fasal bima yojna inner

ತುಮಕೂರು: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ನೋಂದಣಿಗಾಗಿ ರೈತರಲ್ಲಿ ಮನವಿ

DISTRICT NEWS ತುಮಕೂರು

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ನೋಂದಣಿಗಾಗಿ ರೈತರಲ್ಲಿ ಮನವಿ

ತುಮಕೂರು (ಕ.ವಾ.) ಜೂ.11: ಕೃಷಿ ಇಲಾಖೆಯು ಜಿಲ್ಲೆಯಲ್ಲಿ 2021ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮನವಿ ಮಾಡಿದೆ.

ತಾಲ್ಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಈ ಯೋಜನೆಯನ್ನು ಅನುಷ್ಟಾನ ಗೊಳಿಸಲಾಗುವುದು..

ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸ್ಧಳ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲೀಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ(ಇನಂಡೇಷನ್)ಯಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ರೈತರಿಗೆ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮೆ ಮಾಡಿಸಿರುವ ರೈತರು ತಮ್ಮ ಬೆಳೆ ನಷ್ಟದ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಛೇರಿಗಳಿಗೆ 48 ಗಂಟೆಯೊಳಗೆ ತಿಳಿಸಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಯೊಳಗೆ ತಿಳಿಸಬೇಕು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇಕಡಾ 25ರಷ್ಟು ಬೆಳೆ ವಿಮಾ ನಷ್ಟ ಪರಿಹಾರವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.
ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂಧರ್ಭದಲ್ಲಿ ಎರಡು ವಾರ(ಹದಿನಾಲ್ಕು ದಿನಗಳು)ದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಬೆಳೆಗಳನ್ನು ಈ ಯೋಜನೆಯಡಿ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲು ಫ್ಯೂಚರ್ ಜನರಲಿ ಜನರಲ್ ಇನ್ಸೂರೆನ್ಸ್ ಕಂಪನಿ ಸಂಸ್ಥೆಯನ್ನು ನಿಗಧಿಪಡಿಸಲಾಗಿದೆ.
ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಾಯಿಸಲು ವಿಮಾ ಕಂತಿನ ಮೊತ್ತ ಹಾಗೂ ಕಡೆಯ ದಿನಾಂಕವನ್ನು ನಿಗಧಿಪಡಿಸಲಾಗಿದ್ದು ಅರ್ಹ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ಬ್ಯಾಂಕ್ ಗಳಲ್ಲಿ ನಿಗಧಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕೆಂದು
ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನ ಮನವಿ ಮಾಡಿದ್ದಾರೆ.

ನಿಗಧಿಪಡಿಸಿದ ವಿಮಾ ಕಂತು(ಪ್ರತಿ ಎಕರೆಗೆ) ಹಾಗು ಪಾವತಿಸಲು ಕಡೆಯ ದಿನಾಂಕದ ವಿವರ :

ಹೋಬಳಿ ಮಟ್ಟದಲ್ಲಿ ಅಧಿಸೂಚಿಸಲಾಗಿರುವ : ಎಳ್ಳು(ಮಳೆಯಾಶ್ರಿತ (ವಿಮಾ ಕಂತಿನ ಮೊತ್ತ- 202.35)ಬೆಳೆಗೆ ವಿಮಾ ಕಂತು ಪಾವತಿಗೆ ಜೂನ್ 30; ಉದ್ದು(ಮಳೆಯಾಶ್ರಿತ-ವಿಮಾ ಕಂತಿನ ಮೊತ್ತ 226.63), ಅಲಸಂದೆ (ಮಳೆಯಾಶ್ರಿತ-210.44), ಹೆಸರು(ಮಳೆಯಾಶ್ರಿತ- 234.73), ಕೆಂಪು ಮೆಣಸಿನಕಾಯಿ(ನೀರಾವರಿ- 1942.56), ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ-1456.92)ಬೆಳೆಗೆ ವಿಮಾ ಕಂತು ಪಾವತಿಸಲು ಜುಲೈ 15;
ಹತ್ತಿ(ನೀರಾವರಿ- 1355.75), ಹತ್ತಿ ಮಳೆಯಾಶ್ರಿತ-870.11), ಶೇಂಗಾ(ನೀರಾವರಿ-461.36), ಮುಸುಕಿನ ಜೋಳ(ನೀರಾವರಿ- 477.55), ಮುಸುಕಿನ ಜೋಳ (ಮಳೆಯಾಶ್ರಿತ- 404.70), ನವಣೆ (ಮಳೆಯಾಶ್ರಿತ-218.54), ಈರುಳ್ಳಿ(ನೀರಾವರಿ- 1517.63), ಈರುಳ್ಳಿ (ಮಳೆಯಾಶ್ರಿತ-1416.45), ತೊಗರಿ(ಮಳೆಯಾಶ್ರಿತ- 323.76),ರಾಗಿ (ಮಳೆಯಾಶ್ರಿತ-307.57), ಸೂರ್ಯಕಾಂತಿ (ನೀರಾವರಿ-339.95), ಸೂರ್ಯಕಾಂತಿ(ಮಳೆ ಆಶ್ರಿತ-283.29), ಟೊಮೋಟೋ (2387.73) ಬೆಳೆಗೆ ವಿಮಾ ಕಂತು ಪಾವತಿಗೆ ಜುಲೈ 31; ದಿನವಾಗಿದೆ. ಉಳಿದಂತೆ ಹುರುಳಿ(ಮಳೆಯಾಶ್ರಿತ-145.69), ರಾಗಿ(ನೀರಾವರಿ- 372.32), ಸಾಮೆ(ಮಳೆ ಆಶ್ರಿತ- 218.54) ಬೆಳೆಗೆ ವಿಮಾ ಕಂತು ಪಾವತಿಗೆ ಆಗಸ್ಟ್ 16 ಕಡೆಯ ದಿನವಾಗಿದೆ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಸೂಚಿಸಲಾಗಿರುವ ಭತ್ತ(ನೀರಾವರಿ ವಿಮಾ ಕಂತಿನ ಮೊತ್ತ 696.08), ಶೇಂಗಾ(ನೀರಾವರಿ- 461.36), ಶೇಂಗಾ(ಮಳೆಯಾಶ್ರಿತ- 372.32), ತೊಗರಿ(ಮಳೆ ಆಶ್ರಿತ- 323.76), ಮುಸುಕಿನ ಜೋಳ(ನೀರಾವರಿ- 477), ರಾಗಿ(ಮಳೆಯಾಶ್ರಿತ) (ವಿಮಾ ಮೊತ್ತ 307.57), ಮುಸುಕಿನ ಜೋಳ(ಮಳೆಯಾಶ್ರಿತ -404.70) ಬೆಳೆಗೆ ವಿಮಾ ಕಂತು ಪಾವತಿಸಲು ಆಗಸ್ಟ್ 15 ಕಡೆಯ ದಿನವಾಗಿದೆ.


