2605 ಅಡುಗೆ ಸಿಬ್ಬಂದಿಯವರಿಗೆ ದಿನಸಿ ಕಿಟ್‍ಗಳ ವಿತರಣೆಗೆ
ಪಾವಗಡ:- ಇಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ಮತ್ತು ಶಿರಾ ತಾಲ್ಲೂಕುಗಳ ಒಟ್ಟು 2605 ಅಡುಗೆ ಸಿಬ್ಬಂದಿಯವರಿಗೆ ದಿನಸಿ ಕಿಟ್‍ಗಳ ವಿತರಣೆಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯವನ್ನು ಶ್ರೀಮತ್ ಸ್ವಾಮಿ ಜಪಾನಂದಜೀ, ಅಧ್ಯಕ್ಷರು, ಶ್ರೀರಾಮಕೃಷ್ಣ ಸೇವಾಶ್ರಮ ರವರು ವಹಿಸಿದ್ದರು. ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ಶ್ರೀ ವೆಂಕಟರಮಣಪ್ಪ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‍ನ ಪ್ರಬಂಧಕರಾದ ಶ್ರೀ ಕಿರಣ್, ಪದಾಧಿಕಾರಿಗಳಾದ ಶ್ರೀ ರಾಜೀವ್, ಶ್ರೀ ರಾಜೇಶ್, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶ್ರೀ ಹನುಮಂತರಾಯಪ್ಪ, ಶ್ರೀ ಚಿತ್ತಯ್ಯ, ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಶ್ರೀ ಜಿ.ಸುದೇಶ್ ಬಾಬು ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇಂದು ಮೊದಲನೆ ಹಂತವಾಗಿ ಪಾವಗಡ ಕಸಬಾ ವ್ಯಾಪ್ತಿಯ 161 ಜನ ಅಡುಗೆ ಸಹಾಯಕರು ಆಹಾರ ಪದಾರ್ಥಗಳ ಕಿಟ್‍ಗಳನ್ನು ಸ್ವೀಕರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸ್ವಾಮಿ ಜಪಾನಂದಜೀರವರು 2019ರ ನವೆಂಬರ್‍ನಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರು ಆರಂಭಿಸಿದ 50 ಸಾವಿರ ಮಕ್ಕಳಿಗೆ ನೀಡುವ ಹಾಲಿನ ಜೊತೆ ಪೌಷ್ಟಿಕಾಂಶ ಭರಿತ ಪುಡಿಯನ್ನು ಬೆರೆಸಿ ನೀಡುವ ಕಾರ್ಯಕ್ರಮವನ್ನು ಮತ್ತು ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ ಇದೇ ರೀತಿ ಮೂರೂ ತಾಲ್ಲೂಕುಗಳ ಅಕ್ಷರ ದಾಸೋಹ ಸಿಬ್ಬಂದಿಯವರಿಗೆ ಕಿಟ್ ವಿತರಿಸಿದ್ದನ್ನೂ ಸಹ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಯವರನ್ನು ಗುರುತಿಸಿ ಅವರಿಗೆ ಸಹಾಯ ನೀಡುವಂತಹ ಮಹತ್ತರವಾದ ಕಾರ್ಯವನ್ನು ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‍ನ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದ್ದು ಕೋವಿಡ್ ಕಾರಣದಿಂದ ಈ ಯೋಜನೆಗೆ ಸಹಕಾರ ನೀಡುತ್ತಿರುವ ಸರಿಸುಮಾರು 2605 ಅಡುಗೆ ಸಿಬ್ಬಂದಿಯವರಿಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆ, ರವೆ ಇತ್ಯಾದಿಗಳನ್ನು ನೀಡಲಾಯಿತು.
ಈ ಕಾರ್ಯಕ್ರಮವು ಪಾವಗಡ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಉದ್ಘಾಟಿಸಲ್ಪಟ್ಟಿತು. ಈ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ವೆಂಕಟರಮಣಪ್ಪ ರವರು ಉದ್ಘಾಟಿಸುತ್ತಾ ಸ್ವಾಮಿ ಜಪಾನಂದಜೀ ರವರ ಕಾರ್ಯವೈಖರಿ ಪಾವಗಡಕ್ಕೆ ಮಾತ್ರ ಸೀಮಿತವಾಗದೆ, ತುಮಕೂರು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಿರಂತರವಾಗಿ ನಡೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಿರಣ್, ಪ್ರಬಂಧಕರು, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರು ನಡೆಸುತ್ತಿರುವ ಈ ಯೋಜನೆಗೆ ಸರ್ವ ರೀತಿಯಲ್ಲಿ ಆಶೀರ್ವದಿಸಿ ಸಹಕಾರ ನೀಡುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜಿ ರವರ ಸಹಕಾರ ಅತ್ಯಮೂಲ್ಯವಾದುದು ಎಂದು ವಿವರಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಸುದೇಶ್ ಬಾಬು ರವರು ನಡೆಸಿಕೊಟ್ಟರು. ತದನಂತರ ಪಾವಗಡ ಕಸಬಾದ ಎಲ್ಲ ಅಡುಗೆ ಸಿಬ್ಬಂದಿಯವರು ತಮ್ಮ ಕಿಟ್ಟುಗಳನ್ನು ಪಡೆದು ಸಂತೃಪ್ತಿಯಿಂದ ಹರಸಿ ತೆರಳಿದರು.
ಕಾರ್ಯಕ್ರಮ ಆರಂಭವಾಗುವ ಮುನ್ನ ಶಾಸಕರು ಮೇವು ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಹಲವರಿಗೆ ಮೇವು ವಿತರಣೆ ಮಾಡಿ ಪೂಜ್ಯ ಸ್ವಾಮೀಜಿಯವರ ಕಾರ್ಯವೈಖರಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಇಂದು ಅಪರಾನ್ಹ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಗಳ ಸಮುಚ್ಛಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ದಿನಸಿ ಕಿಟ್ಟುಗಳನ್ನು ವಿತರಿಸಲಾಯಿತು.