0417276c d6fc 48f6 8845 f24fdd46be37

ನಾಡಿನ ಮಕ್ಕಳ ಹಿತಕ್ಕಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಪ್ರತಿಷ್ಠೆಗಾಗಿ ಅಲ್ಲ….!

STATE

ಬೆಂಗಳೂರು:  ನಮ್ಮ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ  ತರಗತಿ ಪರೀಕ್ಷೆ ನಡೆಸುವುದು ಅನಿವಾರ್ಯವೇ ಹೊರತು ಅದು ಯಾರೊಬ್ಬರ ಪ್ರತಿಷ್ಠೆಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್  ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಬೆಂಗಳೂರು ಆಕಾಶವಾಣಿ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ನಮ್ಮ ರಾಜ್ಯದಲ್ಲಿ ಮಕ್ಕಳ ಮುಂದಿನ ವ್ಯಾಸಂಗಕ್ಕೆ ಎಸ್ಸೆಸ್ಸೆಲ್ಸಿ ತರಗತಿ ಪ್ರಮುಖ ತಿರುವಾಗಿರುವುದು ಮತ್ತು  ಪ್ರಮುಖ ಮಾನದಂಡವಾಗಿರುವುದರಿಂದ 10ನೇ ತರಗತಿ ಪರೀಕ್ಷೆಯನ್ನು ನಡೆಸಬೇಕಾಗಿದೆ ಎಂದು ಹೇಳಿದರು.

ಪರೀಕ್ಷೆಗಳನ್ನು ನಡೆಯಬೇಕೆಂಬುದು ರಾಜ್ಯದ ಬಹುಪಾಲು ವಿದ್ಯಾರ್ಥಿಗಳ ಅಭಿಪ್ರಾಯವಾಗಿದ್ದು, ಈ ಕುರಿತಂತೆ ಶಿಕ್ಷಣ ಇಲಾಖೆಯ ಪ್ರಮುಖ ಪಾಲುದಾರರದ ನಮ್ಮ ವಿದ್ಯಾರ್ಥಿಗಳು, ಪೋಷಕರೊಂದಿಗೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ಶಿಕ್ಷಣ ತಜ್ಞರು, ಸಾಹಿತಿಗಳು, ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಸದಸ್ಯರು ಸೇರಿದಂತೆ ಸಮಾಜದ ವಿವಿಧ ಸ್ತರದ ಪ್ರಮುಖರ ಅಭಿಪ್ರಾಯವೂ ಸಹ ಈ ಪರೀಕ್ಷೆಯನ್ನು ನಡೆಸಬೇಕೆಂಬುದಾಗಿದೆ ಎಂದು ಸಚಿವರು ತಿಳಿಸಿದರು.

ಜೂನ್ 25ರಿಂದ ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಕೋವಿಡ್ ಹಿನ್ನೆಲೆಯ ಎಲ್ಲ  ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು ಎಂದು ಸುರೇಶ್  ಕುಮಾರ್ ತಿಳಿಸಿದರು. ಮಕ್ಕಳ ಹಿತವನ್ನು ರಕ್ಷಿಸುವುದು  ನಮ್ಮ ಸರ್ಕಾರದ ಒಂದಂಶದ ಕಾರ್ಯಕ್ರಮವಾಗಿದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ನಿರ್ವಹಣೆಯಲ್ಲಿ ಬದಲಾವಣೆ  ಹಾಗೂ ಸುಧಾರಣೆಗಳನ್ನು ಕಾಣಬಹುದಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಗೆ ಆರೋಗ್ಯ ತಪಾಸಣೆ,  ಮಾಸ್ಕ್ ಪೂರೈಕೆ, ಪರೀಕ್ಷಾ ಕೇಂದ್ರದ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

 ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ಇಲ್ಲ: ಯಾವುದೇ ಕಂಟೇನ್ಮೆಂಟ್ ವಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಪರೀಕ್ಷೆ ನಡೆಯುವ ದಿನದ ಆಸುಪಾಸಿನಲ್ಲಿ ಯಾವುದೇ ವಲಯ ಕಂಟೈನ್ಮೆಂಟ್ ವಲಯವೆಂದು ಘೋಷಿತವಾದಾಗ ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿ ಎಂದು ಪರಿಗಣಿಸದೇ ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಸಚಿವರು ಹೇಳಿದರು. 

ವಲಸೆ ಕಾರ್ಮಿಕರ ಮಕ್ಕಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು, ಹಾಸ್ಟೆಲ್ಗಳ ವಾಸಿ ವಿದ್ಯಾರ್ಥಿಗಳಿಗೆ ಅವರು ವಾಸವಾಗಿರುವ ಸ್ಥಳಗಳ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದ ಸಚಿವರು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಅಭ್ಯರ್ಥಿಗಳಿಗೆ ಹೊಸದಾಗಿ      ‘ಹಾಲ್ ಟಿಕೆಟ್ ಗಳನ್ನು’  ಒದಗಿಸಲಾಗುತ್ತಿದೆ. ಜು. 4ಕ್ಕೆ ಪರೀಕ್ಷೆಗಳು ಮುಕ್ತಾಯವಾಗಲಿದ್ದು, ಜು.31ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದರು. 

 ಶಾಲೆಗಳ ಆರಂಭಕ್ಕೆ ದಿನಾಂಕ ನಿಗದಿ : ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭದ ದಿನಾಂಕವನ್ನು ಮುಂದಿನ  ವಾರದಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದ ಸುರೇಶ್ ಕುಮಾರ್, ತರಗತಿಗಳನ್ನು ಈಗಲೇ ಪ್ರಾರಂಭಿಸಬಾರದೆಂದು ಪೋಷಕರ ಒತ್ತಡವಿದ್ದು, ಎಲ್ಲಾ ಆಯಾಮಗಳಲ್ಲಿ ಇದನ್ನು ಚರ್ಚಿಸಿ ಒಂದು  ನಿರ್ಧಾರಕ್ಕೆ ಬರಲಾಗುವುದು .

 ಜುಲೈ 12ರಂದು ಟಿಇಟಿ ಪರೀಕ್ಷೆ:   ಜು. 5ರಂದು ನಿಗದಿಯಾಗಿದ್ದ  ಟಿಇಟಿ ಪರೀಕ್ಷೆಯ ದಿನದಂದು ಸಿಟಿಇಟಿ ಪರೀಕ್ಷೆ ನಡೆಯುತ್ತಿರುವು ಹಿನ್ನೆಲೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಟಿಇಟಿ ಪರೀಕ್ಷೆಯನ್ನು ಜು. 12ಕ್ಕೆ ನಡೆಸಲಾಗುವುದೆಂದು ಸಚಿವರು ತಿಳಿಸಿದರು.  ಸಚಿವ ಸುರೇಶ್ ಕುಮಾರ್ ಅವರ ಸಂದರ್ಶನದ ಪೂರ್ಣ ಪಾಠ ರಾಜ್ಯದ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಮೇ 25ರ ಸೋಮವಾರ ಬೆಳಗ್ಗೆ 7.15 ಗಂಟೆಗೆ ಏಕಕಾಲದಲ್ಲಿ ಪ್ರಸಾರವಾಗಲಿದೆ