26 ರಂದು ಪಂಚರತ್ನ ರಥಯಾತ್ರೆ ಸಮಾರೋಪ:
*
ಹತ್ತು ಲಕ್ಷ ಜನರ ಭಾರೀ ಸಮಾವೇಶ; 100 ಕೀ.ಮೀ. ದೂರ ರೋಡ್ ಶೋ
ಈ ತಿಂಗಳ 11 ಅಥವಾ 14ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ತೆರೆದ ವಾಹನದಲ್ಲಿ ಹೆಚ್.ಡಿ.ದೇವೇಗೌಡರ ಮೆರವಣಿಗೆ
ಬೆಂಗಳೂರು: ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂಥ ಸಮಾವೇಶ ಅದಾಗಿರುತ್ತದೆ ಎಂದರು.
ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ಬೃಹತ್ ರೋಡ್ ಶೋ ಮಾಡಲಾಗುವುದು. ಆ ರೋಡ್ ಶೋ ದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಲಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದು ಕುಮಾರಸ್ವಾಮಿ ಅವರು ನುಡಿದರು.
ಈ ತಿಂಗಳ 11 ಅಥವಾ 14ರಂದು ಜೆಡಿಎಸ್ ಎರಡನೇ ಪಟ್ಟಿ: ಹೆಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ನಾಯಕ ಸಿಎಂ ಧನಂಜಯ, ಕೊಳ್ಳೇಗಾಲದ ಪುಟ್ಟಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ; ಡಿಕೆಶಿ, ಸುರ್ಜೆವಾಲಗೆ ಚುರುಕು ಮುಟ್ಟಿಸಿದ ಮಾಜಿ ಸಿಎಂ
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿಎಂ ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರದ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತ ಸರ್ಕಲ್ ಇನ್ಸಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಹಾಸನದ ಜಿಲ್ಲೆಯ ರಾಜಕಾರಣಕ್ಕೆ ನಾನು ಬಂದಿಲ್ಲ. ಅದನ್ನು ರೇವಣ್ಣ ಅವರಿಗೇ ನಾನು ಬಿಟ್ಟಿದ್ದೇನೆ. ಪಕ್ಷಕ್ಕೆ ದುಡಿದವರನ್ನು ನಾನು ಎಂದೂ ಕೈ ಬಿಟ್ಟಿಲ್ಲ. ತಾಳ್ಮೆ ಅನ್ನೋದು ಇಲ್ಲಿ ಮುಖ್ಯ ಎಂದ ಮಾಜಿ ಮುಖ್ಯಮಂತ್ರಿ ಅವರು; ಬೇಗ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.
ಎರಡನೇ ಪಟ್ಟಿ ಇನ್ನೇನು ಅಂತಿಮ ಹಂತದಲ್ಲಿದೆ. ಆ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುಗಳು ಇರುತ್ತವೆ ಎಂದ ಮಾಜಿ ಮುಖ್ಯಮಂತ್ರಿ ಅವರು, ಈ ಬಗ್ಗೆ ಯಾರಿಗೂ ಗೊಂದಲ
ದತ್ತಾ ವಿರುದ್ಧ ತೀವ್ರ ಆಕ್ರೋಶ:
ಅವರಿಗಾಗಿ ಪಕ್ಷವು ಧರ್ಮೇಗೌಡರ ಬದಲಾಗಿ ವೈ ಎಸ್ ವಿ ದತ್ತಾ ಅವರಿಗೆ ಕಡೂರು ಟಿಕೆಟ್ ಕೊಟ್ಟಿತು. ಪಕ್ಷಕ್ಕಾಗಿ ದುಡಿದ ನಾಯಕನಿಗೆ ಅನ್ಯಾಯ ಮಾಡಿ ಕೈಕೊಟ್ಟು ಹೋದ ವ್ಯಕ್ತಿಗೆ ಟಿಕೆಟ್ ಕೊಟ್ಟೆವು. ಆದರೆ ಉಪಕಾರ ಸ್ಮರಣೆ ಮರೆತ ಆ ವ್ಯಕ್ತಿ ಕಾಂಗ್ರೆಸ್ ಸೇರಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ನಮ್ಮಿಂದ ಎಲ್ಲಾ ಉಪಕಾರ ಪಡೆದರು. ದೇವೇಗೌಡರ ಮಾನಸ ಪುತ್ರ ಎಂದು ಹೇಳಿಕೊಂಡು ಓಡಾಡಿದರು. ಆ ವ್ಯಕ್ತಿಗೆ ಟಿಕೆಟ್ ಕೊಟ್ಟ ದೇವೇಗೌಡರು, ನಿನಗೆ ವಿಧಾನಸಭೆಯಲ್ಲಿ ನೆರವಾಗುತ್ತಾರೆ ಎಂದು ನನಗೆ ಹೇಳಿದ್ದರು. ಆದರೆ, ಈ ಆಸಾಮಿ ನನಗೆ ಯಾವಾಗ ನೆರವಾಗಿದ್ದರೋ ನನಗಂತೂ ನೆನಪಿಲ್ಲ ಎಂದು ಟಾಂಗ್ ನೀಡಿದರು.
