಿಕ್ಕಿದೆ. ಇದನ್ನು ಮೂರು ತಿಂಗಳೊಳಗೆ ಬಳಸಬೇಕಾಗುತ್ತದೆ. ಮೊದಲನೇ ಅಲೆಯ ವೇಳೆ ಇದರ ಉತ್ಪಾದನೆ ಚೆನ್ನಾಗಿತ್ತು. ಕೋವಿಡ್ ರೋಗಿಗಳ ಪ್ರಮಾಣ ಕಡಿಮೆ ಆದಾಗ ಉತ್ಪಾದನೆಯೂ ಕಡಿಮೆ ಆಯಿತು. ರಫ್ತು ಪ್ರಮಾಣವೂ ಹೆಚ್ಚಿತು. ಫೆಬ್ರವರಿ ಕೊನೆಯಲ್ಲಿ ಕೇವಲ 23 ಲಕ್ಷ ರೆಮಿಡಿಸಿವಿರ್ ಉತ್ಪಾದನೆ ಆಗುತ್ತಿತ್ತು. ಕಂಪೆನಿಗಳ ಜೊತೆ ಕೇಂದ್ರ ಸರಕಾರ ಮಾತುಕತೆ ನಡೆಸಿದ ಪರಿಣಾಮವಾಗಿ ಏಪ್ರಿಲ್ 12ಕ್ಕೆ ಅದು 35 ಲಕ್ಷಕ್ಕೆ ತಲುಪಿತ್ತು. ಈಗ ಮೇ 4ರ ವೇಳೆಗೆ 1.05 ಕೋಟಿ ರೆಮಿಡಿಸಿವಿರ್ ಉತ್ಪಾದನೆ ನಡೆಯುತ್ತಿದೆ ಎಂದು ವಿವರಿಸಿದರು.
58 ಪ್ರದೇಶಗಳಲ್ಲಿ ರೆಮಿಡಿಸಿವಿರ್ ಉತ್ಪಾದನೆಗೆ ಅವಕಾಶ ಕೊಡಲಾಯಿತು. ರಫ್ತು ಮಾಡುವುದನ್ನೂ ರದ್ದು ಮಾಡಲಾಯಿತು. ಆಮದು ಸುಂಕವನ್ನೂ ರದ್ದು ಮಾಡಲಾಯಿತು. 5 ಸಾವಿರಕ್ಕೂ ಹೆಚ್ಚು ಇದ್ದ ದರ ಕಡಿಮೆ ಮಾಡಿದ್ದು, ರೂ. 3,400ಕ್ಕೆ ಮಿತಿ ಹೇರಲಾಯಿತು. ಶೇ 80 ಉತ್ಪಾದನೆಯನ್ನು ನಾವೇ ಸರಬರಾಜು ಮಾಡುತ್ತಿದ್ದೇವೆ. ಇಂಥ ದಿಟ್ಟ ಹೆಜ್ಜೆಯಿಂದ ದೇಶದ ಎಲ್ಲೂ ರೆಮಿಡಿಸಿವಿರ್ ಕೊರತೆ ಇಲ್ಲ. ಕರ್ನಾಟಕಕ್ಕೆ 5.75 ಲಕ್ಷ ವಿಯಾಲ್ ಸರಬರಾಜಾಗುತ್ತಿದೆ ಎಂದು ತಿಳಿಸಿದರು. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಮತ್ತು ರಾಜ್ಯದ ಡ್ರಗ್ ಕಂಟ್ರೋಲರ್‍ಗಳು ಕಾಳಸಂತೆ ಮೂಲಕ ಮಾರಾಟ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದು, ದಾಳಿ ಮಾಡಲಾಗುತ್ತಿದೆ ಎಂದರು. ಈ ಔಷಧಿಯನ್ನು ಅಗತ್ಯ ವಸ್ತುಗಳ ಕಾಯಿದೆಯಡಿ ತರಲಾಗಿದೆ ಎಂದರು.
