IMG 20230330 WA0026

JD(S) :ಸಿದ್ದರಾಮಯ್ಯ ಅವರಿಗೆ ಜನರ ಮೂಲಕವೇ ಉತ್ತರ ಕೊಡಿಸುತ್ತೇನೆ….!

POLATICAL STATE

ಸಿದ್ದರಾಮಯ್ಯ ಅವರಿಗೆ ಜನರ ಮೂಲಕವೇ ಉತ್ತರ ಕೊಡಿಸುತ್ತೇನೆ ಎಂದು ಗುಡುಗಿದ ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ವಿರುದ್ಧ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಒಂದಾಗಿವೆ, ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ

ಬೊಮ್ಮಾಯಿ ವಿರುದ್ಧವೂ ವಾಗ್ದಾಳಿ


ಬೆಂಗಳೂರು: ಕಾಂಗ್ರೆಸ್ ಬಿಜೆಪಿ ಪಕ್ಷಗಳು ಒಟ್ಟಾಗಿ ಜೆಡಿಎಸ್ ವಿರುದ್ಧ ಷಡ್ಯಂತ್ರ ರೂಪಿಸಿ, ಎ ಟೀಮ್, ಬಿ ಟೀಮ್ ಗಳಂತೆ ಕೆಲಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಮ್ಮ ವಿರುದ್ಧ ಒಳ ಒಪ್ಪಂದದ ಆರೋಪ ಮಾಡಿವೆ. ಎರಡೂ ಪಕ್ಷಗಳಿಗೆ ನಾಚಿಕೆ ಆಗಬೇಕು ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನಾದರೂ ಈ ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಆರೋಪಕ್ಕೆ ಫುಲ್‌ಸ್ಟಾಪ್ ಇಡಬೇಕು. ಇವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡುವುದೇ ನಿತ್ಯ ಕಾಯಕವಾಗಿದೆ. ಎರಡೂ ಪಕ್ಷಗಳ ಭೀತಿ ಎಷ್ಟಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು ಕುಮಾರಸ್ವಾಮಿ ಅವರು.

ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಹೇಳುತಾರೆ, ಹೈದರಾಬಾದ್ ನಲ್ಲಿ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಆಗಿದೆ ಎಂದು. ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳ್ತಾರೆ, ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಆಗಿದೆ ಎಂದು. ಈ ಇಬ್ಬರಿಗೆ ಇದು ಬಿಟ್ಟು ಬೇರೆ ವಿಚಾರವೇ ಇಲ್ಲವೇ? ವಿಷಯ ಇಲ್ಲ ಅಂದರೆ, ಬೇಕಾದರೆ ಮಾತನಾಡಲು ನಾನೇ ವಿಷಯ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿಗಳು.

ಕಾಂಗ್ರೆಸ್, ಬಿಜೆಪಿಗೆ ಅಧಿಕಾರಕ್ಕೆ ಬರುವ ಯಾವ ಸ್ಪಷ್ಟ ಭರವಸೆಯೂ ಇಲ್ಲ. ಎರಡೂ ಪಕ್ಷಗಳಿಗೆ ಆತಂಕ ಶುರುವಾಗಿದೆ.

ಜೆಡಿಎಸ್‌ನವರು ಎಲ್ಲಿ ಬಿಜೆಪಿ ಜತೆ ಹೋಗ್ತಾರೆ ಅಂತ ಕಾಂಗ್ರೆಸ್‌ನವರಿಗೆ, ಕಾಂಗ್ರೆಸ್ ಜತೆ ಎಲ್ಲಿ ಹೋಗ್ತಾರೆ ಅಂತ ಬಿಜೆಪಿಯವರಿಗೆ ಭಯವಿದೆ. ಹೀಗಾಗಿ ಪದೇಪದೆ ನಮ್ಮನ್ನು ಕೆಣಕುತ್ತಿದ್ದಾರೆ. ನಾನು ಈ ಬಾರಿ 123 ಕ್ಷೇತ್ರಗಳನ್ನು ಗುರಿ ಇಟ್ಟುಕೊಂಡು ಹೊರಟಿದ್ದೇವೆ. ಅದನ್ನು ಸಹಿಸುವುದು ಎರಡೂ ಪಕ್ಷಗಳಿಗೆ ಆಗುತ್ತಿಲ್ಲ. ಹೊಟ್ಟೆಕಿಚ್ಚಿನಿಂದ ಹೀಗೆ ಮಾತನಾಡುತ್ತವೆ ಎಂದು ಕಿಡಿಕಾರಿದರು ಕುಮಾರಸ್ವಾಮಿ ಅವರು.

