ಜಲಜೀವನ್ ಮಿಷನ್ ನಡಿ 7 ಬೃಹತ್ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ಜುಲೈ 01, (ಕರ್ನಾಟಕ ವಾರ್ತೆ):- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಜಲಜೀವನ್ ಮಿಷನ್ ಹಾಗೂ ಸ್ವಚ್ಫ ಭಾರತ ಮಿಷನ್ (ಗ್ರಾ) ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಈ ಎರಡು ಯೋಜನೆಗಳ ಸೌಲಭ್ಯಗಳು ಗ್ರಾಮೀಣ ಜನರಿಗೆ ತ್ವರಿತಗತಿಯಲ್ಲಿ ತಲುಪಿಸುವಲ್ಲಿ ಇಲಾಖೆಯು ಹಲವು ಮಹತ್ವ ಹೆಜ್ಜೆಗಳನಿಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಸಚ್ಛಭಾರತ್ ಅಭಿಯಾನಕ್ಕೆ ಸಂಬಂಧಸಿದಂತಹ “ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ, ಕಾರ್ಯತಂತ್ರ ಮತ್ತು ಮಾದರಿ ಉಪವಿಧಿಗಳು, ಸ್ವಚ್ಛ ಸಂಕೀರ್ಣ ಮತ್ತು ಸ್ವಚ್ಛತೆಯ ಕೈಪಿಡಿ”ಗಳನ್ನು ಸಚಿವರು ಬಿಡುಗಡೆ ಮಾಡಿದರು.
ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ, ಕಾರ್ಯತಂತ್ರ ಮತ್ತು ಮಾದರಿ ಉಪವಿಧಿಗಳು ಪುಸ್ತಕವು ಗ್ರಾಮೀಣ ಭಾಗದ ಎಲ್ಲಾ ಜನವಸತಿಗಳಲ್ಲಿ ನೈರ್ಮಲ್ಯ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಪೂರಕವಾದ ವಿನೂತನ ನೈರ್ಮಲ್ಯ ಕಾರ್ಯತಂತ್ರಗಳನ್ನು ಹೊಂದಿದೆ. ಗ್ರಾಮೀಣ ನೈರ್ಮಲ್ಯ ನೀತಿಯಲ್ಲಿ “ಬಯಲು ಬಹಿರ್ದೆಸೆ ಮುಕ್ತ” ಸುಸ್ಥಿರತೆಯ ಮುಂದುವರೆದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹಾಗೂ ನೈರ್ಮಲ್ಯ ಕಾರ್ಯತಂತ್ರ ರೂಪಿಸಿ, ಕಾರ್ಯಗತಗೊಳಿಸಲು ಹಾಗೂ ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾದರಿ ಉಪವಿಧಿಗಳನ್ನು ಸಹ ಸದ್ಧಪಡಿಸಲಾಗಿದೆ. ಇದು ದೇಶದಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ನೈರ್ಮಲ್ಯ ನೀತಿಯನ್ನು ರೂಪಿಸಿರುವ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.
ಸ್ವಚ್ಛತೆಯ ಕ್ಯಪಿಡಿಯು ನೀರು, ನೈರ್ಮಲ್ಯ ಶುಚಿತ್ವ, ಘೋಷಣೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತದೆ. ಇದರ ಪ್ರಾಮುಖ್ಯತೆಯನ್ನು ವಿವಿಧ ಸಭೆಗಳಲ್ಲಿ ಸಮುದಾಯವನ್ನು ನೀರು ಮತ್ತು ನೈರ್ಮಲ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಾಗೂ ವಿವಿಧ ಹಂತದ ಅಧಿಕಾರಿ ವರ್ಗ, ಶಾಲಾ ಮುಕ್ಕಳು, ಶಿಕ್ಷಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಯೋಜನೆಯ ಭಾಗೀದಾರರಿಗೆ ಸಾಮಥ್ರ್ಯಾಭಿವೃದ್ಧಿ ಮಾಡಲು ಈ ಕೈಪಿಡಿಯು ಸಹಾಯವಾಗಲಿದೆ ಎಂದರು.