34 ಸಾವಿರ ರೂಪಾಯಿ ದರದ ಟೊಸ್ಲಿಜುಮಾಬ್ ಇನ್ನೊಂದು ಪ್ರಮುಖ ಔಷಧಿಯಾಗಿದೆ. ಕಂಪೆನಿಯು 10 ಸಾವಿರ ವಿಯಾಲ್‍ಗಳನ್ನು ದೇಣಿಗೆ ಕೊಟ್ಟಿದ್ದು, ಅದನ್ನು ಅತ್ಯಂತ ಅವಶ್ಯವಿರುವ ಕಡೆಗಳಿಗೆ ಸರಬರಾಜು ಮಾಡಲಾಗಿದೆ. ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಬಳಸುವ ಆಂಪೊಟೊರಿಸಿಯನ್ 40 ಸಾವಿರ ವಿಯಾಲ್ ಸಿದ್ಧವಿದೆ. ರಾಜ್ಯಕ್ಕೆ 1,050 ವಿಯಾಲ್ ನೀಡಲಾಗಿದೆ. ಇನ್ನೂ ಬೇಕಾದಷ್ಟನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ವಿವಿಧ ಔಷಧಿಗಳಿಗೆ ಬೇಕಿರುವ ಕಚ್ಚಾವಸ್ತುಗಳೂ ನಮ್ಮಲ್ಲಿ ಲಭ್ಯವಿದೆ. ಐವರ್‍ಮೆಕ್ಟಾನ್ ಇಂಜೆಕ್ಷನ್‍ಗೆ ದೇಶದಲ್ಲೆಡೆ ಹೆಚ್ಚಿನ ಬೇಡಿಕೆ ಇದ್ದು, ಇದೊಂದು ಸವಾಲಿನ ವಿಚಾರ. ಇದರ ಉತ್ಪಾದನೆ ಸಂಬಂಧ ಸಭೆ ನಡೆಸಲಾಗಿದೆ ಎಂದರು. ಔಷಧ ಕೊರತೆ ಆಗದಂತೆ ನೋಡಿಕೊಳ್ಳಲು ಪ್ರಧಾನಿಯವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಆಮ್ಲಜನಕ ಕೊರತೆಯಿಂದ ಅಲ್ಲಿ ಇಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿವೆ. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಅಂತಃಕರಣ ಸಾಕ್ಷಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಕಾರ್ಯಗಳೇ ಮಾತನಾಡಬೇಕೆಂಬುದು ನನ್ನ ಅಭಿಲಾಷೆ. ಕೇಂದ್ರ ಸರಕಾರದ ಕ್ರಮಗಳ ಮೂಲಕ ಆಮ್ಲಜನಕ ಉತ್ಪಾದನೆ, ಸರಬರಾಜನ್ನು 3 ಪಟ್ಟಿನಷ್ಟು ಹೆಚ್ಚಿಸಲಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ 300 ಮೆಟ್ರಿಕ್ ಟನ್ ಆರಂಭದಲ್ಲಿ ಇದ್ದ ಆಮ್ಲಜನಕ ಪೂರೈಕೆ ಇದೀಗ 1,015 ಮೆಟ್ರಿಕ್ ಟನ್‍ಗೆ ಏರಿದೆ ಎಂದು ತಿಳಿಸಿದರು.
ಯಾದಗಿರಿ ಮತ್ತು ಕೋಲಾರ ಜಿಲ್ಲಾ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕ ಮಂಜೂರಾಗಿದೆ. ದೇಶದ ವಿವಿಧ ಕಡೆಗಳಿಗೆ ರೈಲಿನ ಮೂಲಕ ಆಮ್ಲಜನಕ ಕಳುಹಿಸಲಾಗುತ್ತಿದೆ. ಡಿಆರ್‍ಡಿಒವು ಕೋವಿಡ್ ವಿರುದ್ಧದ ಔಷಧಿಯನ್ನು ಅಭಿವೃದ್ಧಿ ಪಡಿಸಿದ್ದು ಇದನ್ನು ಡಿಸಿಜಿಐ ಅನುಮೋದಿಸಿದೆ. ಕೇಂದ್ರ ಸರಕಾರವು ಅತ್ಯಂತ ವೇಗವಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದರು.
ಕೋವಿಡ್ ಲಸಿಕೆಯೂ ದೊಡ್ಡ ಸವಾಲಾಗಿದೆ. ಇಂದಿನವರೆಗೆ ಸುಮಾರು 17.22 ಕೋಟಿ ವ್ಯಾಕ್ಸಿನ್ ಬಳಸಲಾಗಿದೆ. ಕರ್ನಾಟಕದಲ್ಲಿ 5,92,202 ಸಕ್ರಿಯ ಪ್ರಕರಣಗಳಿವೆ. 0.99 ಶೇ ಮರಣ ಪ್ರಮಾಣ ಇಲ್ಲಿದೆ. 2,913 ವೆಂಟಿಲೇಟರ್ ಸರಬರಾಜಾಗಿದೆ. 1,09,28,270 ವ್ಯಾಕ್ಸಿನ್ ಡೋಸ್ ಸರಬರಾಜಾಗಿದ್ದು, 1,08,30,123 ಬಳಸಲಾಗಿದೆ. ಇನ್ನೂ 98,147 ಡೋಸ್ ಸ್ಟಾಕ್ ಇದೆ ಎಂದರು. ಇದಲ್ಲದೆ ತಕ್ಷಣವೇ 75 ಸಾವಿರ ಡೋಸ್ ಶೀಘ್ರವೇ ಬರಲಿದೆ ಎಂದರು.
ಏಪ್ರಿಲ್ ವರೆಗೆ ಶೇ 51- 52 ಜನರು ಮಾತ್ರ ಲಸಿಕೆ ಪಡೆಯುತ್ತಿದ್ದರು. ಉತ್ಪಾದನೆ ಹೆಚ್ಚಳ- ಕಡಿಮೆ ಬೇಡಿಕೆ ಕಾರಣ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡುವ ನಿರ್ಧಾರ ಮಾಡಲಾಯಿತು. ಕೋವಿಡ್ ಎರಡನೇ ಅಲೆಯ ಕಾರಣ ಇದೇವೇಳೆ ಬೇಡಿಕೆಯೂ ಹೆಚ್ಚಾಯಿತು. ಈ ತಿಂಗಳಲ್ಲಿ ಉತ್ಪಾದನೆಯೂ ಹೆಚ್ಚಾಗಲಿದ್ದು, ಒಂದು ವಾರದೊಳಗೆ ಇನ್ನಷ್ಟು ವ್ಯಾಕ್ಸಿನ್ ಬರಲಿದೆ. ಆದರೆ, ಮೊದಲು 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಅನಂತರ 18 ವರ್ಷದಿಂದ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು. ಸ್ಫುಟ್ನಿಕ್ ಕಂಪೆನಿ 5 ಕೋಟಿ ವ್ಯಾಕ್ಸಿನ್ ಆಮದು ಮಾಡಲು ಒಪ್ಪಿದೆ. 75 ಸಾವಿರ ವ್ಯಾಕ್ಸಿನ್ ಬಂದಿದೆ ಎಂದರು.
ಪ್ರತಿಭಟನೆಯಿಂದ ಕೊರೊನಾ ನಿರ್ಮೂಲನೆ ಆಗುವುದಾದರೆ ಅವರು ಬೀದಿಯಲ್ಲೇ ಇರಲಿ. ಯಾವುದೇ ಮೂಲೆಯಿಂದ ಉತ್ತಮ ಸಲಹೆ ಇದ್ದರೆ ಅದನ್ನು ಸ್ವಾಗತಿಸುವುದಾಗಿ ಪ್ರಧಾನಿಯವರು ಹೇಳಿದ್ದಾರೆ. ಆತ್ಮಸ್ಥೈರ್ಯ ತುಂಬಬೇಕಾದ ವಿರೋಧ ಪಕ್ಷದವರು ಈ ರೀತಿ ನಡೆದುಕೊಳ್ಳುವ ಬದಲು ಮುಖ್ಯಮಂತ್ರಿಗಳ ಬಳಿಗೆ ತೆರಳಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೋರಿದರು.