ಈ ಆಸಾಮಿ ದೇವೇಗೌಡರನ್ನೆ ಮರಳು ಮಾಡಿ ಕಡೂರು ಟಿಕೆಟ್ ಪಡೆದುಕೊಂಡರು. ಆದರೆ ಟಿಕೆಟ್ ನಿರಾಕರಿಸಲ್ಪಟ್ಟ ಧರ್ಮೇಗೌಡರು ಹಾಗೂ ಭೋಜೇಗೌಡರು ಪಕ್ಷಕ್ಕೆ ನಿಷ್ಠರಾಗಿ ಒಟ್ಟಿಗೆ ಗೆದ್ದು ವಿಧಾನ ಪರಿಷತ್ ಗೆ ಬಂದರು. ದೇವರು ಅವರನ್ನು ಕೈ ಬಿಡಲಿಲ್ಲ. ಆದರೆ, ಈ ವ್ಯಕ್ತಿ ದೇವೇಗೌಡರಿಂದ ಎಲ್ಲಾ ಅನುಕೂಲ ಪಡೆದುಕೊಂಡು ಪಕ್ಷಕ್ಕೆ ದ್ರೋಹ ಬಗೆದು ಹೋದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಕಿಡಿ:
ಬಿಜೆಪಿ ಶಾಸಕರ ಮಗನ ಕಚೇರಿ, ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಟೆಂಡರ್ ಹಣ ವಸೂಲಿಗೆ ಮಗನ ಮೀಡಿಯೇಟರ್ ಮಾಡಿದ್ದಾರೆ. 40 ಲಕ್ಷ ಹಿಡಿಯಲಿಕ್ಕೆ ಹೋಗಿ ಎಂಟು ಕೋಟಿ ಹೊರಗೆ ಬಂದಿದೆ. 40 ಪರ್ಸೆಂಟ್ ಅನ್ನೋದರ ಅಳ ಅಗಲ ಗೊತ್ತಾಗ್ತಾ ಇದೆ ಈಗ. ಒಬ್ಬೊಬ್ಬ ಬಿಜೆಪಿ ಶಾಸಕ 40-50 ಕೋಟಿ ಕ್ಯಾಷ್ ಇಟ್ಟುಕೊಂಡಿದ್ದಾರೆ. ಪಾಪದ ಹಣ ಇದು, ಲೂಟಿ ಮಾಡಿದ ಈ ಹಣದಲ್ಲಿ ಚುನಾವಣೆ ಗೆಲ್ಲೋದಿಕ್ಕೆ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಗ್ಯಾಸ್ ಗೆ 500, ಜಿಎಸ್ ಟಿ ತೆರಿಗೆಗೆ 500, ಬೆಲೆ ಏರಿಕೆಗೆ 500 ಅಂತೆ. ಇವರಿಂದ ಸರಕಾರದ ಆಸ್ತಿ ಬೆಲೆಯಲ್ಲ. ಆದರೆ, ನನ್ನ ಕಾರ್ಯಕ್ರಮಗಳು ಸರಕಾರದ ಆಸ್ತಿ ಆಗುತ್ತವೆ. ಅವು ಶಾಶ್ವತ ಕಾರ್ಯಕ್ರಮಗಳು. ಕೇವಲ ಮತಕ್ಕಾಗಿ ಇದನ್ನು ಮಾಡುತ್ತಿಲ್ಲ. ಬಡವರನ್ನು ನೋಡಿ ಈ ಕಾರ್ಯಕ್ರಮ ತಂದಿದ್ದೇನೆ ಎಂದರು.
