IMG 20220219 WA0000

ಮೇಕೆದಾಟು: ಇದೇ 27 ರಂದು ರಾಮನಗರದಿಂದ ಮತ್ತೆ ಪಾದಯಾತ್ರೆ

POLATICAL STATE

ಹರಿಪ್ರಸಾದ್ ಅವರಿಗೆ ನಾನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಿಸಿದ್ದೇನೆ ಎಂದು ಯಾರಾದರೂ ಹೇಳಿದರೆ ಅದು ತಪ್ಪು.

ಅವರು ಪರಿಷತ್ ಸದಸ್ಯರಾಗಿದ್ದೂ ನನ್ನಿಂದ ಅಲ್ಲ, ವಿರೋಧ ಪಕ್ಷದ ನಾಯಕರಾಗಿರುವುದಕ್ಕೂ ಕಾರಣ ನಾನಲ್ಲ.

Loyalty has given Royalty ಎನ್ನುವ ಹಾಗೆ ಅವರ ಪಕ್ಷನಿಷ್ಠೆಗೆ ಈ ಸ್ಥಾನ ಸಿಕ್ಕಿದೆ. ನಾನು ಈ ವಿಚಾರದಲ್ಲಿ ಕೇವಲ ಕೊಂಡಿ ಅಷ್ಟೇ.

ಅವರು ನನಗಿಂತ ಹಿರಿಯರು. ನನಗೆ ನನ್ನ ಶ್ರಮದ ಜತೆಗೆ ಅದೃಷ್ಟ ಚೆನ್ನಾಗಿತ್ತು. 1985ರಲ್ಲೇ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಟಿಕೆಟ್ ಸಿಕ್ಕಿ ನಾನು ವಿಧಾನ ಸಭೆಗೆ ಸ್ಪರ್ಧೆ ಮಾಡಿದ್ದೆ.

ನನ್ನ ಸ್ಪರ್ಧೆಗೆ ಸಾಕಷ್ಟು ವಿರೋಧ ಇತ್ತು. ಆದರೂ ಮೊದಲ ಬಾರಿಗೆ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದೆ. ನಂತರ 1989 ರಲ್ಲಿ ಶಾಸಕನಾಗಿ ನಂತರ ಮಂತ್ರಿಯೂ ಆದೆ. ಈಗ ಪಕ್ಷದ ಅಧ್ಯಕ್ಷನಾಗಿ ಇಲ್ಲಿ ನಿಂತಿದ್ದೇನೆ.

ನನಗೆ ಬಹಳ ಸಂತೋಷದ ವಿಚಾರ ಎಂದರೆ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಮಾತ್ರ ವಿದ್ಯಾರ್ಥಿ ನಾಯಕರದಾಗಿನಿಂದ ಇಲ್ಲಿಯವರೆಗೆ ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇವೆ.

ಈ ವೇದಿಕೆ ಮೇಲೆ ಕೂತಿರುವ ನಮ್ಮೆಲ್ಲರ ಆಸ್ತಿ ಎಂದರೆ ಅದು ನಾವು ಕಾಂಗ್ರೆಸ್ ಪಕ್ಷಕ್ಕೆ ತೋರಿರುವ ನಿಷ್ಠೆ, ಪ್ರಾಮಾಣಿಕತೆ.

ಕಾಂಗ್ರೆಸ್ ಸಿದ್ಧಾಂತ ಹಾಗೂ ನಾಯಕತ್ವವನ್ನು ಪ್ರತಿಪಾದಿಸಿಕೊಂಡು ಶಿಸ್ತಿನ ಸಿಪಾಯಿಯಾಗಿ ಹರಿಪ್ರಸಾದ್ ಅವರು ಬೆಳೆದಿದ್ದಾರೆ.

ಅವರು ರಾಜ್ಯ ರಾಜಕಾರಣದಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗೆ ನಾಲ್ಕೈದು ಬಾರಿ ಮಂತ್ರಿಯಾಗುತ್ತಿದ್ದರು.

