Black Fungus in Covid patients

ಕರೊನಾ ಸೋಂಕನ್ನು ತಡೆಗಟ್ಟಲು ಆಯುಷ್ ಪದ್ಧತಿಯನ್ನು ಅನುಸರಿಸಲು ಸಲಹೆ

Genaral STATE
ಕರೊನಾ ಸೋಂಕನ್ನು ತಡೆಗಟ್ಟಲು ಆಯುಷ್ ಪದ್ಧತಿಯನ್ನು ಅನುಸರಿಸಲು ಸಲಹೆ

ಬೆಂಗಳೂರು, ಜೂನ್ 15, (ಕರ್ನಾಟಕ ವಾರ್ತೆ) :
ಆಯುಷ್ ಇಲಾಖೆ ವತಿಯಿಂದ ಕರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಿಗಧಿತ, ನಿಖರವಾದ ಸೂಕ್ತ ಔಷಧಿಗಳು ಇಲ್ಲದ ಕಾರಣ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಆಯುರ್ವೇದ ಸಲಹೆಗಳನ್ನು ನೀಡಿದ್ದಾರೆ.
ಆಯುಷ್ ಪದ್ಧತಿಯಿಂದ ವೈರಾಣು ಸೋಂಕನ್ನು ತಡೆಗಟ್ಟುವ ವಿಧಾನ:
ತಾಜಾ, ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನು ಸೇವಿಸುವುದು. ತುಳಸಿ, ಶುಂಠಿ ಹಾಗೂ ಅರಿಶಿಣಗಳನ್ನು ಬಿಸಿನೀರಿನಲ್ಲಿ ಕುದಿಸಿ ಸ್ವಲ್ಪ ಸ್ವಲ್ಪ ಆಗಾಗ ಕುಡಿಯುವುದು.
ಅಮೃತಬಳ್ಳಿ ಕಾಂಡವನ್ನು ಒಣಗಿಸಿ ಕಷಾಯ ತಯಾರಿಸಿ 15-20 ಮಿಲಿ ದಿನಕ್ಕೆ 2 ಬಾರಿ ಸೇವಿಸುವುದು. ಕೆಮ್ಮು ಇದ್ದಾಗ 1 ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದು. ಶಿತಲೀಕರಿಸಿದ ಪದಾರ್ಥಗಳನ್ನು ಸೇವಿಸಬಾರದು. ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರುವುದು. ವಿಶ್ರಾಂತಿ ಪಡೆಯಿರ ಹಾಗೂ ಸಮಯಕ್ಕೆ ಸರಿಯಾಗಿ ನಿದ್ರಿಸಿ.
ರೋಗನಿರೋಧಕ ಶಕ್ತಿ ವರ್ಧಿಸುವ ಆಯುರ್ವೇದ ಸಲಹೆಗಳು:
ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಎರಡು ಮೂಗಿನ ಹೊಳ್ಳೆಗೆ ದಿಕ್ಕೆರಡು ಬಾರಿ ಸವರಿಕೊಳ್ಳುವುದು. 1ಟೇಬಲ್ ಸ್ಫೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 2-3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಬೇಕು ಇದನ್ನು ದಿನಕ್ಕೆರಡು ಬಾರಿ ಮಾಡುವುದು.
ಒಣಕೆಮ್ಮು ಹಾಗೂ ಗಂಟಲುಕೆರೆತದ್ದಲ್ಲಿ:
ಪುದೀನ ಎಲೆ ಅಥವಾ ಓಮದಕಾಳುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಹಬೆ(ಆವಿ)ಯನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳುವುದು. ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2-3 ಬಾರಿ ಸೇವಿಸುವುದು. ಈ ವಿಧಾನಗಳನ್ನು ರೋಗದ ಲಕ್ಷಣಗಳೂ ಕಡಿಮೆ ಇದ್ದಾಗ ಅನುಸರಿಸಿ. ಹಾಗೇ ಮುಂದುವರೆದಲ್ಲಿ ವೈದ್ಯರ ಸಲಹೆ ಪಡೆಯುವುದು.
ರೋಗನಿರೋಧಕ ಶಕ್ತಿ ವರ್ಧಿಸುವ ಆಯುರ್ವೇದ ಸಲಹೆಗಳು:
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಕ್ವಾಥ, /ಜೊಶಾಂದಾ, ಅಶ್ವಗಂಧ, ಅಸ್ಗಂದ್ ಕಷಾಯ, ಅರ್ಕ್-ಎ-ಅಜೀಬ್ ಅನ್ನು ಬಳಸುವುದು. ನಿಯಮಿತವಾಗಿ ಬಿಸಿ ನೀರು ಕುಡಿಯುವುದು, ಪ್ರತಿದಿನ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು. ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು. ಆಯುರ್ವೇದ ಪದ್ಧತಿಯಲ್ಲಿ ಹೇಳಲಾದ ದಿನಚರ್ಯ ಹಾಗೂ ಋತುಚರ್ಯೆಯನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯಗಳಿಸಬಹುದು.
ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:
ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವೈಯುಕ್ತಿಕ ಸ್ವಚ್ಚತೆ ಕಾಪಾಡಿಕೊಂಡು ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್/ಕರವಸ್ತ್ರ ಉಪಯೋಗಿಸುವುದು, ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು, ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸುವುದು, ಅಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು.
ಹೆಚ್ಚಿನ ಮಾಹಿತಿಗಾಗಿ : ಸಮೀಪದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಹಾಗೂ ಆಯುಷ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು.