ರಾಜ್ಯದಲ್ಲಿ ಕೊರೋನ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರಾಜ್ಯಾದ್ಯಂತ ಕಂಡು ಬಂದಿರುವ ಒಟ್ಟು ಪ್ರಕರಣಗಳ 64% ರಷ್ಟು ಪ್ರಕರಣಗಳು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ
ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಕೆ ಸುಧಾಕರ್ ತಿಳಿಸಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಮಾದ್ಯಮ ಹೇಳಿಕೆ ನೀಡಿದ ಅವರು, ಈಗಾಗಲೇ ಸೋಂಕಿತ ಪ್ರದೇಶ ಎಂದು ಗುರುತಿಸಿರುವ ಕಂಟೈನ್ಮೆಂಟ್ ಜೋನ್ ಮತ್ತು ಪ್ರಯಾಣಿಕರಿಂದ ಸೋಂಕು ಹರಡುತ್ತಿದೆಯೇ ಹೊರತು ಸಮುದಾಯದಲ್ಲಿ ಸೋಂಕು ಹಬ್ಬಿದೆ ಎಂಬ ಆತಂಕ ಬೇಡ ಎಂದು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು – ಮೇ 15, 2020: ರಾಜ್ಯದಲ್ಲಿ ಕೊರೋನ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಭೀತಿ ಬೇಡ ಎಂದು ರಾಜ್ಯಾದ್ಯಂತ ಕಂಡು ಬಂದಿರುವ ಒಟ್ಟು ಪ್ರಕರಣಗಳ 64% ರಷ್ಟು ಪ್ರಕರಣಗಳು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ ಶೇಕಡ 25 ಪ್ರಯಾಣಿಕರಿಂದ ಸೋಂಕು ತಗುಲಿದೆ (ಶೇಕಡ ಏಳು ವಿದೇಶಿ ಮತ್ತು ಶೇಕಡ ಹದಿನೆಂಟು ದೇಶಿಯ). ಶೇಕಡ ಏಳು ಪ್ರಕರಣಗಳು ಉಸಿರಾಟ ಮತ್ತು ಇತರೆ ಸೋಂಕುಗಳಿಂದ ನರಳುತ್ತಿದ್ದ ಪ್ರಕರಣಗಳಾಗಿವೆ ಎಂದು ಸಚಿವರು ವಿವರಿಸಿದ್ದಾರೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇ ಒಂದರಷ್ಟಿದೆ. ಒಟ್ಟು ನೂರು ಟೆಸ್ಟ್‌ಗಳ ಪೈಕಿ ಒಂದು ಪ್ರಕರಣ ಮಾತ್ರವೇ ಕೊರೋನ ಪಾಸಿಟಿವ್ ಆಗುತ್ತಿದೆ. ಇದು ಸದ್ಯದ ಮಟ್ಟಿಗೆ ಸಮಾಧಾನಕರ ಅಂಶ ಎಂದು ತಿಳಿಸಿದ್ದಾರೆ. ದೇಶದ ಪಾಸಿಟಿವ್ ಪ್ರಕರಣಗಳ ಪ್ರಮಾಣಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಕಡಿಮೆ ಇದೆ ದೇಶದ ಸರಾಸರಿ ಪ್ರಮಾಣ ಶೇಕಡ 5 ರಷ್ಟಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗುತ್ತಿದೆ ಇದು ಆತಂಕಕಾರಿ ಬೆಳವಣಿಗೆ ಎಂಬ ಮಾಧ್ಯಮಗಳ ಸುದ್ದಿಗಳನ್ನು ಗಮನಿಸುತ್ತಿದ್ದೇನೆ . ವಾಸ್ತವವಾಗಿ ನಗರದಲ್ಲಿ ಟೆಸ್ಟ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಯ ಹಿರಿಯ ನಾಗರಿಕರ ಸ್ವಾಬ್ ಟೆಸ್ಟ್ ಗೆ ಸೂಚಿಸಲಾಗಿದೆ. ಇತ್ತೀಚೆಗೆ ಪಾದರಾಯನ ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರ್ಯಾಪಿಡ್ ಟೆಸ್ಟ್ ನಡೆಸುವಂತೆ ಸೂಚಿಸಲಾಗಿತ್ತು ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಸಮಾಧಾನಕರ ಅಂಶ ಎಂದರೆ ಈಗಾಗಲೇ ತಿಳಿಸಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೋನ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇದುವರೆಗೂ 38 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಅವುಗಳಲ್ಲಿ ಪರೀಕ್ಷಾ ಕಾರ್ಯ ನಡೆಯುತ್ತಿದೆ. ಮೇ ಅಂತ್ಯದೊಳಗೆ ಅರುವತ್ತು ಲ್ಯಾಬ್‌ಗಳ ಸ್ಥಾಪನೆ ಪೂರ್ಣಗೊಂಡು ಟೆಸ್ಟ್‌ಗಳ ಸಂಖ್ಯೆ ಪ್ರತಿ ದಿನಕ್ಕೆ ಹದಿಮೂರು ರಿಂದ ಹದಿನೈದು ಸಾವಿರಕ್ಕೆ ಏರಿಕೆ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರ ಕೊರೋನ ವಿರುದ್ಧದ ಹೋರಾಟದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ, ಸಾರ್ವಜನಿಕರು ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.