ಅವರು ಎಂದಿಗೂ ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದಾಗ ನಾನು ಅಷ್ಟು ಹೊತ್ತಿಗೆ ಶಾಸಕ ಹಾಗೂ ಮಂತ್ರಿ ಆಗಿದ್ದೆ.

IMG 20220219 WA0001

ರಾಜೀವ್ ಗಾಂಧಿ ಅವರು ದೆಹಲಿಯಿಂದ ನೇರವಾಗಿ ಹರಿಪ್ರಸಾದ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರನ್ನಾಗಿ ಮಾಡಿದರು. ಆಗ ಅಧ್ಯಕ್ಷ ಸ್ಥಾನ ನೀಡಲು ಕೆಲವು ಅಡೆತಡೆಗಳಿದ್ದ ಕಾರಣ ಇವರಿಗಾಗಿ ಉಪಾಧ್ಯಕ್ಷ ಸ್ಥಾನ ಸೃಷ್ಟಿಸಲಾಗಿತ್ತು.

ಅವರು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದು ಈಗ ವಿಧಾನ ಪರಿಷತ್ ಗೆ ಬಂದಿದ್ದಾರೆ.

ಸೂಕ್ತ ಹುದ್ದೆಗೆ ಸೂಕ್ತ ವ್ಯಕ್ತಿ ಹರಿಪ್ರಸಾದ್. ನನಗೆ ಸಾಕಷ್ಟು ಜನ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿದ್ದೀರಿ ಎಂದು ಹೇಳಿದ್ದಾರೆ. ಅದಕ್ಕೆ ನಾನು ಹೇಳಿದೆ, ಅವರನ್ನು ಹುಡುಕಿದ್ದು ನಾನಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಹರಿಪ್ರಸಾದ್ ಅವರನ್ನು ಹುಡುಕಿ ಆ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದೆ.

ಅವರ ನಿಷ್ಠೆ ಇಂದು ಅವರಿಗೆ ಈ ಹುದ್ದೆ ನೀಡಿದೆ.

ನಾಯಕರನ್ನು ಹುಟ್ಟುಹಾಕುವವನೆ ನಿಜವಾದ ನಾಯಕ ಎಂಬಂತೆ ಹರಿಪ್ರಸಾದ್ ಅವರು ಹಲವು ನಾಯಕರನ್ನು ಹುಟ್ಟುಹಾಕಿದ್ದಾರೆ.

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ಹಾಗೆ ಜೀವನದಲ್ಲಿ ನಾವು ಏನಾದರೂ ಸಾಧಿಸಬೇಕು.

ಹರಿಪ್ರಸಾದ್ ಅವರ ಸಾಧನೆ ಎಂದರೆ ಕಾರ್ಯಕರ್ತರನ್ನು ನಾಯಕರನ್ನಾಗಿ ಪರಿವರ್ತನೆ ಮಾಡಿರುವುದು.

ಅವರು ಯೂತ್ ಕಾಂಗ್ರೆಸ್ ಪದಾಧಿಕಾರಿಯಾಗಿದ್ದಾಗ ಇವರಿಗಾಗಿ ಮಂತ್ರಿಗಳೇ ಗಂಟೆಗಟ್ಟಲೆ ಕಾದು ಕುಳಿತಿರುತ್ತಿದ್ದರು. ಅವರ ನಿಷ್ಠೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.

ಇಂದು ಅವರು ನಿಮಗೆ ಒಂದು ಮಾತು ಹೇಳಿದ್ದಾರೆ. ಕಾರ್ಯಕರ್ತರಾಗಿ ನನಗೆ ಸ್ಥಾನಮಾನ ಸಿಕ್ಕಿಲ್ಲ ಎಂದು ಯೋಚಿಸಬೇಡಿ, ನಾನು ಶಿವಕುಮಾರ್ ಇದ್ದೇವೆ. ಹಣವಿದ್ದವರೇ ನಾಯಕರಾಗಬೇಕಿಲ್ಲ ಎಂದು ಹೇಳಿದ್ದಾರೆ.

