ಕ್ರೀಡಾಪಟುಗಳಿಗೆ ಉಚಿತ ಕೋವಿಡ್ ಲಸಿಕೆ ಅಭಿಯಾನ

SPORTS
ಕ್ರೀಡಾಪಟುಗಳಿಗೆ ಜೂನ್ 10 ರಿಂದ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ಜೂನ್ 09, (ಕರ್ನಾಟಕ ವಾರ್ತೆ) :
ಕರ್ನಾಟಕ ಸರ್ಕಾರವು ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಕೋವಿಡ್-19 ಲಸಿಕೆಯನ್ನು ಆದ್ಯತೆ ಮೇಲೆ ಉಚಿತವಾಗಿ ಒದಗಿಸುವ ಕುರಿತು ಎಲ್ಲಾ ಜಿಲ್ಲೆಗಳಲ್ಲಿ ಕ್ರಮ ವಹಿಸಲಾಗುತ್ತಿದ್ದು, ಬೆಂಗಳೂರಿನ ಕ್ರೀಡಾಪಟುಗಳ ಲಸಿಕೆ ಅಭಿಯಾನಕ್ಕೆ  ಜೂನ್ 10 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಚಾಲನೆ ನೀಡಲಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಕೋವಿಡ್ ತಡೆ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅತ್ಯಂತ ಸರಳವಾಗಿ ಯಾವುದೇ ಸಭಾ ಕಾರ್ಯಕ್ರಮವಿಲ್ಲದೇ ಈ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲು ಉದ್ದೇಶಿಸಿಲಾಗಿದೆ.
ಮೊದಲನೇ ದಿನ ದಿನಾಂಕ: 10-06-2021, ಗುರುವಾರದಂದು ಬಾಸ್ಕೆಟ್‍ಬಾಲ್, ಫೆನ್ಸಿಂಗ್, ಈಜು, ಹಾಕಿ, ಟೆನ್ನಿಕಾಯ್ಟ್, ಬ್ಯಾಡ್ಮಿಂಟನ್, ರೋಯಿಂಗ್ ಮತ್ತು ನೆಟ್‍ಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಹಾಗೂ ಎರಡನೇ ದಿನ ದಿನಾಂಕ: 11-06-2021 ಶುಕ್ರವಾರದಂದು ವುಷು, ಶೂಟಿಂಗ್, ಹ್ಯಾಂಡ್‍ಬಾಲ್, ಪುಟ್ಬಾಲ್, ಅಥ್ಲೆಟಿಕ್ಸ್, ಟೇಬಲ್, ಟೆನ್ನಿಸ್, ವಾಲಿಬಾಲ್, ಮತ್ತು ರೋಲರ್ ಸ್ಕೇಟಿಂಗ್, ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ಉಳಿದ ಕ್ರೀಡಾಪಟುಗಳಿಗೆ ಲಸಿಕೆ ಅಭಿಯಾನವನ್ನು ಮುಂದುವರೆಸಿ ಮಾಹಿತಿಯನ್ನು ನೀಡಲಾಗುವುದು.
ಈಗಾಗಲೇ ರಾಜ್ಯಾದ್ಯಂತ 1200ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಈ ಲಸಿಕಾ ಅಭಿಯಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ: 10-06-2021 ರಿಂದ ಹಮ್ಮಿಕೊಳ್ಳಲಾಗುತ್ತಿದ್ದು,  ದಿನಾಂಕ: 10-06-2021 ಮತ್ತು 11-06-2021 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಈಗಾಗಲೇ ನೋಂದಾಯಿಸಿಕೊಂಡಿರುವ ಕ್ರೀಡಾಪಟುಗಳಿಗೆ ಉಚಿತ ಕೋವಿಡ್-19 ಮೊದಲನೇ ಡೋಸ್  ಲಸಿಕೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.

ಈಗಾಗಲೇ ಅರ್ಹ 18 ವರ್ಷ ಮೇಲ್ಪಟ್ಟ 2200 ಕ್ರೀಡಾಪಟುಗಳು ಕರ್ನಾಟಕ ಒಲಂಪಿಕ್ ಸಂಸ್ಥೆ ಆಯಾ ರಾಜ್ಯ ಕ್ರೀಡಾಸಂಸ್ಥೆಗಳು ಮತ್ತು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಇವರ ಮೂಲಕ ನೋಂದಾಯಿಸಿಕೊಂಡಿರುತ್ತಾರೆ. ಇದುವರೆಗೆ ನೋಂದಾಯಿಸಿಕೊಂಡಿಲ್ಲದ ಅರ್ಹ ಕ್ರೀಡಾಪಟುಗಳು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಶ್ರೀ ಕಂಠೀರವ ಕ್ರೀಡಾಂಗಣ, ಕಸ್ತೂರಭಾ ರಸ್ತೆ, ಬೆಂಗಳೂರು-560001 ಅಥವಾ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಲು ಕೋರಿದೆ. ಅರ್ಹ ಕ್ರೀಡಾಪಟುಗಳಿಗೆ ಹಂತ-ಹಂತವಾಗಿ ಉಚಿತ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.