ಎಲ್ಲಾ ರಾಜ್ಯ ಸರಕಾರಗಳು, ಮುಖ್ಯಮಂತ್ರಿಗಳು, ತಜ್ಞರ ಜೊತೆ ಸಮಾಲೋಚನೆ ಬಳಿಕ ಎರಡೂ ಅಲೆಗಳ ಸಂದರ್ಭದಲ್ಲಿ ಕೇಂದ್ರ ಸರಕಾರವು ಅದರ ನಿಯಂತ್ರಣಕ್ಕೆ ನಿರಂತರವಾಗಿ ಕಾರ್ಯ ಪ್ರವೃತ್ತವಾಗಿದೆ. ಅತ್ಯಂತ ವೇಗವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ವಿಶ್ವದ ಇತರ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯದ ಪರಿಣಾಮವಾಗಿ ಹಲವು ರಾಷ್ಟ್ರಗಳು ನಮ್ಮ ನೆರವಿಗೆ ಬಂದಿವೆ. ವ್ಯಾಕ್ಸಿನ್ ವಿದೇಶಕ್ಕೆ ರವಾನಿಸಿದ್ದಕ್ಕೆ ಪ್ರತಿಫಲವಾಗಿ ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ನಮ್ಮ ನೆರವಿಗೆ ಧಾವಿಸಿವೆ ಎಂದರು.
ಕೋವಿಡ್ ಸಂಬಂಧ ಪಿಎಂ ಕೇರ್ ನಿಧಿಯಿಂದ ಮೇ 12ರವರೆಗೆ ಕರ್ನಾಟಕ ರಾಜ್ಯಕ್ಕೆ 303.69 ಕೋಟಿ ಬಿಡುಗಡೆಯಾಗಿದೆ ಎಂದು ಶ್ರೀ ಡಿ.ವಿ.ಸದಾನಂದ ಗೌಡ ಅವರು ತಿಳಿಸಿದರು.
ಡಿಎಪಿ ಮತ್ತು ಎನ್‍ಪಿಕೆ ಅಂತರÀರಾಷ್ಟ್ರೀಯ ಮಾರುಕಟ್ಟೆ ದರದಲ್ಲಿ ಶೇ 122ರಷ್ಟು ಏರಿಕೆ ಕಾರಣದಿಂದ ರಸಗೊಬ್ಬರದ ದರ ಏರಿಕೆ ಆಗಿದೆ. ಆದರೆ ನಮ್ಮ ಬಂದರುಗಳಲ್ಲಿ ಹಳೆ ದರಕ್ಕೆ ತರಿಸಿದ ಕಚ್ಚಾವಸ್ತು ಲಭ್ಯವಿತ್ತು. ನಾನು ಮತ್ತು ನನ್ನ ಸಚಿವಾಲಯದವರು ರಸಗೊಬ್ಬರ ಉತ್ಪಾದಕರ ಜೊತೆ ಮಾತುಕತೆ ನಡೆಸಿದ್ದು, ಹಳೆ ಸ್ಟಾಕ್ ಮುಗಿಯುವ ವರೆಗೆ ಹಳೆ ದರದಲ್ಲೇ ಮಾರಾಟ ಮಾಡಲು ವಿನಂತಿಸಲಾಗಿದೆ. ಕೆಲವರು ದರ ಹೆಚ್ಚಿಸಿದ್ದಾರೆ. ಇದರ ಬಗ್ಗೆ ರೈತರಿಗೆ ಬಾಧಕ ಆಗದಂತೆ ದರ ಇಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.
ವಿರೋಧ ಪಕ್ಷಗಳ ಮನಸ್ಥಿತಿಗೆ ಸಿ.ಟಿ.ರವಿ ಆಕ್ಷೇಪ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದÀ ಶ್ರೀ ಸಿ.ಟಿ.ರವಿ ಅವರು ಮಾತನಾಡಿ, ಶತಮಾನದ ಬಳಿಕ ಈ ಸಾಂಕ್ರಾಮಿಕ ರೋಗ ವಿಶ್ವವನ್ನು ಬಾಧಿಸುತ್ತಿದೆ. ಸ್ವಾತಂತ್ರ್ಯಾನಂತರ ಇಂಥ ಸಾಂಕ್ರಾಮಿಕವನ್ನು ಎದುರಿಸುವ ಮೊದಲ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಎಂದರು.