ಆದರೆ ಏನು ಮಾಡೋದು ಪರಿಸ್ಥಿತಿ ಭಿನ್ನವಾಗಿದೆ. ಇಂದು ಮೂರು ಸಿ ಗಳಾದ Cash, Caste, Candidate ಮನ್ನಣೆ ಪಡೆಯುತ್ತಿವೆ. ಇದು ತಾತ್ಕಾಲಿಕ. ಸಮಯ ಬಂದಾಗ ಪರಿಸ್ಥಿತಿ ಸುಧಾರಿಸಲಿದೆ.

ನಿಮ್ಮ ಗುರಿ ಪಕ್ಷವನ್ನು ಅಧಿಕಾರಕ್ಕೆ ತರುವುದು. ಪಕ್ಷ ಕಷ್ಟ ಕಾಲದಲ್ಲಿತ್ತು. ನಾವೆಲ್ಲ ಶಕ್ತಿ ತುಂಬಿದ್ದೇವೆ.

ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಆಗಿಲ್ಲ. ಉಪಚುನಾವಣೆ, ಸದಸ್ಯತ್ವದ ವಿಚಾರ ಬಂದಿರುವ ಹಿನ್ನೆಲೆಯಲ್ಲಿ ತಡವಾಗಿದೆ. ಈ ತಿಂಗಳ ಒಳಗಾಗಿ ಪಾದಯಾತ್ರೆ ಮುಗಿಯುವುದರೊಳಗೆ ಪ್ರಕಟ ಮಾಡಲು ಪ್ರಯತ್ನಿಸುತ್ತೇವೆ.

ಎಲ್ಲರಿಗೂ ಸ್ಥಾನ ನೀಡಲು ಆಗುವುದಿಲ್ಲ. ನೀವು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಿ. ಪದಾಧಿಕಾರಿಗಳಾದವರೆಲ್ಲ ದೊಡ್ಡ ನಾಯಕರಾಗುವುದಿಲ್ಲ. ಹುಟ್ಟಿದವರೆಲ್ಲಾ ಬಸವ ಆಗಲು ಸಾಧ್ಯವಿಲ್ಲ. ಆದರೆ ನಿಷ್ಠಾವಂತ ಕಾರ್ಯಕರ್ತರಿಗೆ ಒಂದಲ್ಲಾ ಒಂದು ದಿನ ಅವಕಾಶ ಸಿಗಲಿದೆ.

ಡಿವಿಜಿ ಅವರು ಹೇಳಿರುವಂತೆ, ಹುಲ್ಲೂ ಕೂಡ ತಾನು ಪ್ರಯೋಜನವಾಗುವುದಿಲ್ಲ ಎಂದು ಭಾವಿಸುವಂತಿಲ್ಲ. ಗರಿಕೆಗೆ ಸಗಣಿ ಜೊತೆ ಇಟ್ಟು ಗಣೇಶ ಎಂದು ಪೂಜೆ ಮಾಡಲಾಗುತ್ತದೆ. ಹುಲ್ಲುಗಳನ್ನು ಸೇರಿಸಿ ಹಗ್ಗ ಮಾಡಬಹುದು, ಆ ಹಗ್ಗಗಳನ್ನು ಬಳಸಿ ಆನೆಯನ್ನು ಎಳೆಯಬಹುದು. ಹಾಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವಂತಿಲ್ಲ.

ಬೂತ್ ಮಟ್ಟದ ಕಾರ್ಯಕರ್ತನೂ ದೊಡ್ಡ ಮಟ್ಟಕ್ಕೆ ಬೆಳೆದಿರುವ ಅನೇಕ ಉದಾಹರಣೆಗಳಿವೆ. ನಾವು ಕೂಡ ಪಾಳೆಗಾರನ ಮಕ್ಕಳಲ್ಲ. ನಾವು ನಿಷ್ಠೆಯಿಂದ ಕೆಲಸ ಮಾಡಿ ಬೆಳೆದಿದ್ದೇವೆ.