ತಮ್ಮ ಕಾರ್ಯಕ್ರಮಗಳನ್ನು ಟೀಕೆ ಮಾಡಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಅವರು; ಪಾಪದ ಹಣದಲ್ಲಿ ಲುಲು ಮಾಲು ಕಟ್ಟಿದ್ದಾರೆ. ಪಾಪದ ಹಣದಲ್ಲಿ ಈ ರೀತಿ ಲುಲು ಮಾಲು ಕಟ್ಟಿದ್ರೆ, ಮಾಲ್ ನಿಂದ ಬಂದ ಹಣದಲ್ಲಿ ಜನರಿಗೆ ನೀಡುತ್ತಿಲ್ಲ. ನಾನು ಲುಲು ಮಾಲ್ ಅಂತ ಪಾಪದ ಹಣದಲ್ಲಿ ಮಾಲ್ ಕಟ್ಟಿದ್ದಿದ್ದರೆ ನಾನು ಪಂಚರತ್ನ ಯೋಜನೆ ರೂಪಿಸುವ ಬದಲು ಆ ಹಣವನೇ ಹಂಚಿಕೊಂಡು ಚುನಾವಣೆ ಗೆಲ್ಲುತ್ತಿದ್ದೆ ಎಂದರು ಕುಮಾರಸ್ವಾಮಿ ಅವರು.
ಬಿಜೆಪಿಯ ಒಬ್ಬೊಬ್ಬ ಶಾಸಕ 40 50 ಕೋಟಿ ನಗದು ಹಣದಲ್ಲಿ ಇದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ಆ ಅಕ್ರಮದ ಹಣದಲ್ಲಿ ಚುನಾವಣೆ ಗೆಲ್ಕುವುದಾಗಿ ಹೇಳುತ್ತಿದ್ದಾರೆ. ಇದನ್ನು ಜನರು ಅರ್ಥ ಮಾಡ್ಕೊಳ್ಳಬೇಕು. ಇನ್ನು ಕಾಂಗ್ರೆಸ್ ಪಕ್ಷದವರು ಇದೇ ರೀತಿ ಲೂಟಿ ಮಾಡಿ ಈಗ ಗ್ಯಾರಂಟಿ ಕಾರ್ಡ್ ಹಂಚಿಕೊಂಡು ಹೋಗುತ್ತಿದ್ದಾರೆ.
ನಿಮ್ಮ ಸಹಿಯನ್ನು ಇಂಥ ಅಕ್ರಮದ ಹಣಕ್ಕೆ ಮಾರಿಕೊಳ್ಳಬೇಡಿ ಎಂದು ನಮ್ಮ ತಂದೆ ಹೇಳಿದ್ದಾರೆ. ನಮ್ಮ ಬಳಿ ಹಣ ಇಲ್ಲ, ಚುನಾವಣೆ ಬಂದಾಗ ಕೆಲವರು ಕೊಡುತ್ತಾರೆ. ಈಗ ಬಿಜೆಪಿಯವರು ಅದಕ್ಕೂ ಕಡಿವಾಣ ಹಾಕಲು ಹೊರಟಿದ್ದಾರೆ. ಯಾಕೆಂದರೆ ಇವರು ಲೂಟಿ ಹೊಡೆದು ಹಣ ಶೇಖರಣೆ ಮಾಡಿಕೊಂಡಿದ್ದಾರೆ. ಆದರೂ ಜನ ಬೆಂಬಲದಿಂದ ಇವರಿಗೆ ಸಡ್ಡು ಹೊಡೆಯುತ್ತವೆ.
