ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ತುಳಿತಕ್ಕೆ ಒಳಗಾದವರಿಗೆ ಸ್ವಾಭಿಮಾನದ ಬದುಕು ಸಿಗಲಿದೆ. ಸನ್ಮಾನ್ಯ ಶ್ರೀ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸದೊಂದಿಗೆ ಕೊಳ್ಳೇಗಾಲದ ಶಾಸಕ ಶ್ರೀ ಮಹೇಶ್ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಆಶಯವನ್ನು ರಾಜ್ಯ ಸರಕಾರ ಈಡೇರಿಸಲಿದೆ. ಆ ಭಾಗದಲ್ಲಿ ಸಾಮರಸ್ಯ, ಸಹೋದರತ್ವ ಭಾವನೆ ಇರುವ ಸಾಮಾಜಿಕ ನೆಲೆಗಟ್ಟು ಸ್ಥಾಪನೆ ಆಗಲಿದೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ಕೊಳ್ಳೇಗಾಲ ಶಾಸಕ ಶ್ರೀ ಎನ್.ಮಹೇಶ್ ಅವರ ಭಾರತೀಯ ಜನತಾ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಮಹೇಶ್ ಅವರು ಪಕ್ಷದ ಜೊತೆ ಮತ್ತು ಶ್ರೀ ಯಡಿಯೂರಪ್ಪ ಅವರ ಜೊತೆಗೆ ಹೊಂದಿರುವ ಸಂಬಂಧ ಮತ್ತು ಅನುಭವ ಇವತ್ತು ಅವರ ಈ ನಿರ್ಣಯಕ್ಕೆ ಪೂರಕವಾಗಿದೆ. ಅವರನ್ನು ಪಕ್ಷಕ್ಕೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಉತ್ತಮ ಬೆಳವಣಿಗೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಶ್ರೀ ಎನ್.ಮಹೇಶ್ ಅವರ ಸೇರ್ಪಡೆಯ ಶುಭ ಕ್ಷಣ ಈಗ ಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬರುವುದರ ಮುನ್ಸೂಚನೆ ಇದಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ದಲಿತ ಸಮೂಹ ಬಿಜೆಪಿ ಪರವಾಗಿದೆ ಎಂಬ ಸಂದೇಶ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿ ಅವರನ್ನು ತಲುಪಲು ನಮ್ಮ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಅವರು ತಿಳಿಸಿದರು. ಶ್ರೀ ಮಹೇಶ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 135 ಸ್ಥಾನ ಗೆದ್ದು ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪ ನಮ್ಮದಾಗಿದೆ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಶ್ರೀ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಬಿಎಸ್‍ಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಶಾಸಕ ಶ್ರೀ ಎನ್. ಮಹೇಶ್ ಅವರು ಈಗ ಬಿಜೆಪಿ ಸೇರಿದ್ದಾರೆ.
ಶ್ರೀ ನರೇಂದ್ರ ಮೋದಿಯವರ ಆಡಳಿತ, ರಾಜ್ಯದಲ್ಲಿ ಶ್ರೀ ಯಡಿಯೂರಪ್ಪ ಅವರ ಆಡಳಿತ, ಬಿಜೆಪಿ ಚಿಂತನೆ, ವಿಚಾರಧಾರೆಗಳನ್ನು ಮೆಚ್ಚಿ ಬಿಜೆಪಿಗೆ ಸೇರಿದ್ದು ಅವರಿಗೆ ಸ್ವಾಗತ ಎಂದರು.
ಅವರ ಮೂಲಕ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೇರೆ ಬೇರೆ ಪಕ್ಷಗಳ ಹತ್ತಾರು ಜನರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಯವರ ಏಳು ವರ್ಷಗಳ ಅಭಿವೃದ್ಧಿ ಕಾರ್ಯ, ಶ್ರೀ ಯಡಿಯೂರಪ್ಪ ಮತ್ತು ಶ್ರೀ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಮೆಚ್ಚಿಕೊಂಡು ಅನೇಕರು ಬಿಜೆಪಿ ಸೇರಲು ಉತ್ಸುಕತೆ ತೋರಿದ್ದಾರೆ ಎಂದು ತಿಳಿಸಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರರಿಗೆ ನ್ಯಾಯ ನೀಡುವ ಕಾರ್ಯವನ್ನು ಬಿಜೆಪಿಯ ಕೇಂದ್ರ ಸರಕಾರ ಮಾಡಿದೆ. ಇದನ್ನು ಗಮನಿಸಿ ದಲಿತ ಸಮುದಾಯವು ಈಗ ಬಿಜೆಪಿಯತ್ತ ಸಹಜವಾಗಿಯೇ ಆಕರ್ಷಿತವಾಗುತ್ತಿದೆ ಎಂದು ಅವರು ವಿವರಿಸಿದರು.
ಶಾಸಕ ಎನ್.ಮಹೇಶ್ ಅವರು ಮಾತನಾಡಿ, ರಾಷ್ಟ್ರದ 130 ಕೋಟಿ ಜನರ ಅಭಿವೃದ್ಧಿಗಾಗಿ ಬಿಜೆಪಿ ಪ್ರಯತ್ನಿಸುತ್ತಿದೆ. ಆ ವಿಚಾರವನ್ನು ಗಮನಿಸಿ ನಾನು ಬಿಜೆಪಿ ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಡಾ. ಬಿ.ಆರ್.ಅಂಬೇಡ್ಕರ್ ಅವರು. ಬಿಜೆಪಿ ಈಗ ಪ್ರಬುದ್ಧ ಮನಸ್ಥಿತಿಯೊಂದಿಗೆ ರಾಷ್ಟ್ರವನ್ನು ಸಮಗ್ರ ಅಭಿವೃದ್ಧಿ ಕಡೆ ಒಯ್ಯುತ್ತಿದೆ. ಅದೂ ನನ್ನ ಬಿಜೆಪಿ ಸೇರ್ಪಡೆಗೆ ಕಾರಣ ಎಂದರು.
ಮಾಜಿ ಸಿಎಂ ಶ್ರೀ ಯಡಿಯೂರಪ್ಪ ಅವರ ನನಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ನನಗೆ ಹಲವಾರು ವರ್ಷಗಳಿಂದ ಪರಿಚಿತರು. ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಮತ್ತು ಪಕ್ಷದ ಎಲ್ಲಾ ಮುಖಂಡರ ಜೊತೆ ಸೇರಿ ಪಕ್ಷದ ಸಂಘಟನೆಗೆ ಶ್ರಮಿಸಲಿದ್ದೇನೆ ಎಂದು ಅವರು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್ ರವಿಕುಮಾರ್, ಶ್ರೀ ಸಿದ್ದರಾಜು, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರ, ರಾಜ್ಯದ ಸಚಿವರಾದ ಶ್ರೀ ಗೋವಿಂದ ಕಾರಜೋಳ, ಶ್ರೀ ಆರ್ ಅಶೋಕ್, ಶ್ರೀ ಸಿ.ಸಿ. ಪಾಟೀಲ್, ಶ್ರೀ ಎಸ್.ಟಿ. ಸೋಮಶೇಖರ್, ಶ್ರೀ ಶಿವರಾಮ ಹೆಬ್ಬಾರ್, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಮುಖಂಡರು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.