ಣ್ಣೆ ಕಾಳು ಬೆಳೆಗಳನ್ನು ಬೆಳೆಯುವಂತೆ ಮನವಿ


ಎಣ್ಣೆಕಾಳುಗಳ ಬೆಳೆಗಳಿಂದ ಉತ್ತಮ ಆದಾಯ ದೊರೆಯುವುದರಿಂದ ರೈತರು ಹೆಚ್ಚಿನ ಪ್ರದೇಶದಲ್ಲಿ ಎಣ್ಣೆಕಾಳುಗಳ ಬೆಳೆಯನ್ನು ಬೆಳೆಯುವಂತೆ ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಮನವಿ ಮಾಡಿದ್ದಾರೆ.

ಎಣ್ಣೆಕಾಳು ಬೆಳೆಗಳು ಮುಖ್ಯ ವಾಣಿಜ್ಯ ಬೆಳೆಗಳಾಗಿದ್ದು, ಕೃಷಿ ಕ್ಷೇತ್ರದ ವಹಿವಾಟಿನಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಈ ಬೆಳೆಗಳಲ್ಲಿ ಶೇಕಡಾ 20-58 ರಷ್ಟು ಎಣ್ಣೆಯ ಅಂಶವಿರುವುದರಿಂದ ಸಸ್ಯ ಜನ್ಯ ಎಣ್ಣೆಯ ಮುಖ್ಯ ಮೂಲವಾಗಿದ್ದು ಮಾನವನ ದಿನನಿತ್ಯದ ಆಹಾರದಲ್ಲಿ ಮುಖ್ಯ ಪಾತ್ರ ವಹಿಸಿವೆ. ಎಣ್ಣೆಯಿಂದ ದೇಹಕ್ಕೆ ಅಗತ್ಯವಾದ ಕೊಬ್ಬಿನಾಂಶ ದೊರೆಯುತ್ತದೆ. ಎಣ್ಣೆಕಾಳುಗಳು ಪ್ರತಿಯೊಬ್ಬರಿಗೂ ಪ್ರತಿನಿತ್ಯ 40 ಗ್ರಾಂ ನಷ್ಟು ಅವಶ್ಯಕತೆ ಇದೆ. ಇದಲ್ಲದೆ ಎಣ್ಣೆಕಾಳುಗಳಿಂದ ತೆಗೆದ ಎಣ್ಣೆಯನ್ನು ಬಣ್ಣ, ಸೋಪು, ಸುಗಂಧ ದ್ರವ್ಯ ಮತ್ತು ಲೂಬ್ರಿಕೆಂಟ್ಸ್ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಎಣ್ಣೆ ತೆಗೆದ ಮೇಲೆ ಉಳಿಯುವ ಉಪ ಉತ್ಪನ್ನವಾದ ಹಿಂಡಿಯನ್ನು ಪಶು ಆಹಾರವಾಗಿ ಉಪಯೋಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ 2008ನೇ ಸಾಲಿನಲ್ಲಿ ಸುಮಾರು 174544 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ ಕ್ರಮೇಣ ಕಡಿಮೆಯಾಗುತ್ತಿದೆ. ಕಳೆದ ವರ್ಷದಲ್ಲಿ 123330 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳನ್ನು ಬೆಳೆಯಲಾಗಿದ್ದು, ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ವಿಸ್ತೀರ್ಣವನ್ನು ಹೆಚ್ಚಿಸುವ ಅಗತ್ಯತೆಯಿದೆ.