ನಾರಾಯಣಸ್ವಾಮಿ, ಸಲೀಂ ಅಹ್ಮದ್, ರೇವಣ್ಣ, ರಾಮಲಿಂಗಾರೆಡ್ಡಿ ಎಲ್ಲರೂ ತಳ ಮಟ್ಟದಿಂದ ಬೆಳೆದು ಬಂದಿದ್ದಾರೆ.

ಸದಸ್ಯತ್ವ ಆರಂಭವಾಗಿದ್ದು, ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ನಾವು ಹಗಲಿರುಳು ಬಡಿದಾಡುತ್ತಿರುವುದೇಕೆ? ಈ ರಾಷ್ಟ್ರಧ್ವಜಕ್ಕಾಗಿ.

ಇದನ್ನು ಕೊಟ್ಟವರು ಯಾರು? ನಮ್ಮ ಪೂರ್ವಜರೆಲ್ಲರೂ ಸೇರಿ ತ್ಯಾಗಬಲಿದಾನದ ಮೂಲಕ ತಂದುಕೊಟ್ಟಿದ್ದಾರೆ. ಈ ಧ್ವಜ ಇರುವ ಪಕ್ಷದ ಸದಸ್ಯರಾಗುವುದೇ ಭಾಗ್ಯ ಅಲ್ಲವೇ. ನಿಮಗೂ ಸಾಕಷ್ಟು ಅವಕಾಶ ಸಿಗಲಿದೆ.

ಇಂದು ಹರಿಪ್ರಸಾದ್ ಅವರಿಗೆ ಸನ್ಮಾನ ಮಾಡುತ್ತಿಲ್ಲ. ಅಭಿನಂದನೆ ತಿಳಿಸುತ್ತಿದ್ದೇವೆ. ನೀವು ನಾವೆಲ್ಲಾ ಸೇರಿ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಎಲ್ಲರಿಗೂ ಸನ್ಮಾನ.

ನೇರ ನುಡಿಯ ಸ್ನೇಹಿತ. ನಾನು ಏನೇ ತಪ್ಪು ಮಾಡಿದರು ಇದು ಸರಿಯಲ್ಲ ಎಂದು ಹರಿಪ್ರಸಾದ್ ಅವರು ನೇರವಾಗಿ ಹೇಳುತ್ತಾರೆ. ಅವರಿಗೆ ಅಷ್ಟು ಹಿರಿತನವಿದೆ. ಅವರು ಶ್ರಮಜೀವಿ.

ಹರಿಪ್ರಸಾದ್ ಅವರು ಈ ಮಟ್ಟಕ್ಕೆ ಬೆಳೆಯುವಲ್ಲಿ ಅವರ ಜತೆ ಶ್ರಮಿಸಿದ ಸ್ನೇಹಿತರು, ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಉಳಿ ಏಟು ಬಿದ್ದಷ್ಟು ಶಿಲೆ ಸುಂದರವಾಗುತ್ತದೆ. ಅದೇ ರೀತಿ ಇವರು ಕೂಡ ಸಾಕಷ್ಟು ಉಳಿ ಪೆಟ್ಟು ತಿಂದಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆ ಸಮಯದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಹಾಲಿ ಮಂತ್ರಿಗೆ ಟಿಕೆಟ್ ನೀಡುತ್ತೇವೆ ಎಂದರೆ ಬೇಡ ಎಂದರು. ಆದರೆ ಕಾಂಗ್ರೆಸ್ ಪಕ್ಷ ಹೇಳಿದ್ದಕ್ಕೆ ಹರಿಪ್ರಸಾದ್ ಅವರು ಏನೇ ಆದರೂ ನಾನು ಎದುರಿಸುತ್ತೇನೆ ಎಂದು ಸ್ಪರ್ಧೆ ಮಾಡಿದ್ದರು. ಅವರ ಆ ನಿಷ್ಠೆ ಇಂದು ಅವರಿಗೆ ಈ ಗೌರವ ತಂದುಕೊಟ್ಟಿದೆ.

