ಬೆಂಗಳೂರು ಜೂನ್ ೧೧:- ಕೊವಿಡ್ ಸೋಂಕಿಗೆ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನರಾಗಿದ್ದಾರೆ. 66 ವರ್ಷದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆ ವಿಧಿವಶರಾಗಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಚಿಕಿತ್ಸೆ ಫಲಕಾರಿಯಾಗದೇ ಇಂದು ವಧಿವಶರಾಗಿದ್ದಾರೆ .
ಸಿದ್ದಲಿಂಗಯ್ಯ ಅವರ ಕಿರು ಪರಿಚಯ
1953ರಲ್ಲಿ ರಾಮನಗರ ಜಿಲ್ಲೆಯ ಮಾಗಡಿ’ ತಾಲ್ಲೂಕಿನ ‘ಮಂಚನಬೆಲೆ’ ಗ್ರಾಮದಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು
ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟವರು ಡಾ.ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಬರೆದ ಕ್ರಾಂತಿಗೀತೆ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ರಾಜ್ಯವ್ಯಾಪಿ ಜನಪ್ರಿಯವಾಗಿತ್ತು. ದಲಿತ ಸಂವೇದನೆಗಳನ್ನು ಸಶಕ್ತವಾಗಿ, ಆಕ್ರೋಶವನ್ನು ಅಕ್ಷರಗಳಾಗಿ ಸಾರಿ ಹೇಳಿದ ಗೀತೆಯಿದು.
ಹೊಲೆಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ನನ್ನ ಜನಗಳು’ ಸೇರಿದಂತೆ ಹಲವು ಕವನ ಸಂಕಲಗಳನ್ನು ಸಿದ್ದಲಿಂಗಯ್ಯ ಅವರು ಹೊರತಂದಿದ್ದಾರೆ. ‘ಊರು-ಕೇರಿ’ ಎಂಬ ಆತ್ಮಕಥನವನ್ನು ಅವರು ರಚಿಸಿದ್ದಾರೆ. ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಅವರಿಗೆ ದೊರೆತಿವೆ
‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ 1988-1994 ಮತ್ತು 1995-2001ರವರೆಗೆ ವಿಧಾನಪರಿಷತ್ ಸದಸ್ಯರಾಗಿಯೂ ಡಾ.ಸಿದ್ದಲಿಂಗಯ್ಯ ಕಾರ್ಯನಿರ್ವಹಿಸಿದ್ದರು
ಗಣ್ಯರ ಸಂತಾಪ
ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಬೆಂಗಳೂರು: ದಲಿತ ಕವಿ ಎಂದೇ ಖ್ಯಾತರಾಗಿದ್ದ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಿದ್ದಲಿಂಗಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ’ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಾಹಿತಿ ಹಾಗೂ ಕವಿ
ಡಾ. ಸಿದ್ದಲಿಂಗಯ್ಯ ನಿಧನಕ್ಕೆ*
ಸಚಿವ ಮುರುಗೇಶ್ ನಿರಾಣಿ ಕಂಬನಿ
ಬೆಂಗಳೂರು- ನಾಡಿನ ಹಿರಿಯ ಸಾಹಿತಿ, ಬಂಡಾಯ ಕವಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಮುರುಗೇಶ್ ನಿರಾಣಿ ಅವರು ಕಂಬನಿ ಮಿಡಿದಿದ್ದಾರೆ.
ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿದ ಅವರು,ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿ ಎರಡು ಬರಿ ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾ ಖ್ಯಾತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ನಿಧನ ಕರುನಾಡಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.
ಖ್ಯಾತ ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಚಿವರಾದ ಸಿ.ಪಿ.ಯೋಗೇಶ್ವರ ಅವರ
ಸಂತಾಪ.
ಪಂಪ, ನಾಡೋಜ ಪ್ರಶಸ್ತಿ ಪುರಸ್ಕೃತ ಖ್ಯಾತ ಕವಿ ಮತ್ತು ಮಾಜಿ ವಿಧಾನಪರಿಷತ್ ಸದಸ್ಯರಾದ
ಡಾ.ಸಿದ್ದಲಿಂಗಯ್ಯ ಅವರ
ನಿಧನದಿಂದ ಈ ನಾಡಿಗೆ ಬಹುದೊಡ್ಡ ನಷ್ಟವಾಗಿದೆ .
ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ ಧೀಮಂತ ನಾಯಕರಾಗಿದ್ದರು.
ಮೃತರಿಗೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ
ಎಂದು ಸಚಿವರಾದ ಸಿ.ಪಿ.ಯೋಗೇಶ್ವರ ಅವರು
ಸಂತಾಪ ಸೂಚಿಸಿದ್ದಾರೆ.