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ, ಪ್ರತಿದಿನ 55 ಲೀಟರ್ ಶುದ್ಧ-ಸುರಕ್ಷಿತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಮಂತ್ರಾಲಯವು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಹ 2023ರ ವೇಳೆಗೆ ಇಲ್ಲಾ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಸುರಕ್ಷಿತ ಕುಡಿಯುವ ನೀರು ಒದಗಿಸಲು ಮನೆ ಮನೆಗೆ ಗಂಗೆ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಮತ್ತು ಜವಾಬ್ದಾರಿಯನ್ನು ಗಮನದಲ್ಲಿಟ್ಟುಕ್ಕೊಂಡು ಜಲಜೀವನ್ ಮಿಷನ್-ಮನೆ ಮನೆ ಗಂಗೆ ಮಾರ್ಗದರ್ಶಿಯನ್ನು ಸಿದ್ದಪಡಿಸಲಾಗಿದೆ ಎಂದರು
ನಂತರ ಮಾತನಾಡಿದ ಸಚಿವರು ಗ್ರಾಮೀಣ ಭಾಗದ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒಡಗಿಸುವ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 7 ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಿರುತ್ತದೆ. ಈ ಯೋಜನೆಯಿಂದ 4647 ಗ್ರಾಮೀಣ ಜನವಸತಿಗಳು ( 51 ಲಕ್ಷ ಜನ ಸಂಖ್ಯೆ) ಶುದ್ಧ ಕುಡಿಯುವ ನೀರನ್ನು ಪಡೆಯಲಿವೆ. ಇದರ ಜೊತೆಗೆ 27 ನಗರ ಪ್ರದೇಶಗಳು ಸೇರಿದ್ದು (ಅಂದಾಜು 6.00 ಲಕ್ಷ ಜನಸಂಖ್ಯೆ), ಈ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಈ ಯೋಜನೆಯ ಒಟ್ಟು ರೂ. 6768.85 ಕೋಟಿ ಇದ್ದು, ಕೇಂದ್ರ ಹಾಗೂ ರಾಜ್ಯದ ಸಹ ಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು. ಈ ಯೋಜನೆಯು ಕಾರ್ಯಾರಂಭವಾದ ನಂತರ 24/30 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗುವುದು. ಮೊದಲನೆಯ ಬಾರಿಗೆ ಇಷ್ಟು ದೊಡ್ಡ ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುವ ಮೊದಲೇ ಮಳೆ ನೀರು ಸಂರಕ್ಷಣೆಗೆ ಅಗತ್ಯವಿರುವ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಏಪ್ರಿಲ್-1 ರಿಂದ 100 ದಿನಗಳ ಅವಧಿಗೆ “ಜಲಶಕ್ತಿ ಅಭಿಯಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದು, ಸದರಿ ಅಭಿಯಾನದಲ್ಲಿ ವ್ಯಾಪಕವಾಗಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಿಯಮಿತವಾಗಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ
ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಒಟ್ಟು 13.00 ಕೋಟಿ ಮಾನವ ದಿನಗಳನ್ನು ಸೃಜಿಸಲು ಗುರಿಯನ್ನು ನೀಡಲಾಗಿದ್ದು, ಈವರೆಗೆ ಒಟ್ಟು 4.49 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಒಟ್ಟು 18.68 ಲಕ್ಷ ಕುಟುಂಬಗಳಿಗೆ ಯೋಜನೆಯಡಿ ಉದ್ಯೋಗವನ್ನು ಕಲ್ಪಿಸಲಾಗಿದೆ ಹಾಗೂ ಒಟ್ಟು 9.10 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಸುಮಾರು 84,000 ಕಾಮಗಾರಿಗಳನ್ನು ಈಗಾಗಲೇ ಮುಕ್ತಾಯಗೊಳಿಸಲಾಗಿದೆ. ಎಂದು ಸಚಿವರು ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ಒಟ್ಟು 1544.45 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು, ಅದರಲ್ಲಿ ಒಟ್ಟು ವೆಚ್ಚದ ಶೇ. 80 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ನಿರ್ವಹಿಸಲಾಗಿದೆ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಲಶಕ್ತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸುವ ನಿಟ್ಟಿನಲ್ಲಿ ಜಲ ಸಂರಕ್ಷಣೆ ಹಾಗೂ ಇತರೆ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಕಳದ ಜಾಗೃತಿ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಎಲ್ಲ 6009 ಗ್ರಾಮ ಪಂಚಾಯತ್ ಗಳಲ್ಲಿ ವನಮಹೋತ್ಸವ ಆಚರಣೆ ಮಾಡಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಚಿವರು ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಲವು ಗಣ್ಯರು ಉಪಸ್ಥಿತರಿದ್ದರು.