ಈ ಮೂಲಕ ಹರಿಪ್ರಸಾದ್ ಅವರು ನಮ್ಮೆಲ್ಲರಿಗೂ ಆದರ್ಶ ನಾಯಕರಾಗಿದ್ದಾರೆ.

ಕಾರ್ಯಕರ್ತರು ನೀರಿನಂತೆ, ಬಣ್ಣ, ಆಕಾರ, ರುಚಿ ಇಲ್ಲದಿದ್ದರೂ ಎಲ್ಲ ಕಡೆ ಹೊಂದಿಕೊಳ್ಳುತ್ತಾರೆ. ಪಕ್ಷ ಉಳಿಸಲು ಶ್ರಮಿಸುತ್ತಾರೆ.

ಪಕ್ಷ ಅಧಿಕಾರಕ್ಕೆ ಬಂದರೆ ಅಧಿಕಾರ ಅನುಭವಿಸುವವರು ಕೆಲವರು. ಹೀಗಾಗಿ ನಾನು ಅಧ್ಯಕ್ಷನಾದಾಗ ಒಂದು ಮಾತು ಹೇಳಿದ್ದೆ. ಕಾರ್ಯಕರ್ತರ ಧ್ವನಿ ಅಧ್ಯಕ್ಷನ ಧ್ವನಿಯಾಗಬೇಕು. ಹಾಗೆ ನಿಮ್ಮ ಧ್ವನಿ ನನ್ನ ಧ್ವನಿಯಾಗಿರುತ್ತದೆ.

ನನ್ನ ಮಾತು ಒರಟಾಗಿರಬಹುದು. ನನ್ನನ್ನು ಬಂಡೆ ಎಂದು ಕರೆಯುತ್ತೀರಿ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಹಾಗೆ ನನ್ನನ್ನು ಚಪ್ಪಡಿ ಕಲ್ಲಾಗಿಯಾದರೂ ಬಳಸಿಕೊಂಡು ವಿಧಾನಸೌಧದ ಮೆಟ್ಟಿಲು ಮಾಡಿಕೊಂಡು ಅಧಿಕಾರ ಹಿಡಿಯಿರಿ.

ನಾನು ಕೂಡ ಸಾಕಷ್ಟು ಉಳಿ ಪೆಟ್ಟು ತಿಂದಿದ್ದೇನೆ. ಅವನ್ಯಾರೋ ಹೇಳುತ್ತಾನೆ, ನೀನು ಜೈಲಿಗೆ ಹೋಗಿ ಬಂದಿದ್ದೀಯಾ ಅಂತಾ.

ನಾನು ಲಂಚ ಪಡೆದು, ರೇಪ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದೇನಾ? ನನ್ನನ್ನು ನೀವು ಜೈಲಿಗೆ ಕಳುಹಿಸಿದ್ದೀರಿ. ಈಗಲೂ ಸಾಕಷ್ಟು ಕುತಂತ್ರಗಳು ನಡೆಯುತ್ತಿವೆ. ಇದಕ್ಕೆಲ್ಲ ಈ ಡಿ.ಕೆ. ಶಿವಕುಮಾರ್ ಹೆದರುವ ಮಗ ಅಲ್ಲ. ಸಮಯ ಬಂದಾಗ ಇದಕ್ಕೆಲ್ಲ ಉತ್ತರ ನೀಡುತ್ತೇನೆ.

ನಿಷ್ಠಾವಂತ ಕಾರ್ಯಕರ್ತರಿಗೆ ಇಂತಹ ಕಷ್ಟ ಎದುರಾಗುತ್ತದೆ.

