ಸಚಿವ ಸುರೇಶ್ ಕುಮಾರ್ ಸೂಚನೆ
ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಕುರಿತು ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು, ಬಿಇಒ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾರ್ಗದರ್ಶನ ನೀಡಿದ ಅವರು, ಈ ಬಾರಿಯ ಬದಲಾಗಿರುವ ಪರೀಕ್ಷೆ ಪದ್ಧತಿಯಲ್ಲಿ ಕುರಿತು ಮಕ್ಕಳಿಗೆ ಶಿಕ್ಷಕರು ಸೂಕ್ತ ತಿಳಿವಳಿಕೆ ನೀಡಲು ಕ್ರಮ ವಹಿಸಬೇಕೆಂದರು.
ಎಲ್ಲದಕ್ಕಿಂತ ಮುಖ್ಯವಾಗಿ ಈ ಪರೀಕ್ಷೆಗಳನ್ನು ಕೋವಿಡ್-19 ಸೋಂಕು ತಹಬಂದಿಗೆ ಬಂದ ನಂತರವೇ ನಡೆಸಲಾಗುವುದು ಎಂಬ ಭರವಸೆಯನ್ನು ಮಕ್ಕಳು ಮತ್ತು ಪೋಷಕರಲ್ಲಿ ಮೂಡಿಸಬೇಕು ಎಂದು ಸಚಿವರು ಹೇಳಿದರು.
ಈ ವಾರಂತ್ಯಕ್ಕೆ ಮಾದರಿ ಪ್ರಶ್ನೆ ಪತ್ರಿಕೆಗಳು ಎಲ್ಲ ಶಾಲೆಗಳಿಗೆ ಆಯಾ ಬಿಇಒ ಕಚೇರಿಗಳ ಮೂಲಕ ತಲುಪಲಿವೆ. ಮಕ್ಕಳಿಗೆ ಓಎಂಆರ್ ಶೀಟ್ ರೂಪದಲ್ಲಿರುವ ಪ್ರಶ್ನೆ ಪತ್ರಿಕೆಗಳಿಗೆ ಹೇಗೆ ಉತ್ತರಿಸಬೇಕೆಂಬ ಕುರಿತು ಶಿಕ್ಷಕರು ಸಲಹೆ ನೀಡಬೇಕು. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ವಿವಿಧ ರೀತಿಯಲ್ಲಿ ಮಕ್ಕಳನ್ನು ತಲುಪಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆಗೆ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಉಪಯುಕ್ತ ಮತ್ತು ಉತ್ತಮ ನಡೆಯನ್ನು ಉಳಿದ ಜಿಲ್ಲೆಗಳೂ ಅನುಸರಿಸಬೇಕೆಂದು ಸುರೇಶ್ ಕುಮಾರ್ ಹೇಳಿದರು.
ಮುಂದಿನ ವ್ಯಾಸಂಗವನ್ನು ಆಯ್ದುಕೊಳ್ಳುವ ನಿಟ್ಟಿನಲ್ಲಿ ಈ ಪರೀಕ್ಷೆಯು ದಿಕ್ಸೂಚಿಯಾಗಿರುವುದರಿಂದ ಪರೀಕ್ಷೆಯಲ್ಲಿ ತಲಾ ಒಂದು ವಿಷಯಕ್ಕೆ ತಲಾ 40 ಅಂಕದ ಪ್ರಶ್ನೆಪತ್ರಿಕೆಯಿದ್ದು, ಅದರಲ್ಲೇ ನಾಲ್ಕು ಉತ್ತರಗಳಲ್ಲಿ ಒಂದು ಉತ್ತರವನ್ನ ಗುರುತು ಮಾಡುವಂತಹ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ. ಪ್ರಶ್ನೆಗಳು ನೇರ ಮತ್ತು ಸುಲಭವಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಗೊಂದಲವಾಗುವುದಿಲ್ಲ. ಆದರೂ ಈ ಕುರಿತು ಮಕ್ಕಳಿಗೆ ಸುಲಭವಾಗಿ ಅಥೈಸುವಂತೆ ಮಾಹಿತಿ ನೀಡಿ ಈ ಹೊಸ ಪದ್ಧತಿ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕಾದ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.
ಹಲವಾರು ಸ್ತರದ ಜನರೊಂದಿಗೆ ಹಲವಾರು ಸುತ್ತಿನ ಚರ್ಚೆಗಳ ನಂತರ ಮಕ್ಕಳ ಹಿತದೃಷ್ಟಿಯಿಂದ ಕೇವಲ ಎರಡು ದಿನಗಳ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚಿನ ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಅದಕ್ಕಾಗಿ ಇಲಾಖೆ ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಮಕ್ಕಳ ಹಿತದೃಷ್ಟಿಯಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗುತ್ತಿದ್ದು, ಕೋವಿಡ್-19ರ ಲಸಿಕೆ ಪಡೆದ ಶಿಕ್ಷಕರನ್ನೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕಾಗಿರುವುದರಿಂದ ಶಿಕ್ಷಕರಿಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ಈಗಾಗಲೇ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಕಲಬುರಗಿ, ಧಾರವಾಡ ಅಪರ ಆಯುಕ್ತರು ವಿಶೇಷ ಗಮನ ಹರಿಸಿ ಲಸಿಕೆ ಪಡೆದ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಬೇಕೆಂದು ಸುರೇಶ್ ಕುಮಾರ್ ಸೂಚಿಸಿದರು.
