ಮೈಸೂರಿನಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ
ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲಕ್ಕೆ ಸಂಬಂಧಿಸಿದ ಅಡಚಣೆ ನಿವಾರಣೆ- ಸಚಿವ ಸಿ.ಸೋಮಶೇಖರ್
ಬೆಂಗಳೂರು: ಎಪಿಎಂಸಿಗಳಿಗೆ ಬರುತ್ತಿದ್ದ ಸೆಸ್ ಈಗ ಕಡಿಮೆಯಾಗಿದೆ. ಎಪಿಎಂಸಿಗಳ ಅಭಿವೃದ್ಧಿಗೆ ಕಳೆದ ವರ್ಷ 205 ಕೋಟಿ ರೂಪಾಯಿ ಕೊಟ್ಟಿದ್ದರು. ಈ ಬಾರಿ ಪ್ರತಿ ಎಪಿಎಂಸಿಗೆ 2ರಿಂದ 15 ಕೋಟಿ ಕೊಡಲು ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಎಲ್ಲಾ ಎಪಿಎಂಸಿಗಳ ಅಭಿವೃದ್ಧಿಗೆ ಶೀಘ್ರವೇ ಚಾಲನೆ ಕೊಡಲಾಗುವುದು ಎಂದು ರಾಜ್ಯದ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರು ತಿಳಿಸಿದರು.
ಮೈಸೂರಿನಲ್ಲಿ ಇಂದು ನಡೆದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರೈತರಿಗೆ 15,300 ಕೋಟಿ ನಿಗದಿತ ಗುರಿಯ ಬದಲಾಗಿ 16,795 ಕೋಟಿ ಅಂದರೆ ಶೇ 116ರಷ್ಟು ಸಾಲ ಕೊಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಈ ವರ್ಷ ಸುಮಾರು 30 ಲಕ್ಷ ರೈತರಿಗೆ 20,810 ಕೋಟಿ ರೂಪಾಯಿ ಸಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರತಿಯೊಂದು ಡಿಸಿಸಿ ಬ್ಯಾಂಕ್‍ಗಳಲ್ಲಿ ಅಗತ್ಯ ಇರುವ ಎಲ್ಲಾ ರೈತರಿಗೆ ಸಾಲ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಆದಾಯ ತೆರಿಗೆ ಪಾವತಿಸುತ್ತಿರುವವರು ಮತ್ತು ಪಿಂಚಣಿ ಪಡೆಯುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಶೂನ್ಯ ಬಡ್ಡಿ ಸಾಲಕ್ಕೆ ಇದ್ದ ಅಡಚಣೆಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಮುಖ್ಯಮಂತ್ರಿಗಳಾದ ಬಳಿಕ ಸಾಲ ಮನ್ನಾ ಸಂಬಂಧ ಈಗಾಗಲೇ 9 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಇನ್ನು 43 ಸಾವಿರ ಜನರಿಗೆ ಸಾಲ ಮನ್ನಾ ಮಾಡುವುದು ಬಾಕಿ ಇದೆ ಎಂದ ಅವರು, ಕೇಂದ್ರ ಸರಕಾರವು ಕೃಷಿ ಮತ್ತು ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಮಾಡಿದ್ದು, ಇದಕ್ಕಾಗಿ ಪ್ರಧಾನಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಮಳೆಯಿಂದ ಕಬಿನಿ, ಕೆಆರ್ ಎಸ್ ಜಲ ಮಟ್ಟ ಹೆಚ್ಚಳದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಮೈಸೂರು, ಕೊಡಗು ಸುತ್ತಮುತ್ತ ಅಣೆಕಟ್ಟು ತುಂಬುತ್ತಿದ್ದರೂ ಗಂಭೀರ ಹಾನಿ ಆಗಿಲ್ಲ ಎಂದು ವಿವರಿಸಿದರು. ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ರೈತ ಮೋರ್ಚಾ ರಾಜ್ಯ ಅಧ್ಯಕ್ಷರು ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ರೈತರಿಗೆ ತೊಂದರೆ ಆಗುವುದಿದ್ದರೆ ಅದರ ಕಡೆ ಗಮನ ಸೆಳೆಯುತ್ತಿದ್ದಾರೆ ಎಂದರು.
ರೈತ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಆದ ಶ್ರೀ ಈರಣ್ಣ ಕಡಾಡಿ ಅವರು ಮಾತನಾಡಿ, ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದೆ. ಸಿರಿಧಾನ್ಯಗಳ ಕೊಡುಗೆಗಳನ್ನು ನೀಡಿದ ನಾಡಿನ ರೈತರಿಗೆ ಪ್ರೇರಕರಾಗಿರುವ ಡಾ. ಖಾದರ್ ಅವರಿಗೆ ಸನ್ಮಾನ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ಜಿಡಿಪಿಗೆ ರೈತರ ಕೊಡುಗೆ ಮೊದಲು ಶೇ 11ರಷ್ಟಿದ್ದುದು ನಮ್ಮ ಸರಕಾರ ಬಂದ ಬಳಿಕ ಈಗ ಶೇ 20ಕ್ಕೆ ತಲುಪಿದೆ. ರೈತರ ಸಮಸ್ಯೆ ನಿವಾರಣೆಯಲ್ಲಿ ರೈತರ ಪ್ರತಿನಿಧಿಗಳಾದ ನಮ್ಮ ಜವಾಬ್ದಾರಿ ದೊಡ್ಡದಿದೆ ಎಂದು ತಿಳಿಸಿದರು.
ನಮ್ಮ ಸರಕಾರಗಳು ರೈತವಿರೋಧಿಯಲ್ಲ. ಅವು ರೈತಪರವಾಗಿವೆ ಎಂಬುದನ್ನು ರೈತರಿಗೆ ತಿಳಿಸಬೇಕಿದೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಮತ್ತು ಅವುಗಳ ಮಾಹಿತಿಯನ್ನು ನಾವು ರೈತರಿಗೆ ತಲುಪಿಸಬೇಕು ಎಂದು ಅವರು ಮನವಿ ಮಾಡಿದರು.
ಪಾಶ್ಚಾತ್ಯ ಆಧುನಿಕ ಕೃಷಿ ಪದ್ಧತಿಯು ರೈತರ ಹಕ್ಕು ಕಸಿದುಕೊಂಡಿದೆ. ವಿಷಮಯ ಆಹಾರವನ್ನು ಜನರಿಗೆ ಉಣಿಸುತ್ತಿದೆ. ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಬರುವ ಆಹಾರಪದಾರ್ಥಗಳಿಂದ ಮಹಾಮಾರಿಗಳು ನಮ್ಮನ್ನು ಕಾಡುವಂತಾಯಿತು ಎಂದು ಸನ್ಮಾನ ಸ್ವೀಕರಿಸಿದ ವಿಜ್ಞಾನಿಗಳೂ ಆದ ಡಾ. ಖಾದರ್ ಅವರು ತಿಳಿಸಿದರು.
ಬೆಳಿಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡಿದರೆ ಆಂತರಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅರ್ಕ, ನವಣೆ, ಸಾಮೆಯಂಥ ದೇಸೀಯ ಆಹಾರ ಪದಾರ್ಥ ಬಳಸಿ ಎಂದು ಅವರು ಹೇಳಿದರು. ಜೀವವೈವಿಧ್ಯತೆಯನ್ನು ಮತ್ತು ಬೀಜ ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್. ರವಿಕುಮಾರ್, ಶ್ರೀ ಸಿದ್ದರಾಜು, ಮೈಸೂರು ನಗರ ಜಿಲ್ಲಾಧ್ಯಕ್ಷರಾದ ಶ್ರೀ ಶ್ರೀವತ್ಸಾ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಳ ಸೋಮಶೇಖರ್, ರೈತ ಮೋರ್ಚಾ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.