ಅವಿಚ್ಛಿನ್ನ ಪರಂಪರಾ ಕೂಡ್ಲಿ-ಶೃಂಗೇರಿ ಮಠಕ್ಕೆ ಪೀಠಾಧಿಪತಿ ನೇಮಕ –ಭಕ್ತರ ನಿರ್ಧಾರ
ಬೆಂಗಳೂರು-04 ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರ ಭಗವತ್ಪಾದರ ತತ್ವ ಸಿದ್ಧಾಂತ, ಸಂದೇಶಗಳನ್ನು ಇಡೀ ಮನುಕುಲಕ್ಕೆ ಪ್ರಚುರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಶತಮಾನಗಳ ಇತಿಹಾಸವುಳ್ಳ ಚಾಮರಾಜಪೇಟೆಯಲ್ಲಿರುವ ಅವಿಚ್ಛಿನ್ನ ಪರಂಪರಾ ಶ್ರೀ ಕೂಡ್ಲಿ-ಶೃಂಗೇರಿ ಮಠಕ್ಕೆ ಬೃಹ್ಮೀಭೂತ ಶ್ರೀ ಶ್ರೀ ಶ್ರೀ ವಿದ್ಯಾಭಿನವ ಶಂಕರ ಭಾರತಿ ಅವರ ಲಿಖಿತ ಅಧಿಕೃತ ಆದೇಶ ಹಾಗೂ ಅಪೇಕ್ಷೆಯಂತೆ ಭಾರತದಾದ್ಯಂತ ಮನ್ನಣೆ ಪಡೆದಿರುವ ವೇದ, ಉಪನಿಷತ್ತು ಹಾಗೂ ಸಂಸ್ಕøತ ಭಾಷಾ ಬೆಳವಣಿಗೆಗೆ ಅಪಾರ ಸೇವೆ ಸಲ್ಲಿಸಿರುವ ಪಂಡಿತ ಪ್ರಕಾಂಡ ಬ್ರಹ್ಮಶ್ರೀ ಭಾಲಚಂದ್ರ ಶಾಸ್ತ್ರಿಗಳ ಪೌತ್ರರಾಗಿರುವ ಯುವ ಸಂಸ್ಕøತ ವಿದ್ವಾಂಸ ಹಾಗೂ ವೇದವಿದ್ವಾನ್ ಪಂಡಿತ ಜನಾರ್ಧನ ಶಾಸ್ತ್ರಿ ಜೋಶಿಯವರನ್ನು ಶ್ರೀಮಠದ ಮುಂದಿನ ಪೀಠಾಧಿಪತಿಗಳನ್ನಾಗಿ ಇಂದು ನಡೆದ ಶ್ರೀಮಠದ ಭಕ್ತರ ಹಾಗೂ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ನೇಮಕ ಮಾಡಲಾಗಿದೆ.
ಶ್ರೀಮಠದ ಪ್ರಾಂಗಣದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಮಠದ ಹಲವಾರು ಭಕ್ತರ ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇಂದಿನಿಂದಲೇ ಶ್ರೀಮಠದ ಎಲ್ಲ ವ್ಯವಹಾರ ನಿರ್ವಹಣೆ ಹಾಗೂ ಶ್ರೀಮಠದ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಮಹಾನಗರ ಪಾಲಿಕೆಯ ಅಧಿಕೃತ ಅನುಮತಿಯೊಂದಿಗೆ ಕೋವಿಡ್‍ನ ಎಲ್ಲ ನಿಯಮಾವಳಿಗಳನ್ನು ಪರಿಪಾಲಿಸಿ ನಡೆಸಲಾದ ಸಭೆ, ವೇದ, ಘೋಷಗಳೊಂದಿಗೆ ಆರಂಭವಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ರವಿ ದೇಶಪಾಂಡೆ, ಪೂಜ್ಯ ಶ್ರೀಗಳ ಬ್ರಹ್ಮೈಕ್ಯದ ನಂತರ ನಡೆದ ಎಲ್ಲ ವಿದ್ಯಮಾನಗಳನ್ನು ಸಭೆಯ ಮುಂದಿಟ್ಟರು. ಅಲ್ಲದೇ ನೂತನ ಪೀಠಾಧಿಪತಿಗಳ ನೇಮಕ ಕುರಿತಂತೆ ಪ್ರಸ್ತಾವನೆ ಮಂಡಿಸಿದರು.
ಈ ಸಂದರ್ಭದಲ್ಲಿ ಹಿಂದಿನ ಶ್ರೀಗಳು ಒಂದು ವರ್ಷದ ಹಿಂದೆಯೇ ಮುಂದಿನ ಪೀಠಾಧಿಪತಿ ನೇಮಕ ಕುರಿತು ಸಿದ್ಧಪಡಿಸಿದ್ದ ಅಧಿಕೃತ ಪತ್ರ ಹಾಗೂ ನಿಯೋಜಿತ ಪೀಠಾಧಿಪತಿಯವರ ತಂದೆ ತಾಯಿಗೆ ಶ್ರೀಗಳೇ ಖುದ್ದಾಗಿ ಬರೆದ ಪತ್ರವನ್ನು ಸಭೆಯ ಮುಂದಿಟ್ಟರು.