ಎಣ್ಣೆಕಾಳು ಬೆಳೆಗಳಾದ ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಸಾಸಿವೆ, ಹುಚ್ಚೆಳ್ಳು, ಹರಳು ಬೆಳೆಗಳನ್ನು ಪೂರ್ಣ ಬೆಳೆಯಾಗಿ ಮತ್ತು ಜಿಲ್ಲೆಯ ಮುಖ್ಯ ಬೆಳೆಗಳಾದ ರಾಗಿ, ನೆಲಗಡಲೆ ಮತ್ತು ಮುಸುಕಿನಜೋಳದೊಂದಿಗೆ ಮಿಶ್ರ ಬೆಳೆಯಾಗಿ ಬಿತ್ತನೆ ಮಾಡಬಹುದಾಗಿದೆ.

ನೆಲಗಡಲೆಯಲ್ಲಿ ಆರು ಸಾಲಿಗೆ ಎರಡು ಸಾಲಿನಂತೆ ಹರಳು, ಎಂಟು ಸಾಲಿಗೆ ಒಂದು ಸಾಲಿನಂತೆ ಹುಚ್ಚೆಳ್ಳು; ರಾಗಿಯಲ್ಲಿ ಆರು ಸಾಲಿಗೆ ಎರಡು ಸಾಲಿನಂತೆ ತೊಗರಿ ಬೆಳೆ, ಎಂಟು ಸಾಲಿಗೆ ಒಂದು/ ಎರಡು ಸಾಲಿನಂತೆ ಹರಳು ಅಥವ ಹುಚ್ಚೆಳ್ಳು ಬೆಳೆ; ರಾಗಿಯಲ್ಲಿ ಆರು ಸಾಲಿಗೆ ಒಂದು ಸಾಲು ಅಕ್ಕಡಿ ಬೆಳೆಯಾಗಿ ಅವರೆ, ಜೋಳ, ಸಾಸಿವೆ ಮತ್ತು ಹುಚ್ಚೆಳ್ಳು ಬೆಳೆ; ನೆಲಗಡಲೆ ಮತ್ತು ರಾಗಿ ಬೆಳೆಯಲ್ಲಿ ಸಾಸಿವೆಯನ್ನು (ಸ್ಪ್ರಿಂಕಲ್) ಚುಮುಕು ಬೆಳೆಯಾಗಿ; ನೆಲಗಡಲೆ ಮತ್ತು ರಾಗಿ ಬೆಳೆಗಳ ಜಮೀನಿನ ಸುತ್ತಲೂ 4-6 ಸಾಲು ಎಳ್ಳು ಅಥವಾ ಹುಚ್ಚೆಳ್ಳು ಅಥವಾ ಹರಳು ಬೆಳೆ; ಹರಳು ಬೆಳೆಯನ್ನು ಪೂರ್ಣ ಬೆಳೆಯಾಗಿಯೂ, ಹರಳು ಬೆಳೆ ಮಧ್ಯದಲ್ಲಿ ಅಲಸಂದೆಯನ್ನು ಮಿಶ್ರ ಬೆಳೆಯಾಗಿಯೂ ಮತ್ತು ಬದುಗಳ ಮೇಲೆಯೂ ಸಹ ಬೆಳೆಯಬಹುದಾಗಿದೆ.

ಈ ಬೇಸಾಯ ಕ್ರಮಗಳನ್ನು ಅನುಸರಿಸುವುದರಿಂದ ಮುಖ್ಯ ಬೆಳೆಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವುದರ ಜೊತೆಗೆ, ಹೆಚ್ಚುವರಿಯಾಗಿ ಮಿಶ್ರ ಬೆಳೆಗಳಲ್ಲೂ ಇಳುವರಿಯನ್ನು ಪಡೆದು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ನೆಲಗಡಲೆ ಮತ್ತು ಸೋಯಾಅವರೆ ಬೆಳೆಗಳು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೇರುಗಳಲ್ಲಿ ಸ್ಥಿರೀಕರಿಸಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಮುಖ್ಯ ಬೆಳೆಗೆ ಬರುವ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಬಹುದು.ಮುಖ್ಯ ಬೆಳೆಯಲ್ಲಿ ಮೇಲ್ಕಂಡ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ಮನೆ ಬಳಕೆಗೆ ಬೇಕಾಗಿರುವ ಧಾನ್ಯಗಳು ದೊರೆಯುವುದಲ್ಲದೆ, ಕುಟುಂಬದ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.