ವೈರಸ್‍ನ ರೂಪಾಂತರ, ಅದರ ಹರಡುವಿಕೆಯ ವೇಗವನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ. ಇದರಲ್ಲಿ ಶೇ 100 ನಿಖರತೆ ಸಾಧ್ಯವಾಗಿಲ್ಲ. ಅಮೆರಿಕದಲ್ಲಿ ಸುಮಾರು 33.26 ಕೋಟಿ ಜನಸಂಖ್ಯೆ ಇದ್ದು, 3.35 ಕೋಟಿ ಒಟ್ಟು ಸೋಂಕಿತರು ಇದ್ದಾರೆ. ಈವರೆಗೆ 5.97 ಲಕ್ಷ ಸಾವು ಸಂಭವಿಸಿದೆ. ಬ್ರೆಜಿಲ್‍ನಲ್ಲಿ ಸುಮಾರು 21.38 ಕೋಟಿ ಜನಸಂಖ್ಯೆ ಇದ್ದು, 1.53 ಕೋಟಿ ಸೋಂಕಿತರು, 4.28 ಲಕ್ಷ ಸಾವು ಸಂಭವಿಸಿದೆ. ಫ್ರಾನ್ಸ್‍ನಲ್ಲಿ ಸುಮಾರು 6.53 ಕೋಟಿ ಜನಸಂಖ್ಯೆ ಇದ್ದು, 58.21 ಲಕ್ಷ ಸೋಂಕಿತರು, 1.07 ಲಕ್ಷ ಮರಣ ಆಗಿದೆ. ಇದು ಜಗತ್ತಿನ ಸ್ಥಿತಿ ಎಂದು ತಿಳಿಸಿದರು.
ಭಾರತದ ಒಟ್ಟು ಜನಸಂಖ್ಯೆ 139 ಕೋಟಿ ಇದೆ. ಸೋಂಕಿತರ ಸಂಖ್ಯೆ 2.37 ಕೋಟಿ ಇದೆ. ಮರಣ ಸಂಖ್ಯೆ 2.54 ಲಕ್ಷ ಇದೆ. ಜಗತ್ತಿನ ಅಮೆರಿಕ, ಬ್ರೆಜಿಲ್, ಫ್ರಾನ್ಸ್ ದೇಶಗಳÀ ಜನಸಂಖ್ಯೆ, ಜನಸಾಂದ್ರತೆ, ಸೋಂಕಿತರು ಮತ್ತು ಸಾವಿಗೆ ಇಲ್ಲಿನ ಅಂಕಿಅಂಶವನ್ನು ಹೋಲಿಸಿದರೆ ಇಲ್ಲಿನದು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರಧಾನಿಯವರನ್ನು ಸಾವಿನ ಸರದಾರ, ಯಮಸ್ವರೂಪಿಯಾಗಿ ತೋರಿಸಿ ವಿಕೃತಾನಂದ ಪಡೆಯುತ್ತಿರುವ ವಿರೋಧ ಪಕ್ಷದ ಮುಖಂಡರು ಇದನ್ನು ಮನನ ಮಾಡಬೇಕು. ಇವರು ಸಾಮಾಜಿಕ ಜಾಲತಾಣದಲ್ಲಿ ಎಷ್ಟು ವಿಕೃತತೆ ಮೆರೆಯುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.
ಈ ವಿರೋಧ ಪಕ್ಷದ ಅಧಿನಾಯಕಿಯ ತವರು ದೇಶದಲ್ಲಿ ಇರುವ ಸೋಂಕಿತರು ಮತ್ತು ಆಗಿರುವ ಗರಿಷ್ಠ ಸಾವಿಗೆ ನೀವು ಯಾರನ್ನು ಹೊಣೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲಿ, ಅಮೆರಿಕ, ಯುರೋಪ್ ದೇಶಗಳಿಗೆ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಲ್ಲ. ಆದ್ದರಿಂದ ಈ ಸಾವುಗಳಿಗೆ ಚೈನೀಸ್ ವೈರಸ್ಸನ್ನಷ್ಟೇ ಹೊಣೆ ಮಾಡಬೇಕಷ್ಟೇ ಎಂದರು.
