ಎಸ್ಸಿಪಿ, ಟಿಎಸ್ಪಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಬೇಡ: ಜೆ ಮಂಜುನಾಥ್
ಬೆಂಗಳೂರು ನಗರ ಜಿಲ್ಲೆ, ಸೆ.03 ( ಕರ್ನಾಟಕ ವಾರ್ತೆ) ಬೆಂಗಳೂರು ನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ (ಎಸ್ ಸಿ ಪಿ/ ಟಿ ಎಸ್ ಪಿ) ಗಿರಿಜನ ಉಪಯೋಜನೆಯಡಿ ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಅನುದಾನ ಸದ್ಬಳಕೆಯಾಗುವಂತೆ ಕ್ರಮವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜೆ ಮಂಜುನಾಥ್ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗು ಗಿರಿಜನ ಉಪಯೋಜನೆ ಕಾಯ್ದೆಯಡಿ (scp/tsp Act) ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ತೋರಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯಲ್ಲಿರುವ ಮ್ಯಾನುಯಲ್ ಸ್ಕ್ಯಾವೆಂಜರ್ (ಸಫಾಯಿ ಕರ್ಮಚಾರಿಗಳು) ಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಅವರಿಗೆ ಸೂಕ್ತ ರೀತಿಯ ಪರಿಹಾರ ಸೌಲಭ್ಯಗಳನ್ನು ಒದಗಿಸಲು ಸೂಚಿಸಲಾಗಿದೆ. ಅದರಂತೆ, ಅವರಿಗೆ ಉದ್ಯೋಗ ಖಾತರಿ, ವಸತಿ, ವಿಧ್ಯಾಭ್ಯಾಸ, ಸೇರಿದಂತೆ ಇತರ ನೆರವು ಸೌಲಭ್ಯಗಳನ್ನು ಒದಗಿಸಲು ಕೂಡಲೇ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಎಸ್.ಸಿ.ಪಿ, ಟಿ.ಎಸ್.ಪಿ ಮೇಲ್ವಿಚಾರಣೆ ಸಮಿತಿ ಸಭೆಗಳನ್ನು ತಪ್ಪದೆ ನಡೆಸಬೇಕು ಎಂದು ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸೂಚಿಸಿದರು. ಪ.ಜಾ, ಪ.ಪಂ ಫಲಾನುಭವಿಗಳಿಗೆ ವಿವಿಧ ಯೋಜೆನಗಳಡಿ ಸೌಲಭ್ಯಗಳನ್ನು ಒದಗಿಸುವ ನಿಗಮ, ಮಂಡಳಿಗಳು ಹಳೆಯ ವರ್ಷದ ಬಾಕಿ ಉಳಿದಿರುವ ಕಾರ್ಯಕ್ರಮಗಳನ್ನು ಕೂಡಲೇ ಅನುಷ್ಠಾನಗೊಳಿಸಲು ಮತ್ತು ಪ್ರಸಕ್ತ ಸಾಲಿನಲ್ಲಿ ಫಲಾನುಭವಿಗಳನ್ನು ಗುರುತಿಸಲು ಅರ್ಜಿ ಆಹ್ವಾನಿಸಿ ಆಯ್ಕೆಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ವಹಿಸುವಂತೆ ಸೂಚಿಸಿದರು.
ಫಲಾನುಭವಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ನಿಗಮ ಮಂಡಳಿಗಳು ವ್ಯಾಪಕ ಪ್ರಚಾರ ಕೈಗೊಂಡು ಎಲ್ಲರಿಗೂ ಯೋಜನೆ ಸೌಲಭ್ಯ ತಲುಪುವಂತೆ ಮಾಡಿ ಎಂದು ಸೂಚಿಸಿದ ಅವರು ಎಸ್.ಸಿ.ಪಿ, ಟಿ.ಎಸ್.ಪಿ ಕಾರ್ಯಕ್ರಮಗಳ ಅನುಷ್ಠಾನದ ಆಧಾರದ ಮೇಲೆ ಕರ್ನಾಟಕ ಮೌಲ್ಯಮಾಪನಾ ಪ್ರಾಧಿಕಾರದ ಸಲ್ಲಿಸಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಶಿಪಾರಸ್ಸುಗಳನ್ನು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅದರಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಮಾಜ ಕಲ್ಯಾಣ ಇಲಾಖಾ ಹಾಸ್ಟೇಲ್ ಗಳಿಗೆ ಆಹಾರ ಧಾನ್ಯಗಳ ಸರಬರಾಜು ಸ್ಥಗಿತಗೊಳಿಸರುವ ಬಗ್ಗೆ ಕೂಡಲೇ ಆಯುಕ್ತರಿಗೆ ಪತ್ರ ಬರೆದು ಆಹಾರ ಪೂರೈಕೆ ಕ್ರಮ ವಹಿಸುವಂತೆ ಸೂಚಿಸಿದರು.
ಅಕ್ಷರದಾಸೋಹ ಯೋಜನೆಯಡಿ ಒದಗಿಸುವ ಆಹಾರ ಗುಣಮಟ್ಟ ಕಾಪಾಡುವಲ್ಲಿ ಆಹಾರ ಪರೀಕ್ಷೆ ನಡೆಸಲು ಇಲಾಖೆಗಳ ಗಮನ ಹರಿಸಬೇಕು. ಬೃಹತ್ ಪ್ರಮಾಣದಲ್ಲಿ ಆಹಾರ ಪೂರೈಕೆಯಾಗುವ ಅದರ ಗುಣಮಟ್ಟ ಖಾತರಿ ಪಡಿಸಿಕೊಳ್ಳುವುದು ಅತಿ ಮುಖ್ಯ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ ಅನುಷ್ಠಾನಕ್ಕೆ 12 ನರ್ಸಿಂಗ್ ಕಾಲೇಜುಗಳ ವಿಳಾಸ ನೋಂದಣಿ ಪೋರ್ಟಲ್ ನಲ್ಲಿ ಸಮಸ್ಯೆಯಾಗುತ್ತಿದೆ ಎಂದು ಲಕ್ಷ್ಮಣ್ ರೆಡ್ಡಿ ಸಭೆಗೆ ತಿಳಿಸಿದರು ಇನ್ನು ಹತ್ತು ದಿನಗಳ ಒಳಗಾಗಿ ಇದನ್ನು ಸರಿಪಡಿಸಿ ಬಾಕಿ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಕಾಲದಲ್ಲಿ ವಿತರಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಶ್ರೀನಿವಾಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಿಶ್ಚಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನೀಲಮ್ಮ, ಸೇರಿದಂತೆ ವಿವಿಧ ಇಲಾಖೆ, ನಿಗಮ, ಮಂಡಳಿಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.
**************************