IMG 20201105 WA0004

Covid 19: ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ , ಪುನರ್ವಸತಿ ಕೇಂದ್ರ…!

STATE Genaral

*ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಮತ್ತು ಪುನರ್ವಸತಿ ಕೇಂದ್ರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಮೇಲೆ ನಿಗಾ ಇರಿಸಲು ತೀರ್ಮಾನ*

ಬೆಂಗಳೂರು ನವೆಂಬರ್ 5, ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದರೂ, ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ (ರಿಹ್ಯಾಬಿಲಿಟೇಶನ್) ಆರಂಭಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಚಳಿಗಾಲ ಮತ್ತು ಹಬ್ಬಗಳ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವರು ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು.IMG 20201105 WA0008

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಕೋವಿಡ್ ಸೋಂಕಿನಿಂದ ತೀವ್ರ ಸಮಸ್ಯೆಗೊಳಗಾದವರು ಗುಣಮುಖರಾದ ಬಳಿಕವೂ ನಿಗಾ ಇರಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಮತ್ತು ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಹಾಗೆಯೇ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಈ ರೀತಿಯ ಕೇಂದ್ರಗಳನ್ನು ಆರಂಭಿಸಲಾಗುವುದು. ಕೇಂದ್ರಕ್ಕೆ ಬೇಕಾದ ಸೌಲಭ್ಯ, ಸಿಬ್ಬಂದಿ ಮೊದಲಾದವುಗಳ ಬಗ್ಗೆ ತಜ್ಞರು ವರದಿ ಸಲ್ಲಿಸಿದ್ದಾರೆ” ಎಂದು ತಿಳಿಸಿದರು.

“ಕೆಲ ಖಾಸಗಿ ಆಸ್ಪತ್ರೆಗಳು ಈ ಬಗೆಯ ಕೇಂದ್ರಗಳನ್ನು ಆರಂಭಿಸಿವೆ. 100 ಕ್ಕಿಂತ ಹೆಚ್ಚು ಹಾಸಿಗೆ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಕೇಂದ್ರ ಆರಂಭಿಸಬೇಕು ಎಂದು ಸೂಚಿಸಲಾಗಿದೆ” ಎಂದು ತಿಳಿಸಿದರು.

“ಶೇ.5 ರಷ್ಟು ಜನರಲ್ಲಿ ಮತ್ತೆ ಸೋಂಕು ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಮೊದಲ ಬಾರಿ ಹೆಚ್ಚು ಲಕ್ಷಣಗಳೊಂದಿಗೆ ಸೋಂಕು ಹೊಂದಿದವರಿಗೆ ಎರಡನೇ ಬಾರಿ ಸೋಂಕು ಬಂದಾಗ ತೀವ್ರತೆ ಇರುವುದಿಲ್ಲ. ಅದೇ ರೀತಿ, ಮೊದಲ ಬಾರಿ ಲಕ್ಷಣ ಇಲ್ಲದೆ ಸೋಂಕಿತರಾದವರಿಗೆ ಎರಡನೇ ಬಾರಿ ಸೋಂಕು ಬಂದಾಗ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಗುಣಮುಖರಾದವರು ಕೋವಿಡ್ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಸಚಿವರು ಸಲಹೆ ನೀಡಿದರು.

“ಕೆಲವರು ಅನಾರೋಗ್ಯದ ಲಕ್ಷಣ ಕಾಣಿಸಿಕೊಂಡಾಗ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಮನೆಯಲ್ಲೇ ಉಳಿಯುತ್ತಿದ್ದಾರೆ. ಆದರೆ ಅನಾರೋಗ್ಯ ಬಂದಾಗ ಆಸ್ಪತ್ರೆಗೆ ಹೋಗಿ ಪ್ರಾಮಾಣಿಕವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೇರೆ ರೋಗ ಲಕ್ಷಣ ಕಾಣಿಸಿಕೊಂಡಾಗಲೂ ಕೆಲವರು ಭಯದಿಂದ ಆಸ್ಪತ್ರೆಗೆ ಹೋಗುತ್ತಿಲ್ಲ. ಹಲ್ಲು ನೋವು ಇದ್ದವರು ಕೂಡ ದಂತ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೇರೆ ರೋಗಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇದೆ. ಅಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಯದಿಂದ ಚಿಕಿತ್ಸೆಯಿಂದ ದೂರ ಉಳಿಯಬಾರದು” ಎಂದು ಸಚಿವರು ಕಿವಿಮಾತು ಹೇಳಿದರು.

IMG 20201105 WA0006

ಅಧ್ಯಯನಕ್ಕೆ ಸೂಚನೆ

“ಕೋವಿಡ್‍ನಿಂದಾದ ಸಾವಿನ ಕುರಿತು ಅಧ್ಯಯನ ಮಾಡಿ ವಿವರವಾದ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಎರಡನೇ ಬಾರಿಗೆ ಸೋಂಕು ಬರುವ ಬಗ್ಗೆಯೂ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಈ ಎರಡು ವರದಿಗಳು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ” ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.