ಮಾರ್ಚ್ 21ಕ್ಕೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ.
ಮುಂದಿನ ಶೈಕ್ಷಣಿಕ ವರ್ಷದ ಹೊತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ: ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು.
ಬೆಂಗಳೂರು: 18 ಮಾರ್ಚ್, 2022
ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹಾಗೂ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನಕ್ಕೆ ರಾಜ್ಯ ಶಿಕ್ಷಣ ಇಲಾಖೆಯನ್ನು ಸಜ್ಜುಗೊಳಿಸಲು 15 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಲು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಶುಕ್ರವಾರ (ಮಾ.18) ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕ ಸೇರಿದಂತೆ ಒಟ್ಟಾರೆ 15,000 ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 2023-24ನೇ ಸಾಲಿಗೆ ಶಿಕ್ಷಕರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಮಾರ್ಚ್ 21ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಮಾ.23ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 22ರ ವರೆಗೆ ಅವಕಾಶ ಇದೆ. ಮೇ 21 ಮತ್ತು ಮೇ 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ’ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲಾವಾರು ಶಿಕ್ಷಕರ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯತೆ ಅನುಸಾರ ಹುದ್ದೆಗಳನ್ನು ಜಿಲ್ಲೆಗಳ ನಡುವೆ ಹಂಚಿಕೆ ಮಾಡಲಾಗಿದೆ. ಎಂಜಿನಿಯರಿಂಗ್, ಬಯೋಟೆಕ್ನಾಲಜಿ ಪದವೀಧರರಿಗೆ ಹೊಸದಾಗಿ ಅವಕಾಶ ನೀಡಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ.1ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ’ ಎಂದು ಸಚಿವರು ತಿಳಿಸಿದರು.