IMG 20201121 WA0006

ಡಿ ಜೆ ಹಳ್ಳಿ ಪ್ರಕರಣ: ಶಿಸ್ತು ಸಮಿತಿಯಿಂದ ಸೂಕ್ತ ಕ್ರಮ….!

STATE Genaral

ಅಖಂಡ ಅವರ ಮನವಿಯನ್ನು ಶಿಸ್ತು ಸಮಿತಿಗೆ ನೀಡುತ್ತೇನೆ: ಡಿ.ಕೆ ಶಿವಕುಮಾರ್*

*ಬೆಂಗಳೂರು: – ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನವಿಯನ್ನು ಆಲಿಸಿದ್ದು, ಅದನ್ನು ಪಕ್ಷದ ಶಿಸ್ತು ಸಮಿತಿಗೆ ನೀಡುತ್ತೇನೆ. ಶಿಸ್ತು ಸಮಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರದಲ್ಲಿನ ತಮ್ಮ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಜತೆ ಮಾತುಕತೆ ನಡೆಸಿದ ನಂತರ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

‘ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನಾನು ಅವರ ಮನವಿ ಆಲಿಸಿದ್ದೇನೆ. ಗಲಭೆ ಪ್ರಕರಣದಲ್ಲಿ ಅವರಿಗೆ ಅನ್ಯಾಯವಾಗಿರುವುದು ಗೊತ್ತಿದೆ. ಈ ವಿಚಾರವಾಗಿ ನನಗೂ ತುಂಬಾ ನೋವಾಗಿದೆ ಎಂದು ಹೇಳಿದರು.

ನಮ್ಮ ಶಾಸಕರು, ಸಂಪತ್ ರಾಜ್ ಅವರ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ನೀಡಿದ್ದಾರೆ. ಈ ಪತ್ರವನ್ನು ಪಕ್ಷದ ಶಿಸ್ತು ಸಮಿತಿಗೆ ತಲುಪಿಸುತ್ತೇನೆ’ ಎಂದರು.

*ಶಿಸ್ತು ಸಮಿತಿಯಿಂದ ಸೂಕ್ತ ಕ್ರಮ:*

ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ಸಂಪತ್ ರಾಜ್ ಅವರ ವಿರುದ್ಧ ಪಕ್ಷದ ಅಧ್ಯಕ್ಷರಾಗಿ ನೀವು ಯಾವ ತೀರ್ಮಾನ ಕೈಗೊಳ್ಳುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಒಬ್ಬ ವ್ಯಕ್ತಿ ಆರೋಪಿಯಾದ ಮಾತ್ರಕ್ಕೆ ಆತನ ಮೇಲೆ ನಾನು ಏಕಾಏಕಿ ಕ್ರಮ ಜರುಗಿಸಲು ಆಗುವುದಿಲ್ಲ. ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಇನ್ನು ನಡೆಯುತ್ತಿದೆ. ಸಂಪತ್ ರಾಜ್ ಅವರ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳನ್ನು ಒದಗಿಸಬೇಕಿದೆ. ಇದೆಲ್ಲವೂ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕಿದೆ. ನಾಳೆ ಯಾರಾದರೂ ಏನಾದರೂ ಹೇಳಿಕೆ ಕೊಟ್ಟರೆ ಅದರ ಆಧಾರದ ಮೇಲೆ ನಾನು ಕ್ರಮ ಕೈಗೊಳ್ಳಲು ಸಾಧ್ಯವೇ? ಎಂದು ಮರುಪ್ರಶ್ನಿಸಿದರು.

ಪೊಲೀಸ್ ಅಧಿಕಾರಿಗಳು, ಬಿಜೆಪಿ ನಾಯಕರು ಹಾಗೂ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯಾರು ಯಾಕಾಗಿ ಯಾವ ಹೇಳಿಕೆ ನೀಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ನಮ್ಮ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಈ ವಿಚಾರವನ್ನು ಶಿಸ್ತು ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದರು.