images 1

ಮೇ 11ರಿಂದ ಕನ್ನಡ ಭಾಷೆಯಲ್ಲಿ ‘ಮಾಲ್ಗುಡಿ ಡೇಸ್’

FILM NEWS

ಬೆಂಗಳೂರು ಮೇ೪ :- ಜೀ಼ ಕನ್ನಡ ದಲ್ಲಿ  ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು. ರಾಷ್ಟ್ರೀಯ ಚಾನೆಲ್ ನಲ್ಲಿ ಕನ್ನಡಿಗರು ರೂಪಿಸಿದ ಯಶಸ್ವಿ ಧಾರಾವಾಹಿ, ದಿ.ಶಂಕರ್ ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್’ಜೀ಼ ಕನ್ನಡ ವಾಹಿನಿಯಲ್ಲಿ ಮೇ  11 ರಿಂದ ಕನ್ನಡ ಭಾಷೆಯಲ್ಲಿ ಪ್ರಸಾರವಾಗಲಿದೆ.

ಮೇ  11ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದ್ದು ಇದು ಕನ್ನಡ ಕಿರುತೆರೆಯಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ. ವಿಶ್ವವಿಖ್ಯಾತ ಲೇಖಕ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಅವರ ಜನಪ್ರಿಯ ಕಥಾಗುಚ್ಛವಾಗಿದೆ. ಮಾಲ್ಗುಡಿ ಎಂಬ ಕಲ್ಪಿತ ಊರಿನಲ್ಲಿ ನಡೆಯುವ ಈ ಕಥೆಯನ್ನು ಅವರ ಕಲ್ಪನೆಯಂತೆಯೇ ರೂಪಿಸಿದ್ದಕ್ಕೆ ಶಂಕರ್ ನಾಗ್ ಲೇಖಕರಿಂದ ಅಪಾರ ಪ್ರಶಂಸೆ ಪಡೆದಿದ್ದರು. ವಿಷ್ಣುವರ್ಧನ್, ಅನಂತ್ ನಾಗ್, ಗಿರೀಶ್ ಕಾರ್ನಾಡ್, ಮಾಸ್ಟರ್ ಮಂಜುನಾಥ್, ವೈಶಾಲಿ ಕಾಸರವಳ್ಳಿ, ಬಿ.ಜಯಶ್ರೀ, ಶಂಕರ್ ನಾಗ್, ಅರುಂಧತಿ ನಾಗ್ ಮುಂತಾದವರು ನಟಿಸಿದ್ದಾರೆ.

ಮಾಲ್ಗುಡಿ ಡೇಸ್ 39 ಕಂತುಗಳಲ್ಲಿ 1986ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯ ಮಾಲ್ಗುಡಿಯನ್ನು ಶಂಕರ್ ನಾಗ್ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ರೂಪಿಸಿದ್ದರು. ಎಲ್.ವೈದ್ಯನಾಥನ್ ಸಂಗೀತ, ಆರ್.ಕೆ.ನಾರಾಯಣ್ ಅವರ ಸೋದರ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳು ಈ ಧಾರಾವಾಹಿಯ ಮಹತ್ವ ಹೆಚ್ಚಿಸಿವೆ. ಈ ಸರಣಿಯನ್ನು ಟಿ.ಎಸ್.ನರಸಿಂಹನ್ ನಿರ್ಮಾಣ ಮಾಡಿದ್ದರು.

ಈ ಧಾರಾವಾಹಿ ಸ್ವಾಮಿ ಅಂಡ್ ಫ್ರೆಂಡ್ಸ್, ಎ ಹಾರ್ಸ್ ಅಂಡ್ ಟು ಗೋಟ್ಸ್, ಅನ್ ಅಸ್ಟ್ರಾಲಜರ್ಸ್ ಡೇ ಮತ್ತಿತರೆ ಸಣ್ಣ ಕಥೆಗಳು ಹಾಗೂ ಸ್ವಾಮಿ ಅಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಯನ್ನು ಆಧರಿಸಿದೆ.

ಮಾಲ್ಗುಡಿಯ ಕರ್ತೃ ಆರ್.ಕೆ.ನಾರಾಯಣ್ ಚೆನ್ನೈನಲ್ಲಿ ಜನಿಸಿದರೂ ತಮ್ಮ ಬಹುತೇಕ ಜೀವನವನ್ನು ಮೈಸೂರಿನಲ್ಲಿ ಕಳೆದರು. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣ ಪುರಸ್ಕಾರಗಳನ್ನು ಪಡೆದಿದ್ದರು. ರಾಯಲ್ ಸೊಸೈಟಿ ಆಫ್ ಲಿಟರೇಚರ್ ನೀಡುವ ಎಸಿ ಬೆನ್ಸನ್ ಮೆಡಲ್ ಗೌರವಕ್ಕೂ ಭಾಜನರಾಗಿದ್ದರು. ವಿಶ್ವ ಸಾಹಿತ್ಯದಲ್ಲಿ ಪ್ರಮುಖ ಭಾರತೀಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ. ಅವರ ಮಾಲ್ಗುಡಿ ಸಾಹಿತ್ಯಾಸಕ್ತರಿಗೆ ಕುತೂಹಲ ಕೆರಳಿಸುವ ತಾಣವಾಗಿದೆ. ಅವರು ಬರೆದಿದ್ದು ಶ್ರೀಸಾಮಾನ್ಯರ ಕಥೆಗಳಾಗಿದ್ದು ಅವು ಓದುಗರನ್ನು ಅಪಾರವಾಗಿ ಸೆಳೆದಿವೆ. ಮೇ  11 2020 ರಂದು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ‘ಮಾಲ್ಗುಡಿ ಡೇಸ್’ ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.