IMG 20230330 WA0024

ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ತಲುಪಿದ್ದೇನೆ. ಜನತಾ ಪರ್ವ, ಜನತಾ ಸಂಗಮ, ಜನತಾ ಜಲಧಾರೆ, ಜನತಾಮಿತ್ರ, ಪಂಚರತ್ನ ಸಮಾರೋಪ ಸಮಾವೇಶಗಳು ಯಶಸ್ವಿಯಾಗಿವೆ. ಆ ಸಮಾವೇಶಗಳನ್ನು ನೋಡಿ ರಾಷ್ಟ್ರೀಯ ಪಕ್ಷಗಳು ಭಯಭೀತವಾಗಿವೆ ಎಂದು ಅವರು ಹೇಳಿದರು.

ನಿನ್ನೆ ನೋಡಿದೆ, ನಾಲ್ಕೈದು ಸಮೀಕ್ಷೆ ವರದಿಗಳು ಬಂದಿವೆ. ನನಗೆ ಆ ಸಮೀಕ್ಷೆಗಳ ಬಗ್ಗೆ ಆತಂಕವಿಲ್ಲ. ಅದೇ ಸಿ ವೋಟರ್ ಹಿಂದೆ ಕಾಂಗ್ರೆಸ್ 120 ಅಂತ ಭವಿಷ್ಯ ಹೇಳಿತ್ತು, ಕಾಂಗ್ರೆಸ್ ಎಷ್ಟು ಸೀಟುಗಳಲ್ಲಿ ಗೆದ್ದಿತ್ತು? ಎಂದು ಪ್ರಶ್ನಿಸಿದ ಅವರು, ರಾಷ್ಟ್ರೀಯ ಪಕ್ಷಗಳು ತಮ್ಮ ಕಾರ್ಯತಂತ್ರದ ಭಾಗವಾಗಿ ಯಾವುದೋ ಕಂಪನಿ ಹೆಸರಾಕಿ ಸರ್ವೆ ರಿಪೋರ್ಟ್ ಅಂತ ಬಿಡುಗಡೆ ಮಾಡುತ್ತಿವೆ. ನಾನು ಕೂಡ ನಾಳೆ ದುಡ್ಡು ಕೊಟ್ಟು ಈ ರೀತಿ ಮಾಡಿ ಅಂತ ಹೇಳಬಹದು. ಅಂತ ಅಗತ್ಯ ನನಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಪದೇ ಪದೇ ಒಳ ಒಪ್ಪಂದ ಅಂತ ಹೇಳಿಕೆ ನೀಡಿ ಹಾಸ್ಯಾಸ್ಪದಕ್ಕೆ ಒಳಗಾಗಬೇಡಿ ಎಂದು ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಹೇಳಲು ಬಯಸುತ್ತೇನೆ. ನಾನೇನು ಸುಳ್ಳು ಹೇಳೋನಲ್ಲ, ಕೆಲವರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಎರಡೂ ಪಕ್ಷಗಳಲ್ಲಿ ಹೇಗಪ್ಪ ಜೆಡಿಎಸ್‌ ಪಕ್ಷವನ್ನು ವಿಶ್ವಾಸಕ್ಕೆ ಪಡೆಯೋದು ಅಂತ ಸ್ಪರ್ಧೆ ಶುರುವಾಗಿದೆ. ನಾನೇನು ಸುಖಾಸುಮ್ಮನೆ ಹೇಳುತ್ತಿಲ್ಲ ಎಂದು ಖಡಕ್ಕಾಗಿ ಹೇಳಿದರು ಅವರು.

ನಮ್ಮ ಪಕ್ಷದ ಬಗ್ಗೆ ಹೊರಗೆ ಸಣ್ಣತನದ ಹೇಳಿಕೆ ನೀಡುತ್ತಾ ಅವರೇ ಸಣ್ಣವರಾಗ್ತಾ ಇದ್ದಾರೆ. ಜನರಿಗೆ ಇವರ ಯೋಗ್ಯತೆ ಅರ್ಥ ಆಗಿದೆ. ಸತ್ಯ ಗೊತ್ತಿದ್ದೇ ಅವರು ಸುಳ್ಳಿನ ಕಥೆ ಕಟ್ಟುತ್ತಿದ್ದಾರೆ. ಹದಿನೈದು ವರ್ಷದಿಂದ ಇವರ ಹಣೆಬರಹ ನೋಡಿ ಸಾಕಾಗಿದೆ ಎಂದರು ಕುಮಾರಸ್ವಾಮಿ ಅವರು.

ಮುಂದೆ ಬಿಜೆಪಿ, ಕಾಂಗ್ರೆಸ್ ಮೈತ್ರಿ ಆದರೂ ಅಚ್ಚರಿ ಇಲ್ಲ. ಈ ಬಗ್ಗೆ ಯಾವುದೇ ಸಂಶಯವೇ ಬೇಡ. ನನ್ನ ಮೈತ್ರಿ ಸರಕಾರ ತೆಗೆಯಲು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ಹಣ ಕೊಟ್ಟ ವ್ಯಕ್ತಿಗೆ ಮದ್ದೂರುನಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲು ಮುಂದಾಗಿದೆ. ಅದೇ ವ್ಯಕ್ತಿಯ ಬಿಜೆಪಿ ಜತೆಗಿನ ಸಂಬಂಧ ಎಂತದ್ದು? ಆತ ಶ್ರೀಲಂಕಾಕ್ಕೆ ಏಕೆ ಓಡಿ ಹೋಗಿದ್ದ? ಎಂದು ಕುಟುಕಿದರು ಕುಮಾರಸ್ವಾಮಿ ಅವರು.

ಸಚಿವ ನಾರಾಯಣಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಹೊರಟಿದ್ದಾರೆ ಏಕೆ? ಅದರ ಹಿಂದಿನ ಹಕೀಕತ್ತು ಏನು? ಎಲ್ಲವೂ ಜನರಿಗೆ ಗೊತ್ತಿದೆ. ಹೀಗಾಗಿ ಯಾವುದೇ ಅನುಮಾನ ಬೇಡ, ಕಾಂಗ್ರೆಸ್ – ಬಿಜೆಪಿ‌ ಮೈತ್ರಿ ಒಳ ಒಪ್ಪಂದ ಅದೆಷ್ಟು ಆಳವಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್‌ನಲ್ಲಿ ಅಪ್ಪ ಮಕ್ಕಳ ಮಾತನ್ನು ಕೇಳದಿದ್ದರೆ ಪಕ್ಷದಿಂದ ಹೊರ ಹಾಕುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ; ಸಿದ್ದರಾಮಯ್ಯ ಅವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಾವು ಸ್ಟೇಜ್ ಹಾಕಬೇಕಿತ್ತು, ಜನ ಸೇರಿಸಬೇಕಿತ್ತು. ಇವರು ಬಂದು ಕಾಲುಮೇಲೆ ಕಾಲು ಹಾಕಿಕೊಂಡು, ಅದೇ ಚಪ್ಪಲಿ ಕಾಲಿನಿಂದ ದೇವೆಗೌಡರನ್ನು ಇದ್ದುಕೊಂಡು ಕೂರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವತ್ತು ದೇವೆಗೌಡರು‌ ತಮ್ಮ ಮಕ್ಕಳನ್ನು ಮುಂದೆ ನಿಲ್ಲಿಸಿಕೊಂಡಿದ್ದರು. ಸಿದ್ದರಾಮಯ್ಯ ಈ ಪಕ್ಷದಲ್ಲಿ ಪಾಳೆಗಾರಿಕೆ ಮಾಡ್ತಾ ದೇವೆಗೌಡರನ್ನು ಹೆದರಿಸಿಟ್ಟುಕೊಂಡಿದ್ದರು. ಹಿಂದೆ ಬ್ಯಾನರ್‌ನಲ್ಲಿ ಭಾವಚಿತ್ರ ಇಲ್ಲ ಅಂತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಈ ಮಹಾಶಯ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿ ಎರಡು ಸೀಟು ತರಲಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಜೆಡಿಎಸ್ ಬೆಳೆಸದಿದ್ದಾರೆ ನಿಮ್ಮನ್ನು ಕಾಂಗ್ರೆಸ್‌ನವರು ಎಲ್ಲಿ ಕರೆಯುತ್ತಿದ್ದರು. ಮೂಸಿಯೂ ನೋಡುತ್ತಿರಲಿಲ್ಲ. ಮೈಸೂರಲ್ಲಿ ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಮತ್ತೆ ಎಷ್ಟು ಗೆಲ್ಲಿಸಿಕೊಂಡರು. ಹೋಗಲಿ ಅವರು ಗೆದ್ದಿದ್ದು ಎಷ್ಟು ವೋಟಿನಿಂದ? ಕೇವಲ 200 ವೋಟಿನಿಂದ ಗೆದ್ದು ಮುಖ ಉಳಿಸಿಕೊಂಡರು. ಅವರಿಗೆ ಜನತೆಯ ಮೂಲಕ ಉತ್ತರ ಕೊಡಿಸುತ್ತೇನೆ ಎಂದು ಕಿಡಿಕಾರಿದರು ಕುಮಾರಸ್ವಾಮಿ ಅವರು.

