ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕರುಗಳಿಗೆ ಪದವಿಪೂರ್ವ ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಬಗ್ಗೆ ಪರಿಶೀಲನೆ – ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ಫೆಬ್ರವರಿ 13 (ಕರ್ನಾಟಕ ವಾರ್ತೆ):
ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕರುಗಳಿಗೆ ಪದವಿಪೂರ್ವ ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಎಸ್. ವ್ಹಿ. ಸಂಕನೂರು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು 1998ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ 2011-12ನೇ ಸಾಲಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಉಪನ್ಯಾಸಕರ ವೃಂದಕ್ಕೆ ಬಡ್ತಿ ಕೋಟಾದಲ್ಲಿ 50:50 ಅನುಪಾತದಲ್ಲಿ ಒಟ್ಟು 1184 ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.
2014ರಲ್ಲಿ 371 ಜೆ (ಕಲ್ಯಾಣ ಕರ್ನಾಟಕ) ಅಧಿಸೂಚನೆ ಹೊರಡಿಸಲಾಗಿದ್ದರಿಂದ ಉಪನ್ಯಾಸಕರ ಜೇಷ್ಟತಾ ಪಟ್ಟಿ ವಿಂಗಡಿಸಿ ತಯಾರಿಸಲು ಕ್ರಮವಹಿಸಲಾಗಿದೆ. ಬಿ.ಕೆ. ಪವಿತ್ರ ಪ್ರಕರಣ 1 ಮತ್ತು 2 ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲವು ನೀಡಿರುವ ತೀರ್ಪಿನನ್ವಯ ಸರ್ಕಾರದ ಆದೇಶ ದಿನಾಂಕ: 06-05-2017 ಮತ್ತು 15-05-2019ರಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕ ವೃಂದ ಸೇರಿದಂತೆ ಎಲ್ಲಾ ವೃಂದಗಳ ಜೇಷ್ಟತಾ ಪಟ್ಟಿಗಳನ್ನು ಪರಿಷ್ಕರಿಸುವ ಕಾರ್ಯ ಹಾಗೂ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲಾಗಿದೆ.
ಸರ್ಕಾರದ ದಿನಾಂಕ: 10-12-2021ರ ಮಾರ್ಗಸೂಚಿಗಳನ್ವಯ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ (ನೇರ ಮತ್ತು ಬಡ್ತಿ) ರಿಕ್ತ ಸ್ಥಾನ ಆಧಾರಿತ ವರ್ಗೀಕರಣ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನು ಅನುಸರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಅಂತಿಮಗೊಳ್ಳುವವರೆಗೂ ರಾಜ್ಯಧೀನ ಸೇವೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗಿರುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉಪನ್ಯಾಸಕರ ವೃಂದಕ್ಕೆ ಮುಂಬಡ್ತಿ ಹೊಂದಿರುವ ಸಹ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ಪಡೆಯಲಾಗಿದೆ.
ಪ್ರಸ್ತುತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೇರ ನೇಮಕಾತಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ದಿನಾಂಕ: 28-12-2022ರಂತೆ ರೋಸ್ಟರ್ ಬಿಂದುಗಳನ್ನು ನಿಗಧಿಗೊಳಿಸಿದ್ದು, ಅದರನ್ವಯ ಮುಂಬಡ್ತಿ ಕೋಟಾದಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.