IMG 20230213 WA0092

ವಿಧಾನ ಪರಿಷತ್ :ಪಿ,ಎಂ. ಕುಸುಮ್ ಯೋಜನೆಯಡಿ ರೈತರ ಪಂಪ್‍ಸೆಟ್‍ಗಳನ್ನು ಸೌರಶಕ್ತಿಗೆ ಪರಿವರ್ತಿಸಲು ಕ್ರಮ…!

Genaral STATE


ಪಿ,ಎಂ. ಕುಸುಮ್ ಯೋಜನೆಯಡಿ ರೈತರ ಪಂಪ್‍ಸೆಟ್‍ಗಳನ್ನು ಸೌರಶಕ್ತಿಗೆ ಪರಿವರ್ತಿಸಲು ಕ್ರಮ – ಸಚಿವ ವಿ. ಸುನೀಲ್ ಕುಮಾರ್

ಬೆಂಗಳೂರು, ಫೆಬ್ರವರಿ 13 (ಕರ್ನಾಟಕ ವಾರ್ತೆ):

ಪಿ,ಎಂ. ಕುಸುಮ್ ಯೋಜನೆಯಡಿ ರೈತರ ಪಂಪ್‍ಸೆಟ್‍ಗಳನ್ನು ಸೌರ ಶಕ್ತಿಗೆ ಪರಿವರ್ತಿಸಲು ಕ್ರಮವಹಿಸಲಾಗುವುದು  ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ  ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್. ಮಂಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿಸೆಂಬರ್ 2022ರ ಅಂತ್ಯಕ್ಕೆ ರಾಜ್ಯದಲ್ಲಿನ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಒಟ್ಟು 33,11,436 ರೈತರ ಕೃಷಿ ಪಂಪ್ ಸೆಟ್‍ಗಳಿಗೆ ವಿದ್ಯತ್ ಸಂಪರ್ಕ ಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರವು ಸೌರ ಚಾಲಿತ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸುವ ಕಾರ್ಯಕ್ರಮ  22-07-2019ರಿಂದ ಜಾರಿಗೆ ತಂದಿರುತ್ತದೆ. ಪಿ.ಎಂ. ಕುಸುಮ್ ಕಂಪೊನೆಂಟ್ – ಬಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 7.5 ಹೆಚ್.ಪಿ. ಸಾಮಥ್ರ್ಯದ ಸೌರ ಪಂಪ್ ಸೆಟ್‍ಗೆ ಶೇಕಡ 30 ರಷ್ಟು ಕೇಂದ್ರ ಸರ್ಕಾರದಿಂದ ಸಹಾಯಧನ ಒದಗಿಸುತ್ತದೆ. ಸರ್ಕಾರದ ದಿನಾಂಕ: 19-03-2022ರ ಆದೇಶದನ್ವಯ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ರೈತ ಫಲಾನುಭವಿಗಲಿಗೆ ಪ್ರತಿ ಸೌರ ಪಂಪ್ ಸೆಟ್‍ಗೆ ಶೇಕಡ 30 ರಷ್ಟು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದ ಫಲಾನುಭವಿಯ ಪಂಪ್ ಸೆಟ್‍ಗೆ ಶೇಕಡ 50 ರಷ್ಟು ಸಹಾಯಧನ ಒದಗಿಸಲಾಗುವುದು. ಇನ್ನುಳಿದ ಹಣವನ್ನು ರೈತ ಫಲಾನುಭವಿಗಳಿಂದ ಭರಿಸಿ ಯೋಜನೆಯನ್ನು ಕ್ರೆಡಲ್ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಯೋಜನೆಯಡಿ 1532 ಅರ್ಜಿಗಳು ಆನ್‍ಲೈನ್ ಮೂಲಕ ನೊಂದಣಿಗೊಂಡಿದ್ದು, ಎಂಪ್ಯಾನೆಲ್ಡ್ ಏಜೆನ್ಸಿಗಳಿಗೆ ಕಾರ್ಯಾದೇಶ ನೀಡುವ ಕಾರ್ಯವು ಪ್ರಗತಿಯಲ್ಲಿದ್ದು, ಅನುಷ್ಠಾನ ಕಾರ್ಯವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.

ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ ಮಾರ್ಗ ಸೂಚಿಗಳನ್ವಯ ಸದರಿ ಯೋಜನೆಯು ಜಾಲಮುಕ್ತ ನೀರಾವರಿ ಪಂಪ್‍ಸೆಟ್‍ಗಳಿಗೆ ಸೀಮಿತವಾಗಿದ್ದು, ಈಗಾಗಲೇ ಗ್ರಿಡ್ ವ್ಯವಸ್ಥೆಯಿಂದ ವಿದ್ಯುತ್ ಸರಬರಾಜು ಹೊಂದಿದ ಕೃಷಿ ಪಂಪ್‍ಸೆಟ್‍ಗಳಿಗೆ ಪಿ.ಎಂ. ಕುಸುಂ ಕಾಂಪೊನೆಂಟ್- ಬಿ ಯೋಜನೆ ಅನ್ವಯಿಸುವುದಿಲ್ಲ.

ಕೇಂದ್ರ ಸರ್ಕಾರದ ಪಿ.ಎಂ. ಕುಸುಮ್ ಕಾಂಪೊನೆಂಟ್  – ಸಿ (ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಎವಂ ಉತ್ತಾನ ಮಹಾಭಿಯಾನ್) ಯೋಜನೆಯಡಿ ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‍ಸೆಟ್‍ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.