cb08f655 048c 40e2 a6e7 4ead5e56171e

ಮೂರು ಅಲೆಮಾರಿ ವಸತಿ ಶಾಲೆಗಳ ಪ್ರಾರಂಭ…!

Genaral STATE

ಪ್ರಸಕ್ತ ಸಾಲಿನಲ್ಲಿ ಮೂರು ಅಲೆಮಾರಿ ವಸತಿ ಶಾಲೆಗಳ ಪ್ರಾರಂಭ -ಸಿಎಂ ಬಸವರಾಜ ಬೊಮ್ಮಾಯಿ 

ಬೆಂಗಳೂರು, ಆಗಸ್ಟ್ 20: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತಲಾ 6 ಕೋಟಿ ರೂಪಾಯಿ ವೆಚ್ಚದಲ್ಲಿ 3 ಅಲೆಮಾರಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗಣ್ಯರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಈಗಾಗಲೇ 4 ಅಲೆಮಾರಿ ವಸತಿ ಶಾಲೆಗಳು ರಾಜ್ಯದಲ್ಲಿವೆ.‌ ಹೊಸದಾಗಿ 3 ಅಲೆಮಾರಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ತಲಾ 6 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಬರುವ ದಿನಗಳಲ್ಲಿ ಎಸ್.ಸಿ/ ಎಸ್.ಟಿ/ ಹಿಂದುಳಿದ ವರ್ಗಗಳ ವಸತಿಶಾಲೆಗಳ ಗುಣಾತ್ಮಕ ಉನ್ನತೀಕರಣ ಮಾಡಲಾಗುವುದು. ಉನ್ನತ ಶಿಕ್ಷಣ, ಉದ್ಯೋಗ ಅವಕಾಶಗಳು, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಿಎಂ ತಿಳಿಸಿದರು.

ಸರ್ಕಾರ ಹಿಂದುಳಿದ ವರ್ಗಗಳ ವಸತಿ ಶಾಲೆಗಳನ್ನು ನಡೆಸುತ್ತಿದ್ದು, ಪ್ರತಿ ವರ್ಷ 625 ಕೋಟಿ ರೂ.ಗಳ ಶಿಷ್ಯವೇತನವನ್ನು ನೀಡುತ್ತಿದೆ.
83 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಯಂ ಉದ್ಯೋಗಕ್ಕೂ ಅವಕಾಶ ಕಲ್ಪಿಸಿದೆ. ಅಲೆಮಾರಿ ಜನಾಂಗದ ಸಂಸ್ಕೃತಿ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ತುಳಿತಕ್ಕೊಳಗಾಗಿರುವವರಿಗೆ, ಶಿಕ್ಷಣ, ಸಶಕ್ತೀಕರಣ ಹಾಗೂ ಉದ್ಯೋಗ ಬಹಳ ಮುಖ್ಯ. ಸರ್ಕಾರಿ ವಲಯದಲ್ಲಿ ಉದ್ಯೋಗ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಅಗತ್ಯವಿರುವ ಕೌಶಲ್ಯ , ಶಿಕ್ಷಣ ಹಾಗೂ ಆರ್ಥಿಕವಾಗಿ ಬೆಂಬಲ ಒದಗಿಸಲು ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪ್ರಧಾನಮಂತ್ರಿಗಳು ತಮ್ಮ ಸಚಿವ ಸಂಪುಟದಲ್ಲಿ 30 ಕ್ಕೂ ಹೆಚ್ಚು ಹಿಂದುಳಿದ ವರ್ಗದವರನ್ನು ಸಚಿವರನ್ನಾಗಿ ಮಾಡಿ ದಾಖಲೆ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕುರಿತು ರಾಜ್ಯಗಳಿಗೆ ಅಧಿಕಾರ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಮಾಡುತ್ತದೆ ಎಂದರು.

