ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ: ಅಮಿತ್ ಶಾ
ದೇವನಹಳ್ಳಿಯಲ್ಲಿ ವಿಜಯಸಂಕಲ್ಪ 4ನೇ ಯಾತ್ರೆ ಉದ್ಘಾಟನೆ
ಬೆಂಗಳೂರು: ಜೆಡಿಎಸ್‍ಗೆ 25- 30 ಸ್ಥಾನಗಳು ಬಂದರೆ ಅದು ಕಾಂಗ್ರೆಸ್ ಜೊತೆಗೂಡುತ್ತದೆ. ಬೆಂಗಳೂರು, ದಕ್ಷಿಣ ಕರ್ನಾಟಕದಲ್ಲಿ ಸಮಗ್ರ ಅಭಿವೃದ್ಧಿ- ಮಹತ್ವಪೂರ್ಣ ಬದಲಾವಣೆ ಮಾಡಲು ಬಿಜೆಪಿಗೆ ಸಂಪೂರ್ಣ ಬಹುಮತ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದರು.
ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಬಿಜೆಪಿ ವಿಜಯಸಂಕಲ್ಪ 4ನೇ ಯಾತ್ರೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭ್ರಷ್ಟಾಚಾರಿಗಳ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತ ಕೊಡಬೇಕೇ? ಅಭಿವೃದ್ಧಿಗೆ ಬದ್ಧ ಇರುವ ಬಿಜೆಪಿಗೆ ಮತ ಕೊಡಬೇಕೇ ಎಂದು ನಿರ್ಧರಿಸಿ ಎಂದು ತಿಳಿಸಿದರು.
ಪರಿವಾರವಾದ, ಕುಟುಂಬವನ್ನು ಪೋಷಿಸುವ ಇವೆರಡು ಪಕ್ಷಗಳನ್ನು ಬೆಂಬಲಿಸಬೇಕೇ ಎಂದು ಚಿಂತಿಸಿ ಮತ ಚಲಾಯಿಸಿ ಎಂದು ಸವಾಲು ಹಾಕಿದರು. ಈಶಾನ್ಯದಿಂದ ಗುಜರಾತ್‍ವರೆಗೆ ಬಿಜೆಪಿ ಆಡಳಿತ ಬಂದಿದೆ. ನೀವು ಬಿಜೆಪಿ ಬೆಂಬಲಿಸಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರಕಾರ ರಚಿಸಲು ನೆರವಾಗಿ. ಮೋದಿಜಿ, ಬೊಮ್ಮಾಯಿಯವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಪಿಎಫ್‍ಐ ಬ್ಯಾನ್ ಮಾಡಿದ ಬಿಜೆಪಿಗೆ ಮತ ಕೊಡಬೇಕೇ? ಭಯೋತ್ಪಾದಕರಿಗೆ ಉತ್ತೇಜನ ನೀಡುವ ಕಾಂಗ್ರೆಸ್ ಬೆಂಬಲಿಸಬೇಕೇ ಎಂದು ತೀರ್ಮಾನ ಮಾಡಬೇಕು. ಕರ್ನಾಟಕದ ಬಡವರ ಕುರಿತು ಕೇವಲ ಬಿಜೆಪಿ ಚಿಂತನೆ ಮಾಡಲಿದೆ. ಕೌಟುಂಬಿಕ ಪಕ್ಷಗಳಿಂದ ಇದು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಬೆಂಗಳೂರು ಮೈಸೂರು ದಶಪಥ ರಸ್ತೆಯನ್ನು ಸಾವಿರಾರು ಕೋಟಿಯಲ್ಲಿ ನಿರ್ಮಾಣ ಮಾಡಿದ್ದೇವೆ. ಮೊದಲ ವಂದೇ ಭಾರತ್ ಟ್ರೈನ್ ಹೈಸ್ಪೀಡ್ ರೈಲು ಆರಂಭ, ಬೆಂಗಳೂರು- ಚೆನ್ನೈ- ಮೈಸೂರು ಎಕ್ಸ್‍ಪ್ರೆಸ್ ರೈಲ್ವೆ ಕಾರಿಡಾರ್ ಕಾಮಗಾರಿ ಶುರು ಮಾಡಿದ್ದೇವೆ. ರೈಲ್ವೆಯಲ್ಲಿ 10 ವರ್ಷ ಕಾಲ ಕಾಂಗ್ರೆಸ್ ಹೂಡಿದ ಹಣಕ್ಕಿಂತ 9 ಪಟ್ಟು ಹೆಚ್ಚು ಅನುದಾನವನ್ನು ನಾವು ನೀಡಿದ್ದೇವೆ. ಮೆಟ್ರೊಗೆ 15 ಸಾವಿರ ಕೋಟಿ ಹೂಡಿಕೆ, ಸೆಟಲೈಟ್ ಟೌನ್‍ಶಿಪ್ ನಿರ್ಮಾಣ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಸೆಟಲೈಟ್ ಟೌನ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ವಿಮಾನನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದೇವೆ. ಬೆಂಗಳೂರು ನಗರದ ಮಹತ್ವದ ಅರಿವು ನಮಗಿದೆ. ವಿಮಾನನಿಲ್ದಾಣ ಇನ್ನಷ್ಟು ವಿಸ್ತರಣೆಗೆ ಯಾವತ್ತೇ ಇದ್ದರೂ ಅನುದಾನ ನೀಡಲು ಸಿದ್ಧ ಎಂದು ಪ್ರಕಟಿಸಿದರು. ಮೋದಿಜಿ ದೇಶ ಸುರಕ್ಷತೆಗೆ ಆದ್ಯತೆ ಕೊಟ್ಟಿದ್ದಾರೆ. ಯುಪಿಎ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಒಳನುಸುಳಿ ದೇಶದ ಸೈನಿಕರನ್ನು ಕೊಲ್ಲುತ್ತಿದ್ದರು. ನಾವು ಫುಲ್ವಾಮಾ ದಾಳಿಯನ್ನು ಮೋದಿಜಿ ನೇತೃತ್ವದÀಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ ಎಂದು ವಿವರಿಸಿದರು.
ಯುಪಿಎ ಸರಕಾರ ಇದ್ದಾಗ 2013-14ರ ಬಜೆಟ್‍ನಲ್ಲಿ ತೆರಿಗೆ ಹಿಂತಿರುಗಿಸುವಿಕೆ ಮೂಲಕ ಕರ್ನಾಟಕಕ್ಕೆ 13 ಸಾವಿರ ಕೋಟಿ ಕೊಟ್ಟಿದ್ದೀರಿ. ಮೋದಿಜಿ 33 ಸಾವಿರ ಕೋಟಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಇದಕ್ಕೆ ಉತ್ತರ ಇದೆಯೇ ಎಂದು ಪ್ರಶ್ನೆ ಮುಂದಿಟ್ಟರು. ಗ್ರಾಂಟ್ ಇನ್ ಏಯ್ಡ್‍ನಲ್ಲಿ 9 ಸಾವಿರ ಕೋಟಿ ಕೊಟ್ಟರೆ ನಾವು 45,900 ಕೋಟಿ ಕೊಟ್ಟಿದ್ದೇವೆ. ಹಣಕಾಸು ಆಯೋಗದ ಅನುದಾನವನ್ನು 3,400 ಕೋಟಿ ಬದಲಾಗಿ 7,400 ಕೋಟಿ ಕೊಡಲಾಗುತ್ತಿದೆ. ಒಟ್ಟಾಗಿ ನೀವು 25 ಸಾವಿರ ಕೋಟಿ ಕೊಟ್ಟರೆ ನಾವು 83 ಸಾವಿರ ಕೋಟಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಈಸ್ ಆಪ್ ಡುಯಿಂಗ್ ಬಿಸಿನೆಸ್‍ನಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕಕ್ಕೆ ಅಭಿನಂದನೆಗಳು. ಗರಿಷ್ಠ ಯೂನಿಕಾರ್ನ್ ಸ್ಟಾರ್ಟಪ್‍ಗಳು ಇಲ್ಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಶೇ 25ರಷ್ಟು ಕರ್ನಾಟಕದ ಪಾಲಿದೆ. ರಕ್ಷಣಾ ಕ್ಷೇತ್ರದಲ್ಲಿ ಶೇ 57ಕ್ಕೂ ಹೆಚ್ಚು ಪಾಲನ್ನು ಕರ್ನಾಟಕ ಕೊಡುತ್ತಿದೆ. ಉದ್ಯೋಗ ನೀಡಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ಶೇ 250 ಏರಿಕೆ ಕಂಡುಬಂದಿದೆ ಎಂದರು.
ಮೋದಿಜಿ ನೇತೃತ್ವದ ಕೇಂದ್ರ- ರಾಜ್ಯ ಸರಕಾರಗಳು ಹಲವಾರು ಅಭಿವೃದ್ಧಿ ಕೆಲಸ ಕಾರ್ಯ ಮಾಡಿದೆ. ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳು ಆರಂಭವಾಗುತ್ತಿದೆ. ಕೇಂದ್ರ ಬಜೆಟ್‍ನಲ್ಲಿ 37,257 ಕೋಟಿಯನ್ನು ಕರ್ನಾಟಕಕ್ಕೆ ನಾವು ಕೊಟ್ಟಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಗರಿಷ್ಠ ವಿದೇಶಿ ಬಂಡವಾಳ ಹೂಡಿಕೆ ಬಂದಿದೆ ಎಂದು ತಿಳಿಸಿದರು.
ಈ ಯಾತ್ರೆಯು ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 2018ರಲ್ಲಿ ನೀವೆಲ್ಲರೂ ಬಿಜೆಪಿಯನ್ನು ಕರ್ನಾಟಕದ ಅತಿ ದೊಡ್ಡ ಪಕ್ಷವಾಗಿ ಮಾಡಿದ್ದೀರಿ. ರಾಜ್ಯದ 25 ಲೋಕಸಭಾ ಕ್ಷೇತ್ರಗಳಲ್ಲಿ ಸಂಸದರನ್ನಾಗಿ ಆಯ್ಕೆ ಮಾಡಿದ್ದೀರಿ. ಅಲ್ಲದೆ ಅಭಿವೃದ್ಧಿಗೆ ನೆರವಾಗಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.
ಕೆಂಪೇಗೌಡರ ಬೃಹತ್ ಮೂರ್ತಿ ಉದ್ಘಾಟನೆ, ಕೆಂಪೇಗೌಡ ವಿಮಾನನಿಲ್ದಾಣದ ಟರ್ಮಿನಲ್ ಉದ್ಘಾಟಿಸಿದ ನರೇಂದ್ರ ಮೋದಿಜಿ ಅವರಿಗೆ ಧನ್ಯವಾದಗಳು ಎಂದರು. ಈ ಮೂಲಕ ಕೆಂಪೇಗೌಡರ ಹೆಸರು ಹೆಚ್ಚು ಪ್ರಚಲಿತವಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಬಿಜೆಪಿ- ಎನ್‍ಡಿಎ ಗೆಲುವು ಸಾಧಿಸಿದೆ. ಆ ಭಾಗ ಕಮಲ ಮತ್ತು ಕೇಸರಿಮಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪೂರ್ವ, ಪಶ್ಚಿಮ, ಉತ್ತರ- ದಕ್ಷಿಣಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಇಡೀ ದೇಶದ ಪಕ್ಷ. ಮಿಕ್ಕೆಲ್ಲ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿವೆ. ಕಾಂಗ್ರೆಸ್ ಈ ದೇಶದ ಕೊನೆಯ ಅಸೆಂಬ್ಲಿ ಚುನಾವಣೆಯನ್ನು ಕರ್ನಾಟಕದಲ್ಲಿ ಎದುರಿಸಲಿದೆ ಎಂದರು.
ಬ್ರಿಟಿಷರ ವಂಶಾವಳಿಯನ್ನು ಕಿತ್ತೆಸೆಯಲು ಕಾಂಗ್ರೆಸ್ಸನ್ನು ಸೋಲಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ದೇಶವನ್ನು ವಿಭಜಿಸಿತ್ತು. ಕಾಶ್ಮೀರವನ್ನು ನಮ್ಮ ದೇಶದ ಮೂಲವಾಹಿನಿಗೆ ತಂದ ಕೀರ್ತಿ ಮೋದಿಜಿ, ಅಮಿತ್ ಶಾ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್, ಆತ್ಮನಿರ್ಭರ ಯೋಜನೆ, ಆಯುಷ್ಮಾನ್ ಭಾರತ್ ಸೇರಿ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಉಚಿತ ವಿದ್ಯುತ್, ಹಾಲು ಉತ್ಪಾದಕರಿಗೆ ಸಹಾಯಧನ, ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.
ಹೆಣ್ಮಕ್ಕಳಿಗೆ ಸ್ತ್ರೀ ಸಾಮಥ್ರ್ಯ ಯೋಜನೆ ನೀಡಿದ್ದೇವೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ದುಡಿಯುವ ಹೆಣ್ಮಕ್ಕಳಿಗೆ 1 ಸಾವಿರ ರೂಪಾಯಿ ನೀಡಲಾಗುವುದು. ಆವರ್ತ ನಿಧಿ ಹೆಚ್ಚಳ ಮಾಡಲಾಗಿದೆ. ಉಚಿತ ಬಸ್ ಪಾಸ್, ಉಚಿತ ಶಿಕ್ಷಣ ಯೋಜನೆ ಜಾರಿಗೊಳಿಸಿದ್ದೇವೆ ಎಂದರು. ಇದು ಜನಕಲ್ಯಾಣ ಮಾಡಲಿದೆ ಎಂದು ತಿಳಿಸಿದರು.
ಈ ಭಾಗವನ್ನು ನವ ಬೆಂಗಳೂರನ್ನಾಗಿ ಮಾಡಲಿದ್ದೇವೆ. ಕಾಂಗ್ರೆಸ್ ಕೇವಲ ಪೊಳ್ಳು ಭರವಸೆ ನೀಡಿತ್ತು ಎಂದು ಟೀಕಿಸಿದರು. ಬಿಜೆಪಿ ಬೆಂಬಲಿಸಿ; ಮತ್ತೊಮ್ಮೆ ಕಮಲವನ್ನು ಅರಳಿಸಿ ಎಂದು ವಿನಂತಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಬೀದರ್ ಭಾಗದಲ್ಲಿ ಪ್ರತಿ ಸಭೆಯಲ್ಲಿ 50-60 ಸಾವಿರ ಜನರು ಸೇರಿದ್ದರು. ಚಿಕ್ಕಬಳ್ಳಾಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆಗಳಲ್ಲಿ ಬಿಜೆಪಿ ಶಾಸಕರು ಗೆಲ್ಲುವಂತಾಗಬೇಕು. ಆ ಮೂಲಕ ಅಮಿತ್ ಶಾಜೀ ಅವರು ಬಂದು ಹೋದುದಕ್ಕೆ ಸಾರ್ಥಕತೆಯನ್ನು ತರಬೇಕು ಎಂದು ವಿನಂತಿಸಿದರು.
ಕಾಂಗ್ರೆಸ್ ನಾಯಕರಿಲ್ಲದ ತಬ್ಬಲಿಗಳ ಪಕ್ಷ. ರಾಹುಲ್ ಗಾಂಧಿ ಅವರನ್ನು ಕಟ್ಟಿಕೊಂಡು ಅವರೇನೂ ಮಾಡಲು ಅಸಾಧ್ಯ. ವಿಶ್ವವಂದ್ಯ ನಾಯಕ ನರೇಂದ್ರ ಮೋದಿಜೀ ಮತ್ತಿತರ ಪ್ರಮುಖ ನಾಯಕರು ನಮ್ಮಲ್ಲಿದ್ದಾರೆ. ಆದ್ದರಿಂದ ನಮ್ಮ ಗೆಲುವು ಶತಸ್ಸಿದ್ಧ ಎಂದರು. ಇದಕ್ಕಾಗಿ ಕಾರ್ಯಕರ್ತರು ಪಕ್ಷದ ಗೆಲುವಿಗೆ ಸಮಯ ಕೊಡಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಭ್ರಮೆಯಲ್ಲಿದ್ದಾರೆ. ನಾವು 140ಕ್ಕೂ ಹೆಚ್ಚು ಸ್ಥಾನಕ್ಕಾಗಿ ಶ್ರಮಿಸಬೇಕಿದೆ ಎಂದು ಕಿವಿಮಾತು ಹೇಳಿದರು. ಎಲ್ಲ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಭಿವೃದ್ಧಿ ಕಾರ್ಯಗಳ ಕುರಿತು ಅವರು ಮಾಹಿತಿ ನೀಡಿದರು.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ ಸುಧಾಕರ್, ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ್, ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಇಲಾಖೆ ಸಚಿವ ಎಂ.ಟಿ.ಬಿ. ನಾಗರಾಜ್, ಸಚಿವರಾದ ಎಸ್.ಟಿ.ಸೋಮಶೇಖರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ಕಾರ್ಯದರ್ಶಿ ಕೇಶವ್ ಪ್ರಸಾದ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಮತ್ತು ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.