ಕಾಂಗ್ರೆಸ್ ಸರಕಾರ ಬಂದರೆ ಸುರ್ಜೆವಾಲ ಅವರಿಗೂ ಸೂಟ್ ಕೇಸ್ ಕಳಿಸಬೇಕು. ಅದು ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಸ್ಕೃತಿ. ಅಲ್ಲಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುವವರನ್ನು ಚೆನ್ನಾಗಿ ನೋಡಿಕೊಳ್ಳುವ ಪದ್ಧತಿ ಇದೆ. ಹೀಗಿದ್ದ ಮೇಲೆ 40% ಕಟ್ ಮಾಡಿ ಉಚಿತ ಖಚಿತ ಗ್ಯಾರಂಟಿ ಸ್ಲಿಮ್ ಗಳನ್ನೂ ಹೇಗೆ ಜಾರಿ ಮಾಡುತ್ತೀರಿ ಸುರ್ಜೆ ವಾಲ ಅವರೇ ಎಂದು ನಾನು ಕೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಅವರಿಗೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿಗಳು.
ನಾನಿಲ್ಲದಿದ್ದರೆ ಜಮೀರ್ ರೈಟ್ ರೈಟ್ ಅಂತ ಹೇಳಿಕೊಂಡು ಇರಬೇಕಿತ್ತು:
ಜೆಡಿಎಸ್ ಪಕ್ಷ ಹಾಗೂ ಮಿಷನ್ 123 ಬಗ್ಗೆ ಲಘುವಾಗಿ ಮಾತನಾಡಿರುವ ಜಮೀರ್ ಅಹಮ್ಮದ್ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹರಿಹಾಯ್ದರು.
123 ರಲ್ಲಿ 1 ತೆಗೆದು ಹಾಕಿ ಎಂದು ಅವರು ಹೇಳಿದ್ದಾರೆ. ನಾನೇ ಇರಲಿಲ್ಲ ಅಂದರೆ ಆ ವ್ಯಕ್ತಿ ಎಲ್ಲಿ ಇರುತ್ತಿದ್ದರು. ನಮ್ಮ ಎದುರೇ ಭಾಷಣ ಮಾಡಿಕೊಂಡು ದೇವೇಗೌಡರು ದೇವರು, ಕುಮಾರಣ್ಣ ದೇವರು ಎಂದು ಹೊಗಳಿದ್ದರು. ಕಾಂಗ್ರೆಸ್ ಪಕ್ಷವನ್ನು ಹೀನಾಮಾನವಾಗಿ ತೆಗಳಿದ್ದರು. ಈಗ ನೋಡಿದರೆ ನಾಲಿಗೆ ಹರಿದುಬಿಡುತ್ತಾರೆ. ಚುನಾವಣೆ ಫಲಿತಾಂಶ ಬರಲಿ ಗೊತ್ತಾಗುತ್ತದೆ ಎಂದು ತಿರುಗೇಟು ಕೊಟ್ಟರು.
ಇದೇ ವೇಳೆ ಸಿಎಂ ಧನಂಜಯ, ಪುಟ್ಟಸ್ವಾಮಿ ಅವರ ಜತೆ ಅವರ ನೂರಾರು ಬೆಂಬಲಿಗರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, ಸಿಎಂ ಇಬ್ರಾಹಿಂ, ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡ, ಕೆ ಎನ್ ತಿಪ್ಪೇಸ್ವಾಮಿ, ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಪಕ್ಷದ ಭಾವುಟ, ಧ್ವಜ ನೀಡಿ ಎಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಧನಂಜಯ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಪುಟ್ಟಸ್ವಾಮಿ ಮಾತನಾಡಿ, ಜೆಡಿಎಸ್ ಸೇರಿದ ಕಾರಣ ತಿಳಿಸಿದರು.
ಸಿಎಂ ಇಬ್ರಾಹಿಂ, ಹೆಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರಮುಖ ನಾಯಕರು ಮಾತನಾಡಿದರು.