ದೇವರಾಜ ಅರಸು ಅವರು ಸ್ವಾತಂತ್ರ್ಯ ಪೂರ್ವದ ರಾಜಕಾರಣಿ. ಮನೆಮಠಗಳನ್ನು ಕಳೆದುಕೊಂಡು ಸಾರ್ವಜನಿಕ ಜೀವನದಲ್ಲಿ ಪಾದಾರ್ಪಣೆ ಮಾಡಿದವರ ಮೌಲ್ಯಗಳನ್ನು ಅವರ ಆಡಳಿತದಲ್ಲಿ ನಾವು ಕಾಣಬಹುದು.
ದೇಶಪ್ರೇಮವಿದ್ದರೆ, ದೇಶವಾಸಿಗಳ ಮೇಲೂ ಪ್ರೇಮವಿರುತ್ತದೆ. ಅವರ ಚಿಂತನೆ, ನಾಯಕತ್ವ ದೇಶವಾಸಿಗಳ ಸಮಗ್ರ ಬದುಕಿನ ಕ್ಷೇಯೋಭಿವೃದ್ಧಿಯ ಜೊತೆಗೆ, ಸ್ವಾಭಿಮಾನವನ್ನು ತುಂಬುವ ಕೆಲಸ ಮಾಡಿದ್ದಾರೆ. ದೇವರಾಜ ಅರಸು ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಸ್ವಾತಂತ್ರ್ಯಕ್ಕೆ, ಗುಲಾಮಗಿರಿಯಿಂದ ಹೊರಬರಲು ಹೊಸ ಆಯಾಮವನ್ನು ಕೊಟ್ಟ ಧೀಮಂತ ನಾಯಕರು ಅವರು.
ಭೂಮಿಯನ್ನು ಹಾಗೂ ಭೂಮಿಯನ್ನು ಉಳುವ ಮಣ್ಣಿನ ಮಕ್ಕಳನ್ನು ಸ್ವತಂತ್ರಗೊಳಿಸಿದರು. ಕೆಲವೇ ಜನರಲ್ಲಿ ಇದ್ದ ಸಂಪತ್ತು ಸರ್ವರಿಗೂ ದೊರೆಬೇಕು, ವಿಶೇಷವಾಗಿ ಭೂಮಿಯಲ್ಲಿ ಉಳುವವನಿಗೆ ಮೊದಲ ಅಧಿಕಾರ, ಹಕ್ಕು ಎಂಬ ತತ್ವವನ್ನು ಅನುಷ್ಠಾನ ಮಾಡಿದರು. ಭೂಮಿಯನ್ನು ಆಧಾರಿಸಿಯೇ ಹೆಚ್ಚು ಜನ ಬದುಕುತ್ತಿದ್ದ ಕಾಲದಲ್ಲಿ ಆರ್ಥಿಕತೆಯನ್ನು ಕಂಡುಕೊಳ್ಳುವ ಅನಿವಾರ್ಯತೆ ಇತ್ತು. ಹೀಗಾಗಿ ಅಂದು ಅವರ ನಿರ್ಧಾರದಿಂದ ಆದ ಬಿಡುಗಡೆಯಿಂದಾಗಿ ಮುಂದಿನ ಪೀಳಿಗೆ ಶಿಕ್ಷಣ ಪಡೆದು ಬೇರೆ ಕ್ಷೇತ್ರಗಳಲ್ಲಿ ಇಡೀ ಸಮುದಾಯ ಸ್ವತಂತ್ರ, ಸ್ವಾಭಿಮಾನದ ಬದುಕನ್ನು ನಡೆಸಲು ಸಾಧ್ಯವಾಯಿತು ಎಂದರು.fed31594 e74d 4c90 a488 83d9a1814bda

ಅರಸು ಅವರು ಕರ್ನಾಟಕ ಏಕೀಕರಣದ ರೂವಾರಿ. ಮೈಸೂರಿನ ಪ್ರಾಂತ್ಯದವರಾದರೂ,ಕನ್ನಡಿಗರ ಏಕತೆಯನ್ನು ಬಿಟ್ಟುಕೊಡಲಿಲ್ಲ. ಕರ್ನಾಟಕ ಎಂದು ನಾಮಕರಣ ಮಾಡಿದ ಧೀಮಂತ ಅವರಾಗಿದ್ದರು ಎಂದರು.

ದೂರದೃಷ್ಟಿಯುಳ್ಳ ನಾಯಕರಾಗಿದ್ದ ಅರಸು ಅವರು ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸ್ವಾವಲಂಬಿಯಾಗಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದರು. ನಿಜಲಿಂಗಪ್ಪನವರು ಹಾಕಿದ್ದ ಬುನಾದಿಯ ಮೇಲೆ ರಾಜ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದವರು.

ದೇವರಾಜ ಅರಸು ಅವರು ಎಲ್ಲ ಸಮಾಜ, ಎಲ್ಲ ಪಕ್ಷದ ನಾಯಕರಿಗೆ ಪ್ರೀತಿಪಾತ್ರರಾಗಿದ್ದರು ಎಂದು ಅರಸು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವರಾಜ ಅರಸು ಅವರ ಜನ್ಮದಿನಾಚಾರಣೆಯನ್ನು ಅರ್ಥಪೂರ್ಣವಾಗಿ, ಪ್ರೇರಾಣಾದಾಯಕ ರೂಪದಲ್ಲಿ ಆಚರಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ದೇವರಾಜ ಅರಸು ಅವರ ದಾರಿಯಲ್ಲಿ ನಡೆದ ಯೋಗ್ಯರನ್ನು , ಸುದೀರ್ಘ ಸೇವೆ ಮಾಡಿದವರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ.
ಬಿ.ಎಲ್.ಪಾಟೀಲ್, ಸುಶೀಲಮ್ಮ, ಭಾಸ್ಕರ್ ದಾಸ್ ಎಕ್ಕೂರ್ ಅವರಿಗೆ ಪ್ರಶಸ್ತಿ ನೀಡುವ ಮೂಲಕ ದೇವರಾಜ್ ಅರಸು ಅವರ ಮಹಾನ್ ವ್ಯಕ್ತಿತ್ವದ ಚಿಂತನೆಗಳು, ಅವರು ನಡೆದು ಬಂದ ದಾರಿ, ಸವಾಲುಗಳನ್ನು ಎದುರಿಸಲು ಸ್ಫೂರ್ತಿಯನ್ನು ಪುನರ್ ಸಂಕಲ್ಪ ಮಾಡಿದಂತಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.