ಜಿಲ್ಲೆಯಲ್ಲಿ ಶೇ.25ರಷ್ಟು ಲಸಿಕಾಭಿಯಾನ ಯಶಸ್ವಿ; ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ
ತುಮಕೂರು(ಕವಾ)ಜೂ.14: ಜಿಲ್ಲೆಯಲ್ಲಿ ಈವರೆಗೂ ನಡೆಸಿದ ಕೊರೋನಾ ಲಸಿಕಾ ಅಭಿಯಾನದಲ್ಲಿ ಶೇ.25ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಲಸಿಕಾಕರಣ ನಡೆಸುವ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ಮಾರ್ಗಸೂಚಿಯನ್ವಯ ಲಸಿಕೆ ಹಾಕುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 20ಲಕ್ಷ ಜನರಿದ್ದು, 663838 ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 18 ರಿಂದ 44 ವರ್ಷದೊಳಗಿನ 71 ಸಾವಿರಷ್ಟು ಜನರಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೂ ಒಟ್ಟು ಸೇರಿ 545171 ಮೊದಲ ಡೋಸ್ ಹಾಗೂ 118667 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಸಹ ಸೇರ್ಪಡೆಗೊಂಡಿದ್ದಾರೆ ಎಂದರು.
ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಸೇರಿ ಚಿಕ್ಕನಾಯಕನಹಳ್ಳಿಯಲ್ಲಿ ಒಟ್ಟು 50065, ಗುಬ್ಬಿ-62351, ಕೊರಟಗೆರೆ-39198, ಕುಣಿಗಲ್-51463, ಮಧುಗಿರಿ-56376, ಪಾವಗಡ-45369, ಶಿರಾ-65177, ತಿಪಟೂರು+60328, ತುಮಕೂರು-185518 ಹಾಗೂ ತುರುವೇಕೆರೆಯಲ್ಲಿ 47993 ಡೋಸ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಆದ್ಯತಾ ವಲಯಗಳಿಗೆ ಲಸಿಕೆ ನೀಡಲಾಗುತ್ತಿರುವ ಜೊತೆಗೆ ಹಾಲುಣಿಸುವ ತಾಯಂದಿರು ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ನಟರಾಜು ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿ ಪ್ರತಿ ಗ್ರಾಮವಾರು ಹಾಲುಣಿಸುವ ತಾಯಂದಿರ ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಾಯಂದಿರ ಪ್ರತ್ಯೇಕ ಪಟ್ಟಿ ತಯಾರಿಸಿ, ತಯಾರಿಸಿದ ಪಟ್ಟಿಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಲಸಿಕಾಕರಣ ಮಾಡಿಸುವ ಸಂಬಂಧ ಪ್ರತಿ ಗ್ರಾಮವಾರು ದಿನಾಂಕ ನಿಗಧಿ ಮಾಡಿ ಯೋಜನೆ ಸಿದ್ದಪಡಿಸಿ ಕೊಂಡು ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಿ ಆರ್ ಸಿಎಚ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ವಹಿಸಿ ಜರೂರಾಗಿ ಲಸಿಕಾಕರಣ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.