ಪೆಟ್ರೋಲ್ ಬೆಲೆ ಪದೇಪದೆ ಹೆಚ್ಚಿಸುವ ಬಿಜೆಪಿ ಸರ್ಕಾರ ಜನರ ಆದಾಯ ಹೆಚ್ಚಿಸಿದೆಯೇ: ಡಿ.ಕೆ ಶಿವಕುಮಾರ್ ಪ್ರಶ್ನೆ
ಬೆಂಗಳೂರು: _ ಕೇಂದ್ರದ ಬಿಜೆಪಿ ಸರ್ಕಾರ ಪದೇ ಪದೆ ಇಂಧನ ತೈಲ ಬೆಲೆ ಹೆಚ್ಚಿಸುತ್ತಿದೆ. ಆದರೆ ಮಧ್ಯಮವರ್ಗ, ರೈತರ ಬೆಂಬಲ ಬೆಲೆ, ಉದ್ಯೋಗ ಖಾತ್ರಿ, ಕನಿಷ್ಠ ವೇತನವನ್ನು ಎಷ್ಟು ಬಾರಿ ಹೆಚ್ಚಿಸಿದೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ 800 ಪೆಟ್ರೋಲ್ ಬಂಕ್‌ಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿದರು.
ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, “2021 ರಲ್ಲಿ ಬಿಜೆಪಿಯು 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ದರ ಏರಿಕೆ ಮಾಡಿದೆ. ಆದರೆ, ಸರ್ಕಾರ ಮಧ್ಯಮ ವರ್ಗದವರ ಸಂಬಳವನ್ನು ಎಷ್ಟು ಬಾರಿ ಹೆಚ್ಚಿಸಿದೆ? ಕನಿಷ್ಠ ವೇತನ ದರವನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ಉದ್ಯೋಗ ಖಾತ್ರಿ ವೇತನವನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ಬಿಜೆಪಿ ಸರ್ಕಾರ ಜನರ ಹಿತಕ್ಕಿಂತ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಹಗಲು ದರೋಡೆಗಿಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆರ್ಥಿಕ ಹಿಂಜರಿತ ಹಾಗೂ ಇಂಧನ ದರ ಹೆಚ್ಚಳದಿಂದ ದೇಶದ ಪ್ರತಿಯೊಬ್ಬ ನಾಗರಿಕನು ತೊಂದರೆ ಅನುಭವಿಸುತ್ತಿದ್ದಾನೆ. ಪೆಟ್ರೋಲ್ ತೆರಿಗೆ ಹೆಸರಿನಲ್ಲಿ ಬಿಜೆಪಿಯು ಜೇಬಿಗೆ ಕತ್ತರಿ ಹಾಕುತ್ತಿದೆ’ ಎಂದು ಹೇಳಿದರು.
“ಮೋದಿಯವರ ಹೊಸ ಮಹಲನ್ನು ಕಟ್ಟಲು ಬಿಜೆಪಿಯು ಇಂಧನ ತೆರಿಗೆಯನ್ನು ಏರಿಸುತ್ತಿದ್ದು, ಪೆಟ್ರೋಲ್ ಬೆಲೆ 2022ರಲ್ಲಿ 120ರೂ., 2023ರಲ್ಲಿ 160 ರೂ., 2024ರಲ್ಲಿ 200 ರೂ. ಆಗಲಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುವ ಮೊದಲು ನಾವು ಧ್ವನಿ ಎತ್ತಬೇಕು” ಎಂದು ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.