ಬಿಜೆಪಿ ಸರ್ಕಾರದಿಂದ ಬೆಂಗಳೂರು ಹಾಗೂ ರಾಜ್ಯಕ್ಕೆ ಕಳಂಕ ಬಂದಿದ್ದು, ಈ ಸರ್ಕಾರ ಕಿತ್ತೊಗೆಯಲು ನೀವೆಲ್ಲರೂ ತ್ಯಾಗ ಮಾಡಬೇಕು.

ನೀವು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ನಿಮಗೆ ಹುದ್ದೆ ಸೃಷ್ಟಿ ಮಾಡಿಯಾದರೂ ನೀಡುತ್ತೇವೆ.

ಶ್ರಮ ಇಲ್ಲದೆ ಫಲ ಇಲ್ಲ, ಭಕ್ತಿ ಇಲ್ಲದೆ ಭಗವಂತನಿಲ್ಲ. ಈ ಪಕ್ಷವನ್ನು ಮುಗಿಸುತ್ತೇವೆ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಎಷ್ಟೇ ಹೇಳಿದರೂ ಅದು ಸಾಧ್ಯವಿಲ್ಲ.

ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ಮಾಡಿ ಬಲಿಷ್ಠ ಸರ್ಕಾರವೇ ಮಂಡಿಯೂರಿ ಕ್ಷಮೆ ಕೋರುವಂತೆ ಮಾಡಿದರಲ್ಲ. ಈ ದೇಶದ ಅನ್ನದಾತ ಎಷ್ಟು ಶಕ್ತಿಶಾಲಿ ಎಂಬುದು ಅರಿವಾಗುತ್ತದೆ.

ಹರಿಪ್ರಸಾದ್ ಅವರು ಹೇಳಿದಂತೆ ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ಪಕ್ಷದ ರಕ್ತ ನಿಮ್ಮ ಮೈಯಲ್ಲಿ ಹರಿಯುತ್ತಿದೆ.

ನಾವು ಪಾದಯಾತ್ರೆ ಮಾಡುತ್ತಿರುವುದು ನನ್ನನ್ನು ಬಿಂಬಿಸಲು ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ, ಜನರ ಸಮಸ್ಯೆಗೆ ಸ್ಪಂದಿಸಲು ನಾವು ಹೆಜ್ಜೆ ಹಾಕುತ್ತೇವೆ.

ಹೆಣ್ಣು ಮಕ್ಕಳು, ವಯಸ್ಸಾದವರು, ಮಕ್ಕಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಇದು ಇತಿಹಾಸ ಪುಟಕ್ಕೆ ಸೇರಿದೆ.

ಇದೇ 27 ರಂದು ರಾಮನಗರದಿಂದ ಮತ್ತೆ ಪಾದಯಾತ್ರೆ ಆರಂಭಿಸಲು ನಿರ್ಧರಿಸಿದ್ದೇವೆ. ನೀವು ಭಾಗವಹಿಸಲು ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.

ಬೆಂಗಳೂರು ನಗರ, ರೈತರ ರಕ್ಷಣೆಗೆ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ 7 ದಿನ ಬಾಕಿ ಉಳಿದಿತ್ತು, ಆದರೆ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 3 ಕ್ಕೆ ಪಾದಯಾತ್ರೆ ಅಂತ್ಯಗೊಳಿಸಲು ತೀರ್ಮಾನಿಸಿದ್ದೇವೆ. ಸದ್ಯದಲ್ಲೇ ಪಾದಯಾತ್ರೆ ಮಾರ್ಗ ಪ್ರಕಟಿಸಲಾಗುವುದು.

ಇದು ಪಕ್ಷಾತೀತ ಹೋರಾಟವಾಗಿದ್ದು, ಎಲ್ಲ ವರ್ಗದವರಿಗೆ ಆಹ್ವಾನ ನೀಡಿ ಕರೆದುಕೊಂಡು ಬನ್ನಿ. ಕಡೇ ದಿನ ಬಸವನಗುಡಿಯಲ್ಲಿ ದೊಡ್ಡ ಸಭೆ ಮಾಡಲಿದ್ದೇವೆ.