ಹಾಗೂ ಶ್ರೀಕ್ಷೇತ್ರ ಹೆಬ್ಬಳ್ಳಿಯ ಚೈತನ್ಯಾಶ್ರಮದ ಪರಮ ಪೂಜ್ಯ ದತ್ತಾವಧೂತ ಮಹಾರಾಜರೊಂದಿಗೆ ಪೂಜ್ಯ ಸ್ವಾಮಿಗಳು, ವಿದ್ವಾನ್ ಜನಾರ್ಧನ ಶಾಸ್ತ್ರಿ ಜೋಶಿಯವರೇ ಮುಂದಿನ ಪೀಠಾಧಿಪತಿ ಎಂದು ಘೋಷಿಸಿದ್ದ ದೂರವಾಣಿ ಸಂಭಾಷಣೆಯನ್ನು ಸಭೆಯಲ್ಲಿ ಪ್ರಸಾರ ಮಾಡಲಾಯಿತು.
ಪೀಠಾಧಿಪತಿ ನೇಮಕ ಕುರಿತಂತೆ ನರೇಗಲ್ಲದ ಭಕ್ತರಾದ ಸಂಜೀವ ಕುಲಕರ್ಣಿ ಹಾಗೂ ಕೋಳಿವಾಡದ ಶ್ರೀನಿವಾಸ ಕುಲಕರ್ಣಿ, ಪೂಜ್ಯ ಶ್ರೀಗಳ ಅಪೇಕ್ಷೆಯಂತೆಯೇ ಹಾಗೂ ದಾಖಲೆಯಂತೆ ಜನಾರ್ಧನ ಶಾಸ್ತ್ರಿ ಜೋಶಿಯವರನ್ನೇ ಶ್ರೀಮಠದ ಪೀಠಾಧಿಪತಿಗಳನ್ನಾಗಿ ನೇಮಕ ಮಾಡಿ ಬ್ರಹ್ಮೈಕ್ಯ ಶ್ರೀಗಳ ಮಹದಾಸೆ ಈಡೇರಿಸಲು ತಾವು ಸೂಚಿಸುವುದಾಗಿ ಹೇಳಿದರು.
ಬೆಂಗಳೂನಿನ ಅಶ್ವಥನಾರಾಯಣ ಶೆಟ್ಟಿ, ರವೀಂದ್ರ ಡಂಬಳ ಹಾಗೂ ಚಂದ್ರಮೌಳಿ ಸಿಂಧಗಿ ಹಿಂದಿನ ಶ್ರೀಗಳ ಅಪೇಕ್ಷೆಯಂತೆಯೇ ಕೂಡಲೇ ಜನಾರ್ಧನ ಶಾಸ್ತ್ರಿಯವರಿಗೆ ಸಂನ್ಯಾಸ ದೀಕ್ಷೆ ಹಾಗೂ ಪೀಠಾರೋಹಣ ಕಾರ್ಯ ನಡೆಸಬೇಕು ಎಂಬ ಸೂಚಕರ ಹೇಳಿಕೆಯನ್ನು ಅನುಮೋದಿಸಿದರು.
ಅವಿಚ್ಛಿನ್ನ ಪರಂಪರಾ ಕೂಡ್ಲಿ-ಶೃಂಗೇರಿ ಮಠಕ್ಕೆ ವಿದ್ವಾನ್ ಜನಾರ್ಧನ ಶಾಸ್ತ್ರಿ ಜೋಶಿಯವರನ್ನು ಪೀಠಾಧಿಪತಿಗಳನ್ನಾಗಿ ನೇಮಕ ಮಾಡುವುದಕ್ಕೆ ಸಭೆ ಸರ್ವಾನುಮತದ ನಿರ್ಣಯ ಸ್ವೀಕರಿಸಿತು.
ಈ ಸಂದರ್ಭದಲ್ಲಿ ಹೆಬ್ಬಳ್ಳಿಯ ಚೈತನ್ಯಾಶ್ರಮದ ಪರಮ ಪೂಜ್ಯ ದತ್ತಾವಧೂತ ಮಹಾರಾಜರು ವ್ಹಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಪಾಲ್ಗೊಂಡು, ಹಿಂದಿನ ಶ್ರೀಗಳ ಅಪೇಕ್ಷೆಯಂತೆ ನೂತನ ಪೀಠಾಧಿಪತಿಗಳನ್ನು ನೇಮಕ ಮಾಡುವ ಶ್ರೀಮಠದ ಭಕ್ತರ ಹಾಗೂ ಆಡಳಿತ ಮಂಡಳಿಯ ಸದಸ್ಯರ ಒಕ್ಕೊರಲ ನಿರ್ಣಯಕ್ಕೆ, ಸಂತಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸಭೆಯಲ್ಲಿ ಶ್ರೀಮಠದ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಶ್ರೀಮದ್ ಜಗದ್ಗುರು ಪಾಠಶಾಲೆಯ ಮುಖ್ಯಸ್ಥರಾದ ಪಂಡಿತ ರಾಜೇಶ್ವರ ಶಾಸ್ತ್ರಿ ಜೋಶಿ, ಪಂಡಿತರಾದ ನಾಗೇಶ ಶಾಸ್ತ್ರಿ, ಡಾ|| ವೇಣಿ ಮಾಧವ ಶಾಸ್ತ್ರಿ, ನಾರಾಯಣ ಜೋಯಿಸ್, ಶ್ರೀಧರ ಇನಾಮದಾರ, ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ|| ಮಹೇಶ ವಾಳ್ವೇಕರ, ಕಾರ್ಯದರ್ಶಿ ಅಶ್ವಥ ನಾರಾಯಣ ಕುಮಾರ, ನಿನಾದ ಕಾಶಿಕರ, ನವನೀತ ಜೋಶಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಪ್ರಕಾಶ ನಾಡಿಗೇರ, ಹಾಗೂ ರಮಾದೇವಿ ಜೋಶಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶ್ರೀಮಠದ ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೊನೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶ್ವಥನಾರಾಯಣ ಕುಮಾರ ವಂದಿಸಿದರು.