ಇದೇ ಸಿದ್ದರಾಮಯ್ಯ ಹಿಂದೆ ಇಕ್ಬಾಲ್ ಅನ್ಸಾರಿ ಅವರನ್ನು ಮಂತ್ರಿ ಮಾಡಬೇಡಿ‌ ಅಂತ ಗಲಾಟೆ ಮಾಡಿದ್ದರು. ಸಭೆಯಿಂದ ಟವೆಲ್ ಕೊಡವಿಕೊಂಡು ಎದ್ದು ಹೋಗಿದ್ದರು. ಎಂಎಲ್‌ಸಿ‌ ಮಾಡಿದ್ದೆ ಹೆಚ್ಚು, ಯಾಕೆ ಮಂತ್ರಿ ಮಾಡ್ತೀರ ಅಂತ ರಚ್ಚೆ ಮಾಡಿದ್ದರು. ಅಂಥ ವ್ಯಕ್ತಿ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

IMG 20230330 WA0023

ಚುನಾವಣೆ ಆಯೋಗಕ್ಕೆ ಮಾಜಿ ಸಿಎಂ ಸಲಹೆ:

ಚುನಾವಣಾ ನೀತಿ ಸಂಹಿತೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೇಲೆ ಹೇರಬೇಡಿ ಎಂದು ಕುಮಾರಸ್ವಾಮಿ ಅವರು ಚುನಾವಣೆ ಆಯೋಗಕ್ಕೆ ಸಲಹೆ ಮಾಡಿದರು.

ಬಡವರ ಚಿಕಿತ್ಸೆಗೆ ನೆರವಾಗಲು ಸಿಎಂ ಪರಿಹಾರ ನಿಧಿ ಬಳಕೆಗೆ ಅವಕಾಶ ನೀಡಿ. ನೀತಿ ಸಂಹಿತೆ ಹೆಸರಲ್ಲಿ ಬಡವರ ಜೀವ ತೆಗೆಯೋದು ಬೇಡ. ಇವತ್ತು ಹತ್ತು ಇಪ್ಪತ್ತು ಲಕ್ಷ ಹಣ ಕಟ್ಟಲು ಸಾಧ್ಯವಾಗದೆ ನಿತ್ಯ ಜನ ಮನೆ ಮುಂದೆ ಬರ್ತಾರೆ. ಅವರಿಗೆ ನೆರವಾಗಲು ಅವಕಾಶ ಮಾಡಿಕೊಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಪಕ್ಷಕ್ಕೆ ಸೇರ್ಪಡೆ:

ಇದಕ್ಕೂ ಮುನ್ನ ಕಂಪ್ಲಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಾವೀ ಮುಖಂಡ ರಾಜೂ ನಾಯ್ಕ್ ಅವರು ತಮ್ಮ ಐದುನೂರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಕೆ ಎನ್ ತಿಪ್ಪೇಸ್ವಾಮಿ ಮುಂತಾದವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.