*ಕೇಂದ್ರ ಅಧ್ಯಯನ ತಂಡ ಭೇಟಿ: ಮಾರ್ಗಸೂಚಿ ಬದಲಿಸಿ ಹೆಚ್ಚುವರಿ ಅನುದಾನಕ್ಕೆ ಮುಖ್ಯಮಂತ್ರಿ ಮನವಿ*
ಬೆಂಗಳೂರು, ಸೆಪ್ಟೆಂಬರ್ 4-ನಾಲ್ಕು ವರ್ಷದಿಂದ ಪ್ರವಾಹ, ಭೂಕುಸಿತದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಎನ್.ಡಿ.ಆರ್.ಎಫ್. ಪರಿಹಾರ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ, ಹೆಚ್ಚುವರಿ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ತಂಡಕ್ಕೆ ಸಲಹೆ ಮಾಡಿದರು.
ಕೇಂದ್ರ ಗೃಹ ಸಚಿವಾಲಯದ ಸುಶೀಲ್ ಪಾಲ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಚರ್ಚೆ ನಡೆಸಿತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಮಿತ್ ಶಾ ಅವರಿಗೆ ಕೇಂದ್ರ ತಂಡ ಕಳುಹಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು
ರಕ್ಷಣೆ ಮತ್ತು ತುರ್ತು ಪರಿಹಾರ ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ ಜನರ ಪುನರ್ವಸತಿಗೆ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ನುಡಿದರು.
ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ ಕೂಡಲೇ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದು, ಮೂರು ದಿನಗಳೊಳಗೆ ಬೆಳಗಾವಿ ಉತ್ತರ ಕನ್ನಡ ಜಿಲ್ಲೆಗಳಿಗೆ 500 ಕೋಟಿ ರೂ. ಒದಗಿಸಲಾಗಿದೆ
.
ರಾಜ್ಯದ ವಾಸ್ತವಾಂಶಗಳನ್ನು ವಸ್ತುನಿಷ್ಠವಾಗಿ ಕೇಂದ್ರ ತಂಡದ ಮುಂದಿಡಲಾಗಿದೆ. ಇಂದು ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುವ ಕಾರಣ, ಕೇಂದ್ರಕ್ಕೂ ಮಾಹಿತಿ ಲಭ್ಯವಿದೆ. ಕಳೆದ ನಾಲ್ಕು ವರ್ಷಗಳಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪ್ರತಿವರ್ಷ ಕುಟುಂಬಗಳ ಸ್ಥಳಾಂತರ, ಮನೆ ಕಳೆದುಕೊಳ್ಳುವ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ.
ರಸ್ತೆ ಮತ್ತಿತರ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಕಳೆದ 15 ವರ್ಷಗಳಲ್ಲಿ ರಸ್ತೆ, ವಿದ್ಯುತ್ ಮತ್ತಿತರ ಸಾರ್ವಜನಿಕ ಸೌಲಭ್ಯಗಳಿಗೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಮರು ಸ್ಥಾಪಿಸುವುದು ಸವಾಲಿನ ಕೆಲಸವಾಗಿದೆ.
ರಾಜ್ಯ ಪ್ರಗತಿಪರ ಕೃಷಿ ರಾಜ್ಯವಾಗಿದ್ದು, ಈ ಬಾರಿ ಬಿತ್ತನೆ ಹೆಚ್ಚಾಗಿದ್ದು, ರೈತರೂ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿದ್ದರು. ಆದರೆ ಪ್ರವಾಹದಿಂದ ಬೆಳೆ ನಷ್ಟವಾಗಿ ತೊಂದರೆ ಅನುಭವಿಸಿದ್ದಾರೆ.
ಆದ್ದರಿಂದ ರಾಜ್ಯಕ್ಕೆ ಗರಿಷ್ಠ ಪ್ರಮಾಣದ ನೆರವು ನೀಡುವಂತೆ ಮನವಿ ಮಾಡಿದರು.
ರಾಜ್ಯವು ವಸ್ತುನಿಷ್ಠ ವರದಿ ಸಲ್ಲಿಸಿರುವುದಲ್ಲದೆ, ಅತ್ಯಂತ ಕ್ರಿಯಾಶೀಲವಾಗಿ ನಷ್ಟದ ವಿವರ ನೀಡಿದೆ ಎಂದು ಕೇಂದ್ರ ತಂಡದ ಮುಖ್ಯಸ್ಥ ಸುಶೀಲ್ ಪಾಲ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಂದಾಯ ಸಚಿವ ಆರ್. ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಕೃಷಿ ಸಚಿವ ಬಿ.ಸಿ.. ಪಾಟೀಲ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.