ಒಂದೇ ಒಂದು ಸಾವು ಸಂಭವಿಸಿದರೂ ಅದು ಅತ್ಯಂತ ನೋವಿನ ಸಂಗತಿ. ಅದರಲ್ಲಿ ನಾನು ವಿಕೃತಾನಂದ ಪಡೆದಿಲ್ಲ. ಅದರಲ್ಲಿ ರಾಜಕೀಯ ಮಾಡಿ ವಿಕೃತತೆ ಮೆರೆಯುವ ಪ್ರವೃತ್ತಿ ಎಷ್ಟು ನಿಕೃಷ್ಟವಾದುದು ಎಂದು ಅವರು ಕೇಳಿದರು.
ಏನೂ ತಯಾರಿ ಮಾಡಿಲ್ಲ ಎಂಬ ವಿರೋಧ ಪಕ್ಷದವರ ಟೀಕೆಗೆ ಉತ್ತರಿಸಿದ ಅವರು, 2020 ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ವೈರಾಲಜಿ ಟೆಸ್ಟಿಂಗ್ ಲ್ಯಾಬ್ ಕೇವಲ 2 ಇತ್ತು. ಈಗ ಅದನ್ನು 194ಕ್ಕೆ ಏರಿಸಲಾಗಿದೆ. 2020 ಮಾರ್ಚ್ 11ರಂದು 1,970 ಆಕ್ಸಿಜನ್ ಬೆಡ್‍ಗಳಿದ್ದವು. ಇವತ್ತು ಅದು 23,971ಕ್ಕೆ ಹೆಚ್ಚಿಸಲಾಗಿದೆ. ಆಗ 444 ಐಸಿಯು ಬೆಡ್ ಇದ್ದವು. ಈಗ ಅದು 1145ಕ್ಕೆ ಏರಿದೆ. ವೆಂಟಿಲೇಟರ್ 610 ಇದ್ದುದನ್ನು 6,553ಕ್ಕೆ ಹೆಚ್ಚಳವಾಗಿದೆ. ಏನೂ ಮಾಡಿಲ್ಲ ಎನ್ನುವವರು ಇದನ್ನು ಗಮನಿಸಬೇಕು ಎಂದು ಅವರು ಆಗ್ರಹಿಸಿದರು. ಪೂರ್ವಸಿದ್ಧತೆ ಮಾಡದೇ ಇದ್ದರೆ ಚಾಮರಾಜನಗರದಲ್ಲಿ ಸತ್ತ ಮಾದರಿಯಲ್ಲೇ ಇತರ ಜಿಲ್ಲೆಗಳಲ್ಲೂ ಸಾವು ಸಂಭವಿಸುತ್ತಿತ್ತು. ಸಾವಿನ ಪ್ರಮಾಣ ಶೇ 10 ಅಥವಾ ಇನ್ನೂ ಹೆಚ್ಚಾಗುತ್ತಿತ್ತು ಎಂದು ವಿವರಿಸಿದರು.
ಕಾಂಗ್ರೆಸ್ ಮುಖಂಡರಾದ ಶಶಿ ತರೂರ್, ಆನಂದ ಶರ್ಮ, ಜೈರಾಂ ರಮೇಶ್, ಚತ್ತೀಸ್‍ಗಡ ಮುಖ್ಯಮಂತ್ರಿ ಭೂಪೇಶ್ ಭಗೇಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತಿತರರು ಕೋವಿಡ್ ವ್ಯಾಕ್ಸಿನ್ ಕುರಿತು ಬಗೆಬಗೆಯ ಆರೋಪ ಮಾಡಿದ್ದರು. ಇದೆಲ್ಲದರ ಪರಿಣಾಮವಾಗಿ ಜನ ವ್ಯಾಕ್ಸಿನ್ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಅಪಪ್ರಚಾರವೂ ಮುಂದುವರಿಯಿತು; ಅಪನಂಬಿಕೆಯನ್ನೂ ಹುಟ್ಟುಹಾಕಿದರು ಎಂದು ವಿವರಿಸಿದರು.
ಬೇಡಿಕೆ ಕುಸಿದ ಕಾರಣ ದೇಶಾದ್ಯಂತ 45 ಲಕ್ಷ ವ್ಯಾಕ್ಸಿನ್ ಕಾಲಾವಧಿ ಲ್ಯಾಪ್ಸ್ ಆಗುವಂತಾಯಿತು ಎಂದರು. ಮೇ ಅಂತ್ಯದೊಳಗೆ ರಾಜ್ಯಕ್ಕೆ 2.75 ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ 10 ಲಕ್ಷ ವ್ಯಾಕ್ಸಿನ್ ಲಭಿಸಲಿದೆ. ಜೂನ್ ವೇಳೆಗೆ ತಿಂಗಳಿಗೆ 15 ಕೋಟಿ ಲಸಿಕೆ ದೇಶಕ್ಕೆ ಲಭಿಸಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಮುಂದಾಲೋಚನೆ ಮಾಡಿ ಫ್ರಂಟ್‍ಲೈನ್ ವರ್ಕರ್ಸ್‍ಗಳಿಗೆ ಆದ್ಯತೆ ಕೊಡದಿದ್ದರೆ ಇಂದು ವೈದ್ಯರ, ದಾದಿಯರ, ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಕೊರತೆ ಕಾಡುತ್ತಿತ್ತು ಎಂದರು.
ಕೇಂದ್ರ ಸರಕಾರವು 45 ಸಾವಿರ ವೆಂಟಿಲೇಟರ್‍ಗಳನ್ನು ಕೋವಿಡ್ ಕಾರಣಕ್ಕಾಗಿ ವಿತರಿಸಿತು. ಈ ಪೈಕಿ 2,300 ವೆಂಟಿಲೇಟರ್‍ಗಳನ್ನು ಕರ್ನಾಟಕಕ್ಕೆ ನೀಡಲಾಗಿದೆ. ಪಿಎಂ ಕೇರ್ಸ್ ಸಹಯೋಗದಲ್ಲಿ ಎಲ್ಲಾ ಜಿಲ್ಲೆಗಳಿಗೆ ಆಮ್ಲಜನಕ ಉತ್ಪಾದನಾ ಘಟಕ ಮಂಜೂರು ಮಾಡಲಾಗಿದೆ. ಮೊದಲ ಹಂತದಲ್ಲಿ 16 ಕಡೆಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ. ಇತರ ಕಡೆಗಳಲ್ಲೂ ಅದು ಶೀಘ್ರವೇ ಕಾರ್ಯ ಆರಂಭಿಸಲಿದೆ ಎಂದರು.
ವಿರೋಧ ಪಕ್ಷದವರು ಈ ಸಾಂಕ್ರಾಮಿಕದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಇದನ್ನು ಎದುರಿಸಲು ಸರಕಾರಕ್ಕೆ ಸಹಕಾರ ಕೊಡಬೇಕು ಎಂದು ಕಿವಿಮಾತು ಹೇಳಿದರು. ಕೋವಿಡ್ ಸಂಕಷ್ಟಕ್ಕೆ ಒಂದು ಪಕ್ಷದವರು ಅಥವಾ ಒಂದು ಜಾತಿಯವರಷ್ಟೇ ಸೀಮಿತರಾಗಿಲ್ಲ. ಒಂದೇ ದೇಶ ಅಥವಾ ಒಂದೇ ರಾಜ್ಯಕ್ಕೆ ಅದು ಸೀಮಿತವಲ್ಲ. ರಾಜಕಾರಣ ಮಾಡಿ ಪ್ರಧಾನಿಯವರನ್ನು ಅಪಮಾನಿಸುವ ಕ್ರಮ ಸರಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.