ಕಳೆದ ವರ್ಷದಂತೆ ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳು ಸಮವಸ್ತ್ರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಮಕ್ಕಳ ಸುರಕ್ಷತೆಗೆ ಮಾರ್ಗದರ್ಶನ ನೀಡಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಮಕ್ಕಳು ತಮ್ಮ ವಾಸಸ್ಥಳದ ಸನಿಹದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಕಳೆದ ಬಾರಿಗಿಂತ ಈ ಬಾರಿ 30 ಸಾವಿರ ಮಕ್ಕಳು ಹೆಚ್ಚಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ಯಶಸ್ಸಿಗಾಗಿ ಕಳೆದ ಬಾರಿಯಂತೆ ಎಲ್ಲ ಇಲಾಖೆಗಳೂ ಸಹಕಾರ ನೀಡಲಿವೆ. ಈ ಕುರಿತಂತೆ ವಾರದೊಳಗೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು/ನಿರ್ದೇಶಕರ ಸಭೆ ನಡೆಸಲಾಗುವುದು ಹಾಗೆಯೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡೀಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಮಕ್ಕಳಿಗೂ ಎನ್-95 ಮಾಸ್ಕ್ಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದಲೇ ನಡೆಯುತ್ತಿರುವ ಈ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು. ಪರೀಕ್ಷೆಯೊಳಗೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆ ಪರಿಶೀಲಿಸಲು ಖುದ್ದಾಗಿ ಭೇಟಿ ನೀಡುವ ಕುರಿತೂ ಚಿಂತನೆ ನಡೆಸಿದ್ದೇನೆ ಎಂದೂ ಸುರೇಶ್ ಕುಮಾರ್ ಹೇಳಿದರು.
ಕಳೆದ ಬಾರಿಯ ಎಸ್ಒಪಿ ಕುರಿತು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು. ಈ ಬಾರಿ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅದಕ್ಕಿಂತ ಸುಧಾರಿತ ಎಸ್ಒಪಿ ನೀಡಲಿದ್ದು, ಅದೇ ಪ್ರಕಾರವೇ ಪರೀಕ್ಷೆಗಳು ಸುರಕ್ಷತಾ ಪರಿಸರದಲ್ಲಿ ನಡೆಯಲಿರುವುದರಿಂದ ಯಾರೂ ಆತಂಕಕ್ಕೊಳಗಾಗುವ ಪ್ರಮೇಯವೇ ಇಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
ಶಾಲೆಗಳು ಆರಂಭವಾದ ನಂತರ ಪ್ರತಿದಿನವೂ ನಾಲ್ಕೈದು ಮಕ್ಕಳನ್ನು ಶಾಲೆಗಳಿಗೆ ಕರೆಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲೂ ಕ್ರಮ ವಹಿಸಬಹುದೆಂದೂ ಸಚಿವರು ಸಲಹೆ ನೀಡಿದರು. ಮಕ್ಕಳು ಪರೀಕ್ಷಾ ಕೇಂದ್ರ ಪ್ರವೇಶಿಸಿದ ತಕ್ಷಣವೇ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವಂತಹ ಭಿತ್ತಿಪತ್ರಗಳಿರುತ್ತವೆ. ಸ್ಥಳೀಯ ಮಟ್ಟದಲ್ಲೂ ಇಂತಹ ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಕ್ರಮ ವಹಿಸಲು ಅವಕಾಶವಿದೆ ಎಂದೂ ಸಚಿವರು ಹೇಳಿದರು.
ಪರೀಕ್ಷೆಯ ಸಂಪೂರ್ಣ ಯಶಸ್ಸಿಗೆ ಕಳೆದ ಬಾರಿಯಂತೆ ಈ ವರ್ಷವೂ ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಸಹಕಾರ ನೀಡಬೇಕೆಂದು ಸಚಿವರು ಕೋರಿದರು.
ಶಿಕ್ಷಣ ಇಲಾಖೆ ಆಯುಕ್ತರಾದ ವಿ. ಅನ್ಬುಕುಮಾರ್, ಅಪರ ಆಯುಕ್ತರಾದ ನಳಿನ್ ಅತುಲ್ (ಕಲಬುರಗಿ) ಮೇಜರ್ ಸಿದ್ದಲಿಂಗಯ್ಯ ಹಿರೇಮಠ (ಧಾರವಾಡ), ಇಲಾಖೆಯ ನಿರ್ದೇಶಕರು ಭಾಗವಹಿಸಿದ್ದರು.